ನಾಪೋಕ್ಲು: ಕೊಡಗಿನಲ್ಲಿ ಆಚರಿಸುವ ವೈವಿಧ್ಯಮಯ ಹಬ್ಬಗಳಲ್ಲಿ ಕೈಲ್ ಪೋಳ್ದು ಅಥವಾ ಕೈಲ್ ಮುಹೂರ್ತವೂ ಒಂದು. ಪ್ರತಿವರ್ಷ ಸೆಪ್ಟೆಂಬರ್ 3ರಂದು ಈ ಹಬ್ಬವನ್ನು ವಿವಿಧ ದೇಸಿ ಕ್ರೀಡೆಗಳೊಂದಿಗೆ ಆಚರಿಸಲಾಗುತ್ತದೆ. ಕೈಲ್ ಮುಹೂರ್ತ ಹಬ್ಬದ ಆಚರಣೆಯಲ್ಲಿ ಪ್ರಾದೇಶಿಕ ಭಿನ್ನತೆಯಿದೆ. ಭಾಗಮಂಡಲದಲ್ಲಿ, ನಾಲ್ಕುನಾಡು ವ್ಯಾಪ್ತಿಯಲ್ಲಿ ಆಗಸ್ಟ್ 28ರಂದು ಹಬ್ಬವನ್ನು ಆಚರಿಸುತ್ತಾರೆ. ಅದಕ್ಕಾಗಿ ನಾಲ್ಕುನಾಡಿನಲ್ಲಿ ಭರದ ಸಿದ್ಧತೆಗಳಾಗುತ್ತಿವೆ.
ಜಿಲ್ಲೆಯ ಇತರ ಭಾಗಗಳಲ್ಲಿ ಮನರಂಜನಾ ಹಬ್ಬವನ್ನು ಸೆಪ್ಟೆಂಬರ್ 3ರಂದು ಆಚರಿಸುತ್ತಾರೆ. ಕೈಲ್ ಎಂದರೆ ಆಯುಧ. ಪೊಳ್ದ್ ಎಂದರೆ ಪೂಜೆ ಎಂದರ್ಥ. ಅಂತೆಯೇ ಕೈಲ್ ಪೊಳ್ದ್ ಅನ್ನು ಆಯುಧ ಪೂಜೆಯನ್ನಾಗಿ ಆಚರಿಸಲಾಗುತ್ತದೆ. ಹಿಂದೆ ಪ್ರಾಣಿಗಳ ಬೇಟೆಗೆ ಕೋವಿ ಕತ್ತಿಗಳನ್ನು ಬಳಸುತ್ತಿದ್ದರು. ಕೈಲ್ ಮುಹೂರ್ತ ಹಬ್ಬದ ನಂತರ ಕತ್ತಿ ಕೋವಿಗಳು ಬಳಕೆಯಾದರೆ ಅಲ್ಲಿಯವರೆಗೆ ಗದ್ದೆ ವ್ಯವಸಾಯದಲ್ಲಿ ನೇಗಿಲು, ನೊಗ, ಗುದ್ದಲಿ ಇತ್ಯಾದಿ ವ್ಯವಸಾಯ ಉಪಕರಣಗಳಿಗೆ ವಿರಾಮ. ಅಂತೆಯೇ ಈ ಎಲ್ಲಾ ಆಯುಧಗಳನ್ನು ತೊಳೆದು ಪೂಜೆ ಸಲ್ಲಿಸಲಾಗುತ್ತದೆ. ಉಳುಮೆ ಮಾಡಿದ ಎತ್ತುಗಳ ಮೈ ತೊಳೆದು ಅವುಗಳಿಗೆ ಕುಂಕುಮ–ಗಂಧ ಹಚ್ಚಿ ಅಲಂಕರಿಸಲಾಗುತ್ತದೆ. ಅಕ್ಕಿ ಬೆಲ್ಲದಿಂದ ಮಾಡಿದ ಪಾಯಸವನ್ನು ಅವುಗಳಿಗೆ ತಿನ್ನಿಸಲಾಗುತ್ತದೆ. ಗದ್ದೆ ಕೆಲಸಕ್ಕೆ ಬಳಸಿದ ಸಲಕರಣೆಗಳನ್ನು ತೊಳೆದು ಪೂಜೆ ಸಲ್ಲಿಸಿ ಸುರಕ್ಷಿತವಾಗಿರಿಸಿದರೆ ಅವು ಬಳಕೆಯಾಗುವುದು ಮುಂದಿನ ವರ್ಷಕ್ಕೆ. ಹಬ್ಬದಂದು ಕೋವಿಯ ಮೂಲಕ ಗುಂಡು ಹಾರಿಸಿ ಹಬ್ಬದ ಆಚರಣೆಯನ್ನು ಸಾರುತ್ತಾರೆ. ಮಕ್ಕಳಾದಿಯಾಗಿ ಹಿರಿಯರವರೆಗೆ ಎಲ್ಲರಿಗೂ ಅಲ್ಲಿ ಶೌರ್ಯ ಪ್ರದರ್ಶನದ ವಿವಿಧ ಸ್ಪರ್ಧೆಗಳು ನಡೆಯುತ್ತವೆ.
