ಗೋಣಿಕೊಪ್ಪಲು: ಹೆಚ್ಚಿದ ಬಿಸಿಲಿನ ತಾಪ, ಕ್ಷೀಣಿಸಿದ ಕೆರೆಕುಂಟೆಗಳ ನೀರು. ದಣಿವಾರಿಸಿಕೊಳ್ಳಲು ಗಿಡಮರಗಳ ನೆರಳಿನ ಮೊರೆ ಹೋಗುತ್ತಿರುವ ಪ್ರಾಣಿ ಪಕ್ಷಿಗಳು. ಇದು ದಕ್ಷಿಣ ಕೊಡಗಿನ ಕೇಂದ್ರ ಭಾಗ ಪೊನ್ನಂಪೇಟೆ ತಾಲ್ಲೂಕಿನಾದ್ಯಂತ ಕಂಡು ಬರುತ್ತಿರುವ ಬೇಸಿಗೆಯ ಬವಣೆ.
ಪೊನ್ನಂಪೇಟೆ ತಾಲ್ಲೂಕಿನಲ್ಲಿ ಕಣ್ಣು ಹಾಯಿಸಿದ ಕಡೆಯಲೆಲ್ಲ ತೊರೆತೋಡುಗಳೇ ಕಂಡು ಬರುತ್ತಿವೆ. ಮಳೆಗಾಲದಲ್ಲಿ ಇವುಗಳ ವೈಭವವನ್ನು ವರ್ಣಿಸಲಸದಳವಾದುದು. ಆದರೆ, ಬೇಸಿಗೆ ಬಂತೆಂದರೆ ಇವುಗಳು ಮಂಜಿನಂತೆ ಕರಗಿ ಬಡವಾಗುತ್ತವೆ.
ಪೊನ್ನಂಪೇಟೆ ತಾಲ್ಲೂಕಿನಲ್ಲಿ ಲಕ್ಷ್ಮಣತೀರ್ಥ ಪ್ರಮುಖ ನದಿ. ಇದರ ಜತೆಗೆ, ಎಲ್ಲ ಕಡೆಗಳಲ್ಲಿಯೂ ಸಾಮಾನ್ಯವಾಗಿ ಕೀರೆಹೊಳೆಗಳು ಕಂಡುಬರುತ್ತಿವೆ. ಅಲ್ಲದೆ, ತಾಲ್ಲೂಕಿನ ಗಿರಿಶಿಖರಗಳಲ್ಲಿ ಹುಟ್ಟಿ ಪಶ್ಚಿಮಾಭಿಮುಖವಾಗಿ ಹರಿದು ಕೇರಳ ರಾಜ್ಯ ಸೇರುವ ಬರಪೊಳೆ, ಕೊಂಗಣ ಹೊಳೆ, ಆಡುಗುಂಡು ಹೊಳೆ, ಕೆಕೆಆರ್ ಹೊಳೆ ಮೊದಲಾದವು ಮಳೆಗಾಲದಲ್ಲಿ ತುಂಬಿ ಹರಿದು ಹಳ್ಳಕೊಳ್ಳ ಕಾಫಿ ತೋಟದಲ್ಲೆಲ್ಲ ಸಮುದ್ರವನ್ನೇ ಸೃಷ್ಟಿಸುತ್ತಿವೆ. ಆದರೆ, ಈ ಹೊಳೆಗಳೆಲ್ಲ ಈಗ ಕಲ್ಲುಬಂಡೆಗಳ ನಡುವೆ ಜುಳು ಜುಳು ಎಂದು ಮೆಲ್ಲನೆ ಉಸಿರಾಡಿಕೊಂಡು ತೆವಳುತ್ತಿವೆ. ಇವುಗಳ ನಡುವಿನ ಕಲ್ಲುಬಂಡೆಗಳು ಮೇವು ನೀರಿಲ್ಲದೆ ಸೊರಗಿರುವ ಪ್ರಾಣಿಗಳ ಅಸ್ತಿಪಂಜರದಂತಾಗಿವೆ.
