ADVERTISEMENT

ಕೊಡಗು | ಜಿಲ್ಲೆಯಲ್ಲಿ ‘ಕೈ’ಗೆ ಮತ್ತೆ ನಿರಾಸೆ; ಗೆಲುವಿನ ಓಟ ಮುಂದುವರಿಸಿದ BJP

ಕೆ.ಎಸ್.ಗಿರೀಶ್
Published 7 ಜೂನ್ 2024, 5:01 IST
Last Updated 7 ಜೂನ್ 2024, 5:01 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಮಡಿಕೇರಿ: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯ ಬಿಜೆಪಿ ಭದ್ರಕೋಟೆಯನ್ನು ಛಿದ್ರಗೊಳಿಸಿದ್ದ ಕಾಂಗ್ರೆಸ್, ಮತ್ತೆ ವಿಫಲವಾಗುತ್ತಿದೆ. ಮತ್ತೊಂದೆಡೆ, ಅದೇ ಚುನಾವಣೆಯಲ್ಲಿ ಎಲ್ಲ ಕ್ಷೇತ್ರಗಳನ್ನೂ ಕಳೆದುಕೊಂಡು ಸೋತು ನಿರಾಶವಾಗಿದ್ದ ಬಿಜೆಪಿ ಮತ್ತೆ ಗೆಲುವಿನ ನಗೆ ಬೀರತೊಡಗಿದೆ.

ಬಿಜೆಪಿ– ಜೆಡಿಎಸ್ ಮೈತ್ರಿಕೂಟದ ಶಿಸ್ತುಬದ್ಧವಾದ ನಡೆಯು ಜೆಡಿಎಸ್‌ ಅಭ್ಯರ್ಥಿ ಭೋಜೇಗೌಡ ಅವರ ಗೆಲುವಿನ ಹಾದಿಯನ್ನು ಸುಲಭಗೊಳಿಸಿದ್ದರೆ, ಕಾಂಗ್ರೆಸ್‌ಗೆ ಮುಳುವಾಗಿ ಪರಿಣಮಿಸಿದೆ.

ADVERTISEMENT

ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರ ಗೆಲುವಿಗೆ ಮೈಸೂರಿನ 6 ಕ್ಷೇತ್ರಗಳಿಗೂ ಹೆಚ್ಚು ಲೀಡ್‌ ಕೊಟ್ಟಿದ್ದು ಕೊಡಗು ಜಿಲ್ಲೆ. ಹೀಗಾಗಿ, ಕಾಂಗ್ರೆಸ್‌ ಇಲ್ಲಿ ಸಂಪೂರ್ಣ ವಿಫಲವಾಗಿತ್ತು. ಇದರ ಬೆನ್ನಲ್ಲೇ ಬಂದ ರಾಜ್ಯ ವಿಧಾನಪರಿಷತ್ತಿನ ನೈರುತ್ಯ ಶಿಕ್ಷಕರ ಕ್ಷೇತ್ರದಲ್ಲೂ ಕಾಂಗ್ರೆಸ್ ನಿರಾಶದಾಯಕ ಪ್ರದರ್ಶನ ನೀಡಿದೆ. ಪಕ್ಷದ ಅಭ್ಯರ್ಥಿ, ಕೊಡಗಿನ ಕೆ.ಕೆ.ಮಂಜುನಾಥ್‌ಕುಮಾರ್ ಸೋಲು, ಕಾಂಗ್ರೆಸ್‌ಗೆ 2ನೇ ಸತತ ಸೋಲು.

ಕೇವಲ ಒಂದೇ ವರ್ಷದಲ್ಲಿ ಕಾಂಗ್ರೆಸ್‌ನ ನಿರಾಶದಾಯಕ ಪ್ರದರ್ಶನ ಕಾರ್ಯಕರ್ತರು ಹಾಗೂ ಮುಖಂಡರಲ್ಲಿ ಆತಂಕ ತಂದಿದೆ. ಒಂದು ಸೋಲಿನ ಬಳಿಕ ಎಚ್ಚೆತ್ತ ಬಿಜೆಪಿ ಪ್ರತಿ ಹಂತದಲ್ಲೂ ಎಚ್ಚರಿಕೆಯ ಹೆಜ್ಜೆಗಳನ್ನಿಡುತ್ತಿದ್ದು, ಸತತ 2 ಗೆಲುವು ಪದಿದೆ.

‘ಜಿಲ್ಲೆಯಲ್ಲಿ ಸತತ ಎರಡು ಸೋಲು ಕಂಡ ಕಾಂಗ್ರೆಸ್‌ಗೆ ಇದು ಎಚ್ಚರಿಕೆ ಘಂಟೆ. ಕಳೆದ ವರ್ಷದ ಗೆಲುವಿನಲ್ಲೇ ಮೈಮರೆಯದೇ ಕಾರ್ಯವೈಖರಿಯನ್ನು ಬದಲಿಸಿಕೊಳ್ಳಬೇಕು’ ಎಂದು ಹಿರಿಯ ಮುಖಂಡರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ವಿಧಾನಪರಿಷತ್ತಿನ ಚುನಾವಣೆಯಲ್ಲಿ ಬಿಜೆಪಿ– ಜೆಡಿಎಸ್ ಮೈತ್ರಿಕೂಟದಿಂದ ಸೋಲಾಯಿತು. ಮುಂದೆ ಪಕ್ಷವನ್ನು ಮತ್ತಷ್ಟು ಗಟ್ಟಿಗೊಳಿಸಲಾಗುವುದು.
–ಧರ್ಮಜಾ ಉತ್ತಪ್ಪ, ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ
ಕೊಡಗು ಸದಾ ಬಿಜೆಪಿ ಭದ್ರಕೋಟೆಯೇ. ಕಾರ್ಯಕರ್ತರು ಪ್ರಾಮಾಣಿಕವಾಗಿ ಕೆಲಸ ಮಾಡಿದ್ದಾರೆ. ಅದರ ಪ್ರತಿಫಲವೇ ಈ ಗೆಲುವುಗಳು.
–ಮಹೇಶ್‌ ಜೈನಿ, ಬಿಜೆಪಿ ಕೊಡಗು ಜಿಲ್ಲಾ ಪ್ರಧಾನ ಕಾರ್ಯದರ್ಶಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.