ADVERTISEMENT

ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆ: ಹುದ್ದೆ ಸೃಜಿಸದೇ ಗುತ್ತಿಗೆ ನೇಮಕಕ್ಕೆ ಅನುಮತಿ

ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ; ಸೂಪರ್ ಸ್ಪೆಷಾಲಿಟಿ ಆಗುವತ್ತ ಮೊದಲ ಹೆಜ್ಜೆ

ಕೆ.ಎಸ್.ಗಿರೀಶ್
Published 5 ಫೆಬ್ರುವರಿ 2026, 5:35 IST
Last Updated 5 ಫೆಬ್ರುವರಿ 2026, 5:35 IST
ಜಿಲ್ಲಾಸ್ಪತ್ರೆಯ ಹಳೆಯ ಕಟ್ಟಡ
ಜಿಲ್ಲಾಸ್ಪತ್ರೆಯ ಹಳೆಯ ಕಟ್ಟಡ   
ಕಾಯಂ ನೇಮಕಾತಿಗೆ ಸರ್ಕಾರ ಅನುಮತಿ ನೀಡಬೇಕು | ಬೇರೆ ಜಿಲ್ಲೆಗಳಿಗೆ ಇರುವ ಅನುಮತಿ ಕೊಡಗಿಗೆ ಏಕಿಲ್ಲ | ಕಾಯಂ ತಜ್ಞ ವೈದ್ಯರ ನೇಮಕಾತಿಗೆ ಪ್ರಯತ್ನ ಮುಂದುವರಿಯಲಿ

ಮಡಿಕೇರಿ: ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯು ಸೂಪರ್ ಸ್ಪೆಷಾಲಿಟಿ ಆಗುವತ್ತ ತನ್ನ ಮೊದಲ ಹೆಜ್ಜೆಯನ್ನಿರಿಸಿದೆ. ಇದೇ ಮೊದಲ ಬಾರಿಗೆ 5 ಮಂದಿ ತಜ್ಞ ವೈದ್ಯರ ಹುದ್ದೆಗಳ ನೇಮಕಾತಿಗೆ ಸರ್ಕಾರ ಮಂಜೂರಾತಿ ನೀಡಿದೆ. ಆದರೆ, ಸರ್ಕಾರ ಈ  ಹುದ್ದೆಗಳನ್ನು ಸೃಜಿಸದೇ ಕೇವಲ ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲಷ್ಟೇ ಅನುಮತಿ ನೀಡಿದೆ.

ಹೃದ್ರೋಗ ತಜ್ಞರು, ನರರೋಗತಜ್ಞರು, ಸರ್ಜಿಕಲ್ ಗ್ಯಾಸ್ಟ್ರೋ ಎಂಟಲಜಿಸ್ಟ್, ಮೂತ್ರಶಾಸ್ತ್ರಜ್ಞ ವೈದ್ಯರು ಹಾಗೂ ಕ್ಯಾನ್ಸರ್‌ ರೋಗ ತಜ್ಞರ ಗುತ್ತಿಗೆ ಆಧಾರದ ನೇಮಕಾತಿಗೆ ಸಂಸ್ಥೆ ಪ್ರಕಟಣೆ ಹೊರಡಿಸಿದೆ. ಈ ಮೂಲಕ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಆಗುವತ್ತ ಒಂದು ಪುಟ್ಟ ಹೆಜ್ಜೆ ಇಟ್ಟಿದೆ.

ಈಗ ಪ್ರಸ್ತುತ ಮೂತ್ರಪಿಂಡ ರೋಗಗಳ ತಜ್ಞ ವೈದ್ಯರು ಮತ್ತು ಪ್ಲಾಸ್ಟಿಕ್ ಸರ್ಜನ್ ಮಾತ್ರವೇ ತಜ್ಞ ವೈದ್ಯರಿದ್ದಾರೆ. ಈಗ ನೇಮಕಾತಿಗೆ ಕರೆಯಲಾಗಿರುವ ಐವರು ತಜ್ಞ ವೈದ್ಯರು ಬಂದಲ್ಲಿ ಪರಿಪೂರ್ಣ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಾಗದಿದ್ದರೂ ಸೂಪರ್ ಸ್ಪೆಷಾಲಿಟಿ ವೈದ್ಯರ ಸೇವೆ ಕೆಲವು ವಿಭಾಗಗಳಲ್ಲಾದರೂ ದೊರೆಯುತ್ತದೆ. ಇದರಿಂದ ಜಿಲ್ಲೆಯ ಜನರು ಹೊರ ಜಿಲ್ಲೆಗೆ ಹೋಗುವುದು ತಪ್ಪಲಿದೆ ಎಂಬುದು ಸಂಸ್ಥೆಯ ಲೆಕ್ಕಾಚಾರ.

ADVERTISEMENT

ಇದುವರೆಗೂ ಇಲ್ಲದ ತಜ್ಞ ವೈದ್ಯರ ನೇಮಕಕ್ಕಾಗಿ ಸಂಸ್ಥೆಯ ಡೀನ್ ಮತ್ತು ನಿರ್ದೇಶಕ ಡಾ.ಎ.ಜೆ.ಲೋಕೇಶ್ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದರು. ಪ್ರಸ್ತಾವವನ್ನು ಅಂಗೀಕರಿಸಿರುವ ರಾಜ್ಯ ಸರ್ಕಾರ ಗುತ್ತಿಗೆ ಆಧಾರದ ಮೇಲೆ ಹುದ್ದೆಗಳ ನೇಮಕಾತಿಗೆ ಅನುಮತಿ ನೀಡಿದೆ. ಇದು ಕೇವಲ ಗುತ್ತಿಗೆ ಆಧಾರದ ಮೇಲಿನ ನೇಮಕಾತಿ ಆಗಿರುವುದರಿಂದ ತಜ್ಞ ವೈದ್ಯರಿಗಾಗಿಯೇ ಸಂಸ್ಥೆ ಹುಡುಕಾಡುವಂತಹ ಸ್ಥಿತಿ ನಿರ್ಮಾಣವಾಗಿದೆ.

