
ಮಡಿಕೇರಿ: ಮಹಿಳೆಯರು ಮತ್ತು ಮಕ್ಕಳ ರಕ್ಷಣೆಗಾಗಿ ಜಿಲ್ಲೆಯಲ್ಲಿ ‘ಅಕ್ಕ ಪಡೆ’ಯನ್ನು ರಚಿಸಲಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಎನ್.ಬಿಂದುಮಣಿ ಅವರು ಸೋಮವಾರ ಇಲ್ಲಿನ ತಮ್ಮ ಕಚೇರಿ ಆವರಣದಲ್ಲಿ ‘ಅಕ್ಕ ಪಡೆ’ ವಾಹನಕ್ಕೆ ಹಸಿರು ನಿಶಾನೆ ತೋರಿದರು.
ಬಳಿಕ ಮಾತನಾಡಿದ ಅವರು, ‘ಮಹಿಳೆಯರು ಮತ್ತು ಮಕ್ಕಳ ರಕ್ಷಣೆಯ ಸಲುವಾಗಿ ಈ ಅಕ್ಕಪಡೆಯನ್ನು ರಚಿಸಲಾಗಿದೆ. ಮಹಿಳೆಯರು ಮತ್ತು ಮಕ್ಕಳಿಗೆ ಸಂಬಂಧಿಸಿದಂತೆ ಸಮಸ್ಯೆಗಳ ಕರೆ ಬಂದಾಗ ಈ ಪಡೆ ಬಹಳ ತುರ್ತಾಗಿ ಕಾರ್ಯಾಚರಣೆ ನಡೆಸುತ್ತದೆ. ಈಗ 4 ಗೃಹರಕ್ಷಕ ದಳದ ಸಿಬ್ಬಂದಿ 2 ಪಾಳಿಗಳಲ್ಲಿ ಕಾರ್ಯ ನಿರ್ವಹಿಸುತ್ತಾರೆ’ ಎಂದು ಮಾಹಿತಿ ನೀಡಿದರು.
ಹೆಚ್ಚು ಜನಸಂದಣಿ ಇರುವ ಕಡೆ ಈ ಪಡೆ ನಿರಂತರವಾಗಿ ಗಸ್ತು ಕಾರ್ಯ ನಡೆಸಲಿದೆ. ಇದರಿಂದ ಹೆಣ್ಣು ಮಕ್ಕಳಿಗೆ ಧೈರ್ಯ ಬರುತ್ತದೆ ಎಂದರು.
ಸಂತ ಜೋಸೆಫರ ಶಾಲೆಯ ಮಕ್ಕಳು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಪ್ರಸನ್ನಕುಮಾರ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ದಿನೇಶ್‌ಕುಮಾರ್ ಭಾಗವಹಿಸಿದ್ದರು.
ಏನಿದು ಅಕ್ಕಪಡೆ? ಅಪಾಯದಲ್ಲಿರುವ ಅಥವಾ ಸಂಕಷ್ಟದಲ್ಲಿರುವ ಮಹಿಳೆಯರು ಮತ್ತು ಮಕ್ಕಳನ್ನು ತಕ್ಷಣ ರಕ್ಷಿಸಲು ಬೀದರ್ ಜಿಲ್ಲೆಯಲ್ಲಿ ಗೃಹ ಇಲಾಖೆ ಪ್ರಾಯೋಗಿಕವಾಗಿ ಅಕ್ಕಪಡೆಯನ್ನು ರಚಿಸಿ ಕಾರ್ಯಾಚರಣೆಗಿಳಿಸಿತ್ತು. ಇದು ಯಶಸ್ವಿಯಾದ್ದರಿಂದ ಎಲ್ಲ ಜಿಲ್ಲೆಗಳಲ್ಲೂ ಗೃಹರಕ್ಷಕರನ್ನು ಒಳಗೊಂಡು ಅಕ್ಕಪಡೆಯನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ರಚಿಸಿದೆ.
ಈ ಪಡೆಯು ಸೂಕ್ಷ್ಮ ಪ್ರದೇಶದಲ್ಲಿ ಗಸ್ತು ನಡೆಸುತ್ತದೆ. ಮಹಿಳೆಯರು ಮತ್ತು ಮಕ್ಕಳ ಸಂಕಷ್ಟದ ಕರೆಗೆ ತ್ವರಿತವಾಗಿ ಸ್ಪಂದಿಸುತ್ತದೆ. ಈ ಪಡೆಯು ಸ್ಥಳೀಯ ಪೊಲೀಸರ ಸಹಕಾರದೊಂದಿಗೆ ಬೆಳಿಗ್ಗೆ 7 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಕಾರ್ಯನಿರ್ವಹಿಸುತ್ತದೆ. ತಂಡವು ಶಾಲಾ ಕಾಲೇಜು, ಬಾಲಕಿಯರು, ಮಹಿಳೆಯರ ಹಾಸ್ಟೆಲ್, ಬಸ್‌ನಿಲ್ದಾಣ, ಮಾರುಕಟ್ಟೆ, ಪ್ರವಾಸಿ ತಾಣ, ಸೂಕ್ಷ್ಮ ಸ್ಥಳಗಳಲ್ಲಿ ಗಸ್ತು ತಿರುಗುತ್ತಿರುತ್ತದೆ.
ತುರ್ತು ಸಹಾಯವಾಣಿ 112 ಮಕ್ಕಳ ಸಹಾಯವಾಣಿ 1098 ಮಹಿಳಾ ಸಹಾಯವಾಣಿ 181
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.