ADVERTISEMENT

2025 ಹಿಂದಣ ಹೆಜ್ಜೆ | ಜಿಲ್ಲೆಗೆ ಸಿಹಿ, ಕಹಿಯ ಹೂರಣ

ಹಲವು ಸಮಸ್ಯೆಗಳಿಗೆ ಮೂಡಿದ ಪರಿಹಾರದ ಬೆಳ್ಳಿರೇಖೆ; ವಿವಾದ ಉಂಟುಮಾಡಿದ ಪ್ರಕರಣಗಳು

ಕೆ.ಎಸ್.ಗಿರೀಶ್
Published 31 ಡಿಸೆಂಬರ್ 2025, 6:50 IST
Last Updated 31 ಡಿಸೆಂಬರ್ 2025, 6:50 IST
ನಗು ಮೊಗದಿಂದ ಖಂಡಪೀಡಾಸನವನ್ನು ಮಾಡಿದ ಬಾಲಕಿ ಸಿಂಚನಾ
ನಗು ಮೊಗದಿಂದ ಖಂಡಪೀಡಾಸನವನ್ನು ಮಾಡಿದ ಬಾಲಕಿ ಸಿಂಚನಾ   

ಮಡಿಕೇರಿ: ಬೂಕರ್‌ ಪ್ರಶಸ್ತಿ ಬಂದ ಸಂಭ್ರಮ, ಕರ್ನಾಟಕ ಭೂಕಂದಾಯ 2ನೇ ತಿದ್ದುಪಡಿ ವಿಧೇಯಕ-2025ದ ಮೂಲಕ ಜಮ್ಮಾ ಬಾಣೆ ಸಮಸ್ಯೆಗೆ ಮುಕ್ತಿಯ ಬೆಳ್ಳಿ ರೇಖೆ ಗೋಚರ, ಭೂಕುಸಿತದಂತಹ ದುರಂತಗಳಿಲ್ಲದೇ ನಿರಂತರವಾಗಿ ಸುರಿಯುತ್ತಲೇ ಸಾಗಿದ ಮಳೆ ಹೀಗೆ ಹಲವು ಸಿಹಿಗಳು 2025ರಲ್ಲಿ ಕೊಡಗು ಜಿಲ್ಲೆಗೆ ದಕ್ಕಿತು.

ಕೇವಲ ಸಿಹಿ ಮಾತ್ರವಲ್ಲ, ಕಟ್ಟೆಮಾಡು ಮಹಾಮೃತ್ಯುಂಜಯ ದೇಗುಲದಲ್ಲಿ ಉಂಟಾದ ವಿವಾದ, ಒಂದೇ ಕುಟಂಬದ ನಾಲ್ವರ ಹತ್ಯೆ, ಬಿಜೆಪಿ ಕಾರ್ಯಕರ್ತ ವಿನಯ್ ಸೋಮಯ್ಯ ಆತ್ಮಹತ್ಯೆ, ದಸರೆಯ ಅಂತಿಮ ದಿನ ಉಂಟಾದ ಗಲಾಟೆಯಲ್ಲಿ ಡಿವೈಎಸ್‌ಪಿಗೆ ಗಾಯ... ಹೀಗೆ ಹಲವು ಕಹಿ ಘಟನೆಗಳೂ ಈ ಅವಧಿಯಲ್ಲಿ ನಡೆದವು.

ಮುಖ್ಯವಾಗಿ, ಕೇವಲ ಅನುವಾದ ಕೃತಿಗಳಿಗೆಂದೇ ಮೀಸಲಾದ ಅಂತರರಾಷ್ಟ್ರೀಯ ಬೂಕರ್‌ ಪ್ರಶಸ್ತಿಯು ಮೇ 21ರಂದು ದೀಪಾ ಭಾಸ್ತಿ ಅವರ ಅನುವಾದಿತ ಕೃತಿ ‘ಹಾರ್ಟ್ ಲ್ಯಾಂಪ್’ಗೆ ಒಲಿಯಿತು. ಇದು ಕೊಡಗಿನ ಕೀರ್ತಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಪಸರಿಸುವಂತೆ ಮಾಡಿತು.