ಇನ್ನು ಶ್ರೀಮಂಗಲದಿಂದ ಹಿಡಿದು ಕೊಡಗಿನ ಗಡಿಭಾಗ ನಿಟ್ಟೂರು ಬಾಳೆಲೆವೆರೆಗಿನ ಲಕ್ಷ್ಮಣತೀರ್ಥ ನದಿಯಲ್ಲಿ ಮರಳಿನ ರಾಶಿ ತುಂಬಿ ಹೋಗಿದೆ. ಈ ನದಿಯ ಹೊಂಡಗಳಲ್ಲಿ ಮಾತ್ರ ನೀರು ತುಂಬಿದೆ. ಉಳಿದಂತೆ, ಈ ನದಿ ಮರಳಿನ ರಾಶಿಯನ್ನೇ ಹೊದ್ದು ಮಲಗಿದೆ.
ಗೋಣಿಕೊಪ್ಪಲು, ಕಿರುಗೂರು ನಲ್ಲೂರು ಭಾಗಗಳಲ್ಲಿ ಹರಿಯುವ ಕೀರೆಹೊಳೆ ಒಣಗಿ ತಿಂಗಳೇ ಕಳೆದಿವೆ. ಕಿರುಗೂರು ಬಳಿ ಇರುವ ಕೀರೆಹೊಳೆ ಪಿಕಪ್ ಸೇತುವೆ ಕೆಳಗಿನ ಕಲ್ಲುಬಂಡೆಗಳು ನದಿ ಒಣಗಿರುವುದನ್ನು ಸಾರಿ ಹೇಳುತ್ತವೆ.
ಪೊನ್ನಂಪೇಟೆ ತಾಲ್ಲೂಕಿಗೆ ಅರ್ಧಭಾಗದಷ್ಟು ಸೇರುವ ನಾಗರಹೊಳೆ ರಾಷ್ಟ್ರೀಯ ಉದ್ಯಾನದಲ್ಲಿನ ಕೆರೆಗಳೂ ನೀರಿನ ಕೊರತೆ ಎದುರಿಸುತ್ತಿವೆ. ಅರಣ್ಯದಂಚಿನ ಕೆರೆಗಳಲ್ಲಿ ಬಹುಪಾಲು ನೀರು ಕ್ಷೀಣಿಸಿದ್ದರೆ, ಅರಣ್ಯದ ಮಧ್ಯಭಾಗದಲ್ಲಿನ ಕೆರೆಗಳ ನೀರು ಕಡಿಮೆಯಾಗುವ ಸಾಧ್ಯತೆ ಹೆಚ್ಚಿದೆ.
ಕಾಫಿತೋಟದ ಕೆರೆಗಳೂ ಕೂಡ ಕ್ಷೀಣಿಸತೊಡಗಿವೆ. ಮಾರ್ಚ್ ಬಂದರೂ ಮಳೆ ಕಾಣದ ಕಾರಣ ಬೆಳೆಗಾರರು ಕಾಫಿ ಹೂ ಅರಳಿಸಲು ಕೆರೆಗಳ ನೀರನ್ನು ಹಿಂಡುತ್ತಿದ್ದಾರೆ. ಇನ್ನು ಪೊನ್ನಂಪೇಟೆ, ಗೋಣಿಕೊಪ್ಪಲು ಪಟ್ಟಣಗಳಲ್ಲಿ ಒಂದು ಗಿಡಮರಗಳನ್ನು ಕಾಣಲಾಗುತ್ತಿಲ್ಲ. ಕಪ್ಪಗೆ ಮಲಗಿರುವ ಡಾಂಬಾರ್ ರಸ್ತೆಯ ಮೇಲೆ ವಾಹನಗಳು ಎಡೆಬಿಡದೆ ಓಡಾಡುತ್ತಿರುವುದರಿಂದ ತಾಪಮಾನ ಮತ್ತಷ್ಟು ಹೆಚ್ಚಿದೆ. ಪಟ್ಟಣಕ್ಕೆ ಬಂದ ಜನತೆ ಬಿಸಿಲಿನ ದಣಿವಾರಿಸಿಕೊಳ್ಳಲು ಅಂಗಡಿ ಮುಂಗಟ್ಟುಗಳ ನೆರಳಿನ ಮೊರೆ ಹೋಗುತ್ತಿದ್ದಾರೆ.
