ADVERTISEMENT

ಕೊಡಗು | ಮಳೆಗಾಲದ ಅಂತ್ಯದಲ್ಲೂ ಮುಂಗಾರಿನಂತ ಮಳೆ: ಜನಜೀವನ ಅಸ್ತವ್ಯಸ್ತ

ಒಮ್ಮೆಗೆ ಸುರಿದ ಮಳೆಯಿಂದ ಜಿಲ್ಲೆಯಲ್ಲಿ ಜನಜೀವನ ಅಸ್ತವ್ಯಸ್ತ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2025, 5:08 IST
Last Updated 24 ಅಕ್ಟೋಬರ್ 2025, 5:08 IST
ಕುಶಾಲನಗರ ಸಮೀಪದ ಹಾರಂಗಿ ಜಲಾಶಯದಿಂದ ನದಿಗೆ ಹೆಚ್ಚುವರಿ ನೀರನ್ನು ಹರಿಬಿಡಲಾಯಿತು
ಕುಶಾಲನಗರ ಸಮೀಪದ ಹಾರಂಗಿ ಜಲಾಶಯದಿಂದ ನದಿಗೆ ಹೆಚ್ಚುವರಿ ನೀರನ್ನು ಹರಿಬಿಡಲಾಯಿತು   

ಮಡಿಕೇರಿ: ಮಳೆಗಾಲದ ಅಂತ್ಯದಲ್ಲೂ ಮುಂಗಾರಿನಂತೆ ಮಳೆ ಅಬ್ಬರಿಸಿದೆ. ದೀಪಾವಳಿಯ ದಿನವೇ ಸುರಿದ ಭಾರಿ ಮಳೆಗೆ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಒಮ್ಮೆಗೆ ಸುರಿದ ಭಾರಿ ಪ್ರಮಾಣದ ಮಳೆಯಿಂದ ಅಲ್ಲಲ್ಲಿ ಮನೆ ಕುಸಿದಿದ್ದರೆ, ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ.

ಬುಧವಾರ ಒಂದೇ ಸಮನೆ ಸುರಿದ ಕುಂಭದ್ರೋಣ ಮಳೆಗೆ ಹಾರಂಗಿ ಜಲಾಶಯ ಇತಿಹಾಸದಲ್ಲೇ ಮತ್ತೊಮ್ಮೆ ಅಕ್ಟೋಬರ್‌ನಲ್ಲಿ ತುಂಬಿತ್ತು. ತುಂಬಿದ್ದ ಜಲಾಶಯದಲ್ಲಿ ನದಿಗೆ ಮತ್ತು ನಾಲೆಗಳಿಗೆ ನೀರು ಬಿಟ್ಟಿದ್ದರಿಂದ ಸುಮಾರು ಎರಡೂವರೆ ಅಡಿಗಳನ್ನು ನೀರು ಕೊರತೆಯಾಗಿತ್ತು. ಆದರೆ, ಒಮ್ಮೆಗೆ ಸುರಿದ ಮಳೆಯಿಂದ ಮತ್ತೊಮ್ಮೆ ಜಲಾಶಯ ತುಂಬಿ ಜಲಾನಯನ ಪ್ರದೇಶದ ರೈತರಲ್ಲಿ ಮಂದಹಾಸ ಮೂಡಿಸಿತು.

ಮಡಿಕೇರಿ ಸೇರಿದಂತೆ ಜಿಲ್ಲೆಯ ಹಲವೆಡೆ ಬಿರುಸಿನ ಮಳೆಯಾಗಿದ್ದರಿಂದ ತೊರೆ, ತೋಡುಗಳು ಉಕ್ಕಿ ಹರಿದವು. ಕಾವೇರಿ ಮತ್ತೊಮ್ಮೆ ಭೋರ್ಗರೆಯಲಾರಂಭಿಸಿತು.

ADVERTISEMENT

ಕುಶಾಲನಗರದಲ್ಲಿ ತಗ್ಗು ಪ್ರದೇಶಗಳು ಜಲಾವೃತಗೊಂಡವು. ತಗ್ಗಿನಲ್ಲಿದ್ದ ಅಂಗಡಿ ಮುಂಗಟ್ಟುಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಸಿತು.

