ADVERTISEMENT

ವಿರಾಜಪೇಟೆ: ಕುಪ್ಪಂಡ, ಚೇಂದಿರ ಹಣಾಹಣಿ ಇಂದು

ಕೊಡವ ಕೌಟುಂಬಿಕ ಹಾಕಿ ಹೈ ಫ್ಲೈಯರ್ಸ್ ಕಪ್– 2025; ಚಾಂಪಿಯನ್ ಪಟ್ಟಕ್ಕೆ ಸ್ಪರ್ಧೆ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2025, 6:17 IST
Last Updated 25 ಡಿಸೆಂಬರ್ 2025, 6:17 IST
ವಿರಾಜಪೇಟೆ ಸಮೀಪದ ವಿ.ಬಾಡಗದಲ್ಲಿ ಗುರುವಾರ ನಡೆಯುವ ಕೊಡವ ಕೌಟುಂಬಿಕ ಹಾಕಿ ಹೈ ಫ್ಲೈಯರ್ಸ್ ಕಪ್– 2025 ಅಂತಿಮ ಪಂದ್ಯಕ್ಕಾಗಿ ಹೈಪ್ಲೈಯರ್ಸ್ ತಂಡದ ಸದಸ್ಯರು ಮೈದಾನವನ್ನು ಸಿದ್ಧಪಡಿಸಿದರು
ವಿರಾಜಪೇಟೆ ಸಮೀಪದ ವಿ.ಬಾಡಗದಲ್ಲಿ ಗುರುವಾರ ನಡೆಯುವ ಕೊಡವ ಕೌಟುಂಬಿಕ ಹಾಕಿ ಹೈ ಫ್ಲೈಯರ್ಸ್ ಕಪ್– 2025 ಅಂತಿಮ ಪಂದ್ಯಕ್ಕಾಗಿ ಹೈಪ್ಲೈಯರ್ಸ್ ತಂಡದ ಸದಸ್ಯರು ಮೈದಾನವನ್ನು ಸಿದ್ಧಪಡಿಸಿದರು   

ವಿರಾಜಪೇಟೆ: ಸಮೀಪದ ಬಿಟ್ಟಂಗಾಲದ ವಿ.ಬಾಡಗದಲ್ಲಿ ನಡೆಯುತ್ತಿರುವ ಕೊಡವ ಕೌಟುಂಬಿಕ ಹಾಕಿ ಹೈಪ್ಲೈಯರ್ಸ್ ಕಪ್‌–2025 ಟೂರ್ನಿಯ ಅಂತಿಮ ಪಂದ್ಯಕ್ಕೆ ಕುಪ್ಪಂಡ ಮತ್ತು ಚೇಂದಿರ ತಂಡಗಳು ಬುಧವಾರ ಆಯ್ಕೆಯಾದವು.

ಇಲ್ಲಿನ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಹೈಪ್ಲೈಯರ್ಸ್ ತಂಡದ ವತಿಯಿಂದ ವಿಯೋಮನ್ ಇಂಡಿಯಾ ಕಂಪನಿ ಸಹ ಪ್ರಾಯೋಜಕತ್ವದ 4ನೇ ವರ್ಷದ ಟೂರ್ನಿಯ ಸೆಮಿಫೈನಲ್‌ ಪ್ರೇಕ್ಷಕರನ್ನು ತುದಿಗಾಲಿನಲ್ಲಿ ನಿಲ್ಲುವಂತೆ ಮಾಡಿತು. 

2 ವರ್ಷ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದ ಚೇಂದಿರ ತಂಡ ಇದೀಗ 3ನೇ ಬಾರಿಗೂ ಚಾಂಪಿಯನ್ ಕನಸು ಹೊತ್ತು ಹೋರಾಟ ನಡೆಸಲು ಸಜ್ಜಾಗಿದೆ. ಇದೇ ಮೊದಲ ಬಾರಿಗೆ ಫೈನಲ್‌ಗೆ ಅರ್ಹತೆ ಪಡೆದಿರುವ ಕುಪ್ಪಂಡ ತಂಡ ಗುರುವಾರದಂದು ನಡೆಯಲಿರುವ ಫೈನಲ್ ಪಂದ್ಯದಲ್ಲಿ ಹೋರಾಟ ನಡೆಸಲಿದೆ.

