
ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ದಿನೇ ದಿನೇ ಹೆಚ್ಚುತ್ತಿರುವ ವನ್ಯಜೀವಿ– ಮಾನವ ಸಂಘರ್ಷ ತಡೆಯಲು ಅರಣ್ಯ ಇಲಾಖೆ 2026ರಲ್ಲಿ ವಿನೂತನವಾದ ಕ್ರಮಗಳನ್ನು ಕೈಗೊಳ್ಳಲು ಸಿದ್ಧತೆ ನಡೆಸಿದೆ. ಅದರಲ್ಲಿ ಮಹತ್ವದ ‘ಕಮಾಂಡ್ ಅಂಡ್ ಕಂಟ್ರೋಲ್’ ಕೇಂದ್ರ ಜ. 3ರಂದೇ ಕಾರ್ಯಾರಂಭ ಮಾಡಲಿದೆ.
ದಿನದ 24 ಗಂಟೆಗಳ ಕಾಲ ಕಾರ್ಯನಿರ್ವಹಿಸುವ ಈ ಕೇಂದ್ರವನ್ನು ಸುಮಾರು ₹ 8 ಲಕ್ಷ ವೆಚ್ಚದಲ್ಲಿ ಕೊಡಗು ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಸ್ಥಾಪಿಸಲಾಗಿದೆ. ಇದರಲ್ಲಿ ಪಾಳಿ ಆಧಾರಿತವಾಗಿ ದಿನದ ಎಲ್ಲ ಸಮಯದಲ್ಲೂ ಸಿಬ್ಬಂದಿ ಕಾರ್ಯನಿರ್ವಹಿಸುತ್ತಾರೆ.
ವನ್ಯಜೀವಿ ಕುರಿತಾದ ದೂರುಗಳನ್ನು ಇವರು ಕೂಡಲೆ ಸಂಬಂಧಪಟ್ಟ ವಿಭಾಗದ ಅಧಿಕಾರಿಗಳು, ಸಿಬ್ಬಂದಿಗೆ ನೀಡುತ್ತಾರೆ. ಅವರು ತಕ್ಷಣವೇ ಸ್ಥಳಕ್ಕೆ ತೆರಳಿ ರಕ್ಷಣಾ ಕಾರ್ಯದಲ್ಲಿ ಭಾಗಿಯಾಗುತ್ತಾರೆ.
ಇದು ಕೇವಲ ರಕ್ಷಣಾ ಕಾರ್ಯಕ್ಕೆ ಮಾತ್ರವಲ್ಲ, ವನ್ಯಜೀವಿಗಳಿಂದ ಉಂಟಾಗುವ ಯಾವುದೇ ವಿಧವಾದ ತೊಂದರೆಗಳಿಗೂ ಈ ಕೇಂದ್ರ ಸ್ಪಂದಿಸುತ್ತದೆ. ಜೊತೆಗೆ, ವನ್ಯಜೀವಿ ಕುರಿತಾದ ಪ್ರತಿ ದೂರು ಇತ್ಯರ್ಥವಾಗುವಂತೆ ಮೇಲ್ವಿಚಾರಣೆ ನಡೆಸುತ್ತದೆ.
ಇಂತದ್ದೊಂದು ಕೇಂದ್ರ ಇದುವರೆಗೂ ಜಿಲ್ಲೆಯಲ್ಲಿರಲಿಲ್ಲ. ಈಗ ಅರಣ್ಯ ಖಾತೆ ಸಚಿವ ಈಶ್ವರ ಖಂಡ್ರೆಯವರು ಕೊಡಗು, ಹಾಸನ, ಚಿಕ್ಕಮಗಳೂರು, ಚಾಮರಾಜನಗರ, ಮೈಸೂರು ಸೇರಿದಂತೆ ವನ್ಯಜೀವಿ– ಮಾನವ ಸಂಘರ್ಷ ಹೆಚ್ಚಿರುವ ಜಿಲ್ಲೆಗಳಲ್ಲಿ ಈ ಕೇಂದ್ರವನ್ನು ಆರಂಭಿಸುತ್ತಿದ್ದು, ಜ. 3ರಂದು ಬೆಂಗಳೂರಿನಲ್ಲಿ ಚಾಲನೆ ನೀಡಲಿದ್ದಾರೆ.