ಕೈಲ್ ಮುಹೂರ್ತ ಹಬ್ಬದಲ್ಲಿ ಗುರಿ ಪರೀಕ್ಷಿಸುವ ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆ ಜನಪ್ರಿಯ. ವಿವಿಧ ಯುವಕ ಸಂಘಗಳು ಈ ಸ್ಪರ್ಧೆಯನ್ನು ಹಮ್ಮಿಕೊಳ್ಳುತ್ತವೆ. ಇನ್ನು ಮಕ್ಕಳಿಗೆ, ಮಹಿಳೆಯರಿಗೂ ವೈವಿಧ್ಯಮಯ ಸ್ಪರ್ಧೆಗಳಿರುತ್ತವೆ. ದೇಸಿ ಕ್ರೀಡೆಗಳಾದ ಕಾಲು ಕಟ್ಟಿ ಓಟ, ಕಣ್ಣು ಕಟ್ಟಿ ಮಡಿಕೆ ಒಡೆಯುವುದು, ನಿಂಬೆ-ಚಮಚ ಓಟ, ಹಗ್ಗ ಜಗ್ಗಾಟ, ಭಾರದ ಕಲ್ಲು ಎಸೆತ, ಗೋಣಿ ಚೀಲ ಓಟ..ಹೀಗೆ ಗ್ರಾಮೀಣ ಕ್ರೀಡೆಗಳು ಕೈಲ್ ಮುಹೂರ್ತ ಹಬ್ಬದಲ್ಲಿ ಮನರಂಜಿಸುತ್ತವೆ. ತೆಂಗಿನಕಾಯಿಗೆ ಗುಂಡು ಹೊಡೆಯುವುದು ಯುವಜನರಿಗಾಗಿ, ಹಿರಿಯರಿಗಾಗಿ ನಡೆಸುವ ಗುರಿ ಪರೀಕ್ಷಿಸುವ ಸ್ಪರ್ಧೆ. ದೂರದ ಮರವೊಂದಲ್ಲಿ ತೆಂಗಿನಕಾಯಿಯನ್ನು ಕಟ್ಟಿ ಅದಕ್ಕೆ ದೂರದಿಂದ ಗುರಿಯಿಟ್ಟು ಹೊಡೆಯುವ ಸ್ಪರ್ಧೆ ಆಕರ್ಷಣೀಯ. ಈ ಸ್ಪರ್ಧೆ ತಾಸುಗಟ್ಟಲೆ ನಡೆದು ಬಳಿಕ ತೆಂಗಿನಕಾಯಿಗೆ ಗುರಿ ಇಟ್ಟು ಹೊಡೆದು ಭಾಗಮಾಡಿದವರಿಗೆ ಬಹುಮಾನ ನೀಡಿ ಗೌರವಿಸಲಾಗುತ್ತದೆ. ಈ ಸ್ಪರ್ಧೆಯು ಇತ್ತೀಚೆಗೆ ಜನಪ್ರಿಯಗೊಂಡಿದ್ದು ಕೈಲ್ ಮುಹೂರ್ತ ಮಾತ್ರವಲ್ಲ; ಇತರ ಅವಧಿಯಲ್ಲೂ ದೊಡ್ಡ ಮಟ್ಟದ ಸ್ಪರ್ಧೆಯನ್ನಾಗಿ ಆಯೋಜಿಸಲಾಗುತ್ತಿದೆ. 0.22 ಮತ್ತು 12 ಬೋರ್ ಸ್ಪರ್ಧೆಗಳು ಜನಪ್ರಿಯ.
ನಾಲ್ಕುನಾಡು ವ್ಯಾಪ್ತಿಯ ನಾಪೋಕ್ಲು, ಬೇತು, ಬಲ್ಲಮಾವಟಿ ಸೇರಿದಂತೆ ವಿವಿಧ ಗ್ರಾಮಗಳ ಆಟದ ಮೈದಾನಗಳಲ್ಲಿ ಕ್ರೀಡಾಕೂಟದ ಆಯೋಜನೆಗೆ ಸಿದ್ಧತೆಗಳಾಗುತ್ತಿವೆ. ಮಳೆ ಇಳಿಮುಖವಾಗುತ್ತಿದ್ದಂತೆ ಗ್ರಾಮೀಣ ಕ್ರೀಡಾಕೂಟಗಳಲ್ಲಿ ರೈತರು, ಬೆಳೆಗಾರರು, ಯುವಕ-ಯುವತಿಯರು, ಮಕ್ಕಳು ಒಗ್ಗೂಡಿ ಕೈಲ್ ಮುಹೂರ್ತ ಹಬ್ಬಕ್ಕೆ ಮೆರುಗು ನೀಡಲಿದ್ದಾರೆ.
