ADVERTISEMENT

ಮಡಿಕೇರಿ: ಕೊಡವರ ಹಕ್ಕು ಶಾಸನಬದ್ಧ ಅನುಮೋದನೆಗೆ ಒತ್ತಾಯ

ಸಾಂಪ್ರದಾಯಿಕ ಪರಿಕರಗಳೊಂದಿಗೆ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಸಿಎನ್‌ಸಿ ಧರಣಿ

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2025, 6:17 IST
Last Updated 10 ಆಗಸ್ಟ್ 2025, 6:17 IST
ಕೊಡವ ನ್ಯಾಷನಲ್ ಕೌನ್ಸಿಲ್‌ ಮುಖಂಡರು ಶನಿವಾರ ಮಡಿಕೇರಿಯಲ್ಲಿರುವ ಕೊಡಗು ಜಿಲ್ಲಾಧಿಕಾರಿ ಕಚೇರಿ ಮುಂಭಾಗ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಧರಣಿ ನಡೆಸಿದರು
ಕೊಡವ ನ್ಯಾಷನಲ್ ಕೌನ್ಸಿಲ್‌ ಮುಖಂಡರು ಶನಿವಾರ ಮಡಿಕೇರಿಯಲ್ಲಿರುವ ಕೊಡಗು ಜಿಲ್ಲಾಧಿಕಾರಿ ಕಚೇರಿ ಮುಂಭಾಗ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಧರಣಿ ನಡೆಸಿದರು   

ಮಡಿಕೇರಿ: ‘ಕೊಡವರ ಸಾಂಪ್ರದಾಯಿಕ ಹಾಗೂ ಅವಿಭಾಜ್ಯ ಮಾತೃಭೂಮಿ ಕೊಡವ ಲ್ಯಾಂಡ್. ಈ ಕೊಡವ ಮಣ್ಣಿನಲ್ಲಿ ನಮ್ಮ ಐತಿಹಾಸಿಕ ನಿರಂತರತೆಯನ್ನು ಶಾಸನಬದ್ಧವಾಗಿ ಅನುಮೋದಿಸಬೇಕು’ ಎಂದು ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ಎನ್.ಯು.ನಾಚಪ್ಪ ಒತ್ತಾಯಿಸಿದರು.

ವಿಶ್ವಸಂಸ್ಥೆಯ ಜಾಗತಿಕ ಆದಿಮ ಸಂಜಾತ ಜನಾಂಗಗಳ ಹಕ್ಕುಗಳ ದಿನಾಚರಣೆಯ ಅಂಗವಾಗಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ತಮ್ಮ ಸಾಂಪ್ರದಾಯಿಕ ಪರಿಕರಗಳನ್ನಿಟ್ಟುಕೊಂಡು ಶನಿವಾರ ನಡೆಸಿದ ಧರಣಿ ಸತ್ಯಾಗ್ರಹದ ವೇಳೆ ಅವರು ಮಾತನಾಡಿದರು.

‘ಕೊಡವರು ಈ ಪವಿತ್ರ ಕೊಡವ ನೆಲದ ಮೂಲನಿವಾಸಿ ಆದಿಮಸಂಜಾತ ಬುಡಕಟ್ಟು ಸಮುದಾಯದವರಾಗಿದ್ದಾರೆ. ಕೊಡವರ ಆವಾಸಸ್ಥಾನ, ಕೊಡವಲ್ಯಾಂಡ್, ಪಾರಂಪರಿಕ ಪ್ರಾಚೀನ ಭೂಮಿಗಳು, ರಾಜಕೀಯ-ಸಾಂಸ್ಕೃತಿಕ ಹಕ್ಕುಗಳು, ಜಾನಪದ ಗುರುತು, ದೈವಿಕ ವನಗಳು, ಮಂದ್‌ಗಳು, ವನದೇವಿ, ಸಸ್ಯ ಮತ್ತು ಪ್ರಾಣಿಗಳು, ನೀರು, ನದಿಗಳು, ದೇವಟ್ ಪರಂಬು ಕೊಡವ ನರಮೇಧದ ಸ್ಮಾರಕ ಸ್ಥಳ ಮತ್ತು ಕೊಡವರ ಪವಿತ್ರ ತೀರ್ಥಕ್ಷೇತ್ರ ತಲಕಾವೇರಿಯನ್ನು ಅಂತರರಾಷ್ಟ್ರೀಯ ಕಾನೂನಿನ ಪ್ರಕಾರ ವಿಶ್ವಸಂಸ್ಥೆಯ ಆದಿಮಸಂಜಾತರ ಹಕ್ಕುಗಳಡಿಯಲ್ಲಿ ಸಾಂವಿಧಾನಿಕವಾಗಿ ರಕ್ಷಿಸಬೇಕು, ಆಂತರಿಕ ರಾಜಕೀಯ ಸ್ವ-ನಿರ್ಣಯದ ಹಕ್ಕುಗಳನ್ನು ಒಳಗೊಂಡಂತೆ ಕೊಡವಲ್ಯಾಂಡ್‌ನ ಭೌಗೋಳಿಕ-ರಾಜಕೀಯ ಸ್ವಾಯತ್ತತೆ ಮತ್ತು ಸ್ವ-ಆಡಳಿತವನ್ನು ನೀಡಬೇಕು’ ಎಂದು ಆಗ್ರಹಿಸಿದರು.

