ADVERTISEMENT

ಮಡಿಕೇರಿ | ಲೇಖಕರ ಭಾವ‌ಪ್ರಪಂಚ ತಂತ್ರಜ್ಞಾನ ನೀಡಲು ಸಾಧ್ಯವಿಲ್ಲ: ಮಾಳೇಟಿರ ಸೀತಮ್ಮ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2025, 4:14 IST
Last Updated 26 ಅಕ್ಟೋಬರ್ 2025, 4:14 IST
<div class="paragraphs"><p>ಕೊಟ್ಟಂಗಡ ಕವಿತಾ ವಾಸುದೇವ ಅವರ ‘ಬಯಂದ ಬಾಳ್’ ಕೊಡವ ಭಾಷೆಯ ಕಾದಂಬರಿಯನ್ನು ಬಿಡುಗಡೆ ಮಾಡಿದ ಸುಂಟಿಕೊಪ್ಪ ಕೊಡವ ಸಮಾಜದ ಕಾರ್ಯದರ್ಶಿ ಅಜ್ಜಿಕುಟ್ಟೀರ ಸಿ ಗಿರೀಶ್ ಪುಸ್ತಕದ ಪ್ರತಿಯನ್ನು ಪ್ರಕಾಶಕ ಬೊಳ್ಳಜಿರ ಬಿ.ಅಯ್ಯಪ್ಪ ಅವರಿಗೆ ನೀಡಿದರು. </p></div>

ಕೊಟ್ಟಂಗಡ ಕವಿತಾ ವಾಸುದೇವ ಅವರ ‘ಬಯಂದ ಬಾಳ್’ ಕೊಡವ ಭಾಷೆಯ ಕಾದಂಬರಿಯನ್ನು ಬಿಡುಗಡೆ ಮಾಡಿದ ಸುಂಟಿಕೊಪ್ಪ ಕೊಡವ ಸಮಾಜದ ಕಾರ್ಯದರ್ಶಿ ಅಜ್ಜಿಕುಟ್ಟೀರ ಸಿ ಗಿರೀಶ್ ಪುಸ್ತಕದ ಪ್ರತಿಯನ್ನು ಪ್ರಕಾಶಕ ಬೊಳ್ಳಜಿರ ಬಿ.ಅಯ್ಯಪ್ಪ ಅವರಿಗೆ ನೀಡಿದರು.

   

ಮಡಿಕೇರಿ: ಸೃಜನಶೀಲ ಲೇಖಕರ ಅಮೂಲ್ಯವಾದ ಭಾವಪ್ರಪಂಚವನ್ನು ಕೃತಕ ಬುದ್ಧಿಮತ್ತೆ ಹಾಗೂ ಗೂಗಲ್‌ ನೀಡಲು ಸಾಧ್ಯವೇ ಇಲ್ಲ. ಹಾಗಾಗಿ, ಹೆಚ್ಚು ಹೆಚ್ಚು ಬರವಣಿಗೆಯಲ್ಲಿ ತೊಡಗಿಕೊಳ್ಳಬೇಕು ಎಂದು ಸಾಹಿತಿ ಮಾಳೇಟಿರ ಸೀತಮ್ಮ ವಿವೇಕ್ ತಿಳಿಸಿದರು.

ಇಲ್ಲಿ ಶನಿವಾರ ನಡೆದ ಲೇಖಕಿ ಕೊಟ್ಟಂಗಡ ಕವಿತಾ ವಾಸುದೇವ ಅವರ ಹಾಗೂ ಕೊಡವ ಮಕ್ಕಡ ಕೂಟದ 119ನೇ ಪುಸ್ತಕ ‘ಬಯಂದ ಬಾಳ್’ ಕೊಡವ ಭಾಷೆಯ ಕಾದಂಬರಿ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.

ADVERTISEMENT

ಸಾಮಾಜಿಕ ಮಾಧ್ಯಮಗಳ ಕಾಲಘಟ್ಟದಲ್ಲಿ ಪುಸ್ತಕಗಳನ್ನು ಯಾರು ಓದುತ್ತಾರೆ ಎಂದು ಕೇಳುವವರೇ ಹೆಚ್ಚು. ಆದರೆ, ಪುಸ್ತಕಗಳಲ್ಲಿರುವ ಸೃಜನಶೀಲ ವಿಚಾರಗಳನ್ನು ತಂತ್ರಜ್ಞಾನ ನೀಡಲು ಸಾಧ್ಯವಿಲ್ಲ. ಬರವಣಿಗೆಯಿಂದ ಸಮಾಜದಲ್ಲಿ ಬದಲಾವಣೆಯನ್ನೂ ತರಬಹುದು. ಕೊಡವರ ವಿಶಿಷ್ಟ ಸಂಸ್ಕೃತಿಯ ಕುರಿತೇ ಇನ್ನೂ ಪಕ್ಕದ ಜಿಲ್ಲೆಗೆ ತಿಳಿದೇ ಇಲ್ಲ. ಹಾಗಾಗಿ, ಹೆಚ್ಚು ಹೆಚ್ಚು ಜನರು ಬರವಣಿಗೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಹೇಳಿದರು.