ADVERTISEMENT

ವರ್ಷಾಂತ್ಯದಲ್ಲಿ ರಾಜ್ಯ ಸರ್ಕಾರವು ಕರ್ನಾಟಕ ಭೂಕಂದಾಯ 2ನೇ ತಿದ್ದುಪಡಿ ವಿಧೇಯಕ-2025ನ್ನು ವಿಧಾನಮಂಡಲದಲ್ಲಿ ಮಂಡಿಸಿದ್ದು, ಜಮ್ಮಾ ಬಾಣೆ ಸಮಸ್ಯೆಗೆ ಮುಕ್ತಿ ಸಿಗುವ ಭರವಸೆಯ ಬೆಳ್ಳಿ ರೇಖೆಯು ಹೊಳೆಯುಂತೆ ಮಾಡಿತು. ಈ ವಿಧೇಯಕವು ಹೇಗೆ ಜಾರಿಗೆ ಬರುತ್ತದೆ ಎಂಬ ಕುತೂಹಲದಲ್ಲೇ ಕೊಡಗಿನ ನಿವಾಸಿಗಳು 2026ನ್ನು ನೋಡುವಂತಾಗಿದೆ.

ಕಲೆ, ಸಾಹಿತ್ಯ ಕ್ಷೇತ್ರದಲ್ಲಿ ಈ ವರ್ಷದ ಆರಂಭದಲ್ಲೇ ಪೊಲೀಸ್ ಸಾಂಸ್ಕೃತಿಕ ವೇದಿಕೆ ಉದ್ಘಾಟನೆಗೊಂಡಿತು. ಜನವರಿ 26ರಂದು 110ಕ್ಕೂ ಅಧಿಕ ಮಂದಿ ಪೊಲೀಸರು ಸೇರಿ ಈ ವೇದಿಕೆಯನ್ನು ರಚಿಸಿಕೊಂಡರು. ಈ ಮೂಲಕ ಇಂತಹದ್ದೊಂದು ವೇದಿಕೆ ರಚನೆಯಾದ ವಿರಳಾತಿ ವಿರಳ ಜಿಲ್ಲೆಗಳಲ್ಲಿ ಕೊಡಗೂ ಒಂದು ಎಂಬ ಹೆಗ್ಗಳಿಕೆ ಮೂಡಿಸಿತು.

ನಿರ್ದೇಶಕಿ ಕೊಟ್ಟುಕತ್ತೀರ ಯಶೋಧ ಪ್ರಕಾಶ್ ಅವರ ನಿರ್ದೇಶನದ ‘ಕಂದೀಲು’ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ದೊರೆಯುವ ಮೂಲಕ ಕೊಡಗಿನ ಪತಾಕೆ ರಾಷ್ಟ್ರಮಟ್ಟದಲ್ಲಿ ಹಾರಾಡಿತು.

ಇನ್ನುಳಿದಂತೆ, ಹಲವು ಕಹಿ ಘಟನೆಗಳೂ ಈ ವರ್ಷ ನಡೆದು ಜನಮಾನಸವನ್ನು ತಲ್ಲಣಗೊಳಿಸಿದವು.