ADVERTISEMENT

ಪ್ರಥಮ ಸೆಮಿ ಫೈನಲ್ ಪಂದ್ಯದಲ್ಲಿ ಕುಪ್ಪಂಡ ತಂಡವು ಕೊಂಗಂಡ ತಂಡವನ್ನು ಶೂಟೌಟಿನಲ್ಲಿ 5–2 ಗೋಲುಗಳ ಮೂಲಕ ಸೋಲಿಸಿತು. ಕೊಂಗಂಡ ತಂಡದ ಅತಿಥಿ ಆಟಗಾರ ಸುಬ್ರಮಣಿ 14ನೇ ನಿಮಿಷದಲ್ಲಿ ಗೋಲೊಂದನ್ನು ಬಾರಿಸಿ ಖಾತೆ ತೆರೆದರು. ದೊರೆತ ಉತ್ತಮ ಪಾಸ್ ಬಳಸಿಕೊಂಡ ಅತಿಥಿ ಆಟಗಾರ ಅಯ್ಯಪ್ಪ ಕುಪ್ಪಂಡ ತಂಡಕ್ಕೆ ಮೊದಲ ಗೋಲು ನೀಡಿ ಅಂತರವನ್ನು ಸಮನಾಗಿಸಿದರು. ಕೊಂಗಂಡ ತಂಡದ ಅತಿಥಿ ಆಟಗಾರ ಮೋಕ್ಷಿತ್ 33ನೇ ನಿಮಿಷದಲ್ಲಿ ದಾಖಲಿಸಿದ ಗೋಲು, ಕುಪ್ಪಂಡ ತಂಡದ ಅತಿಥಿ ಆಟಗಾರ ಧ್ಯಾನ್ ಮಿಂಚಿನ ಗೋಲು ಮತ್ತೆ ಅಂತರವನ್ನು ಸಮನಾಗಿಸಿದ್ದು ದ್ವಿತೀಯಾರ್ಧವೂ ಕೊನೆಗೊಂಡಿತು. ಶೂಟ್‌ಔಟ್ ವೇಳೆ ವಿಜೇತ ತಂಡದ ಅತಿಥಿ ಆಟಗಾರರಾದ ಗೌರವ್, ದೇವಯ್ಯ ಮತ್ತು ಪ್ರತೀಕ್ ಪೂವಣ್ಣ ಗೋಲು ದಾಖಲಿಸಿದರು, ಗೋಲ್ ಕೀಪರ್ ಅಯ್ಯಪ್ಪ ಎದುರಾಳಿಗಳಿಗೆ ಗೋಲ್‌ ದೊರೆಯದಂತೆ ವಿಫಲಗೊಳಿಸಿ ತಂಡದ ವಿಜಯದಲ್ಲಿ ನಿರ್ಣಾಯಕ ಪಾತ್ರ ವಹಿಸಿದರು.

2ನೇ ಸೆಮಿ ಫೈನಲ್ ಪಂದ್ಯದಲ್ಲಿ ಮಾಜಿ ಚಾಂಪಿಯನ್ ಚೇಂದಿರ ತಂಡವು ತೀತಿಮಾಡ ತಂಡವನ್ನು 1–0 ಗೋಲಿನಿಂದ ಮಣಿಸಿ ಅಂತಿಮ ಹಣಾಹಣಿಯ ಹಾದಿ ಸುಗಮವಾಗಿಸಿತು. ಪ್ರಥಮಾರ್ಧದ ಅಂತ್ಯದವರೆಗೂ ಉಭಯ ತಂಡಗಳು ಯಾವುದೇ ಗೋಲು ದಾಖಲಿಸಲಿಲ್ಲ. ಪಂದ್ಯದ ದ್ವಿತೀಯಾರ್ಧದಲ್ಲಿ ಚೇಂದಿರ ತಂಡಕ್ಕೆ ದೊರೆತ ಉತ್ತಮ ಪಾಸ್‌ವೊಂದನ್ನು ಸಮರ್ಪಕವಾಗಿ ಬಳಸಿಕೊಂಡ ತಂಡದ ಚಿಣ್ಣಪ್ಪ 47ನೇ ನಿಮಿಷದಲ್ಲಿ ಮಿಂಚಿನ ಗೋಲೊಂದನ್ನು ಬಾರಿಸಿ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು.

