
ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆಯಿಂದ ಕಾಫಿ, ಕಾಳುಮೆಣಸು, ಏಲಕ್ಕಿ ಸೇರಿದಂತೆ ಬಹುತೇಕ ಎಲ್ಲ ಬೆಳೆಗಳಿಗೂ ಹಾನಿಯಂಟಾಗುತ್ತಿದೆ. ಕಾಳುಮೆಣಸಿನ ಬಳ್ಳಿಗಳಲ್ಲಿ ಬೇರು ಕೊಳೆ ರೋಗ ಕಾಣಿಕೊಂಡಿದ್ದು, ಆತಂಕ ಮೂಡಿಸಿದೆ. ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ಈ ರೋಗ ಮುಂದೆ ಉಲ್ಬಣಗೊಂಡು ಎಲೆಗಳೆಲ್ಲ ಹಳದಿಯಾಗಿ ಬಳ್ಳಿಯೇ ನಾಶವಾಗುವ ಭೀತಿ ಮೂಡಿದೆ.
ಮತ್ತೊಂದೆಡೆ ಜಿಲ್ಲೆಯಲ್ಲಿ ಹಲವೆಡೆ ಅರೇಬಿಕಾ ಕಾಫಿ ಹಣ್ಣಾಗುತ್ತಿದೆ. ಈಗ ಬೀಳುತ್ತಿರುವ ಮಳೆಯಿಂದ ಅವೂ ಸಹ ಉದುರಲಾರಂಭಿಸಿವೆ. ಕಾಫಿ ಗಿಡಗಳಿಗೆ ಕೆಲವಡೆ ಕೊಳೆ ರೋಗ ಸಹ ಬಂದಿದೆ. ಒಂದು ವೇಳೆ ಮಳೆ ನಿಲ್ಲದೇ ಹೋದರೆ ಅಪಾರ ನಷ್ಟ ನಿಶ್ಚಿತ ಎನ್ನುವಂತಹ ಸ್ಥಿತಿ ನಿರ್ಮಾಣವಾಗಿದೆ.
ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ನೆಲಜಿ ಗ್ರಾಮದ ಬೆಳೆಗಾರ ದೇವಯ್ಯ, ‘ಮಳೆಯಿಂದ ಕಾಫಿ ಉದುರುತ್ತಿದೆ. ಕಾಫಿ ಕಾಯಿಗಳಿಗೆ ಕೊಳೆ ರೋಗ ಬಂದಿದೆ. ಹೆಚ್ಚಿನ ಮಳೆಯಿಂದಾಗಿ ಕಾಳು ಮೆಣಸು ಫಸಲು ಸಹ ಉದುರಲಾರಂಭಿಸಿದೆ’ ಎಂದು ಬೇಸರ ವ್ಯಕ್ತಪಡಿಸಿದರು.
ದಟ್ಟವಾಗಿ ಕವಿದಿರುವ ಮೋಡಗಳು, ಬಿಟ್ಟೂ ಬಿಡದೇ ಬೀಳುವ ಮಳೆ ಹನಿಗಳು, ಆಗಾಗ್ಗೆ ಬಿರುಸುಗೊಳ್ಳುವ ಮಳೆಯಿಂದ ತೋಟದಲ್ಲಿ ಯಾವುದೇ ಕೆಲಸ ಮಾಡಲಾಗುತ್ತಿಲ್ಲ. ಕೈತುಂಬ ಕೆಲಸವಿದ್ದು, ಕಾರ್ಮಿಕರು ಬೆವರು ಹರಿಸಿ ದುಡಿಯಬೇಕಿದ್ದ ಈ ಅವಧಿಯಲ್ಲಿ ಮಳೆಯಿಂದ ಕೆಲಸ ಇಲ್ಲದೇ ಕೂರಬೇಕಾಗಿದೆ.
ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಭಾರತೀಯ ಸಾಂಬರ ಬೆಳೆಗಳ ಸಂಶೋಧನಾ ಸಂಸ್ಥೆಯ ಅಪ್ಪಂಗಳದ ಪ್ರಾದೇಶಿಕ ಕೇಂದ್ರದ ಮುಖ್ಯಸ್ಥ ಡಾ.ಎಸ್.ಜೆ.ಅಂಕೇಗೌಡ, ‘ಈಗಾಗಲೆ ಕಾಳು ಮೆಣಸಿನ ಬಳ್ಳಿಗಳಿಗೆ ಬೇರುಕೊಳೆ ರೋಗ ತಗುಲಿದೆ. ಮಳೆ ಹೀಗೆಯೇ ಮುಂದುವರಿದರೆ ಬಳ್ಳಿಗಳು ನಾಶವಾಗುವ ಆತಂಕ ಇದೆ’ ಎಂದರು.
ಮೇ ತಿಂಗಳಿನಲ್ಲಿ ಆರಂಭವಾದ ಮಳೆ ನಿರಂತರವಾಗಿ ಕೊಡಗಿನಲ್ಲಿ ಸುರಿಯುತ್ತಿದೆ. ಈ ವರ್ಷ ಬಿಸಿಲಿನ ದಿನಗಳ ಸಂಖ್ಯೆ ತೀರಾ ಕಡಿಮೆ ಇದ್ದು, ಎಲ್ಲೆಡೆ ಶೀತ ಹೆಚ್ಚಿದೆ.
ಮಳೆಯಿಂದ ಕಾಫಿ ಕಾಯಿಗಳು ಬೀಳುವ ಸಾಧ್ಯತೆ ಹೆಚ್ಚಿದೆ. ಕಾಫಿ ಹಣ್ಣಿನ ಗುಣಮಟ್ಟವೂ ಮಳೆಯಿಂದ ಕಡಿಮೆಯಾಗುವ ಸಂಭವವಿದೆಚಂದ್ರಶೇಖರ್ ಕಾಫಿ ಮಂಡಲಿ ಉಪನಿರ್ದೇಶಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.