ADVERTISEMENT

ನಾಪೋಕ್ಲು| 300 ವರ್ಷದ ನಂತರ ವಯನಾಟ್ ಕುಲವನ್ ದೈವ ಕಟ್ಟು ಮಹೋತ್ಸವ! ಏನಿದರ ವಿಶೇಷ?

ನಾಳೆಯಿಂದ ವಯನಾಟ್ ಕುಲವನ್ ದೈವ ಕಟ್ಟು ಅದ್ಧೂರಿ ಮಹೋತ್ಸವ

ಸಿ.ಎಸ್.ಸುರೇಶ್
Published 2 ಮಾರ್ಚ್ 2023, 19:30 IST
Last Updated 2 ಮಾರ್ಚ್ 2023, 19:30 IST
ಪೆರಾಜೆ ಗ್ರಾಮದ ಕುಂಬಳಚೇರಿಯ ಶ್ರೀ ವೈನಾಟ್ ಕುಲವನ್ ದೈವಸ್ಥಾನದ ವಯನಾಟ್ ಕುಲವನ್ ದೈವ ಕಟ್ಟು ಮಹೋತ್ಸವಕ್ಕೆ ಪ್ರವೇಶದ್ವಾರವನ್ನು ಸಿಂಗರಿಸಿರುವುದು
ಪೆರಾಜೆ ಗ್ರಾಮದ ಕುಂಬಳಚೇರಿಯ ಶ್ರೀ ವೈನಾಟ್ ಕುಲವನ್ ದೈವಸ್ಥಾನದ ವಯನಾಟ್ ಕುಲವನ್ ದೈವ ಕಟ್ಟು ಮಹೋತ್ಸವಕ್ಕೆ ಪ್ರವೇಶದ್ವಾರವನ್ನು ಸಿಂಗರಿಸಿರುವುದು   

ನಾಪೋಕ್ಲು: ಜಿಲ್ಲೆಯ ಗಡಿಭಾಗ ಪೆರಾಜೆ ಗ್ರಾಮದ ಕುಂಬಳಚೇರಿಯ ಶ್ರೀ ವೈನಾಟ್ ಕುಲವನ್ ದೈವಸ್ಥಾನದ ವಯನಾಟ್ ಕುಲವನ್ ದೈವ ಕಟ್ಟು ಮಹೋತ್ಸವ ಮಾರ್ಚ್ 3ರಿಂದ 5ರವರೆಗೆ ನಡೆಯಲಿದೆ. ಇದು 300 ವರ್ಷಗಳ ನಂತರ ನಡೆಯುತ್ತಿರುವ ಉತ್ಸವ ಎಂಬುದು ವಿಶೇಷ.

ಸುಮಾರು 50 ಸಾವಿರಕ್ಕೂ ಅಧಿಕ ಮಂದಿ ಪಾಲ್ಗೊಳ್ಳುವ ನಿರೀಕ್ಷೆ ಈ ಅಪರೂಪದ ಉತ್ಸವಕ್ಕೆ ₹ 50 ಲಕ್ಷ ವೆಚ್ಚ ಮಾಡಲಾಗಿದೆ.

ಕೊಡಗು ಜಿಲ್ಲೆಯ ಗಡಿ ಭಾಗದಲ್ಲಿ ವೈಷ್ಣವಾಂಶ, ಶೈವಾಂಶದ ವಿವಿಧ ಅವತಾರ ಶಕ್ತಿಯನ್ನು, ದೈವಗಳನ್ನು ಕೋಲ ರೂಪದಲ್ಲಿ ಆರಾಧಿಸಲಾಗುತ್ತಿದ್ದು ಅವುಗಳಲ್ಲಿ ವಯನಾಟ್ ಕುಲವನ್ ಸಹ ಒಂದು. ಚೈತನ್ಯ ಮೂರ್ತಿ ಶ್ರೀ ಪರಮಶಿವನ ಅಂಶಾವತಾರದ ಆದಿ ದಿವ್ಯನಾಗಿ ಅಥವಾ ಮೂಲಚೇತನನಾಗಿ ಶ್ರೀ ವಯನಾಟ್ ಕುಲವನ್ ಭೂಭೂಮಿಯಲ್ಲಿ ಅವತರಿಸಿ, ವೈನಾಡಿನಲ್ಲಿ ನೆಲೆಸಿದರು. ವೈನಾಡಿನ ರಕ್ಷಕನಾಗಿ ಶೈವಾಂಶ ಸಂಭೂತನಾದ ಶ್ರೀ ವಯನಾಟ್ ಕುಲವನ್ ಬೇಟೆಗಾರ ದೈವವೆಂದು ಕರೆಯಲಾಗುತ್ತಿದೆ. ಮಲೆನಾಡಿಗೆ ಪ್ರವೇಶಿಸಿದ ಈ ದೈವವನ್ನು ತೊಂಡಚ್ಚನ್ ಎಂದು ಕರೆಯಲಾಗುತ್ತಿದ್ದು, ಅನೇಕ ಪ್ರದೇಶಗಳಲ್ಲಿ ಸಂಚರಿಸಿ ತುಳುನಾಡಿನ ಅಲ್ಲಲ್ಲಿ ನೆಲೆ ನಿಂತಿರುವ ಐತಿಹ್ಯವಿದೆ.