ಅಪೋಲೋ ಯುವಕ ಸಂಘದಿಂದ ಕ್ರೀಡಾಕೂಟ:
ಸಮೀಪದ ಬಲ್ಲಮಾವಟಿ ಗ್ರಾಮದ ಅಪೋಲೋ ಯುವಕ ಸಂಘ ಮತ್ತು ಕಾವೇರಿ ಮಹಿಳಾ ಸಮಾಜದ ಸಂಯುಕ್ತ ಆಶಯದಲ್ಲಿ ನಾಡಹಬ್ಬ ಕೈಲ್ ಮುಹೂರ್ತ ಪ್ರಯುಕ್ತ ಆಟೋಟ ಕೂಟವನ್ನು ಆಗಸ್ಟ್ 28 ರಂದು ಆಯೋಜಿಸಲಾಗಿದೆ. ಗ್ರಾಮದ ನೇತಾಜಿ ಪ್ರೌಢಶಾಲಾ ಆಟದ ಮೈದಾನದಲ್ಲಿ ನಡೆಯಲಿರುವ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ನಿವೃತ್ತ ಸೈನಿಕ ಆಲತಂಡ ಪಟ್ಟು ದೇವಯ್ಯ ಕಾಫಿ ಬೆಳೆಗಾರ್ತಿ ಬೈರುಡ ಹೇಮಲತಾ ಬಸಪ್ಪ ಪಾಲ್ಗೊಳ್ಳಲಿದ್ದಾರೆ. ತೆಂಗಿನಕಾಯಿಗೆ ಗುಂಡು ಹೊಡೆಯುವುದು ಹಗ್ಗ ಜಗ್ಗಾಟ ಓಟದ ಸ್ಪರ್ಧೆಗಳು ವಿದ್ಯಾರ್ಥಿಗಳಿಗೆ ವಿವಿಧ ಆಟದ ಸ್ಪರ್ಧೆಗಳು ಬೈಕ್ ಮತ್ತು ಸೈಕಲ್ ಮಂದಗತಿಯ ಚಾಲನೆ ಸೇರಿದಂತೆ ವಿವಿಧ ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ ಎಂದು ಅಪೋಲೋ ಯುವಕ ಸಂಘದ ಅಧ್ಯಕ್ಷರು ತಿಳಿಸಿದ್ದಾರೆ.
ಗೌರಿ ಗಣೇಶ ಹಬ್ಬ; ಕೈಲ್ ಮುಂದೂಡಿಕೆ:
ಭಾಗಮಂಡಲ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪ್ರತಿ ವರ್ಷ ಕೈಲ್ ಮುಹೂರ್ತ ಹಬ್ಬವನ್ನು ಆಗಸ್ಟ್ 27 ಮತ್ತು 28 ರಂದು ಆಚರಿಸಲಾಗುತ್ತಿದ್ದು ಪ್ರಸಕ್ತ ವರ್ಷ ಧಾರ್ಮಿಕ ಆಚರಣೆ ಗೌರಿ ಗಣೇಶ ಹಾಗೂ ಕೈಲ್ ಮುಹೂರ್ತ ಹಬ್ಬಗಳು ಜೊತೆಯಲ್ಲೇ ಬಂದಿರುವುದರಿಂದ ಕೈಲ್ ಮುಹೂರ್ತ ಹಬ್ಬದ ಆಚರಣೆಯನ್ನು ಮುಂದೂಡಿರುವುದಾಗಿ ಒಮ್ಮತದಿಂದ ತೀರ್ಮಾನಿಸಲಾಯಿತು. ಭಾಗಮಂಡಲದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಕಾಳನ ರವಿ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಈ ತೀರ್ಮಾನವನ್ನು ಕೈಗೊಳ್ಳಲಾಯಿತು. ಆಗಸ್ಟ್ 28 ರಂದು ಹಾಗೂ ವಿವಿಧ ಕ್ರೀಡಾಕೂಟಗಳನ್ನು ಆಗಸ್ಟ್ 29 ರಂದು ಕೈಗೊಳ್ಳುವಂತೆ ಸಭೆಯಲ್ಲಿ ತೀರ್ಮಾನಿಸಲಾಯಿತು. ಸಭೆಯಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಹೊಸೂರು ಸತೀಶ್ ಕುಮಾರ್ ಗ್ರಾಮ ಪಂಚಾಯತಿ ಸದಸ್ಯ ನಾಗೇಶ್ ಶಿರಕಜೆ. ಭಾಗಮಂಡಲ ತಾವೂರು ಕೋರಂಗಾಲ ತಣ್ಣಿಮಾನಿ ಗ್ರಾಮಗಳ ವಿವಿಧ ಗಣಪತಿ ಸೇವಾ ಸಮಿತಿ ಪದಾಧಿಕಾರಿಗಳು ಮೂರು ಗ್ರಾಮದ ದೇವಸ್ಥಾನ ದ ತಕ್ಕ ಮುಖ್ಯ ಮುಖ್ಯಸ್ಥರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.