
ಮಡಿಕೇರಿ: ಹೊಸದಾಗಿ 100 ಹೋಂಸ್ಟೇಗಳಿಗೆ ಪರವಾನಗಿ ನೀಡಲು ಪ್ರವಾಸೋದ್ಯಮ ಇಲಾಖೆಗೆ ಅರ್ಜಿ ಸಲ್ಲಿಕೆಯಾಗಿದೆ.
ಇಲ್ಲಿ ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಅವರು ಸೋಮವಾರ ನಡೆಸಿದ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಸಭೆಯಲ್ಲಿ ಈ ವಿಷಯ ಪ್ರಸ್ತಾಪವಾಯಿತು.
ಪ್ರವಾಸೋದ್ಯಮ ಇಲಾಖೆಯ ಪ್ರಭಾರ ಉಪ ನಿರ್ದೇಶಕರು ಹಾಗೂ ಉಪ ವಿಭಾಗಾಧಿಕಾರಿಯೂ ಆದ ನಿತಿನ್ ಚಕ್ಕಿ ಅವರು ಫೆ. 7ರವರೆಗೆ 100 ಹೊಸ ಹೋಂ ಸ್ಟೇಗಳಿಗೆ ಪರವಾನಗಿ ನೀಡಲು ಅರ್ಜಿ ಸಲ್ಲಿಕೆಯಾಗಿವೆ. 180 ಹೋಂ ಸ್ಟೇಗಳ ನವೀಕರಣಕ್ಕೆ ಅರ್ಜಿ ಸಲ್ಲಿಕೆಯಾಗಿದೆ ಎಂದು ಮಾಹಿತಿ ನೀಡಿದರು.
ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಅವರು, ‘ಖುದ್ದಾಗಿ ಸ್ಥಳಕ್ಕೆ ತೆರಳಿ, ನೋಂದಣಿ ಹಾಗೂ ನವೀಕರಣ ಕಾರ್ಯವನ್ನು ಮಾರ್ಚ್ ಅಂತ್ಯದೊಳಗೆ ಪರಿಶೀಲಿಸಿ ಅರ್ಜಿ ವಿಲೇವಾರಿ ಮಾಡಬೇಕು’ ಸೂಚಿಸಿದರು.
ಆನ್‍ಲೈನ್ ಮೂಲಕ ಪರವಾನಗಿ ನೋಂದಣಿ ಹಾಗೂ ನವೀಕರಣ ಕಾರ್ಯವು ಸ್ಥಗಿತವಾಗಿದ್ದು, ತಾತ್ಕಾಲಿಕವಾಗಿ ಆಫ್‌ಲೈನ್ ಮೂಲಕ ಸ್ಥಳ ಪರಿಶೀಲಿಸಿ ಅನುಮೋದನೆ ಮಾಡಬೇಕಿದೆ ಎಂದು ಹೇಳಿದರು.
ವಿಶ್ವ ಪ್ರವಾಸೋದ್ಯಮ ದಿನಾಚರಣೆಯನ್ನು ಪ್ರತೀವರ್ಷವೂ ಅರ್ಥಪೂರ್ಣವಾಗಿ ಆಯೋಜಿಸಬೇಕು ಎಂದು ಸಲಹೆ ನೀಡಿದರು.
ರಾಜಾಸೀಟು ಅಭಿವೃದ್ಧಿ ಸಮಿತಿಯಲ್ಲಿ ಆಸಕ್ತರನ್ನು ಆಹ್ವಾನಿಸಬೇಕು. ನಗರಸಭೆ, ತೋಟಗಾರಿಕೆ ಇಲಾಖೆ, ಉಪ ವಿಭಾಗಾಧಿಕಾರಿಯವರು ಹಾಗೆಯೇ ಸಂಚಾರಿ ಪೊಲೀಸರು ಹಾಗೂ ಸಾರ್ವಜನಿಕರನ್ನು ಒಳಗೊಂಡ ಉಪ ಸಮಿತಿಯನ್ನು ರಚನೆ ಮಾಡಿಕೊಂಡು ರಾಜಾಸೀಟು ಅಭಿವೃದ್ಧಿಗೆ ಮುಂದಾಗುವಂತೆ ಸೂಚಿಸಿದರು.
