
ಮಡಿಕೇರಿ: ರಾಜ್ಯದ ಇತರೆ ಜಿಲ್ಲೆಗಳಿಗೆ ಹೋಲಿಸಿದರೆ ಕೊಡಗು ಜಿಲ್ಲೆಯಲ್ಲಿ ರೇಡಿಯೊ ಇನ್ನೂ ತನ್ನ ಅಸ್ತಿತ್ವವನ್ನು ಗಟ್ಟಿಯಾಗಿಯೇ ಉಳಿಸಿಕೊಂಡಿದೆ. ಆಧುನಿಕ ಸಾಮಾಜಿಕ ಮಾಧ್ಯಮಗಳ ಭರಾಟೆಯ ನಡುವೆಯೂ ರೇಡಿಯೊಗೆ ಹೆಚ್ಚಿನ ಕೇಳುಗರು ಇಲ್ಲಿರುವುದು ವಿಶೇಷ.
ಬೇರೆ ಜಿಲ್ಲೆಗಳಲ್ಲಿ ಲೋಡ್ ಶೆಡ್ಡಿಂಗ್ ಇದ್ದಾಗ, ಬೇಸಿಗೆ ಕಾಲದಲ್ಲಿ ವಿದ್ಯುತ್ ವ್ಯತ್ಯಯವಾದರೆ ಮಾತ್ರ ರೇಡಿಯೊ ಕಡೆಗೆ ಜನರು ಗಮನ ನೀಡುತ್ತಾರೆ. ಆದರೆ, ಕೊಡಗಿನಲ್ಲಿ ವಿದ್ಯುತ್ ವ್ಯತ್ಯಯ ಎನ್ನುವುದು ಸಾಮಾನ್ಯ ಸಂಗತಿ. ಅದರಲ್ಲೂ ಮಳೆಗಾಲದಲ್ಲಿಯಂತು ಒಮ್ಮೆ ವಿದ್ಯುತ್ ಹೋದರೆ ಮತ್ತೆ ಯಾವಾಗ ಬರುತ್ತದೆ ಎನ್ನುವುದಕ್ಕೆ ಯಾವುದೇ ಖಾತರಿ ಇಲ್ಲ. ಈ ಸಮಯದಲ್ಲಿ ಜನರಿಗೆ ಹೊರಗಿನ ಸುದ್ದಿಗಳನ್ನು ಸದಾ ನೀಡುವುದೇ ಈ ರೇಡಿಯೊ. ಹಾಗಾಗಿ, ಇಲ್ಲಿನ ಜನರು ಹೆಚ್ಚಾಗಿ ಇಂದಿಗೂ ರೇಡಿಯೊ ಕೇಳುತ್ತಾರೆ.
ಕೊಡಗಿನಲ್ಲಿ ಸಾಕಷ್ಟು ಮಂದಿ ಬಡವರು ಇದ್ದಾರೆ. ಕೂಲಿ ಕಾರ್ಮಿಕರ ಸಂಖ್ಯೆ ಅಗಾಧವಾಗಿದೆ. ಇವರ ಮನರಂಜನೆಯ ಸಾಧನವಾಗಿಯೂ ಇದು ಬಳಕೆಯಾಗುತ್ತಿದೆ. ‘ಬಡವರ ಬಾದಾಮಿ ಕಡೆಲೆಕಾಯಿ’ ಎಂಬ ಮಾತಿನಂತೆ ಬಡವರ ಮನರಂಜನೆಯ ಉಪಕರಣ ರೇಡಿಯೊ ಎನಿಸಿದೆ.
ಮೊಬೈಲ್‌ಗಳಲ್ಲಿ ರೇಡಿಯೊ ಬಂದ ಮೇಲೆ ಬೇರೆ ಜಿಲ್ಲೆಗಳಲ್ಲಿ ರೇಡಿಯೊಗಳ ಮಾರಾಟ ಕುಸಿಯಿತು. ಆದರೆ, ಕೊಡಗಿನಲ್ಲಿ ಮೊಬೈಲ್‌ಗಳಲ್ಲೂ ರೇಡಿಯೊ ಬಂದರೂ ರೇಡಿಯೊ ಸಾಧನಗಳ ಮೇಲಿನ ಬೇಡಿಕೆ ಇನ್ನೂ ಹೆಚ್ಚು ಕುಸಿದಿಲ್ಲ. ವಿದ್ಯುತ್ ಹೋದಾಗ ಮೊಬೈಲ್‌ನಲ್ಲಿರುವ ಚಾರ್ಜ್ ಅನ್ನು ಜತನದಿಂದ ಕಾಯ್ದುಕೊಳ್ಳಬೇಕಿರುವುದರಿಂದ ಮೊಬೈಲ್‌ನಲ್ಲಿ ರೇಡಿಯೊ ಕೇಳುವುದಕ್ಕೆ ಬದಲಾಗಿ ಶೆಲ್, ರೀಚಾರ್ಜ್ ರೇಡಿಯೊ ಸಾಧನವನ್ನು ಜನರು ಬಳಕೆ ಮಾಡುತ್ತಾರೆ. ಹಾಗಾಗಿಯೇ, ಇಂದಿಗೂ ಅನೇಕ ಸಂತೆಗಳಲ್ಲಿ ರೇಡಿಯೊ ಮಾರಾಟ ನಡೆದಿದೆ.