ADVERTISEMENT

ಮನವಿ ಪತ್ರವನ್ನು ಜಿಲ್ಲಾಡಳಿತದ ಮೂಲಕ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ, ಯುನೆಸ್ಕೋ ಮಹಾನಿರ್ದೇಶಕರು, ಯುಎನ್‌ಎಚ್‌ಆರ್‌ಸಿಯ ಹೈಕಮಿಷನರ್, ಅಂತರರಾಷ್ಟ್ರೀಯ ನ್ಯಾಯಾಲಯದ ಅಧ್ಯಕ್ಷರು, ಭಾರತದ ರಾಷ್ಟ್ರಪತಿ, ಪ್ರಧಾನಮಂತ್ರಿ, ಗೃಹ ಸಚಿವರು, ಕರ್ನಾಟಕದ ಮುಖ್ಯಮಂತ್ರಿ ಹಾಗೂ ಅರ್ಥಶಾಸ್ತಜ್ಞ ಡಾ.ಸುಬ್ರಮಣಿಯನ್ ಸ್ವಾಮಿ ಅವರಿಗೆ ಸಲ್ಲಿಸಲಾಯಿತು.

ಮುಖಂಡರಾದ ಚೋಳಪಂಡ ಜ್ಯೋತಿ, ಪಟ್ಟಮಾಡ ಲಲಿತ, ನಂದಿನೆರವಂಡ ರೇಖಾ ನಾಚಪ್ಪ, ಕಲಿಯಂಡ ಪ್ರಕಾಶ್, ಬೊಟ್ಟಂಗಡ ಗಿರೀಶ್, ಕಿರಿಯಮಾಡ ಶೆರಿನ್, ಅರೆಯಡ ಗಿರೀಶ್, ಮಂದಪಂಡ ಮನೋಜ್, ಪುದಿಯೊಕ್ಕಡ ಪೃಥ್ವಿ, ಮಣವಟ್ಟಿರ ಚಿಣ್ಣಪ್ಪ, ಪುಟ್ಟಿಚಂಡ ದೇವಯ್ಯ, ಚೋಳಪಂಡ ನಾಣಯ್ಯ, ಚಂಗಂಡ ಚಾಮಿ, ತೋತ್ಯಂಡ ಬೊಳ್ಳಿಯಪ್ಪ, ಕೂಪದಿರ ಸಾಬು, ಅಪ್ಪಾರಂಡ ಪ್ರಸಾದ್, ತೋಲಂಡ ಸೋಮಯ್ಯ, ಕೂಪದಿರ ಉತ್ತಪ್ಪ, ಪಾಲೆಕಂಡ ಪ್ರತಾಪ್ ಹಾಗೂ ಪಟ್ಟಮಾಡ ಪೃಥ್ವಿ ಧರಣಿ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದರು.

ಪ್ರಮುಖ ಒತ್ತಾಯಗಳು

* ಕೊಡವ ಸಂಪ್ರದಾಯಿಕ ಜನಾಂಗೀಯ ಸಂಸ್ಕಾರ ಗನ್ ಅಥವಾ ತೋಕ್ ಹಕ್ಕುಗಳನ್ನು ಸಂವಿಧಾನದದ 25 ಮತ್ತು 26ನೇ ವಿಧಿಗಳ ಅಡಿಯಲ್ಲಿ ಸಿಖ್ಖರ ‘ಕಿರ್ಪಾನ್’ ಹಕ್ಕುಗಳಿಗೆ ಸಮಾನವಾಗಿ ರಕ್ಷಿಸಬೇಕು.