ರಾಜಾಸೀಟಿನಲ್ಲಿ ಪುಟಾಣಿ ರೈಲು ಸಂಬಂಧಿಸಿದಂತೆ ಮೈಸೂರಿನ ರೈಲ್ವೆ ಅಧಿಕಾರಿಗಳ ಜೊತೆ ಚರ್ಚಿಸಿ ತ್ವರಿತ ಕ್ರಮ ಕೈಗೊಳ್ಳಲಾಗುವುದು ಎಂದರು.
ವಾಹನ ನಿಲುಗಡೆ ತಾಣ; ಶೀಘ್ರ ಕಾಮಗಾರಿ ಆರಂಭಿಸಲು ಸೂಚನೆ: ರಾಜಾಸೀಟು ವೀಕ್ಷಣೆಗೆ ವಾರಾಂತ್ಯದಲ್ಲಿ ಸಾವಿರಾರು ಜನರು ಆಗಮಿಸುತ್ತಾರೆ. ಇದರಿಂದ ಪ್ರವಾಸಿ ವಾಹನಗಳ ನಿಲುಗಡೆಗೆ ತೊಂದರೆಯಾಗಿದೆ. ಆದ್ದರಿಂದ ಈ ಬಗ್ಗೆ ಗಮನಹರಿಸಬೇಕು ಎಂದು ಕೊಡಗು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ನಾಗೇಂದ್ರ ಪ್ರಸಾದ್ ಮನವಿ ಮಾಡಿದರು.
ಕಳೆದ 15 ವರ್ಷಗಳಿಂದ ಇದೇ ಮಾಹಿತಿ ಹೇಳಿಕೊಂಡು ಬರಲಾಗಿದೆ. ಆದರೆ ಕೆಲಸಗಳು ಆಗಿಲ್ಲ ಎಂದು ಸಮಿತಿ ಸದಸ್ಯರೊಬ್ಬರು ಅತೃಪ್ತಿ ವ್ಯಕ್ತಪಡಿಸಿದರು.
ಈ ವೇಳೆ ಮಾತನಾಡಿದ ನಗರಾಭಿವೃದ್ಧಿ ಯೋಜನಾ ಶಾಖೆಯ ಯೋಜನಾ ನಿರ್ದೇಶಕ ಬಿ.ಬಸಪ್ಪ, ‘ನಗರೋತ್ಥಾನ ಯೋಜನೆಯಡಿ ಟೆಂಡರ್ ಆಗಿದ್ದು, ಶೀಘ್ರ ಕಾಮಗಾರಿ ಆರಂಭಿಸಲಾಗುತ್ತದೆ’ ಎಂದು ಹೇಳಿದರು.
ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್, ‘ವಾಹನ ನಿಲುಗಡೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು. ಆದಷ್ಟು ಕಾಮಗಾರಿಯನ್ನು ಶೀಘ್ರ ಆರಂಭಿಸಬೇಕು’ ಎಂದು ನಿರ್ದೇಶನ ನೀಡಿದರು.
ಮಾಂದಲ್ ಪಟ್ಟಿಗೆ ತೆರಳುವ ವಾಹನ ಸಂಬಂಧಿಸಿದಂತೆ ದೂರುಗಳು ಕೇಳಿ ಬರುತ್ತಿರುವ ಹಿನ್ನೆಲೆ ಫ್ರೀಪೇಯ್ಡ್ ವಾಹನಕ್ಕೆ ಅವಕಾಶ ಮಾಡಬೇಕು ಎಂದು ಜಿಲ್ಲಾಧಿಕಾರಿ ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸೆಂಥಿಲ್ ಕುಮಾರ್ ಮಾಂದಲ್ ಪಟ್ಟಿಯಲ್ಲಿ ಸುಗಮ ಸಾರಿಗೆ ಸಂಚಾರ ಸಂಬಂಧ ಸಣ್ಣ ಸಣ್ಣ ಕಲ್ಲುಗಳನ್ನು ಅಳವಡಿಸಿ ರಸ್ತೆ ನಿರ್ಮಿಸಲಾಗುತ್ತದೆ ಎಂದರು.
ನಾಗೇಂದ್ರ ಪ್ರಸಾದ್ ಪ್ರತಿಕ್ರಿಯಿಸಿ, ಗಡಿ ಭಾಗದಲ್ಲಿ ವೈಟ್‍ಬೋರ್ಡ್‍ಗಳನ್ನು ತಪಾಸಣೆ ಮಾಡಬೇಕು. ತೆರಿಗೆಯನ್ನು ಸಂಗ್ರಹಿಸಬೇಕು ಎಂದರು.