ಇನ್ನು ರೇಡಿಯೊದಲ್ಲಿ ಬರುವ ಕಾರ್ಯಕ್ರಮಗಳ ಕೇಳುಗರೂ ಸಾಕಷ್ಟು ಮಂದಿ ಇಲ್ಲಿದ್ದಾರೆ. ರೇಡಿಯೊ ಪ್ರಿಯರಿಗೆ ದಿನದಲ್ಲಿ ರೇಡಿಯೊ ಕೇಳದೇ ಹೋದರೆ ಅವರು ದಿನ ಕಳೆಯಲು ಸಾಧ್ಯವಾಗುವುದೇ ಇಲ್ಲ. ಅಂತಹ ರೇಡಿಯೊ ಪ್ರಿಯರು ಸಾಕಷ್ಟು ಸಂಖ್ಯೆಯಲ್ಲಿ ಕೊಡಗಿನಲ್ಲಿದ್ದು, ಇನ್ನೂ ರೇಡಿಯೊ ಕೇಳುತ್ತಿದ್ದಾರೆ.
ಈ ಎಲ್ಲ ಅಂಶಗಳನ್ನು ಗಮನದಲ್ಲಿರಿಸಿಕೊಂಡಿರುವ ಇಲ್ಲಿನ ವಾಣಿಜ್ಯ ಮಳಿಗೆಗಳು, ವಿವಿಧ ಕಂಪನಿಗಳು ರೇಡಿಯೊ ಮೂಲಕವೇ ಜಾಹೀರಾತುಗಳನ್ನು ನೀಡುತ್ತಿದೆ. ಪಕ್ಕದ ರಾಜ್ಯವಾದ ಕೇರಳದ ಜಾಹೀರಾತೂ ಮಡಿಕೇರಿ ಆಕಾಶವಾಣಿಗೆ ಬರುತ್ತಿದೆ. ಇದರಿಂದ ರಾಜ್ಯದಲ್ಲಿ ಆದಾಯದ ದೃಷ್ಟಿಯಿಂದ ಬೆಂಗಳೂರು ಬಿಟ್ಟರೆ ನಂತರದ ಸ್ಥಾನವನ್ನು ಮಡಿಕೇರಿ ಆಕಾಶವಾಣಿ ಪಡೆದುಕೊಂಡಿದೆ.
ಪ್ರಾಕೃತಿಕ ವಿಕೋಪದ ವೇಳೆ ಸಂಪರ್ಕದ ಕೊಂಡಿ
ಕೊಡಗಿನಲ್ಲಿ 2018 ಮತ್ತು 2019ರಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪದ ವೇಳೆ ಜನರಿಗೆ ಸಂಪರ್ಕ ಕೊಂಡಿಯಾಗಿ ಕಾರ್ಯನಿರ್ವಹಿಸಿದ್ದೇ ಆಕಾಶವಾಣಿ. ಅಂತಹ ಕರಾಳ ದಿನಗಳಲ್ಲಿ ಕೂಪದಿರ ಶಾರದಾ ನಂಜಪ್ಪ, ಸುಬ್ರಾಯ ಸಂಪಾಜೆ ಹಾಗೂ ಅವರೊಂದಿಗೆ ಸಿಬ್ಬಂದಿ ಹಗಲು ರಾತ್ರಿ ಕಾರ್ಯನಿರ್ವಹಿಸಿ, ನಿರಂತರವಾಗಿ ಸುದ್ದಿ ಮುಟ್ಟಿಸಿದರು. ಮಾತ್ರವಲ್ಲ, ಸಂಕಷ್ಟಕ್ಕೀಡಾಗಿದ್ದ ಜನರ ಕಷ್ಟವನ್ನು ಕೇಳಿ ಅದನ್ನು ಸಂಘ, ಸಂಸ್ಥೆಗಳಿಗೆ, ಸರ್ಕಾರಕ್ಕೆ ತಲುಪಿಸುವ ಸೇತುವೆಯಂತೆ ಆಕಾಶವಾಣಿ ಕಾರ್ಯನಿರ್ವಹಿಸಿದ್ದನ್ನು ಬಹುತೇಕ ಮಂದಿ ಇಂದಿಗೂ ನೆನಪಿಸಿಕೊಳ್ಳುತ್ತಾರೆ.
