ADVERTISEMENT

ಬಿರುಣಾಣಿಯ ಮರೆನಾಡ್ ಪುತ್ತರಿ ಕೋಲ್ ಮಂದ್: ಕೊಡವ ಸಂಸ್ಕೃತಿ ಬಗ್ಗೆ ಅಭಿಮಾನವಿರಲಿ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2025, 3:06 IST
Last Updated 13 ಡಿಸೆಂಬರ್ 2025, 3:06 IST
ಗೋಣಿಕೊಪ್ಪಲು ಬಳಿಯ ಬಿರುನಾಣಿ ಮಂದ್‌ನಲ್ಲಿ ಕೊಡವ ಜಾನಪದ ಕಲೆ ಪುತ್ತರಿ ಕೋಲಾಟ್ ಪ್ರದರ್ಶಿಸಲಾಯಿತು
ಗೋಣಿಕೊಪ್ಪಲು ಬಳಿಯ ಬಿರುನಾಣಿ ಮಂದ್‌ನಲ್ಲಿ ಕೊಡವ ಜಾನಪದ ಕಲೆ ಪುತ್ತರಿ ಕೋಲಾಟ್ ಪ್ರದರ್ಶಿಸಲಾಯಿತು   

ಗೋಣಿಕೊಪ್ಪಲು: ಬಿರುನಾಣಿಯ ಮರೆನಾಡ್ ಕೊಡವ ಸಮಾಜದ ಆಶ್ರಯದಲ್ಲಿ ನಡೆದ ಪುತ್ತರಿ ಕೋಲ್ ಮಂದ್ ಕೊಡವ ಸಂಸ್ಕೃತಿಯ ವೈಭವ ಸಾರಿತು.

ಐದಯ ಗ್ರಾಮಗಳ ಜನತೆ ಒಂದೆಡೆ ಸೇರಿ ನಡೆಸಿದ ಕೋಲಾಟ್ ಕಳಿ ಜನತೆಗೆ ಸಂತಸ ತಂದಿತು. ಪಾರಂಪಾರಿಕ ನಾಡ್ ತಕ್ಕರಾದ ಕಾಯಪಂಡ, ಚಂಗಣಮಾಡ ಬೊಳ್ಳೇರ ಕುಟುಂಬದ ಪ್ರಮುಖರನ್ನು ದುಡಿ ಕೊಟ್ಟ್ ಪಾಟ್, ವಡ್ಡೋಲಗ ಹಾಗೂ ತಳೆಯತಕ್ಕಿ ಬೊಳಕ್ ಮೂಲಕ ಮಂದ್‌ಗೆ ಕರೆತರಲಾಯಿತು. ನಂತರ ನಾಡ ತಕ್ಕದಿಂದ ಮಂದ್ ಪುಡಿಪ ಕಾರ್ಯಕ್ರಮ ಸಾಂಪ್ರದಾಯಿಕವಾಗಿ ನಡೆಯಿತು.

ಬೆಂಗಳೂರು ಕೊಡವ ಸಮಾಜದ ಅಧ್ಯಕ್ಷ ಚಿರಿಯಪಂಡ ಸುರೇಶ್ ನಂಜಪ್ಪ ಅವರು ಕೊಡವ ಸಂಸ್ಕೃತಿ ಆಚರಣೆ ಪರಂಪರೆಗಳನ್ನು ಬೆಳೆಸಬೇಕು. ನಮ್ಮ ಸಂಸ್ಕೃತಿಯನ್ನು ಎಂದಿಗೂ ನಿರ್ಲಕ್ಷ್ಯ ಮಾಡದೆ ಬೆಳೆಸಿಕೊಂಡು ಹೋಗಬೇಕು. ಕೊಡಗು ಎಂದಿಗೂ ಕಾಶ್ಮೀರದಂತೆ ಆಗಬಾರದು. ಕಾಶ್ಮೀರದಂತೆ ಮೂಲ ನಿವಾಸಿಗಳು ತಾಯಿನಾಡಿನಲ್ಲಿಯೇ ದುರ್ಬಲವಾಗುವ ಹಾಗೂ ಅಭದ್ರತೆ ಕಾಡುವ ಸ್ಥಿತಿಗೆ ತಂದುಕೊಳ್ಳಬಾರದು ಎಂದು ಹೇಳಿದರು.