ಮುಖ್ಯವಾಗಿ ವರ್ಷದ ಆರಂಭದಲ್ಲೇ ಜಮ್ಮು ಮತ್ತು ಕಾಶ್ಮೀರದ ಪೂಂಛ್ ಜಿಲ್ಲೆಯಲ್ಲಿ ಸೇನಾ ವಾಹನವು ಕಂದಕಕ್ಕೆ ಉರುಳಿ ನಿಧನರಾಗಿದ್ದ ಕೊಡಗು ಜಿಲ್ಲೆಯ ಶನಿವಾರಸಂತೆ ಸಮೀಪದ ಆಲೂರು ಸಿದ್ದಾಪುರದ ಮಾಲಂಬಿ ಗ್ರಾಮದ ಸೈನಿಕ ಪಿ.ಪಿ. ದಿವಿನ್ (28) ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆ ನಡೆಯಿತು. ಈ ಸಾವಿನಿಂದ ಜಿಲ್ಲೆಯ ಜನರು ಮಮ್ಮಲ ಮರುಗಿದರು.

ಮೇ ತಿಂಗಳಿನಿಂದ ಆರಂಭವಾದ ಮಳೆ ಚಳಿಗಾಲದವರೆಗೂ ನಿರಂತರವಾಗಿ ಸುರಿಯಿತು. ಕಳೆದೆಲ್ಲ ವರ್ಷಗಳಿಗಿಂತ ಮಳೆ ದಿನಗಳು ಈ ವರ್ಷ ಹೆಚ್ಚಾಗಿತ್ತು. ಜಲಾವೃತ, ಸಂಪ‍ರ್ಕ ಕಡಿತ, ಉಕ್ಕಿ ಹರಿಯುತ್ತಿದ್ದ ನದಿಗಳು, ಆತಂಕದಲ್ಲೇ ಕಾಲ ಕಳೆದ ನದಿ ತೀರದ ಜನರು, ವರ್ಷದಲ್ಲಿ ಮೂರು ಬಾರಿ ಮುಳುಗಿದ ಭಾಗಮಂಡಲ ತ್ರಿವೇಣಿ ಸಂಗಮ, ಅವಧಿಗೂ ಮುನ್ನವೇ ತುಂಬಿದ ಹಾರಂಗಿ ಜಲಾಶಯ ಹೀಗೆ ವರ್ಷದ ಬಹುತೇಕ ತಿಂಗಳು ಮಳೆಗಾಲವನ್ನೇ ಅನುಭವಿಸಿದ ಜಿಲ್ಲೆಯಲ್ಲಿ ಮಳೆಯಿಂದ ನಷ್ಟ ಸಂಭವಿಸಿದರೂ ವಿಕೋಪಗಳು ಸಂಭವಿಸದೇ ಜನರು ನಿಟ್ಟುಸಿರುಬಿಟ್ಟರು. ಆದರೆ, ಬೀಳುತ್ತಿದ್ದ ಮಳೆಯ ಕಂಡು ಸುಮಾರು 5 ತಿಂಗಳುಗಳ ಕಾಲ ಕೊಡಗಿನ ಜನರು ಆತಂಕದಲ್ಲೆ ಕಾಲ ಕಳೆದರು.

ವಿವಾದದ ಬಿರುಗಾಳಿಗಳು: 2025ರಲ್ಲಿ ಎರಡು ಪ್ರಮುಖ ಘಟನೆಗಳು ವಿವಾದ ಬಿರುಗಾಳಿಗಳನ್ನೇ ಸೃಷ್ಟಿಸಿ, ಜನರಲ್ಲಿ ಆತಂಕ ಉಂಟು ಮಾಡಿದವು.

ವರ್ಷದ ಆರಂಭದಲ್ಲೇ ಕಟ್ಟೆಮಾಡು ಮಹಾಮೃತ್ಯುಂಜಯ ದೇಗುಲದಲ್ಲಿ ವಸ್ತ್ರಸಂಹಿತೆ ಕುರಿತು ಉಂಟಾದ ವಿವಾದ ಕೆಲವು ತಿಂಗಳುಗಳ ಕಾಲ ನಡೆಯಿತು. ಬೃಹತ್ ಪಾದಯಾತ್ರೆಗಳಿಗೆ ಇದು ಕಾರಣವಾಯಿತು. ಅಂತಿಮವಾಗಿ ವಿವಾದ ನ್ಯಾಯಾಲಯದ ಕಟೆಕಟೆ ತಲುಪಿತು. ಸದ್ಯ, ವರ್ಷಾಂತ್ಯದಲ್ಲಿ ದೇಗುಲದ ವಾರ್ಷಿಕ ಉತ್ಸವ ನಿರಾಂತವಾಗಿ ನಡೆಯಿತು.

