ADVERTISEMENT

ಮಾತನಾಡುವವರು ಬೇಕೋ, ಮೌನಿಗಳು ಬೇಕೋ: ತೇಜಸ್ವಿನಿಗೌಡ

ಕೆಪಿಸಿಸಿ ವಕ್ತಾರೆ ತೇಜಸ್ವಿನಿಗೌಡ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2024, 4:46 IST
Last Updated 25 ಏಪ್ರಿಲ್ 2024, 4:46 IST
ತೇಜಸ್ವಿನಿ ಗೌಡ
ತೇಜಸ್ವಿನಿ ಗೌಡ   

ಮಡಿಕೇರಿ: ‘ಇಲ್ಲಿನ ಪ್ರತಾಪಸಿಂಹ ಅವರಿಗೆ ಟಿಕೆಟ್ ಸಿಗುವುದಿಲ್ಲ ಎಂಬ ಮಾಹಿತಿ ಮೊದಲೆ ಇತ್ತು. ನಾನೂ ಮೈಸೂರು– ಕೊಡಗು ಕ್ಷೇತ್ರದ ಆಕಾಂಕ್ಷಿಯಾಗಿದ್ದೆ. ಆದರೆ, ನನಗೆ ನೀಡದೇ ರಾಜವಂಶಸ್ಥರಿಗೆ ನೀಡಿದರು’ ಎಂದು ಕೆಪಿಸಿಸಿ ವಕ್ತಾರೆ ತೇಜಸ್ವಿನಿಗೌಡ ಅಸಮಾಧಾನ ವ್ಯಕ್ತಪಡಿಸಿದರು.

‘ರಾಜವಂಶಸ್ಥರು ನಮ್ಮ ಸಂಸ್ಕೃತಿಯ ಭಾಗ. ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಗೆ ನಾವು ಗೌರವ ಕೊಡುತ್ತೇವೆ. ಅವರನ್ನು ಬಿಜೆಪಿ ರಾಜ್ಯಸಭಾ ಸದಸ್ಯರನ್ನಾಗಿ ನೇಮಕ ಮಾಡಬಹುದಿತ್ತು. ಆದರೆ, ಹಾಗೆ ಮಾಡಲಿಲ್ಲ’ ಎಂದು ಅವರು ಇಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಪ್ರತಾಪಸಿಂಹ ಅವರ ಬೆಂಬಲಕ್ಕೆ ನಿಂತಿದ್ದ ವರಿಷ್ಠರು ಈಗ ಏಕೆ ಟಿಕೆಟ್ ನೀಡಲಿಲ್ಲ, ಇಲ್ಲಿನ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಅವರಿಗೆ ಏಕೆ ಭಾರತರತ್ನ ಕೊಡಲಿಲ್ಲ, ಬಿ.ಎಸ್.ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಇಳಿಸಿದ್ದು ಏಕೆ ಎಂಬುದಕ್ಕೆ ಬಿಜೆಪಿ ಉತ್ತರ ಕೊಡಬೇಕು ಎಂದು ಒತ್ತಾಯಿಸಿದರು.

ADVERTISEMENT

ಈಗ ಬಿಜೆಪಿ ಬದಲಾಗಿದೆ. ಬಿಜೆಪಿಗೆ ಉತ್ತಮ ಸಂಸದೀಯ ಪಟುಗಳು ಬೇಕಿಲ್ಲ. ಭ್ರಷ್ಟರು ಮತ್ತು ಕಾಳಸಂತೆಕೋರರೇ ಬೇಕಾಗಿದ್ದಾರೆ ಎಂದು ಕಿಡಿಕಾರಿದರು.

‘ಸಂಸತ್ತಿನಲ್ಲಿ ಮಾತನಾಡದೇ ಇರುವವರು ಬೇಕೋ, ಕೊಡಗಿನ ಸಮಸ್ಯೆಗಳನ್ನು ಸಮರ್ಥವಾಗಿ ಪ್ರಸ್ತಾಸಿ ಮಾತನಾಡುವವರೋ ಬೇಕೋ ಎಂಬುದನ್ನು ಮತದಾರರೇ ನಿರ್ಧರಿಸಬೇಕು’ ಎಂದು ಹೇಳಿದರು.

ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ್ ಮಾತನಾಡಿ, ‘ಇನ್ನು ಮುಂದೆ ಸುಳ್ಳಿನ ವಿಚಾರಗಳಿಗೆ ಜನರು ಮನ್ನಣೆ ಕೊಡುವುದಿಲ್ಲ’ ಎಂದು ತಿಳಿಸಿದರು.

ತಾಳಿ ವಿಚಾರವನ್ನು ತರಲಾಗಿದೆ. ಆದರೆ, ವಾಸ್ತವದಲ್ಲಿ ಬೆಂಬಲ ಬೆಲೆ ಇಲ್ಲದೇ ಆತ್ಮಹತ್ಯೆ ಶರಣಾಗುವ ರೈತನ ಪತ್ನಿಯ ಹಾಗೂ ಕೆಲಸ ಇಲ್ಲದೇ ಪರಿತಪಿಸುವ ಕಾರ್ಮಿಕರ ಪತ್ನಿಯ ತಾಳಿಯ ಬಗ್ಗೆ ಗಂಭೀರವಾಗಿ ಚಿಂತಿಸಿದ್ದಾರೆಯೇ ಎಂದೂ ಪ್ರಶ್ನಿಸಿದರು.

‘ಗುರಿ ಇಟ್ಟ ಅಭ್ಯರ್ಥಿಗೆ ಮತ ನೀಡುತ್ತೀರೋ, ಗುರಿ‌ ಇಲ್ಲದ ಅಭ್ಯರ್ಥಿಗೆ ಮತ ಹಾಕುತ್ತೀರೊ?’ ಎಂಬುದನ್ನು ಜನರೇ ನಿರ್ಧರಿಸಬೇಕು ಎಂದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಪಿ.ಚಂದ್ರಕಲಾ, ಪಕ್ಷದ ಮುಖಂಡರಾದ ವೀಣಾ ಅಚ್ಚಯ್ಯ, ಸುರಯ್ಯ ಅಬ್ರಾರ್, ಮಿನಾಜ್, ಮುನೀರ್ ಅಹಮ್ಮದ್, ತೆನ್ನೀರಾ ಮೈನಾ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.