ADVERTISEMENT

ಅಲ್ಪಸಂಖ್ಯಾತ ಜನಾಂಗವಾಗಿರುವ ಕೊಡವರು ಪ್ರತಿ ಹೆಜ್ಜೆಯಲ್ಲಿಯು ಇದನ್ನು ಅರಿತು ಬುದ್ಧಿವಂತಿಕೆ ಹಾಗೂ ರಾಜಕೀಯ ರಹಿತವಾಗಿ ಚಿಂತನೆ ಹರಿಸಿ ಜನಾಂಗವನ್ನು ಕಾಪಾಡಿಕೊಳ್ಳಬೇಕಾಗಿದೆ. ಇದರ ನಡುವೆ ಸಂಸ್ಕೃತಿಯ ಉಳಿಕೆಗೆ ಆಚರಣೆಗಳಿಗೆ ಬಹಳಷ್ಟು ಉತ್ತೇಜನ ನೀಡಬೇಕಾಗಿದೆ. ಇಂತಹ ಕಾರ್ಯಕ್ರಮಗಳಿಂದ ಸಂಸ್ಕೃತಿಗೆ ಜೀವಂತಿಕೆ ಬರಲಿದೆ ಎಂದು ಅವರು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಮರೆನಾಡ್ ಕೊಡವ ಸಮಾಜದ ಅಧ್ಯಕ್ಷ ಅಣ್ಣಳಮಾಡಲಾಲ ಅಪ್ಪಣ್ಣ, ಹಿಂದೆ ಕೊಡವ ಸಮಾಜ ಎಂದರೆ ಕಲ್ಯಾಣ ಮಂಟಪ ಎಂಬ ಭಾವನೆ ಇತ್ತು. ಆದರೆ ಇಂದು ಕೊಡವ ಸಮಾಜವನ್ನು ನೋಡುವ ದೃಷ್ಟಿ ಬದಲಾಗಿದೆ. ಇದು ನಮ್ಮ ಸಾಂಸ್ಕೃತಿಕ ಕೇಂದ್ರವಾಗಿ ಅಭಿವೃದ್ಧಿಯಾಗುತ್ತಿದೆ. ಇಂದು ಪೊನ್ನಂಪೇಟೆ ಮತ್ತು ಬಾಳುಗೋಡು ಕೊಡವ ಸಮಾಜದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಒಂದು ಹಬ್ಬದಂತೆ ಆಚರಣೆಯಾಗುತ್ತಿದೆ. ಕೊಡವ ಸಂಸ್ಕೃತಿಗೆ ಅಲ್ಲಿ ಉತ್ತೇಜನ ದೊರೆಯುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು.

ನಾಡ್ ತಕ್ಕಾಮೆ ಕುಟುಂಬದ ಕಾಯಪಂಡ ಅಯ್ಯಪ್ಪ, ಚಂಗಣಮಾಡ ಮೊಣ್ಣಪ್ಪ, ಬೊಳ್ಳೇರ ನಾಣಯ್ಯ ಹಾಗೂ ಮರೆನಾಡು ಕೊಡವ ಸಮಾಜದ ಉಪಾಧ್ಯಕ್ಷ ಕಾಯಪಂಡ ಸುನಿಲ್, ಕಾರ್ಯಾಧ್ಯಕ್ಷ ಬೊಳ್ಳೇರ ಅಪ್ಪುಟ ಪೊನ್ನಪ್ಪ, ಕಾರ್ಯದರ್ಶಿ ಕಳಕಂಡ ಜೀತು ಕುಶಾಲಪ್ಪ, ಜಂಟಿ ಕಾರ್ಯದರ್ಶಿ ಬುಟ್ಟಿಯಂಡ ಸುನಿತ ಗಪ್ಪಣ್ಣ, ಖಜಾಂಚಿ ಬೊಟ್ಟಂಗಡ ರವೀಂದ್ರ ವಿಶು, ನಿರ್ದೇಶಕರಾದ ಚೋನಿರ ಮಧು, ಕಾಯಕಂಡ ಸತು, ಬಲ್ಯಮೀದೇರಿರ ರಾಜ, ಕುಪ್ಪಣಮಾಡ ಪ್ರೀತಮ್, ಕಾಳಿಮಾಡ ರಸಿಕ, ಗುಡ್ಡಮಾಡ ಸುಧೀರ್, ಕರ್ತಮಾಡ ಸುನಂದ, ಕರ್ತಮಾಡ ಗಿರೀಶ್, ಮೀದೇರಿರ ಕವಿತಾ, ಕುಪ್ಪಣಮಾಡ ಬೇಬಿ ನಂಜಮ್ಮ ಹಾಗೂ ಜಾಗದಾನಿ ಕಾಯಪಂಡ ಪೆಮ್ಮಯ್ಯ, ಸಮಾಜದ ಮಾಜಿ ಅಧ್ಯಕ್ಷ ಕುಪ್ಪುಡೀರ ಪೊನ್ನು ಮುತ್ತಪ್ಪ ಹಾಜರಿದ್ದರು.

ಬೆಂಗಳೂರು ಕೊಡವ ಸಮಾಜದ ಅಧ್ಯಕ್ಷ ಚಿರಿಯಪಂಡ ಸುರೇಶ್ ನಂಜಪ್ಪ, ಸಹ ಖಜಾಂಚಿ ಮಲ್ಲೇಂಗಡ ಮುತ್ತಣ್ಣ ಅವರನ್ನು ಸನ್ಮಾನಿಸಲಾಯಿತು.

ಗೋಣಿಕೊಪ್ಪಲು ಬಳಿಯ ಬಿರುನಾಣಿ ಮಂದ್‌ನಲ್ಲಿ ನೆಡೆದ ಪುತ್ತರಿ ಕೋಲಾಟಕ್ಕೆ ಅತಿಥಿಗಳನ್ನು ಮೆರವಣಿಗೆಯಲ್ಲಿ ಕರೆತರಲಾಯಿತು