ಆಲ್ ಇಂಡಿಯಾ ರೇಡಿಯೊ ಆರಂಭವಾಗಿ 90 ವರ್ಷಗಳು ಕಳೆದಿವೆ. ಮಡಿಕೇರಿ ಆಕಾಶವಾಣಿ 1993 ಆಗಸ್ಟ್ 28ರಂದು ಪ್ರಸಾರ ಆರಂಭಿಸಿತು. 33 ವರ್ಷಗಳಷ್ಟು ಸುದೀರ್ಘ ಪಯಣ ನಡೆಸಿರುವ ಮಡಿಕೇರಿ ಆಕಾಶವಾಣಿಗೆ ಬೇಡಿಕೆ ಕುಸಿದಿಲ್ಲ. ಬದಲಿಗೆ, ಕೇಳುಗರ ಸಂಖ್ಯೆ ಹೆಚ್ಚಾಗುತ್ತಲೆ ಇದೆ.
ಸದ್ಯ, ಮಡಿಕೇರಿ ಆಕಾಶವಾಣಿಯ ಪ್ರಸಾರವು ಸಂಪೂರ್ಣ ಕೊಡಗು ಜಿಲ್ಲೆ, ದಕ್ಷಿಣ ಕನ್ನಡ ಜಿಲ್ಲೆ, ಕೇರಳದ ಕಾಸರಗೋಡು, ಕಣ್ಣೂರು, ವೈನಾಡು, ಇರಿಟ್ಟಿ, ಮೈಸೂರು, ಹಾಸನ ಜಿಲ್ಲೆಯ ಕೆಲವು ಭಾಗಗಳವರೆಗೂ ತಲುಪುತ್ತಿದೆ. ‘ನ್ಯೂಸ್‌ಆನ್‌ಏರ್’ ಆ್ಯಪ್ ಮೂಲಕ ಜಗತ್ತಿನೆಲ್ಲೆಡೆ ಕೇಳುವ ಅವಕಾಶ ಇದೆ. ಹಾಗಾಗಿ, ಕೊಡಗಿನಿಂದ ದೂರ ಇದ್ದವರೂ ಈ ಆ್ಯಪ್ ಮೂಲಕ ಇಂದೂ ರೇಡಿಯೊ ಕೇಳುತ್ತಿದ್ದಾರೆ.
ಆದಾಯದಲ್ಲಿ, ಕೇಳುಗರ ಸಂಖ್ಯೆಯಲ್ಲಿ, ಗುಣಮಟ್ಟದಲ್ಲಿ ಯಾವುದೇ ಪ್ರಸಾರ ಕೇಂದ್ರಕ್ಕೂ ಕಡಿಮೆ ಇಲ್ಲದ ಮಡಿಕೇರಿ ಆಕಾಶವಾಣಿಯೂ ಇತರೆ ಕೇಂದ್ರಗಳಂತೆ ಸಿಬ್ಬಂದಿ ಕೊರತೆ ಸೇರಿದಂತೆ ಇತರೆ ಸಮಸ್ಯೆಗಳನ್ನು ಎದುರಿಸುತ್ತಿದೆ. ಸದ್ಯ, ಕಾರ್ಯಕ್ರಮ ವಿಭಾಗದಲ್ಲಿ ಕೇವಲ ಮೂವರು ಮಾತ್ರವೇ ಕಾಯಂ ಸಿಬ್ಬಂದಿ ಇದ್ದಾರೆ. 25 ಸಾಂದರ್ಭಿಕ ಉದ್ಯೋಗಿಗಳಿದ್ದಾರೆ. ಇದೇ ಪರಿಸ್ಥಿತಿ ಆಡಳಿತ ಮತ್ತು ತಾಂತ್ರಿಕ ವಿಭಾಗದಲ್ಲೂ ಇದೆ.