ಮತ್ತೊಂದೆಡೆ, ಕುಶಾಲನಗರ ತಾಲ್ಲೂಕಿನ ತೊರೆನೂರು ಗ್ರಾಮದ ಪುಟ್ಟಸ್ವಾಮಿ ಎಂಬುವವರ ಮನೆಗೆ ನೀರು ನುಗ್ಗಿ ನಿವಾಸಿಗಳು ಪರದಾಡಿದರು. ಲೋಕೋಪಯೋಗಿ ಇಲಾಖೆಯವರು ರಸ್ತೆ ಮಾಡುವಾಗ ಚರಂಡಿ ಮಾಡದಿರುವುದು ಹಾಗೂ ಅಸಮರ್ಪಕವಾಗಿ ರಸ್ತೆ ಮಾಡಿರುವುದರಿಂದ ಮಳೆ ನೀರು ನುಗ್ಗುತ್ತಿದೆ ಎಂದು ಕುಟುಂಬಸ್ಥರು ದೂರಿದರು.

ಶನಿವಾರಸಂತೆ ಹೋಬಳಿಯಾದ್ಯಂತ ಭಾರಿ ಮಳೆ ಸುರಿದಿದ್ದರಿಂದ ಜನಜೀವನ ಅಸ್ತವ್ಯಸ್ತಗೊಂಡಿತು. ಹೋಬಳಿಯ ಆಲೂರು ಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಸ್‌.ಎಸ್‌.ಸುರೇಶ್‌ ಅವರ ಮನೆಯ ಒಂದು ಗೋಡೆ ಕುಸಿದು ಆತಂಕ ಸೃಷ್ಟಿಸಿತು. ಸ್ಥಳಕ್ಕೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕುಶಾಲನಗರ ಸಮೀಪದ ಕೂಡುಮಂಗಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಕೂಡ್ಲೂರು ನವಗ್ರಾಮದ ದೇವಮ್ಮ ಎಂಬುವವರ ಮನೆಯ ಬಳಿ ಮಣ್ಣು ಕುಸಿದಿದೆ. ಯಾವುದೇ ಅನಾಹುತ ಸಂಭವಿಸಿಲ್ಲ. ಸ್ಥಳಕ್ಕೆ ಕೂಡುಮಂಗಳೂರು ಗ್ರಾಮ ಪಂಚಾಯತಿ ಸದಸ್ಯ ಕೆ.ಬಿ.ಶಂಶುದ್ಧೀನ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಸೋಮವಾರಪೇಟೆಯಲ್ಲಿ 8.8 ಸೆಂ.ಮೀ, ಕುಶಾಲನಗರದಲ್ಲಿ 8.6, ಸುಂಟಿಕೊಪ್ಪ 7.6, ಶಾಂತಳ್ಳಿಯಲ್ಲಿ 6.8, ಶನಿವಾರಸಂತೆ 6.6, ಕೊಡ್ಲಿಪೇಟೆ, ಮಡಿಕೇರಿ 6, ವಿರಾಜಪೇಟೆಯಲ್ಲಿ 4.5 ಸೆಂ.ಮೀನಷ್ಟು ಮಳೆಯಾಗಿದೆ.

ಕುಶಾಲನಗರದಲ್ಲಿ ಬುಧವಾರ ಸಂಜೆ‌ ಸುರಿದ ಭಾರೀ ಮಳೆಗೆ ಕಾರು ಚಾಲಕರ ಬಡಾವಣೆ ಜಲಾವೃತಗೊಂಡಿರುವ ದೃಶ್ಯ

ಮೊದಲ ಬಾರಿಗೆ ಅಕ್ಟೋಬರ್‌ನಲ್ಲೂ ಹಾರಂಗಿ ಭರ್ತಿ!

ಕುಶಾಲನಗರ: ಇಲ್ಲಿನ ಹಾರಂಗಿ ಜಲಾಶಯವು ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಅಕ್ಟೋಬರ್‌ನಲ್ಲೂ ಮತ್ತೊಮ್ಮೆ ಸಂಪೂರ್ಣ ಭರ್ತಿಯಾಯಿತು. ಎಲ್ಲಾ 4 ಕ್ರೆಸ್ಟ್‌ಗೇಟ್‌ಗಳನ್ನು ತೆರೆದು ನದಿಗೆ 5 ಸಾವಿರ ಕ್ಯೂಸೆಕ್‌ ನೀರನ್ನು ಗುರುವಾರ ಹರಿಸಲಾಯಿತು.