ಉಭಯ ಪಕ್ಷಗಳ ನಡುವೆ ವಾಗ್ವಾದ: ಏಪ್ರಿಲ್ ತಿಂಗಳಿನಲ್ಲಿ ಬೆಂಗಳೂರಿನಲ್ಲಿ ಕೊಡಗಿನ ಗೋಣಿಮರೂರು ಸಮೀಪದ ಯಡುಂಡೆ ಗ್ರಾಮದ ವಿನಯ್ ಸೋಮಯ್ಯ (39) ಅವರ ಆತ್ಮಹತ್ಯೆ ಪ್ರಕರಣವೂ ಜಿಲ್ಲೆಯಲ್ಲಿ ವಿವಾದ ಬಿರುಗಾಳಿ ಎಬ್ಬಿಸಿತು. ಕಾಂಗ್ರೆಸ್ ಮತ್ತು ಬಿಜೆಪಿ ಮುಖಂಡರು ನಿರಂತರವಾದ ವಾಗ್ದಾಳಿ ನಡೆಸಿ, ಆರೋಪ, ಪ್ರತ್ಯಾರೋಪ ಮಾಡಿದರು. ಎರಡೂ ಪಕ್ಷಗಳ ನಡುವೆ ಸೃಷ್ಟಿಯಾದ ಜಟಾಪಟಿ ಕೆಲವು ತಿಂಗಳುಗಳ ಮುಂದುವರಿಯಿತು.

ಕಪ್ಪು ಚುಕ್ಕೆ: ದಸರಾ ದಶಮಂಟಪಗಳ ಶೋಭಾಯಾತ್ರೆಯ ಬಹುಮಾನ ವಿತರಣಾ ಸಮಾರಂಭದಲ್ಲಿ ಉಂಟಾದ ಗೊಂದಲ, ಪ್ರತಿಭಟನೆಯಲ್ಲಿ ಡಿವೈಎಸ್‌ಪಿ ಸೂರಜ್ ಅವರ ಕಾಲಿಗೆ ತೀವ್ರವಾದ ಗಾಯಗಳಾಗಿದ್ದು, ಇಡೀ ದಸರೆಗೆ ಕಪ್ಪುಚುಕ್ಕೆಯಂತೆ ಕಂಡಿತು. ನಿರಾಂತಕವಾಗಿ ನಡೆದಿದ್ದ ದಸರಾ ಕಾರ್ಯಕ್ರಮಗಳು ಕೊನೆಯ ದಿನ ಉಂಟಾದ ಈ ಘಟನೆಯಿಂದ ಮೆರುಗನ್ನು ಕಳೆದುಕೊಂಡವು. ದಸರಾ ದಶಮಂಟಪ‍ಗಳಿಗೆ ಬಹುಮಾನ ಇರಬೇಕೇ ಬೇಡವೇ ಎಂಬ ಚರ್ಚೆಯ ಪ್ರಜ್ಞೆಯನ್ನೂ ಹುಟ್ಟು ಹಾಕಿದವು.

ಕಾವೇರಿ ಪವಿತ್ರ ತೀರ್ಥೋದ್ಭವ, ಗಣೇಶೋತ್ಸವ, ಹುತ್ತರಿ, ಕೊಡವ ಕೌಟುಂಬಿಕ ಹಾಕಿ ಸೇರಿದಂತೆ ಹಲವು ಹಬ್ಬ, ಉತ್ಸವಗಳು ನಿರಾಂಕತವಾಗಿ ನಡೆದವು.