* ಭಾಷೆ ಕೊಡವ ತಕ್ ಅನ್ನು 8ನೇ ಶೆಡ್ಯೂಲ್ ಪಟ್ಟಿಯಲ್ಲಿ ಸೇರಿಸಬೇಕು. ಕೊಂಕಣಿ ತುಳು ಭಾಷೆಗೆ ಸಮಾನವಾಗಿ ರಾಜ್ಯದ 3ನೇ ಅಧಿಕೃತ ಭಾಷೆಯಾಗಿ ಗುರುತಿಸಬೇಕು. ಪಠ್ಯಕ್ರಮ ಮತ್ತು ಆಡಳಿತದಲ್ಲಿ ಕೊಡವ ತಕ್ ಅನ್ನು ಪರಿಚಯಿಸಬೇಕು.

* ಕೊಡವ ಜಾನಪದ ಪರಂಪರೆಯನ್ನು ಯುನೆಸ್ಕೋದ ಅಮೂರ್ತ ಸಾಂಸ್ಕೃತಿಕ ಪರಂಪರೆಯ ಪಟ್ಟಿಯಲ್ಲಿ ಸೇರಿಸಬೇಕು.

* ವಿಶ್ವ ಕೊಡವಾಲಜಿ ಸಂಶೋಧನಾ ಕೇಂದ್ರ ಮತ್ತು ಕೊಡವ ಉನ್ನತ ಅಧ್ಯಯನ ಕೇಂದ್ರ ಸ್ಥಾಪಿಸಲು ಭೂಮಿ ನೀಡಬೇಕು.

* ಕಾವೇರಿ ನದಿಗೆ ಕಾನೂನುಬದ್ಧ ವ್ಯಕ್ತಿ ಸ್ಥಾನಮಾನ ನೀಡಿ ಕೊಡವ ಜನಾಂಗದ ಪವಿತ್ರ ಯಾತ್ರಾ ಕೇಂದ್ರವೆಂದು ಪರಿಗಣಿಸಬೇಕು. 1966ರ ಹೆಲ್ಸಿಂಕಿ ನಿಯಮದ ಪ್ರಕಾರ ಕಾವೇರಿಯ ಪ್ರಮುಖ ನೀರಿನ ಪಾಲನ್ನು ಕೊಡಗಿನಲ್ಲಿ ಬಳಸಿಕೊಳ್ಳಬೇಕು.

* ನಾಲ್ನಾಡ್ ಅರಮನೆ ಮತ್ತು ಮಡಿಕೇರಿ ಕೋಟೆ ಪಿತೂರಿಯಲ್ಲಿ ನಡೆದ ರಾಜಕೀಯ ಹತ್ಯೆಗಳಿಗೆ ಸ್ಮಾರಕಗಳಾಗಬೇಕು.

* ಉಲುಗುಲಿ ಸುಂಟಿಕೊಪ್ಪ ಮತ್ತು ಮುಳ್ಳುಸೋಗೆಯಲ್ಲಿ ಕೊಡವರ ಶೌರ್ಯವನ್ನು ಪ್ರತಿಬಿಂಬಿಸುವ ಯುದ್ಧ ಸ್ಮಾರಕಗಳಾಗಬೇಕು

* ಐತಿಹಾಸಿಕ ನಿರಂತರತೆಗೆ ಶಾಸನಬದ್ಧ ಅನುಮೋದನೆಗಾಗಿ ಮಣಿಪುರ ನಾಗಾಲ್ಯಾಂಡ್ ಅರುಣಾಚಲ ಪ್ರದೇಶ ಮತ್ತು ಮಿಜೋರಾಂ ಮಾದರಿಯಲ್ಲಿ ‘ಇನ್ನರ್ ಲೈನ್ ಪರ್ಮಿಟ್’ ಅನ್ನು ನೀಡಬೇಕು.

* ಸಿಕ್ಕಿಂನಲ್ಲಿ ಬೌದ್ಧ ಸನ್ಯಾಸಿ ಸಮುದಾಯಕ್ಕಾಗಿ ನೀಡಿರುವ ‘ಸಂಘ’ ವರ್ಚುವಲ್ ಕ್ಷೇತ್ರದ ಮಾದರಿಯಲ್ಲಿ ಸಂಸತ್ತಿನಲ್ಲಿ ಪ್ರತಿನಿಧಿಸಲು ಕೊಡವ ಸಂಸದೀಯ ಮತ್ತು ಕೊಡವ ವಿಧಾನಸಭಾ ಕ್ಷೇತ್ರಗಳನ್ನು ರಚಿಸಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.