ಕಾದಂಬರಿಯನ್ನು ಲೋಕಾರ್ಪಣೆ ಮಾಡಿ ಮಾತನಾಡಿದ ಸುಂಟಿಕೊಪ್ಪ ಕೊಡವ ಸಮಾಜದ ಕಾರ್ಯದರ್ಶಿ ಅಜ್ಜಿಕುಟ್ಟೀರ ಸಿ.ಗಿರೀಶ್, ‘ಕೊಡವ ಮಕ್ಕಡ ಕೂಟ ಮಾಡುತ್ತಿರುವುದು ಮಹಾತ್ಕಾರ್ಯ ಇನ್ನೂ ಮುಂದುವರಿಯಲಿ’ ಎಂದು ತಿಳಿಸಿದರು.

ಸಮಾಜ ಸೇವಕ ಹಾಗೂ ದಾನಿ ಅವರೆಮಾದಂಡ ಶರಣ್ ಪೂಣಚ್ಚ ಮಾತನಾಡಿ, ‘ಡಿಜಿಟಲ್ ಯುಗದ ಈ ದಿನಗಳಲ್ಲಿ ಬರಹಗಾರರ ಸಂಖ್ಯೆ ಕಡಿಮೆಯಾಗುತ್ತಿದೆ. ಆದರೆ, ಪುಸ್ತಕಗಳು ಶಾಶ್ವತವಾಗಿ ಉಳಿಯುವುದರಿಂದ ಮುಂದಿನ ಪೀಳಿಗೆಗೆ ಸಾಹಿತ್ಯ ಕ್ಷೇತ್ರ ಹೆಚ್ಚು ಸಹಕಾರಿಯಾಗಿದೆ. ಆದ್ದರಿಂದ ಸಾಹಿತ್ಯಾಸಕ್ತರು ಹಾಗೂ ಬರಹಗಾರರು ಹೆಚ್ಚಾಗಬೇಕು’ ಎಂದರು.

ಲೇಖಕಿ ಕೊಟ್ಟಂಗಡ ಕವಿತಾ ವಾಸುದೇವ, ಸಮಾಜ ಸೇವಕ ಚೀಯಕಪೂವಂಡ ಸಚಿನ್ ಪೂವಯ್ಯ ಭಾಗವಹಿಸಿದ್ದರು.

‘ಉಚಿತವಾಗಿ ಹಂಚಿದ ಹೆಗ್ಗಳಿಕೆ’

ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಮಾತನಾಡಿ ‘ಸರ್ಕಾರದ ಅನುದಾನ ಇಲ್ಲದೇ ಒಟ್ಟು 119 ಪುಸ್ತಕಗಳನ್ನು ಬಿಡುಗಡೆಗೊಳಿಸಿ ಉಚಿತವಾಗಿ ಹಂಚಿರುವ ಹೆಗ್ಗಳಿಕೆ ಕೊಡವ ಮಕ್ಕಡ ಕೂಟದ್ದು. ಈ ಮಹಾ ಕಾರ್ಯಕ್ಕೆ ಅನೇಕ ದಾನಿಗಳು ನೆರವಾಗಿದ್ದಾರೆ’ ಎಂದರು. ಕಳೆದ ವರ್ಷ 27 ಈ ವರ್ಷ 13 ಪುಸ್ತಕಗಳನ್ನು ಬಿಡುಗಡೆಗೊಳಿಸಲಾಗಿದೆ. ಇನ್ನೂ ಹಲವು ಪುಸ್ತಕಗಳು ಮುದ್ರಣವಾಗುತ್ತಿವೆ. ಹೊಸ ಹೊಸ ಬರಹಗಾರರನ್ನು ಹುಡುಕಿ ಅವರ ಪುಸ್ತಕಗಳನ್ನು ಪ್ರಕಾಶನ ಮಾಡುವುದು ನಮ್ಮ ಸಂಘಟನೆಯ ವಿಶೇಷ ಎಂದು ಹೇಳಿದರು. ಕೊಡವ ಮಕ್ಕಡ ಕೂಟವು ಜಿಲ್ಲೆಯ ಬರಹಗಾರರು ಬರೆದ ಕೊಡವ ಕನ್ನಡ ಇಂಗ್ಲಿಷ್ ಮತ್ತು ಹಿಂದಿ ಕೃತಿಗಳನ್ನು ಬಿಡುಗಡೆ ಮಾಡಿದೆ. ಒಟ್ಟು ಪ್ರಕಟಿಸಿದ 119 ಪುಸ್ತಕಗಳಲ್ಲಿ 5 ಪುಸ್ತಕಗಳಿಗೆ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಚಿಗುರೆಲೆಗಳು ಪುಸ್ತಕಕ್ಕೆ ರಾಜ್ಯ ಪ್ರಶಸ್ತಿ ಅಗ್ನಿಯಾತ್ರೆ ಪುಸ್ತಕಕ್ಕೆ ‘ಗೌರಮ್ಮ ದತ್ತಿ ನಿಧಿ’ ಪ್ರಶಸ್ತಿ ಲಭಿಸಿದೆ. 5 ಪುಸ್ತಕಗಳು ಕೊಡವ ಸಿನಿಮಾವಾಗಿದೆ ಎಂದು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.