ದಾಖಲೆಗಳು: ಕೊಡಗಿನಲ್ಲಿ 2025ರಲ್ಲಿ ಹಲವು ದಾಖಲೆಗಳು ನಡೆದವು. ಮದೆನಾಡಿನ ಬಾಲಕಿ ಸಿಂಚನಾ ಯೋಗದಲ್ಲಿ ವರ್ಷದುದ್ದಕ್ಕೂ ನಿರಂತರವಾದ ಸಾಧನೆಗಳನ್ನು ಮಾಡಿ, ಹಲವು ದಾಖಲೆಗಳನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ದಾಖಲಿಸುವ ಮೂಲಕ ಗಮನ ಸೆಳೆದಳು. ಈ ವರ್ಷ ಗೋಲ್ಡನ್ ಬುಕ್‌ ಆಫ್ ವರ್ಲ್ಡ್ ರೆಕಾರ್ಡ್‌ನಲ್ಲಿ 3 ದಾಖಲೆಗಳು ಸೇರ್ಪ‍ಡೆಯಾದವು. ಇಲ್ಲಿಯವರೆಗೂ ಬಾಲಕಿಯು ಅಂತರರಾಷ್ಟ್ರೀಯ ಮಟ್ಟದ ಇಂಟರ್‌ನ್ಯಾಷನಲ್‌ ಬುಕ್‌ ಆಫ್‌ ರೆಕಾರ್ಡ್‌ನಲ್ಲಿ 2, ಗೋಲ್ಡನ್ ಬುಕ್‌ ಆಫ್ ವರ್ಲ್ಡ್ ರೆಕಾರ್ಡ್‌ನಲ್ಲಿ 8, ರಾಷ್ಟ್ರಮಟ್ಟದ ಇಂಡಿಯಾ ಬುಕ್‌ ಆಫ್‌ ರೆಕಾರ್ಡ್‌ನಲ್ಲಿ 1 ಹಾಗೂ ರಾಜ್ಯಮಟ್ಟದ ಕರ್ನಾಟಕ ಅಚೀವರ್ಸ್ ಬುಕ್ ಆಫ್‌ ರೆಕಾರ್ಡ್‌ನಲ್ಲಿ 1 ದಾಖಲೆ ನಿರ್ಮಿಸಿದ್ದಾಳೆ.

ಮಡಿಕೇರಿಯಲ್ಲಿ ನಡೆದ ಕೊಡವ ಕೌಟುಂಬಿಕ ಹಾಕಿಯಲ್ಲಿ ಇದೇ ಮೊದಲ ಬಾರಿಗೆ ವಿಡಿಯೊ ರೆಫರಲ್‌ ಅನ್ನು ಅಳವಡಿಸಲಾಯಿತು. ಒಟ್ಟು 396 ತಂಡಗಳು ಇದರಲ್ಲಿ ಭಾಗಿಯಾದವು. ವರ್ಷಾಂತ್ಯದಲ್ಲಿ ಇದೇ ಮೊದಲ ಬಾರಿಗೆ ಲೆವಿಸ್ಟಾ ಕೊಡವ ಹಾಕಿ ಚಾಂಪಿಯನ್ಸ್ ಟ್ರೋಫಿ ಆಯೋಜನೆಗೊಂಡು ಹಾಕಿಪ್ರಿಯರಿಗೆ ಈ ವರ್ಷ ಸುಗ್ಗಿ ಎನಿಸಿತು.

ಜಿಲ್ಲೆಯ ಮೊದಲ ಮೇಲ್ಸೇತುವೆ ಎನಿಸಿದ ಭಾಗಮಂಡಲದ ಮೇಲ್ಸೇತುವೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಲೋಕಾರ್ಪಣೆ ಮಾಡಿದರು. ಮಂಡೇಪಂಡ ತಂಡವು ‘ಮುದ್ದಂಡ ಕಪ್‌’ ಕೊಡವ ಕೌಟುಂಬಿಕ ಹಾಕಿ ಟೂರ್ನಿಯ ಚಾಂಪಿಯನ್‌ ಆಗಿ ಹೊರಹೊಮ್ಮಿತು.