ಗುರುವಾರ ಮಧ್ಯಾಹ್ನ 2.30ಕ್ಕೆ ಫೈನಲ್ ಪಂದ್ಯ ನಡೆಯಲಿದ್ದು, ಬೆಳಿಗ್ಗೆ 11ಕ್ಕೆ ತೃತೀಯ ಸ್ಥಾನಕ್ಕಾಗಿ ಸೆಮಿ ಫೈನಲ್ಸ್‌ಗಳಲ್ಲಿ ಪರಾಭವಗೊಂಡ ಕೊಂಗಂಡ ಮತ್ತು ತೀತಿಮಾಡ ಕುಟುಂಬ ತಂಡಗಳ ನಡುವೆ ಪಂದ್ಯ ನಡೆಯಲಿದೆ.

ಇಂದು ಸಮಾರೋಪ; ಬಹುಮಾನ ವಿತರಣೆ

ವಿ. ಬಾಡಗ ಹೈಪ್ಲೈಯರ್ಸ್ ಸಂಸ್ಥೆಯ ಅಧ್ಯಕ್ಷ ಅಮ್ಮಣಿಚಂಡ ರಂಜು ಪೂಣಚ್ಚ ಅಧ್ಯಕ್ಷತೆಯಲ್ಲಿ ಟೂರ್ನಿ ಸಮಾರೋಪ ನಡೆಯಲಿದೆ. ವಿಯೋಮನ್ ಇಂಡಿಯಾ ಕಂಪನಿ ಉಪಾಧ್ಯಕ್ಷ ಮುಂಡಂಡ ವರುಣ್ ಗಣಪತಿ ಕೊಡವ ಹಾಕಿ ಅಕಾಡೆಮಿ ಅಧ್ಯಕ್ಷ ಪಾಂಡಂಡ ಕೆ.ಬೋಪಣ್ಣ ಕೂರ್ಗ್ ಎಜುಕೇಶನ್ ಸೊಸೈಟಿ ಅಧ್ಯಕ್ಷ ಮುಕ್ಕಾಟಿರ ಸಿ.ಕಾರ್ಯಪ್ಪ ಪಾಲಿಬೆಟ್ಟದ ಟಾಟಾ ಕಾಫಿ ಸಂಸ್ಥೆಯ ಪ್ರಧಾನ ವ್ಯವಸ್ಥಾಪಕ ಕಳ್ಳಿಚಂಡ ರಾಜೀವ್ ಗಣಪತಿ ಹಾತೂರು ವನಭದ್ರಕಾಳಿ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಕೊಕ್ಕಂಡ ಗಿಣಿ ಗಣಪತಿ ವಿ.ಬಾಡಗದ ಕಾಫಿ ಬೆಳೆಗಾರರಾದ ಮಳವಂಡ ಭೋಜಮ್ಮ ಅಚ್ಚಪ್ಪ ವಿ.ಬಾಡಗ ಜಿಎಂಪಿ ಶಾಲೆಯ ಹಳೆಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕಂಜಿತಂಡ ಗಿಣಿ ಮೊಣ್ಣಪ್ಪ ಭಾಗವಹಿಸಲಿದ್ದಾರೆ. ಬೆಂಗಳೂರು ಕೃಷಿ ವಿಜ್ಞಾನ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಪಾಂಡಂಡ ಕೆ.ಮಂದಣ್ಣ ಬಾಟಾ ಇಂಡಿಯಾ ಸಂಸ್ಥೆಯ ಉಪಾಧ್ಯಕ್ಷ ಬೆಂಗಳೂರು ಕೊಡವ ಸಮಾಜದ ಕೋಶಾಧಿಕಾರಿ ಚೇಮಿರ ಸನ್ನು ಪೊನ್ನಪ್ಪ ಭಾರತೀಯ ಸೇನೆಯ ನಿವೃತ್ತ ಸುಬೇದಾರ್ ಚೇಂದ್ರಿಮಾಡ ನಂಜಪ್ಪ(ಗಣೇಶ್) ಅವರನ್ನು ಸಂಸ್ಥೆಯಿಂದ ಸನ್ಮಾನಿಸಲಾಗುವುದು. ಟೂರ್ನಿಯ ವಿನ್ನರ್ಸ್ ರನ್ನರ್ಸ್ ಮತ್ತು ತೃತೀಯ ಸ್ಥಾನ ವಿಜೇತ ತಂಡಗಳಿಗೆ ನಗದು ಬಹುಮಾನ ಶುದ್ಧ ಬೆಳ್ಳಿಯ ಟ್ರೋಫಿಗಳನ್ನು ನೀಡಿ ಗೌರವಿಸಲಾಗುವುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.