ADVERTISEMENT

ಕೊಡಗು ಜಿಲ್ಲಾ ಯುವಜನೋತ್ಸವ: 200ಕ್ಕೂ ಅಧಿಕ ಯುವಜನರಿಂದ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2025, 4:25 IST
Last Updated 17 ಅಕ್ಟೋಬರ್ 2025, 4:25 IST
ಕೊಡಗು ಜಿಲ್ಲಾಮಟ್ಟದ ಯುವ ಜನೋತ್ಸವದಲ್ಲಿ ವಿದ್ಯಾರ್ಥಿಗಳ ತಂಡವೊಂದು ನೃತ್ಯ ಪ್ರದರ್ಶಿಸಿತು
ಕೊಡಗು ಜಿಲ್ಲಾಮಟ್ಟದ ಯುವ ಜನೋತ್ಸವದಲ್ಲಿ ವಿದ್ಯಾರ್ಥಿಗಳ ತಂಡವೊಂದು ನೃತ್ಯ ಪ್ರದರ್ಶಿಸಿತು   

ಮಡಿಕೇರಿ: ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಗುರುವಾರ ನಡೆದ ಕೊಡಗು ಜಿಲ್ಲಾಮಟ್ಟದ ಯುವಜನೋತ್ಸವದಲ್ಲಿ 200ಕ್ಕೂ ಅಧಿಕ ಸ್ಪರ್ಧಿಗಳು ಭಾಗಿಯಾಗಿ ತಮ್ಮ ತಮ್ಮ ಪ್ರತಿಭೆ ಪ್ರದರ್ಶಿಸಿ ಜನಮನಸೂರೆಗೊಂಡರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕೊಡಗು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮೈ ಭಾರತ್, ಜಿಲ್ಲಾ ಯುವ ಒಕ್ಕೂಟ, ಮಡಿಕೇರಿ, ವಿರಾಜಪೇಟೆ ಹಾಗೂ ಸೋಮವಾರಪೇಟೆ ತಾಲ್ಲೂಕು ಯುವ ಒಕ್ಕೂಟ ಮತ್ತು ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು ವತಿಯಿಂದ ಈ ಕಾರ್ಯಕ್ರಮದಲ್ಲಿ ಜಾನಪದ ಗೀತೆ, ಜಾನಪದ ನೃತ್ಯ, ವಿಜ್ಞಾನ ಮೇಳ, ಕಥೆ ಬರೆಯುವುದು, ಕವಿತೆ ಬರೆಯುವುದು, ಚಿತ್ರಕಲೆ, ಭಾಷಣ ಸ್ಪರ್ಧೆಗಳು ನಡೆದವು. ಈ ಸ್ಪರ್ಧೆಗಳಲ್ಲಿ ಮೊದಲ ಸ್ಥಾನ ಪಡೆದವರು ನವೆಂಬರ್ ತಿಂಗಳಿನಲ್ಲಿ ಯಾದಗಿರಿ ಜಿಲ್ಲೆಯಲ್ಲಿ ನಡೆಯಲಿರುವ ರಾಜ್ಯ ಮಟ್ಟದ ಯುವ ಜನೋತ್ಸವ ಸ್ಪರ್ಧೆಯಲ್ಲಿ ಭಾಗವಹಿಸುವ ಅರ್ಹತೆ ಪಡೆದರು.

ಕೊಡಗು ಜಿಲ್ಲಾಮಟ್ಟದ ಯುವ ಜನೋತ್ಸವವನ್ನು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ವಿ.ಟಿ.ವಿಸ್ಮಯಿ ಗುರುವಾರ ಉದ್ಘಾಟಿಸಿದರು

ಕಾಲೇಜಿನ ಪ್ರಾಂಶುಪಾಲ ವಿಜಯ್, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ನಿರ್ದೇಶಕಿ ಮುಕ್ಕಾಟಿರ ಸ್ಮಿತಾ ಸುಬ್ಬಯ್ಯ, ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಂಶುಪಾಲರಾದ ನಿರ್ಮಲಾ, ಉಪನ್ಯಾಸಕರಾದ ಚಿದಾನಂದ, ಡಾ.ವೇಣುಗೋಪಾಲ್, ಉದಯಕುಮಾರ್, ಕೆಂಬಡತಂಡ ಮುದ್ದಪ್ಪ, ಕಂಬೀರಂಡ ರಾಖಿ ಪೂವಣ್ಣ, ಜಿಲ್ಲಾ ಯುವ ಒಕ್ಕೂಟದ ಖಜಾಂಚಿ ಕುಂಜಿಲಂಡ ಮಧು ಮೋಹನ್, ಸ್ಥಳೀಯ ಕಾಲೇಜು ನಿವೃತ್ತ ಪ್ರಾಂಶುಪಾಲರಾದ ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷೆ ಚಿತ್ರಾ, ಜಿಲ್ಲಾ ಯುವ ಒಕ್ಕೂಟದ ಕಾರ್ಯಾಧ್ಯಕ್ಷ ಕೂಡಂಡ ಸಾಬ ಸುಬ್ರಮಣಿ, ಮಡಿಕೇರಿ ತಾಲ್ಲೂಕು ಯುವ ಒಕ್ಕೂಟದ ಅಧ್ಯಕ್ಷ ಬಾಳಾಡಿ ದಿಲೀಪ್ ಭಾಗವಹಿಸಿದ್ದರು.

