ADVERTISEMENT

ಗೋಣಿಕೊಪ್ಪಲು | ಮೇಳೈಸಿದ ಸಾಂಸ್ಕೃತಿಕ ವೈಭವ: 38 ತಂಡಗಳಿಂದ ಜಾನಪದ ಕಲಾ ಸ್ಪರ್ಧೆ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2023, 4:02 IST
Last Updated 8 ಡಿಸೆಂಬರ್ 2023, 4:02 IST
ಗೋಣಿಕೊಪ್ಪಲು ಬಳಿಯ ಪೊನ್ನಂಪೇಟೆ ಕೊಡವ ಸಮಾಜದಲ್ಲಿ ನಡೆದ ವಾಲಗತ್ತಾಟ್‌ಗೆ ಹೆಜ್ಜೆ ಹಾಕಿದ ಯುವತಿಯರು
ಗೋಣಿಕೊಪ್ಪಲು ಬಳಿಯ ಪೊನ್ನಂಪೇಟೆ ಕೊಡವ ಸಮಾಜದಲ್ಲಿ ನಡೆದ ವಾಲಗತ್ತಾಟ್‌ಗೆ ಹೆಜ್ಜೆ ಹಾಕಿದ ಯುವತಿಯರು   

ಗೋಣಿಕೊಪ್ಪಲು: ಅಲ್ಪಸಂಖ್ಯಾತರಾಗಿರುವ ಕೊಡವ ಜನಾಂಗದ ಹಿತಾಸಕ್ತಿಯನ್ನು ಕಾಪಾಡಿ ಮುನ್ನಡೆಸುವ ಗುರುಸ್ಥಾನದ ವ್ಯಕ್ತಿಯ ಅಗತ್ಯ ಇದೆ ಎಂದು ರಾಜ್ಯ ಸರ್ಕಾರದ ಮುಖ್ಯ ಎಲೆಕ್ಟ್ರಿಕಲ್ ಇನ್‌ಸ್ಪೆಕ್ಟರ್ ತೀತಿರ ರೋಷನ್ ಅಪ್ಪಚ್ಚು ಹೇಳಿದರು.

ಪೊನ್ನಂಪೇಟೆ ಕೊಡವ ಸಮಾಜದ ಆಶ್ರಯದಲ್ಲಿ ನಡೆದ ಕೊಡವ ಸಾಂಸ್ಕೃತಿಕ ದಿನ ಮತ್ತು ಪುತ್ತರಿ ಕೋಲ್ ಮಂದ್ ಅನ್ನು ನಲ್ಲಿ ಬುಧವಾರ ಮಾತನಾಡಿ, ಕೊಡವರು ಪರಸ್ಪರ ಬೆಂಬಲಿಸಿ ಸಹಕಾರ ನೀಡುವ ಮನೋಭಾವ ಬೆಳೆಸಿಕೊಳ್ಳಬೇಕು, ಆರ್ಥಿಕವಾಗಿ ಉನ್ನತಿಯಲ್ಲಿರುವವರು ಜನಾಂಗದ ಸರ್ವತೋಮುಖ ಬೆಳವಣಿಗೆಗೆ ಕೈಜೋಡಿಸಬೇಕು ಎಂದರು.

ಡಾ.ತೀತರಮಾಡ ದೇವಕಿ ಮಾತನಾಡಿ, ಕೊಡವ ಜನಾಂಗದಲ್ಲಿ ಹಲವಾರು ಸಂಘಟನೆಗಳಿದ್ದು, ಇವುಗಳೆಲ್ಲವನ್ನೂ ಒಂದೇ ವೇದಿಕೆ ಅಡಿಯಲ್ಲಿ ತರಬೇಕು. ಅವು ಜನಾಂಗದ ಏಳಿಗೆಗೆ ಧ್ವನಿಯಾಗಿ ಕೆಲಸ ಮಾಡಬೇಕು. ಉನ್ನತ ಶಿಕ್ಷಣ ಪಡೆದು ಉನ್ನತ ಹುದ್ದೆಗಳನ್ನೂ ಅಲಂಕರಿಸುವಂತಾಗಬೇಕು ಎಂದು ಹೇಳಿದರು.