ಭಾಗಮಂಡಲದಲ್ಲಿ ಕಂಗೊಳಿಸುತ್ತಿರುವ ಉದ್ಯಾನ
ಕಾವೇರಿ ಪವಿತ್ರ ತೀರ್ಥೋದ್ಭವಕ್ಕಾಗಿ ಕಲ್ಯಾಣಿಯ ಮೆಟ್ಟಿಲುಗಳ ಮೇಲೆ ಕಾದು ಕುಳಿತ ಭಕ್ತ ವೃಂದ
ಮಡಿಕೇರಿಯಲ್ಲಿ ಗುರುವಾರ ರಾತ್ರಿ ಆರಂಭವಾದ ‘ಬೆಳಕಿನ ದಸರೆ’ಯಲ್ಲಿ ಪೇಟೆ ಶ್ರೀರಾಮಮಂದಿರವು ‘ಕೃಷ್ಣನಿಂದ ಗೀತೋಪದೇಶ‘ ಕಥಾವಸ್ತುವನ್ನು ತನ್ನ ಮಂಟಪದಲ್ಲಿ ಪ್ರದರ್ಶಿಸಿತು ಪ್ರಜಾವಾಣಿ ಚಿತ್ರ/ರಂಗಸ್ವಾಮಿ
ಮಡಿಕೇರಿಯಲ್ಲಿ ವಿಜೃಂಭಣೆಯಿಂದ ನಡೆದ ಕರಗೋತ್ಸವ
ಮಡಿಕೇರಿಯಲ್ಲಿ ನಡೆಯುತ್ತಿರುವ ಕೊಡವ ಕೌಟುಂಬಿಕ ಹಾಕಿ ಟೂರ್ನಿ ಮುದ್ದಂಡ ಕಪ್‌ನಲ್ಲಿ ನೆಲ್ಲಮಕ್ಕಡ ಮತ್ತು ಕೋಳೇರ ತಂಡದ ಆಟಗಾರರು ಚೆಂಡಿಗಾಗಿ ತೀವ್ರ ಸೆಣಸಾಟ ನಡೆಸಿದರು

ಪ್ರಗತಿ ಕಾಣದ ಯೋಜನೆಗಳು  ಈ ವರ್ಷವೂ ಹಲವು ಸಮಸ್ಯೆಗಳು ಪರಿಹಾರ ಕಂಡಿಲ್ಲ ಹಲವು ಯೋಜನೆಗಳೂ ಪ್ರಗತಿ ಕಂಡಿಲ್ಲ. ಮುಖ್ಯವಾಗಿ ಮಾನವ–ವನ್ಯಜೀವಿ ಸಂಘರ್ಷ ಈ ವರ್ಷವೂ ಏರುಗತಿಯನ್ನೇ ಪಡೆಯಿತು. ರೈಲ್ವೆ ಬ್ಯಾರಿಕೇಡ್ ನಿರ್ಮಾಣ ಕಾರ್ಯ ನಿರೀಕ್ಷಿತ ಪ್ರಮಾಣದಲ್ಲಿ ನಡೆಯಲಿಲ್ಲ. ಹುಲಿ ಕಾಡಾನೆಗಳ ಸಾವು ಮಾತ್ರವಲ್ಲ ಮನುಷ್ಯರ ಸಾವು ಬೆಳೆ ನಾಶವೂ ಈ ಅವಧಿಯಲ್ಲಿ ಮುಂದುವರಿಯಿತು. ಸಿ ಮತ್ತು ಡಿ ಭೂಮಿ ಸಮಸ್ಯೆ ಸಂಚಾರ ದಟ್ಟಣೆ ವಾಹನ ನಿಲುಗಡೆ ಸಮಸ್ಯೆ ಅಭಿವೃದ್ಧಿಯನ್ನೇ ಕಾಣದ ಪ್ರವಾಸಿ ತಾಣಗಳು ಅಭಿವೃದ್ಧಿ ಕಾಣದ ರಸ್ತೆಗಳು ಪುನರ್‌ ನಿರ್ಮಾಣವಾಗದ ಕಾವೇರಿ ಕಲಾಕ್ಷೇತ್ರ ವಿಲೇವಾರಿಯಾಗದ ಮಡಿಕೇರಿಯ ಸ್ಟೋನ್‌ ಹಿಲ್‌ನಲ್ಲಿರುವ ಹಳೆಯ ತ್ಯಾಜ್ಯ ನಿರ್ಮಾಣವಾಗದ ಪ್ರಾದೇಶಿಕ ವಿಜ್ಞಾನ ಕೇಂದ್ರ ಸಿಗದ ರೈಲ್ವೆ ಸಂಪರ್ಕ ನಿರ್ಮಾಣವಾಗದ ಏರ್‌ಸ್ಕ್ರಿಪ್ ಹೀಗೆ ಸಾಲು ಸಾಲು ಯೋಜನೆಗಳು ನಿಂತಲ್ಲೇ ನಿಂತಿವೆ.