ADVERTISEMENT
ಕೊಡಗು ಜಿಲ್ಲಾಮಟ್ಟದ ಯುವ ಜನೋತ್ಸವದಲ್ಲಿ ಕಲಾವಿದರು ಜನಪದ ಗೀತೆಗಳನ್ನು ಹಾಡಿದರು
ಅತ್ಯಂತ ಸಂಪದ್ಭರಿತವಾದ ಜಾನಪದ ಕಲಾ ಸಂಸ್ಕೃತಿಯತ್ತ ಯುವ ಪೀಳಿಗೆಯ ಆಸಕ್ತಿ ಕ್ಷೀಣಿಸುತ್ತಿರುವುದು ಕಂಡು ಬರುತ್ತಿದೆ. ವೈವಿಧ್ಯಮಯವಾದ ಜಾನಪದ ಕಲೆ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಆಸಕ್ತರಾಗಬೇಕು.
ವಿ.ಟಿ.ವಿಸ್ಮಯಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ.
ಯುವ ಸಮೂಹ ಮಾದಕ ಪದಾರ್ಥಗಳ ಸೇವನೆಗೆ ಮಾರುಹೋಗದೆ ಬದುಕಿನಲ್ಲಿ ಉತ್ತಮ ಹೆಸರನ್ನುಗಳಿಸಿ ಕೀರ್ತಿ ಗಳಿಸಬೇಕು
ಕೆಟಿಕೆ ಉಲ್ಲಾಸ್ ಮೈ ಭಾರತ್ ಕೊಡಗು ಯುವ ಅಧಿಕಾರಿ
ಯುವ ಜನೋತ್ಸವದಲ್ಲಿ ಯುವ ಸಮೂಹ ಪಾಲ್ಗೊಳ್ಳುವುದರ ಮೂಲಕ ಪ್ರತಿಭೆಯನ್ನು ಹೊರಸೂಸಿ ರಾಷ್ಟ್ರಮಟ್ಟದಲ್ಲಿ ಕೀರ್ತಿ ತರುವಂತಾಗಲಿ
ಪಿ.ಕಲಾವತಿ ಮಡಿಕೇರಿ ನಗರಸಭಾ ಅಧ್ಯಕ್ಷೆ.
ಭಾಗವಹಿಸುವ ತಂಡಗಳ ಸದಸ್ಯರಿಗೆ 15 ರಿಂದ 29 ವರ್ಷದೊಳಗಿನ ವಯೋಮಿತಿ ನಿಗದಿಗೊಳಿಸುವ ಮೂಲಕ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಹೆಚ್ಚಿನ ಅವಕಾಶ ಕಲ್ಪಿಸಲಾಗಿದೆ.
ಪಿ.ಪಿ.ಸುಕುಮಾರ್ ಯುವ ಒಕ್ಕೂಟದ ಜಿಲ್ಲಾಧ್ಯಕ್ಷ.

ವಿವಿಧ ಸ್ಪರ್ಧೆ ವಿಜೇತರು

ಜನಪದ ನೃತ್ಯ: ಹೃಥ್ವಿಕ್ ತಂಡ ಗೋಣಿಕೊಪ್ಪಲು (ಪ್ರ), ವಿರಾಜಪೇಟೆಯ ನಾಟ್ಯಂಜಲಿ ತಂಡ (ದ್ವಿ), ಮಡಿಕೇರಿಯ ವಿದ್ಯಾಶ್ರೀ ತಂಡ (ತೃ)

ಜನಪದ ಗೀತೆ: ಗೋಣಿಕೊಪ್ಪಲಿನ ಪೂಜಿತ ತಂಡ (ಪ್ರ), ವಿರಾಜಪೇಟೆಯ ತಷ್ಮ ತಂಡ (ದ್ವಿ), ಮಡಿಕೇರಿಯ ಸಪ್ನ ತಂಡ (ತೃ(

ಕಥೆ ಬರೆಯುವುದು: ಸಿದ್ದಾಪುರದ ಜಿ.ಎಚ್.ಐಶ್ವರ್ಯ (ಪ್ರ), ಮಡಿಕೇರಿಯ ಮೆಹಕ್ ಬೋವಲ್ (ದ್ವಿ), ಮಡಿಕೇರಿಯ ಎಚ್.ಕೆ.ಜೀವನ್ (ತೃ)

ಕವಿತೆ ಬರೆಯುವುದು: ಕುಶಾಲನಗರದ ಪ್ರಗತಿ (‌ಪ್ರ), ಮಡಿಕೇರಿಯ ಎಚ್.ಕೆ.ಜೀವನ್ (ದ್ವಿ), ಗೋಣಿಕೊಪ್ಪಲಿನ ಶಕ್ತ ಚಂಗಪ್ಪ (ತೃ)

ಘೋಷಣೆ: ಮಡಿಕೇರಿಯ ಬಿ.ಸಿ.ಅವನಿಕ (ಪ್ರ), ಮಡಿಕೇರಿಯ ಹೇಮಾವತಿ (ದ್ವಿ), ಕುಶಾಲನಗರದ ಡಯಾನ ಭೋಜಮ್ಮ (ತೃ)

ಚಿತ್ರಕಲೆ: ಹರ್ಷ (ಪ್ರ), ಡಿ.ಸಿ.ಪಾರ್ವತ (ದ್ವಿ), ಐ.ಎಸ್.ಶಾಶ್ವತ್ (ತೃ)

ವಿಜ್ಞಾನ ಮೇಳ: ಡೆರಿನ್ ಬ್ರಾನ್ಸಿ ಸೈಮನ್  (ಪ್ರ), ವೈಷ್ಣವಿ (ದ್ವಿ), ಯಶಸ್  (ತೃ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.