ADVERTISEMENT

ಜಾತ್ರಾ ಮಹೋತ್ಸವದ ಕಾರ್ಯಕ್ರಮದ ವಿವರ: ಜಾತ್ರಾ ಮಹೋತ್ಸವದ ಅಂಗವಾಗಿ ಪೆರಾಜೆಯ ಶ್ರೀಶಾಸ್ತಾವು ದೇವಸ್ಥಾನದಿಂದ ಮಾರ್ಚ್ 3ರಂದು ಬೆಳಿಗ್ಗೆ 7.30ಕ್ಕೆ ಹಸಿರು ವಾಣಿ ಮೆರವಣಿಗೆ ಹೊರಡಲಿದೆ. ಬಳಿಕ ಉಗ್ರಾಣ ತುಂಬುವ ಕಾರ್ಯಕ್ರಮ ನಡೆಯಲಿದೆ.11 ಗಂಟೆಯಿಂದ ಧಾರ್ಮಿಕ ಸಭೆ ನಡೆಯಲಿದೆ. ಸಂಜೆ 5 ಗಂಟೆಯಿಂದ ದೈವಿಕ ಕಾರ್ಯಕ್ರಮ ಆರಂಭಗೊಳ್ಳಲಿದ್ದು, ದೈವಗಳ ಕೂಡುವಿಕೆ, ಶ್ರೀಪೊಟ್ಟನ್ ದೈವ ಕಾರ್ಯಕ್ರಮ ನಡೆಯಲಿದೆ.

ಮಾರ್ಚ್ 4ರಂದು ಬೆಳಿಗ್ಗೆ 7 ಗಂಟೆಯಿಂದ ಶ್ರೀ ಕೊರತಿಯಮ್ಮ ದೈವ, 8.30ರಿಂದ ಚಾಮುಂಡಿ ದೈವ, 9.30 ರಿಂದ ಶ್ರೀ ವಿಷ್ಣುಮೂರ್ತಿ ದೈವ, 12ರಿಂದ ಶ್ರೀ ಗುಳಿಗ ದೈವದ ಕೋಲ, ಮಧ್ಯಾಹ್ನ 3 ಗಂಟೆಯಿಂದ ಶ್ರೀಕಾರ್ನೋನ್ ದೈವದ ವೆಳ್ಳಾಟಂ, 5 ರಿಂದ ಶ್ರೀ ಕೊರಚನ್ ದೈವದ ವೆಳ್ಳಾಟಂ, 7 ರಿಂದ ಶ್ರೀ ಕಂಡನಾರ್ ಕೇಳನ್ ದೈವದ ವೆಳ್ಲಾಟಂ, ಲಾಟ ವಿಷ್ಣುಮೂರ್ತಿ ದೈವಗದ ಆರಂಭ ವೈ ನಾಟ್ ಕುಲವನ್ ದೈವದ ವೆಳ್ಳಾಟಂ, ರಾತ್ರಿ 12.30ರಿಂದ ಶ್ರೀವಿಷ್ಣುಮೂರ್ತಿ ದೈವಗದ ಆರಂಭ ಆಗಲಿದೆ. 1 ಗಂಟೆಯಿಂದ ಶ್ರೀ ವಯನಾಟ್ ಕುಲವನ್ ದೈವದ ವೆಳ್ಳಾಟಂ ನಡೆಯಲಿದೆ.

ಮಾರ್ಚ್ 5ರಂದು ಬೆಳಿಗ್ಗೆ 7 ಗಂಟೆಯಿಂದ ಶ್ರೀ ಕಾರ್ನೋನ್ ದೈವ, 9ರಿಂದ ಶ್ರೀ ಕೋರಚ್ಚನ್ ದೈವ, 11ರಿಂದ ಶ್ರೀ ಕಂಡನಾರ್ ಕೇಳನ್ ದೈವ, 2ರಿಂದ ಶ್ರೀ ವಯನಾಟ್ ಕುಲವನ್ ದೈವದ ಅಂಗಣ ಪ್ರವೇಶ ಮತ್ತು ಸೂಟೆ ಸಮರ್ಪಣೆ ನಡೆಯಲಿದೆ. ಮಧ್ಯಾಹ್ನ 3 ಗಂಟೆಯಿಂದ ಶ್ರೀ ವಿಷ್ಣುಮೂರ್ತಿ ದೈವದ ಅಂಗಣ ಪ್ರವೇಶ ನಡೆಯಲಿದೆ.

ದೈವಕಟ್ಟು ಮಹೋತ್ಸವ ಸಮಿತಿ ಅಧ್ಯಕ್ಷ ಹೊನ್ನಪ್ಪ ಕೊಳಂಗಾಯ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಧಾರ್ಮಿಕ ಉಪನ್ಯಾಸವನ್ನು ನೀಲೇಶ್ವರ ಕ್ಷೇತ್ರದ ಬ್ರಹ್ಮಶ್ರೀ ವೇದಮೂರ್ತಿ ಉಚ್ಚಿಲತ್ತಾಯ ಪದ್ಮನಾಭ ತಂತ್ರಿ ನೀಡಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.