ಕೀರೆಹೊಳೆ ಒಣಗಿ ತಿಂಗಳೇ ಕಳೆದಿವೆ ಬಂಡೆಗಳ ನಡುವೆ ಮೆಲ್ಲನೆ ತೆವಳುತ್ತ ಉಸಿರಾಡುತ್ತಿವೆ ಹೊಳೆಗಳು ಮರಳಿನ ರಾಶಿಯಲ್ಲಿ ತುಂಬಿ ಹೋಗಿದೆ ಲಕ್ಷ್ಮಣತೀರ್ಥ ನದಿ
ನಗರೀಕರಣದ ಪ್ರಭಾವದಿಂದ ತಾಪಮಾನ ಹೆಚ್ಚುತ್ತಿದೆ. ಅತಿಯಾದ ಕಾಂಕ್ರೀಟ್ ಕಟ್ಟಡ ಗಿಡಮರಗಳ ನಾಶ ಹೆಚ್ಚುತ್ತಿರುವ ಜನಸಂಖ್ಯೆ ಇತ್ತೀಚಿನ ವರ್ಷಗಳ ಪರಿಸರ ಬದಲಾವಣೆಗೆ ಮುಖ್ಯ ಕಾರಣವಾಗಿದೆ.ಅಯ್ಯಪ್ಪ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಗೋಣಿಕೊಪ್ಪಲು.
ರಿಯಲ್ ಎಸ್ಟೇಟ್ ದಂಧೆ ನಿಲ್ಲಲಿ
ಇತ್ತೀಚಿನ ವರ್ಷಗಳಲ್ಲಿ ಕೊಡಗಿನಲ್ಲಿ ವ್ಯಾಪಕವಾಗಿ ರಿಯಲ್ ಎಸ್ಟೇಟ್ ದಂಧೆ ನಡೆಯುತ್ತಿರುವುದೇ ಕೊಡಗಿನ ತಾಪಮಾನ ಏರಲು ಕಾರಣವಾಗಿದೆ. ಕಾಫಿ ತೋಟಗಳ ಮರಗಳು ಕಣ್ಮರೆಯಾಗುತ್ತಿವೆ. ತೋಟಗಳು ಬಂಡವಾಳಶಾಹಿಗಳ ರಿಯಲ್ ಎಸ್ಟೇಟ್ ದಂಧೆಗೆ ಬಲಿಯಾಗುತ್ತಿವೆ. ಬೆಟ್ಟಗುಡ್ಡಗಳು ಕೂಡ ರೆಸಾರ್ಟ್‌ಗಳಿಗೆ ಕರುಗುತ್ತಿವೆ. ಇದರಿಂದ ಜಲಮೂಲಗಳು ಬತ್ತಿ ತೊರೆತೋಡುಗಳು ಒಣಗುತ್ತಿವೆ. ಸರ್ಕಾರ ಮತ್ತು ಸ್ಥಳೀಯ ಜನತೆ ಕೊಡಗಿನ ಪರಿಸರ ಉಳಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಇಲ್ಲದಿದ್ದರೆ ಕೊಡಗು ಉತ್ತರ ಕರ್ನಾಟಕದ ಬಯಲು ಸೀಮೆ ಆಗುವುದರಲ್ಲಿ ಬಹು ದಿನವಿಲ್ಲ.
-ಐನಂಡ ಬೋಪಣ್ಣ ಪರಿಸರವಾದಿ ಕಾಫಿ ಬೆಳೆಗಾರ ಪೊನ್ನಂಪೇಟೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.