ಬೆಚ್ಚಿ ಬೀಳಿಸಿದ್ದ ಪ್ರಕರಣ; ಮರಣದಂಡನೆ ಶಿಕ್ಷೆ ಪ್ರಕಟ:  ಗಿರೀಶ್ ಎಂಬಾತ ಪೊನ್ನಂಪೇಟೆ ತಾಲ್ಲೂಕಿನ ಬೇಗೂರು ಸಮೀಪದ ಬಾಳಂಗಾಡು ಪ್ರದೇಶದಲ್ಲಿ ವಾಸವಿದ್ದ ಬುಡಕಟ್ಟು ಜನಾಂಗದ ನಾಗಿ (30) ಎಂಬುವವರ ಮೂರನೇ ಪತಿಯಾಗಿದ್ದ. ತನ್ನ ಪತ್ನಿಯು ಆಕೆಯ 2ನೇ ಪತಿಯೊಂದಿಗೆ ಸಂಬಂಧ ಹೊಂದಿದ್ದಾಳೆ ಎಂದು ಆರೋಪಿಸಿದ ಅಪರಾಧಿಯು ಮಾರ್ಚ್ 27ರಂದು ಪತ್ನಿ ನಾಗಿ ಆಕೆಯ ಅಜ್ಜ ಕರಿಯ (70) ಅಜ್ಜಿ ಗೌರಿ (70) ಮಲಮಗಳು ಕಾವೇರಿ (7) ಯನ್ನು ಭೀಕರವಾಗಿ ಕೊಲೆ ಮಾಡಿದ್ದ. ಈ ಘಟನೆ ಜಿಲ್ಲೆಯ ಜನರನ್ನು ತಲ್ಲಣಿಸಿತ್ತು. ಆದರೆ ಶೀಘ್ರದಲ್ಲೇ ಆರೋಪಿಯನ್ನು ಪೊಲೀಸರು ಬಂಧಿಸಿದರು. ಅಷ್ಟೆ ತ್ವರಿತಗತಿಯಲ್ಲಿ ಕೇವಲ ಒಂಬತ್ತೇ ತಿಂಗಳಿನಲ್ಲಿ ವಿರಾಜಪೇಟೆಯ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷೆನ್ಸ್ ನ್ಯಾಯಾಲಯವು ಅ‍ಪರಾಧಿಗೆ ಮರಣದಂಡನೆ ಶಿಕ್ಷೆ ವಿಧಿಸಿತು.