ಜಲಾಶಯದ ಗರಿಷ್ಠ ಮಟ್ಟ 2859 ಅಡಿ. ಗುರುವಾರ ಬೆಳಿಗ್ಗೆ 6 ಗಂಟೆಗೆ 2858.13 ಅಡಿಗಳಷ್ಟು ನೀರು ಇತ್ತು. ಜಲಾಶಯಕ್ಕೆ ಒಳ ಹರಿವು 8220 ಕ್ಯೂಸೆಕ್‌ ಇದ್ದು ನದಿಗೆ 5 ಸಾವಿರ ಕ್ಯೂಸೆಕ್‌ ಹಾಗೂ ನಾಲೆಗೆ 300 ಕ್ಯೂಸೆಕ್ ಹಾರಿಸಲಾಯಿತು. ಜಲಾಶಯದಲ್ಲಿ 7.455 ಟಿಎಂಸಿ ನೀರು ಸಂಗ್ರಹಗೊಂಡಿದೆ.

‘ಕಾವೇರಿ ಹಾಗೂ ಹಾರಂಗಿ ನದಿಗಳ ಅಸುಪಾಸಿನಲ್ಲಿರುವ ಜನರ ಸುರಕ್ಷತೆ ಹಾಗೂ ಪ್ರವಾಹ ಸಂಭವಿಸದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಜಲಾಶಯದಿಂದ ನದಿಗೆ ನೀರು ಹರಿಬಿಡಲಾಯಿತು. ಮುಂದಿನ ದಿನಗಳಲ್ಲಿ ಇದೇ ರೀತಿ ಮಳೆಯ ಪ್ರಮಾಣ ಕಂಡುಬಂದರೆ ಜಲಾಶಯಕ್ಕೆ ಒಳ ಹರಿವಿನ ಪ್ರಮಾಣದಲ್ಲಿ ಏರಿಕೆಯಾಗುವ ಮುನ್ಸೂಚನೆ ಇದೆ. ಆದ್ದರಿಂದ ನದಿಯಂಚಿನ‌ ಜನರು ಸುರಕ್ಷಿತ ಸ್ಥಳಕ್ಕೆ ತೆರಳಬೇಕು ಹಾಗೂ ಮೀನುಗಾರರು ನದಿಗೆ ಇಳಿಯಬಾರದು’ ಎಂದು ನೀರಾವರಿ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್ ಐ.ಕೆ.ಪುಟ್ಟಸ್ವಾಮಿ ತಿಳಿಸಿದ್ದಾರೆ.

ಕುಶಾಲನಗರ ಸಮೀಪದ ಕೂಡ್ಲೂರು ನವಗ್ರಾಮದಲ್ಲಿ ಗುರುವಾರ ಬೆಳಿಗ್ಗೆ ಬರೆ ಕುಸಿದಿದೆ

ಬಸ್ ನಿಲ್ದಾಣದ ಅಂಗಡಿಗಳಿಗೆ ನುಗ್ಗಿದ ನೀರು

ಕುಶಾಲನಗರ: ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬುಧವಾರ ಸಂಜೆ‌ ಸುರಿದ ಭಾರಿ ಮಳೆಗೆ ಚರಂಡಿಗಳು ಉಕ್ಕಿ ಹರಿದು ರಸ್ತೆಗಳು ಜಲಾವೃತಗೊಂಡು ಸಂಚಾರ ಅಸ್ತವ್ಯಸ್ತಗೊಂಡಿತು. ಇಲ್ಲಿನ ಕೆಎಸ್‌ಆರ್‌ಟಿಸಿ ಬಸ್‌ನಿಲ್ದಾಣದ ಆವರಣ ಜಲಾವೃತಗೊಂಡಿತ್ತು.

ಹೆದ್ದಾರಿ ಬದಿ ಅಂಗಡಿ ಮನೆಗಳಿಗೆ ನೀರು ಆವರಿಸಿಕೊಂಡ ದೃಶ್ಯ ಕಂಡುಬಂತು. ಗಂಧಕೋಟಿಯ 3ನೇ ಹಂತದ ಜನವಸತಿ ಪ್ರದೇಶ ಸೇರಿದಂತೆ ಕಾರು ಚಾಲಕರು ಮಾಲೀಕರ ಬಡಾವಣೆಯ ಸಂಪರ್ಕ ರಸ್ತೆಗಳು ಜಲಾವೃತಗೊಂಡಿದ್ದರಿಂದ ನಿವಾಸಿಗಳು ಹೊರಬರಲಾರದ ಪರಿಸ್ಥಿತಿ ನಿರ್ಮಾಣಗೊಂಡಿತ್ತು. ಚಿಕ್ಕತ್ತೂರಿನ ಆನೆಕೆರೆ 2ನೇ ಬಾರಿಗೆ ಕೋಡಿ ಬಿದ್ದಿದೆ.