ಆದರೆ, ಪಕ್ಕದ ಮೈಸೂರು, ಹಾಸನ, ಮಂಡ್ಯ ಜಿಲ್ಲೆಗಳಲ್ಲಿ ತಜ್ಞ ವೈದ್ಯರ ಹುದ್ದೆಗಳನ್ನು ಸರ್ಕಾರವೇ ಸೃಜಿಸಿ ಕಾಯಂ ನೇಮಕಾತಿ ಮಾಡಿಕೊಂಡಿದೆ. ಈ ಬಗೆಯ ಕಾಯಂ ನೇಮಕಾತಿ ಕೊಡಗು ಜಿಲ್ಲೆಗೆ ಏಕೆ ನೀಡಿಲ್ಲ ಎಂಬ ಪ್ರಶ್ನೆಯೂ ಉದ್ಭವಿಸಿದೆ.

ಇಲ್ಲಿನ ಪ್ರವಾಸೋದ್ಯಮದಿಂದ, ಅಬಕಾರಿ ಇಲಾಖೆಯಿಂದ, ಕಾಫಿ ಬೆಳೆಯಿಂದ ಸರ್ಕಾರಕ್ಕೆ ಬೇರೆ ಜಿಲ್ಲೆಗಳಿಗಿಂತ ಅತಿ ಹೆಚ್ಚು ಆದಾಯ ಹರಿದು ಬರುತ್ತಿದೆ. ಇಲ್ಲಿನ ಒಂದೆರಡು ಪ್ರವಾಸಿ ಸ್ಥಳಗಳಿಂದ ಬರುವ ಆದಾಯ ಕಾಯಂ ತಜ್ಞ ವೈದ್ಯರ ಸಂಬಳಗಳಿಗೆ ಸಾಕಾಗುತ್ತದೆ. ಹೀಗಿರುವಾಗ, ಕಾಯಂ ನೇಮಕಾತಿಗೆ ಮಂಜೂರಾತಿ ಕೊಡಬೇಕಿತ್ತು ಎಂದು ಹೆಸರು ಬಹಿರಂಗಪಡಿಸಲು ಬಯಸದ ವೈದ್ಯರೊಬ್ಬರು ‘ಪ್ರಜಾವಾಣಿ’ಗೆ ಹೇಳಿದರು.

ವೈದ್ಯರಿಗೆ ಜಿಲ್ಲೆಯಲ್ಲಿ ಸಮಸ್ಯೆ

ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ಕೊಡಗಿನಲ್ಲಿ ವೈದ್ಯರು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಸೂಕ್ತ ವಸತಿ ಸೌಕರ್ಯ ಇಲ್ಲ, ಕಾಲೇಜು ಮತ್ತು ಆಸ್ಪತ್ರೆ ದೂರದಲ್ಲಿರುವುದು, ಇಲ್ಲಿನ ಸಂಚಾರ ದಟ್ಟಣೆ, ಸೂಕ್ತ ಶೈಕ್ಷಣಿಕ ವ್ಯವಸ್ಥೆ ಇಲ್ಲದಿರುವುದು, ಹೆಚ್ಚಿನ ಒತ್ತಡ ಹೀಗೆ ಅನೇಕ ಬಗೆಯ ಸಮಸ್ಯೆಗಳಿವೆ. ಹೀಗಾಗಿ, ತಜ್ಞ ವೈದ್ಯರಿರಲು ಸಾಮಾನ್ಯ ವೈದ್ಯರೂ ಇಲ್ಲಿ ಕೆಲಸ ಮಾಡಲು ಹಿಂಜರಿಯುತ್ತಾರೆ. ವೈದ್ಯರು ಎದುರಿಸುತ್ತಿರುವ ಸಮಸ್ಯೆಗಳನ್ನು ನಿವಾರಿಸಿದರೆ ಖಂಡಿತವಾಗಿಯೂ ಇಲ್ಲಿ ಕಾರ್ಯನಿರ್ವಹಿಸಲು ತಜ್ಞ ವೈದ್ಯರು ಬರುತ್ತಾರೆ.

ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ ಸೇರಿದ ಬೋಧಕ ಕಾಲೇಜು
ಈಗ ಸರ್ಕಾರ ನೀಡಿರುವ ಅನುಮತಿಯ ಮೇಲೆ 5 ಮಂದಿ ತಜ್ಞ ವೈದ್ಯರ ನೇಮಕಾತಿಗೆ ಪ್ರಕಟಣೆ ಹೊರಡಿಸಲಾಗಿದೆ. ವೈದ್ಯರು ಬಂದಲ್ಲಿ ನೇಮಕಾತಿ ಮಾಡಿಕೊಳ್ಳಲಾಗುವುದು
ಡಾ.ಎ.ಜೆ.ಲೋಕೇಶ್ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಡೀನ್ ಮತ್ತು ನಿರ್ದೇಶಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.