ಪ್ರಾದೇಶಿಕ ಸಾರಿಗೆ ಅಧಿಕಾರಿ ಸತೀಶ್ ಮಾತನಾಡಿ, ಜಿಲ್ಲೆಯಲ್ಲಿ ₹ 1.69 ಕೋಟಿಯಷ್ಟು ವಾಹನ ತೆರಿಗೆ ಸಂಗ್ರಹಿಸಲಾಗಿದೆ ಎಂದು ಮಾಹಿತಿ ನೀಡಿದರು.
ಟೂರ್ ಅಂಡ್ ಟ್ರಾವಲ್ ಅಸೋಷಿಯೇಷನ್ ಅಧ್ಯಕ್ಷ ಕುಪ್ಪಂಡ ವಸಂತ್ ಅವರು ಪ್ರವಾಸಿ ಸ್ಥಳಗಳಲ್ಲಿ ಸಾರ್ವಜನಿಕರಿಗೆ ಯಾವುದೇ ಕಿರಿಕಿರಿ ಉಂಟಾಗದಂತೆ ಗಮನಹರಿಸಲಾಗುವುದು ಎಂದರು.
ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಬಿ.ಬಸಪ್ಪ, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಶಶಿಧರ, ಉಪ ಪೊಲೀಸ್ ವರಿಷ್ಠಾಧಿಕಾರಿ ಐ.ಪಿ.ಮೇದಪ್ಪ, ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಸಚಿನ್, ಜಿಲ್ಲಾ ಪರಿಸರ ಅಧಿಕಾರಿ ರಘುರಾಮ್, ದುಬಾರೆ ರಿವರ್ ರ‍್ಯಾಫ್ಟಿಂಗ್ ಮೆಂಬರ್ ವಿಶ್ವ ಮಾತನಾಡಿದರು. ಪ್ರವಾಸೋದ್ಯಮ ಇಲಾಖೆಯ ಸಮಾಲೋಚಕ ಜತಿನ್ ಬಿದ್ದಪ್ಪ ಭಾಗವಹಿಸಿದ್ದರು.
‘ಕೂರ್ಗ್ ವಿಲೇಜ್’ ಅಭಿವೃದ್ದಿಗೆ ಸಂಬಂಧಿಸಿದಂತೆ ನಗರಸಭೆ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಆಸಕ್ತರನ್ನು ಒಳಗೊಂಡ ಉಪ ಸಮಿತಿ ರಚಿಸಬೇಕು ಎಂದು ಜಿಲ್ಲಾಧಿಕಾರಿ ಎಸ್.ಟಿ.ಸೋಮಶೇಖರ್ ನಿರ್ದೇಶನ ನೀಡುತ್ತಿದ್ದಂತೆ ಮತ್ತೊಮ್ಮೆ ಸಭೆಯಲ್ಲಿ ಕೂರ್ಗ್ ವಿಲೇಜ್ ಚರ್ಚೆ ಪ್ರತಿಧ್ವನಿಸಿತು. ಈ ವೇಳೆ ಮಾತನಾಡಿದ ಕೊಡಗು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಉಪಾಧ್ಯಕ್ಷ ನವೀನ್ ಅಂಬೆಕಲ್ಲು ₹ 98 ಲಕ್ಷ ವ್ಯಯಿಸಿ ಕೂರ್ಗ್ ವಿಲೇಜ್‍ನ್ನು ನಿರ್ಮಿಸಲಾಗಿದೆ. ಅಲ್ಲಿ ಮತ್ತೆ ವೆಚ್ಚ ಮಾಡುವುದಕ್ಕಿಂತ ರಾಜಾಸೀಟನ್ನು ಅಭಿವೃದ್ಧಿ ಪಡಿಸುವುದು ಒಳಿತು ಎಂದು ಸಲಹೆ ನೀಡಿದರು. ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಶಶಿಧರ ಮಾತನಾಡಿ ‘ಸ್ವಸಹಾಯ ಗುಂಪುಗಳಿಗೆ ಹಾಗೂ ವಿವಿಧ ಇಲಾಖೆಗಳಿಗೆ ಮಳಿಗೆ ನೀಡಲು ನಿರ್ಧರಿಸಲಾಗಿತ್ತು ಆ ವೇಳೆ ಯಾರೂ ಸಹ ಮುಂದೆ ಬರಲಿಲ್ಲ. ಸದ್ಯ ಆರ್ಟ್ ಗ್ಯಾಲರಿ ಮತ್ತಿತರ ಮಳಿಗೆಯನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ’ ಎಂದರು. ಹೋಂ ಸ್ಟೇ ಅಸೋಷಿಯೇಷನ್ ಅಧ್ಯಕ್ಷೆ ಮೋಂತಿ ಗಣೇಶ್ ಮಾತನಾಡಿ ಕೂರ್ಗ್ ವಿಲೇಜ್ ಬಳಕೆಯಾಗಬೇಕು. ಜೊತೆಗೆ ನೆಹರು ಮಂಟಪವನ್ನು ಅಭಿವೃದ್ಧಿ ಪಡಿಸಬೇಕು’ ಎಂದು ಒತ್ತಾಯಿಸಿದರು. ಕೊಡಗು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ನಾಗೇಂದ್ರ ಪ್ರಸಾದ್ ಅವರು ಕೊಡವ ಹೆರಿಟೇಜ್ ಸೆಂಟರ್’ ಇನ್ನೂ ಪೂರ್ಣಗೊಳ್ಳದಿರುವುದಕ್ಕೆ ಅತೃಪ್ತಿ ವ್ಯಕ್ತಪಡಿಸಿದರು. ಪ್ರತೀ ಸಭೆಯಲ್ಲೂ ಚರ್ಚೆಗೆ ಬರುತ್ತಿದೆ. ಆದರೆ ಕೆಲಸ ಮಾತ್ರ ಆಗಿಲ್ಲ ಎಂದು ದೂರಿದರು. ಭಾರತ ಸರ್ಕಾರದ ನಾಗರಿಕ ಸೇವೆಯಲ್ಲಿದ್ದ ಕೊಡಗು ಜಿಲ್ಲೆಯ ರತಿ ವಿನೇಜಾ ಅವರ ಪ್ರಯತ್ನದಿಂದ ಕೊಡವ ಹೆರಿಟೇಜ್ ಸ್ಥಾಪನೆಗೆ ಮುಂದಾಗಲಾಗಿತ್ತು. ಆದರೆ ಈ ಕಾಮಗಾರಿ ಪೂರ್ಣಗೊಂಡಿಲ್ಲ ಎಂದು ಮೋಂತಿ ಗಣೇಶ್ ಧ್ವನಿಗೂಡಿಸಿದರು.
ಹೋಂ ಮೇಡ್ ವೈನ್ ಚಾಕಲೇಟ್ ತಯಾರಿಕೆ ಹಾಗೂ ಸ್ಪೈಸಸ್ ಹೆಸರಿನಲ್ಲಿ ಕೊಡಗು ಜಿಲ್ಲೆಯಲ್ಲಿ ಸುಳ್ಳು ಹೇಳಿ ವ್ಯಾಪಾರ ಮಾಡುತ್ತಿದ್ದು ಇದಕ್ಕೆ ಕಡಿವಾಣ ಹಾಗಬೇಕು ಎಂದು ಮೋಂತಿ ಗಣೇಶ್ ಮನವಿ ಮಾಡಿದರು. ‘ಕೊಡಗು ಸಿಲ್ಕ್’ ಹೆಸರಿನಲ್ಲಿ ಸೀರೆಯನ್ನು ಮಾರಾಟ ಮಾಡುವುದಕ್ಕೆ ಅರ್ಥವಿದೆಯೇ ಎಂದು ಸಮಿತಿ ಸದಸ್ಯ ಕರುಂಬಯ್ಯ ಗಮನ ಸೆಳೆದರು. ಕೊಡಗು ಹೋಂ ಮೇಡ್ ಹೆಸರಿನಲ್ಲಿ ಕಡಿಮೆ ಬೆಲೆಗೆ ವೈನ್ ಮಾರಾಟ ಮಾಡುತ್ತಿದ್ದಾರೆ. ಈ ಬಗ್ಗೆ ಗಮನಹರಿಸಬೇಕು. ಆರೋಗ್ಯ ಸುರಕ್ಷತೆಗೆ ಒತ್ತು ನೀಡಬೇಕು ಎಂದು ಜಿಲ್ಲಾಧಿಕಾರಿ ಎಸ್.ಡಿ.ಸೋಮಶೇಖರ್ ಹೇಳಿದರು. ಈ ವೇಳೆ ಮಾತನಾಡಿದ ಅಬಕಾರಿ ಇಲಾಖೆ ಇನ್‌ಸ್ಪೆಕ್ಟರ್ ಅಬ್ರಾಹಂ ಚೇತನ್ ‘ಹೋಂ ಮೇಡ್ ವೈನ್‍ನಲ್ಲಿ ಶೇ 6.8ರಷ್ಟು ಆಲ್ಕೋ ಹಾಲ್ ಅಂಶ ಇರುವುದು ಕಂಡುಬಂದಿದೆ’ ಎಂದು ತಿಳಿಸಿದರು. ಹೋಂ ಮೇಡ್ ಚಾಕಲೇಟ್ ಸಂಬಂಧಿಸಿದಂತೆ ತಯಾರಿಕಾ ದಿನಾಂಕ ಹಾಗೂ ವರ್ಷ ತಯಾರಿಕೆ ಸಂಸ್ಥೆಯ ಹೆಸರು ಅವಧಿ ಮುಗಿಯುವ ದಿನಾಂಕ ಪರವಾನಗಿ ಮತ್ತಿತರ ಅಂಶಗಳು ಒಳಗೊಂಡಿರಬೇಕು ಎಂದು ಹೇಳಿದರು.