ರೇಡಿಯೊ ಕಾಲರ್ ಹಾಕಿರುವ ಕಾಡಾನೆಗಳು ಹಾಗೂ ಹುಲಿಗಳ ಸಂಚಾರದ ಮಾಹಿತಿ ಈ ಕೇಂದ್ರಕ್ಕೆ ಕೂಡಲೇ ಲಭಿಸಲಿದೆ. ಇವುಗಳೇನಾದರೂ ಕಾಡಿನಿಂದ ಹೊರಕ್ಕೆ ಬಂದರೆ ಕೂಡಲೇ ಕೇಂದ್ರದ ಸಿಬ್ಬಂದಿ ಸಂಬಂಧಿಸಿದ ಪ್ರದೇಶದ ಜನರ ಮೊಬೈಲ್‌ಗಳಿಗೆ ಸಂದೇಶ ರವಾನಿಸಲಿದ್ದಾರೆ. ಇದಲ್ಲದೇ ಬೇರೆ ಯಾವುದೇ ವನ್ಯಜೀವಿಗಳು ಗ್ರಾಮ, ತೋಟಗಳಿಗೆ ಪ್ರವೇಶಿಸುವ ಮಾಹಿತಿ ದೊರೆತರೂ ಅದನ್ನು ಸಂಬಂಧಿಸಿದ ಪ್ರದೇಶದ ಜನರಿಗೆ ತಲುಪಿಸುವ ವ್ಯವಸ್ಥೆ ಮಾಡುತ್ತದೆ.
ರೈಲ್ವೆ ಬ್ಯಾರಿಕೇಡ್, ಸೋಲಾರ್ ತಂತಿಗಳ ಅಳವಡಿಕೆ
ಈ ವರ್ಷ ಅರಣ್ಯ ಇಲಾಖೆಯು ಕೆಲವಡೆ ರೈಲ್ವೆ ಬ್ಯಾರಿಕೇಡ್ ಹಾಗೂ ಸೋಲಾರ್ ತಂತಿಗಳ ಅಳವಡಿಕೆಗೆ ಸಿದ್ಧತೆ ನಡೆಸಿದೆ. ಸೋಮವಾರಪೇಟೆ ತಾಲ್ಲೂಕಿನಲ್ಲಿ 5 ಕಿ.ಮೀ ಸೋಲಾರ್ ಬೇಲಿ ನಿರ್ಮಾಣ ಕಾರ್ಯಕ್ಕೆ ಮಂಜೂರಾತಿ ದೊರೆತಿದ್ದು, ಈ ವರ್ಷ ಈ ಕಾರ್ಯ ಆರಂಭವಾಗಲಿದೆ.
ಕುಶಾಲನಗರ ವ್ಯಾಪ್ತಿಯಲ್ಲಿ 6.5 ಕಿ.ಮೀ ದೂರದ ರೈಲ್ವೆ ಬ್ಯಾರಿಕೇಡ್ ಅಳವಡಿಕೆಗೂ ಅರಣ್ಯ ಇಲಾಖೆ ಅಧಿಕಾರಿಗಳು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದು, ಈ ವರ್ಷ ಒಪ್ಪಿಗೆ ದೊರೆಯುವ ಸಾಧ್ಯತೆ ಇದೆ.
ಇಂದಿನಿಂದ ಕಾರ್ಯಾರಂಭ ಮಡಿಕೇರಿಯಲ್ಲಿ
‘ಕಮಾಂಡ್ ಅಂಡ್ ಕಂಟ್ರೋಲ್’ ಕೇಂದ್ರವು ಜ. 3ರಂದು ಅಧಿಕೃತವಾಗಿ ಕಾರ್ಯಾರಂಭ ಮಾಡಲಿದೆ. ವನ್ಯಜೀವಿಗಳ ಕುರಿತಾದ ದೂರುಗಳನ್ನು ಜನರು ನೀಡಬಹುದು. ‘ಜಿಪಿಎಸ್’ ಸೇರಿದಂತೆ ಅತ್ಯಾಧುನಿಕ ಉಪಕರಣಗಳಿದ್ದು ಸಮಸ್ಯೆಗೆ ಕೂಡಲೇ ಸ್ಪಂದನೆ ಸಿಗಲಿದೆ. ಈ ಕೇಂದ್ರಕ್ಕೆ ವನ್ಯಜೀವಿ ಉಪಟಳ ಕುರಿತಾದ ಮಾಹಿತಿ ನೀಡಲು ಮೊ: 8277124444 ಕ್ಕೆ ನೀಡಬಹುದು ಎಂದು ಡಿಸಿಎಫ್ ಅಭಿಷೇಕ್ ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.