ADVERTISEMENT

ಅಧ್ಯಕ್ಷತೆ ವಹಿಸಿದ್ದ ಪೊನ್ನಂಪೇಟೆ ಕೊಡವ ಸಮಾಜದ ಅಧ್ಯಕ್ಷ ಕಾಳಿಮಾಡ ಮೋಟಯ್ಯ ಮಾತನಾಡಿ, ಸಾಂಸ್ಕೃತಿಕ ಪೈಪೋಟಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಶಾಲಾ, ಕಾಲೇಜಿನ ವಿದ್ಯಾರ್ಥಿಗಳು ಪಾಲ್ಗೊಂಡಿರುವುದು ಹೆಮ್ಮೆ ತಂದಿದೆ. ಕೊಡವ ಹೆಣ್ಣು ಮಕ್ಕಳು ಹೆಚ್ಚಿನ ಪ್ರಮಾಣದಲ್ಲಿ ಅಂತರ್ ಜಾತಿ ವಿವಾಹವಾಗುತ್ತಿರುವುದು ಜನಾಂಗದ ಏಳಿಗೆಗೆ ಮಾರಕವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ತೀತಿರ ರೋಷನ್ ಅಪ್ಪಚ್ಚು, ಡಾ.ತೀತರಮಾಡ ದೇವಕ್ಕಿ ಅವರನ್ನು ಸನ್ಮಾನಿಸಲಾಯಿತು.

ಕೊಡವ ಸಮಾಜದ ಉಪಾಧ್ಯಕ್ಷೆ ಚಿರಿಯಪಂಡ ಇಮ್ಮಿಬೋಜಮ್ಮ, ಗೌರವ ಕಾರ್ಯದರ್ಶಿ ಕೋಟೆರ ಕಿಶನ್ ಉತ್ತಪ್ಪ ,ಜಂಟಿ ಕಾರ್ಯದರ್ಶಿ ಅಲೇಮಾಡ ಡಿ. ಸುಧೀರ್, ಖಜಾಂಚಿ ಕಳ್ಳಿಚಂಡ ಕಟ್ಟಿ ಪೂಣಚ್ಚ, ಖಾಯಂ ಆಹ್ವಾನಿತ ನಿರ್ದೇಶಕರಾದ ಚೆಪ್ಪುಡೀರ ಬಿ.ಕಿಟ್ಟು ಅಯ್ಯಪ್ಪ, ನಿರ್ದೇಶಕರಾದ ಚೆಪ್ಪುಡೀರ ರಾಕೇಶ್ ದೇವಯ್ಯ, ಅಡ್ಡಂಡ ಸುನಿಲ್ ಸೋಮಯ್ಯ, ಕೊಣಿಯಂಡ ಸಂಜು ಸೋಮಯ್ಯ, ಚೀರಂಡ ಕಂದ ಸುಬ್ಬಯ್ಯ, ಮೂಕಳಮಾಡ ಅರಸು ನಂಜಪ್ಪ, ಮೂಕಳೇರ ಕಾವ್ಯ ಕಾವೇರಮ್ಮ ,ಚೊಟ್ಟೆಕಾಳಪಂಡ ಆಶಾ ಪ್ರಕಾಶ್ ಇದ್ದರು.

ಕೊಡವ ಸಾಂಸ್ಕೃತಿಕ ಮತ್ತು ಜಾನಪದ ಕಲಾ ಪೈಪೋಟಿಯಲ್ಲಿ ಬೊಳಕಾಟ್, ಉಮ್ಮತಾಟ್, ಪುತ್ತರಿ ಕೋಲಾಟ್, ಪರೆಯಕಳಿ,ವಾಲಗತಾಟ್, ಕಪ್ಪೆಯಾಟ್‌ನಲ್ಲಿ ಜಿಲ್ಲೆಯ ವಿವಿದೆಡೆಯಿಂದ 38 ತಂಡಗಳು ಭಾಗವಹಿಸಿ ಸಾಂಸ್ಕೃತಿಕ ವೈಭವ ಸಾರಿದವು.

ಸಾಂಸ್ಕೃತಿಕ ಪ್ರದರ್ಶನ: ಪೊನ್ನಂಪೇಟೆ ಕೊಡವ ಸಮಾಜ ಸಾಂಸ್ಕೃತಿಕ ತಂಡದಿಂದ ಉಮ್ಮತಾಟ್,4 ನೃತ್ಯ,ಗೋಣಿಕೊಪ್ಪ ಕಾವೇರಿ ಕಾಲೇಜು ತಂಡದಿಂದ ಕತ್ತಿಯಾಟ್ ಪ್ರದರ್ಶನ, ಡಾ.ಕಾಳಿಮಾಡ ಶಿವಪ್ಪ,ಪೋಡಮಾಡ ಭವಾನಿ ನವೀನ್ ಅವರಿಂದ ಕೊಡವ ಹಾಡು ಗಮನ ಸೆಳೆಯಿತು. ಸಾಂಪ್ರದಾಯಿಕ "ಪುತ್ತರಿ ಮಂದ್ ಮರೆಯೋ"ಕಾರ್ಯಕ್ರಮ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.