
ವಿರಾಜಪೇಟೆ: ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಕೊಡವ ಮುಸ್ಲಿಂ ಸ್ಪೋರ್ಟ್ಸ್ ಅಕಾಡೆಮಿ (ಕೆಎಂಎಸ್ಎ)ಪದಾಧಿಕಾರಿಗಳು ಭಾನುವಾರ ರಾಜ್ಯ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಸಿ.ಎಸ್. ಅರುಣ್ ಮಾಚಯ್ಯ ಅವರನ್ನು ಭೇಟಿ ಮಾಡಿ ಸಂಸ್ಥೆಯ ಚಟುವಟಿಕೆಗಳಿಗೆ ಸರ್ಕಾರದಿಂದ ನೆರವು ಕೊಡಿಸುವಂತೆ ಮನವಿ ಸಲ್ಲಿಸಿದರು.
ಕಿತ್ತಳೆ ಬೆಳೆಗಾರರ ಸಹಕಾರ ಸಂಘದ ಸಭಾಂಗಣದಲ್ಲಿ ಕೆಎಂಎಸ್ಎ ಅಧ್ಯಕ್ಷ ಆಲೀರ ರಶೀದ್ ನೇತೃತ್ವದ ನಿಯೋಗ ಮನವಿ ಸಲ್ಲಿಸಿ, ‘ಸಂಸ್ಥೆ ಕ್ರೀಡಾ ಚಟುವಟಿಕೆಗಳ ಆಯೋಜನೆಗಿಂತ ಅವಕಾಶ ವಂಚಿತ ಕ್ರೀಡಾಪಟುಗಳಿಗೆ ಸೂಕ್ತ ವೇದಿಕೆ ಸೃಷ್ಟಿಸಲು ಮೊದಲ ಆದ್ಯತೆ ನೀಡುತ್ತದೆ. ಈ ನಿಟ್ಟಿನಲ್ಲಿ ಸಹಕಾರ ನೀಡಬೇಕು’ ಎಂದರು.
ಮನವಿ ಸ್ವೀಕರಿಸಿದ ಅರುಣ್ ಮಾಚಯ್ಯ, ‘ಚಟುವಟಿಕೆಗಳಿಗೆ ಪೂರ್ಣ ಸಹಕಾರ ನೀಡಲಾಗುವುದು. ಯುವಕರಿಗೆ ತಮ್ಮ ಭವಿಷ್ಯ ರೂಪಿಸಿಕೊಳ್ಳಲು ಇದೀಗ ಕ್ರೀಡಾ ಕ್ಷೇತ್ರದಲ್ಲಿ ಸಾಕಷ್ಟು ಉತ್ತಮ ಅವಕಾಶಗಳಿವೆ. ಅವುಗಳನ್ನು ಸದ್ಬಳಕೆ ಮಾಡಿಕೊಳ್ಳುವಲ್ಲಿ ಯುವ ಕ್ರೀಡಾಪಟುಗಳಿಗೆ ಸೂಕ್ತ ಮಾರ್ಗದರ್ಶನದ ಅಗತ್ಯವಿದೆ. ಈ ಕಾರ್ಯವನ್ನು ಕೆಎಂಎಸ್ಎ ವೈಜ್ಞಾನಿಕ ನೆಲೆಗಟ್ಟಿನಲ್ಲಿ ಚಿಂತಿಸಿ ಕಾರ್ಯರೂಪಕ್ಕೆ ತರುವಂತಾಗಬೇಕು’ ಎಂದು ಸಲಹೆ ನೀಡಿದರು.
ನಿಯೋಗದಲ್ಲಿ ಕೆಎಂಎಸ್ಎ ಉಪಾಧ್ಯಕ್ಷ ಕೇಂಗೋಟಂಡ ಎಸ್. ಸೂಫಿ, ಕುಂಡಂಡ ಎ. ರಜ್ಹಾಕ್, ಕೋಶಾಧಿಕಾರಿ ಆಲೀರ ಎ. ಅಬ್ದುಲ್ ಅಜ್ಹೀಜ್ಹ್, ನಿರ್ದೇಶಕರಾದ ಆಲೀರ ಹುಸೈನ್, ಅಕ್ಕಳತಂಡ ಎ. ಶಫೀಕ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.