ADVERTISEMENT

ಕೊಡಗಿನಲ್ಲಿ ಮತ್ತಷ್ಟು ಲಾಕ್‌ಡೌನ್‌ ಸಡಿಲಿಕೆ: ವಿ ಸೋಮಣ್ಣ

ವಾರದಲ್ಲಿ ನಾಲ್ಕು ದಿನ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2020, 10:23 IST
Last Updated 28 ಏಪ್ರಿಲ್ 2020, 10:23 IST
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು   
""

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಹೊಸ ಕೊರೊನಾ ಪ್ರಕರಣಗಳು ಕಂಡುಬಾರದ ಹಿನ್ನೆಲೆ ಹಸಿರು ವಲಯದ ವ್ಯಾಪ್ತಿಗೆ ಜಿಲ್ಲೆ ಸೇರ್ಪಡೆಗೊಂಡಿದ್ದು ಲಾಕ್‌ಡೌನ್‌ ಅನ್ನು ಮತ್ತಷ್ಟು ಸಡಿಲಿಕೆ ಮಾಡಲಾಗಿದೆ.

ಭಾನುವಾರ, ಸೋಮವಾರ, ಬುಧವಾರ ಹಾಗೂ ಶುಕ್ರವಾರ ಬೆಳಿಗ್ಗೆ 6ರಿಂದ ಸಂಜೆ 4 ಗಂಟೆಯ ತನಕ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಕಲ್ಪಿಸಲಾಗಿದೆ. ಈ ಮೊದಲು ವಾರದಲ್ಲಿ ಮೂರು ದಿನ, ಅದರಲ್ಲೂ ಬೆಳಿಗ್ಗೆ 6ರಿಂದ ಮಧ್ಯಾಹ್ನ 2ರ ತನಕ ಸಮಯ ನೀಡಲಾಗಿತ್ತು. ಈಗ ಸಮಯ ವಿಸ್ತರಿಸಲಾಗಿದೆ.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು.

ADVERTISEMENT

ಪ್ರವಾಸಿ ತಾಣ, ಚಿತ್ರಮಂದಿರ, ಸಂತೆ, ಸಮಾರಂಭ, ರೆಸಾರ್ಟ್, ಹೋಂ ಸ್ಟೇ, ಕ್ರೀಡಾಕೂಟಗಳಿಗೆ ನಿರ್ಬಂಧ ಮುಂದುವರಿಯಲಿದೆ. ಸಾರ್ವಜನಿಕ ಸಾರಿಗೆ ವ್ಯವಸ್ಥೆ, ಮದ್ಯ ಮಾರಾಟ, ಬ್ಯೂಟಿ ಪಾರ್ಲರ್‌, ಸಲೂನ್‌ ಬಂದ್‌ ಆಗಿರಲಿವೆ ಎಂದು ಸೋಮಣ್ಣ ಹೇಳಿದರು.
ಮೇ 3ರ ಬಳಿಕ ಮತ್ತಷ್ಟು ಲಾಕ್‌ಡೌನ್‌ ಇನ್ನೂ ಸಡಿಲಿಕೆ ಆಗುವ ಸಾಧ್ಯತೆಯಿದೆ ಎಂದು ಮಾಹಿತಿ ನೀಡಿದರು.

ನಂಜನಗೂಡಿನ ಕಾರ್ಖಾನೆ ಪ್ರದೇಶಕ್ಕೆ ಹೋಗಿದ್ದರ ಪರಿಣಾಮ ನಮ್ಮ ಕುಟುಂಬಸ್ಥರೂ ಆತಂಕ ಪಟ್ಟಿದ್ದರು. ನಾನು ತಪಾಸಣೆಗೆ ಮಾಡಿಸಿಕೊಂಡಿದ್ದು ವೈದ್ಯಕೀಯ ವರದಿ ನೆಗೆಟಿವ್‌ ಬಂದಿದೆ. ಹೀಗಾಗಿ ನಾನೂ ನಿಟ್ಟಿಸುರು ಬಿಟ್ಟಿದ್ದೇನೆ ಎಂದು ಹೇಳಿದರು.
ಕೊಡಗು ಕೊರೊನಾ ಮುಕ್ತವಾಗಿದೆ. ಅದಕ್ಕೆ ಅಧಿಕಾರಿಗಳು ಹಾಗೂ ಜಿಲ್ಲೆಯ ಜನರು ಸಹಕಾರ ನೀಡಿದರು. ಎಲ್ಲರಿಗೂ ಧನ್ಯವಾದ ಹೇಳಿದರು.

ಕೊರೊನಾ ಮುಕ್ತ ಸಮಾಜ ನಿರ್ಮಾಣ ಮಾಡಲು ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಶ್ರಮಿಸುತ್ತಿದ್ದಾರೆ. ಅವರಿಗೆ ಚಪ್ಪಾಳೆ ತಟ್ಟುವ ಮೂಲಕ ಅಭಿನಂದನೆ ಸಲ್ಲಿಸೋಣ ಎಂದು ಹೇಳಿದರು. ಸಚಿವರ ಸೂಚನೆಯಂತೆ ಸಭೆಯಲ್ಲಿದ್ದ ಅಧಿಕಾರಿಗಳು ಚಪ್ಪಾಳೆ ತಟ್ಟಿ ಅಭಿನಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.