ಕುಶಾಲನಗರ ಸಮೀಪದ ಗುಡ್ಡೆಹೊಸೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ತೆಪ್ಪದಕಂಡಿ ಬಳಿ ಅತಿಯಾದ ಮಳೆಯಿಂದ ಕಾವೇರಿ ನದಿ ತಟದಲ್ಲಿದ್ದ ಬೃಹತ್ ಮಾವಿನ ಮರದ ಬುಡ ಸಡಿಲಗೊಂಡು ನದಿಗೆ ಅಡ್ಡಲಾಗಿ ಉರುಳಿ ಬಿದ್ದಿದೆ

ಸುಂಟಿಕೊಪ್ಪದಲ್ಲಿ ಮನೆಗಳಿಗೆ ನುಗ್ಗಿದ ನೀರು

ಸುಂಟಿಕೊಪ್ಪ: ಸುಂಟಿಕೊಪ್ಪ ಸುತ್ತಮುತ್ತಲಿನ ವ್ಯಾಪ್ತಿಯಲ್ಲಿ ಸುರಿದ ‌ಧಾರಕಾರ ಮಳೆಗೆ ಸಾಕಷ್ಟು ಮನೆಗಳಿಗೆ ನೀರು ನುಗ್ಗಿ ನಿವಾಸಿಗಳು ತಡರಾತ್ರಿಯವರೆಗೆ ಪರದಾಡಿದರು. ಬುಧವಾರ ಸಂಜೆ ವೇಳೆ ಏಕಾಏಕಿ ಸುರಿದ ಭಾರಿ ಮಳೆಯಿಂದಾಗಿ ರಸ್ತೆ ಚರಂಡಿ ಮೋರಿ ಹಾಗೂ ತೋಡುಗಳಲ್ಲಿ ನೀರು ಉಕ್ಕಿ ಹರಿಯಲಾರಂಭಿಸಿ ಕೆಲವು ತಗ್ಗು ಪ್ರದೇಶದಲ್ಲಿರುವ ಮನೆಗಳಿಗೆ ಕೊಳಚೆ ನೀರು ನುಗ್ಗಿತು.

ಸುಂಟಿಕೊಪ್ಪ ಗ್ರಾಮ ಪಂಚಾಯತಿಯ 1ನೇ ವಿಭಾಗದ ಪಂಪ್‌ಹೌಸ್‌ನಲ್ಲಿ ವಾಸವಾಗಿರುವ ಸೈನಿಕರೊಬ್ಬರ ಮನೆಗೆ ನೀರು ನುಗ್ಗಿತು. ಕಳೆದ ಐದಾರು ವರ್ಷಗಳಿಂದ ಮಳೆಗೆ ನೀರು ನುಗ್ಗುತ್ತಿರುವ ಬಗ್ಗೆ ಗ್ರಾಮ ಪಂಚಾಯತಿ ಪಿಡಿಒ ಹಾಗೂ ಆ ಭಾಗದ ಜನಪ್ರತಿನಿಧಿಗಳಿಗೆ ಮನವಿ ಮಾಡಿಕೊಂಡು ಬಂದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದ ಕುಟುಂಬದ ಸದಸ್ಯರು ಕಿಡಿಕಾರಿದರು.

ಈಚೆಗೆ ಯೋಧ ನಾಸೀರ್ ಹುಸೈನ್ ಹಾಗೂ ಮನೆಯವರು ಗ್ರಾಮ ಪಂಚಾಯಿತಿ ಆಡಳಿತ ಮಂಡಳಿಗೆ ಸಮಸ್ಯೆಯ ಬಗ್ಗೆ ಹೇಳಿಕೊಂಡರೂ ಯಾವುದೇ ಕ್ರಮವನ್ನೂ ಕೈಗೊಂಡಿಲ್ಲ ಎಂದು ಅವರು ದೂರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.