103.1 ಮೆಗಾಹರ್ಟ್ಸ್‌ನಲ್ಲಿ ಮಡಿಕೇರಿ ಆಕಾಶವಾಣಿ ಪ್ರಸಾರ ಬೆಳಿಗ್ಗೆ 5.55ಕ್ಕೆ ಆರಂಭ, ರಾತ್ರಿ 11.10ಕ್ಕೆ ಅಂತ್ಯ ‘ನ್ಯೂಸ್‌ಆನ್‌ಏರ್’ ಆ್ಯಪ್‌ನಲ್ಲೂ ಕೇಳಬಹುದು
ಬೇರೆ ಬೇರೆ ಮಾಧ್ಯಮಗಳ ಭರಾಟೆಯ ನಡುವೆಯೂ ಮಡಿಕೇರಿ ಆಕಾಶವಾಣಿ ತನ್ನ ಅಸ್ತಿತ್ವ ಉಳಿಸಿಕೊಂಡಿದೆ ಮಾತ್ರವಲ್ಲ ಮುಂದುವರಿಯುತ್ತಿದೆ. ಕೇಳುಗರ ಸಂಖ್ಯೆ ಕಡಿಮೆಯಾಗಿಲ್ಲಪಿ.ಎಂ.ಜಗದೀಶ್ ಕಾರ್ಯಕ್ರಮ ಮುಖ್ಯಸ್ಥರು ಮಡಿಕೇರಿ ಆಕಾಶವಾಣಿ
25 ವರ್ಷಗಳಿಂದ ರೇಡಿಯೊಗಳನ್ನು ಮಾರಾಟ ಮಾಡುತ್ತಿದ್ದೇನೆ. ಈಗಲೂ ತಿಂಗಳಿಗೆ ಕನಿಷ್ಠ 10 ರೇಡಿಯೊಗಳು ಮಾರಾಟವಾಗುತ್ತಿವೆ.ದೊರೆಸ್ವಾಮಿ ಡಿ.ಎಸ್.ಕ್ಲಾಕ್ ನಾಪೋಕ್ಲು
6 ಭಾಷೆಗಳಲ್ಲಿ ಸುದ್ದಿ ಪ್ರಸಾರ!
ಬೇರೆಲ್ಲ ಆಕಾಶವಾಣಿ ಕೇಂದ್ರಗಳಲ್ಲಿ 3–4 ಭಾಷೆಯಲ್ಲಿ ವಾರ್ತಾ ಪ್ರಸಾರವಿದ್ದರೆ ಮಡಿಕೇರಿ ಆಕಾಶವಾಣಿಯ ಮೂಲಕ ಒಟ್ಟು 6 ಭಾಷೆಗಳಲ್ಲಿ ವಾರ್ತಾ ಪ್ರಸಾರ ಕೇಳಬಹುದು. ಕನ್ನಡ ಹಿಂದಿ ಇಂಗ್ಲಿಷ್ ಸಂಸ್ಕೃತ ಜೊತೆಗೆ ಕೊಡವ ಮತ್ತು ಅರೆಭಾಷೆಯಲ್ಲಿಯೂ ಸುದ್ದಿ ಪ್ರಸಾರ ನಡೆಯುತ್ತಿದೆ. ಇದಕ್ಕೆ ಹೆಚ್ಚಿನ ಕೇಳುಗರಿರುವುದು ವಿಶೇಷ.
ನಿಧನವಾರ್ತೆ ಮಡಿಕೇರಿ ಆಕಾಶವಾಣಿಯಲ್ಲಿ ಮಾತ್ರ!
ಬೇರೆ ಯಾವುದೇ ಆಕಾಶವಾಣಿಯಲ್ಲಿ ಕೇಳಿ ಬಾರದ ನಿಧನವಾರ್ತೆಗಳು ಮಡಿಕೇರಿ ಆಕಾಶವಾಣಿಯಲ್ಲಿ ಮಾತ್ರವೇ ಪ್ರಸಾರವಾಗುತ್ತಿರುವುದು ವಿಶೇಷ. ನಿತ್ಯ ಬೆಳಿಗ್ಗೆ ಎಲ್ಲೆಲ್ಲಿ ಯಾವ ಯಾವ ಕುಟುಂಬದವರು ನಿಧನರಾದರು ಎಂಬ ಸುದ್ದಿ ಆಕಾಶವಾಣಿಯಲ್ಲಿ ಪ್ರಸಾರವಾಗುತ್ತಿದೆ. ಇದನ್ನು ಬಹುತೇಕ ಕೊಡಗಿನ ಮಂದಿ ತಪ್ಪದೇ ಕೇಳುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.