* ಪ್ಲಾಸ್ಟಿಕ್‍ನ್ನು ಹಂತ ಹಂತವಾಗಿ ಬಳಕೆಯಿಂದ ದೂರ ಮಾಡಬೇಕು
* ಮಾರ್ಚ್ 1ರಿಂದ ಏಪ್ರಿಲ್1 ರ ತನಕ ‘ಸ್ವಚ್ಛ ಹಾಗೂ ಸುಂದರ ಕೊಡಗು’ ಹೆಸರಿನಲ್ಲಿ ಅಭಿಯಾನ ಆಯೋಜಿಸಿ
* ಜಿಲ್ಲೆಯಲ್ಲಿ ಡ್ರಗ್ಸ್ ನಿಯಂತ್ರಿಸುವ ಸಂಬಂಧ ಹೋಂಸ್ಟೇಗಳ ಪರಿಶೀಲನೆ ಮಾಡಬೇಕು
*ಕುಶಾಲನಗರದಲ್ಲಿ ತಾವರೆಕೆರೆಯನ್ನು ಪ್ರವಾಸೋದ್ಯಮವಾಗಿ ಅಭಿವೃದ್ಧಿ ಪಡಿಸಬೇಕು. ಅಬ್ಬಿಪಾಲ್ಸ್ ತೂಗುಸೇತುವೆ ಸರಿಪಡಿಸುವಂತಾಗಬೇಕು ಎಂದು ನಾಗೇಂದ್ರ ಪ್ರಸಾದ್ ಸಲಹೆ ನೀಡಿದರು
* ಕಲ್ಯಾಣ ಮಂಟಪದಲ್ಲಿಯೂ ಸಹ ಪ್ಲಾಸ್ಟಿಕ್ ಬಳಸದಂತೆ ಜಾಗೃತಿ ಮೂಡಿಸಬೇಕು. ಕುಟ್ಟ ಹಾಗೂ ಮಾಕುಟ್ಟ ಗಡಿ ಪ್ರದೇಶದಲ್ಲಿ ವಾಹನಗಳ ತಪಾಸಣೆ ಮಾಡಿ ಪರಿಸರ ಶುಚಿತ್ವಕ್ಕೆ ಒತ್ತು ನೀಡಬೇಕು ಎಂದು ಜಿಲ್ಲಾ ಚೇಂಬರ್ ಆಫ್ ಕಾಮರ್ಸ್‍ನ ನಿರ್ದೇಶಕ ಶ್ಯಾಮ್ ಹೇಳಿದರು.
* ದುಬಾರೆಯಲ್ಲಿನ ಆನೆ ಶಿಬಿರ ವೀಕ್ಷಣೆಗೆ ತೆರಳುವ ಸಂದರ್ಭದಲ್ಲಿ ಸಾರ್ವಜನಿಕರಿಂದ ಪ್ರವೇಶ ಶುಲ್ಕವನ್ನು ಹೆಚ್ಚು ತೆಗೆದುಕೊಳ್ಳಲಾಗುತ್ತಿದ್ದು ಇದನ್ನು ಕಡಿಮೆ ಮಾಡಬೇಕು ಎಂದು ಸಮಿತಿ ಸದಸ್ಯರೊಬ್ಬರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.