ADVERTISEMENT

ಮಡಿಕೇರಿ ದಸರಾ: 71 ಮಂದಿಯ ಕಂಠದಿ ಮೊಳಗಿತು 13 ಭಾಷೆಯ ಕವನಗಳು

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2025, 4:36 IST
Last Updated 26 ಸೆಪ್ಟೆಂಬರ್ 2025, 4:36 IST
ಬಹುಭಾಷಾ ಕವಿಗೋಷ್ಠಿಯಲ್ಲಿ ಚಲನಚಿತ್ರ ಸಾಹಿತಿ ಕಿನ್ನಾಳ ರಾಜ್ ಮಾತನಾಡಿದರು
ಬಹುಭಾಷಾ ಕವಿಗೋಷ್ಠಿಯಲ್ಲಿ ಚಲನಚಿತ್ರ ಸಾಹಿತಿ ಕಿನ್ನಾಳ ರಾಜ್ ಮಾತನಾಡಿದರು   

ಮಡಿಕೇರಿ: ಹೊರಗೆ ವರ್ಷಧಾರೆ ಬಿಟ್ಟು, ಬಿಟ್ಟು ಸುರಿಯುತ್ತಿದ್ದರೆ, ಗಾಂಧಿ ಮೈದಾನದ ಒಳಗೆ ದಿನವಿಡೀ ಕಾವ್ಯಧಾರೆ ಜಿನುಗುತ್ತಿತ್ತು. ಬರೋಬರಿ 71 ಮಂದಿಯ ಕಂಠದಲ್ಲಿ ಮೊಳಗಿತು 13 ಭಾಷೆಯ ಕವನಗಳು. ಅವರಲ್ಲಿ ಯುವಕರು, ಯುವತಿಯರು, ಹಿರಿಯರು, ಹೆಸರಾಂತ ಸಾಹಿತಿಗಳು, ಮಕ್ಕಳು, ಎಲ್ಲ ಧರ್ಮಿಯರು ಹಾಗೂ ತೃತೀಯ ಲಿಂಗಿಗಳೂ ಸೇರಿದ್ದರು. ಈ ಮೂಲಕ ಇಲ್ಲಿ ಗುರುವಾರ ನಡೆದ ದಸರ ಬಹುಭಾಷಾ ಕವಿಗೋಷ್ಠಿಯು ಎಲ್ಲರನ್ನೂ ಒಳಗೊಂಡು ಸಮಗ್ರತೆಯನ್ನು ಸಾರಿತು.

ಇಂತಹದ್ದೊಂದು ಅಪರೂಪದ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದ್ದು ಇಲ್ಲಿ ಮಡಿಕೇರಿ ನಗರ ದಸರಾ ಸಮಿತಿಯ ಬಹುಭಾಷಾ ಕವಿಗೋಷ್ಠಿ ಸಮಿತಿ ವತಿಯಿಂದ ನಡೆದ ‘ಬಹುಭಾಷಾ ಕವಿಗೋಷ್ಠಿ’ಯಲ್ಲಿ.

ಕನ್ನಡ, ಇಂಗ್ಲಿಷ್, ಹಿಂದಿ, ಕೊಡವ, ಅರೆಭಾಷೆ, ತುಳು, ಕುಂಬಾರ, ಯರವ, ಹವ್ಯಕ, ಬೈರಬಾಸೆ, ಬ್ಯಾರಿ, ಮಲಯಾಳಂ, ಜೇನು ಕುರುಬ ಭಾಷೆಗಳಲ್ಲಿ ಒಟ್ಟು 71 ಮಂದಿ ಕವನ ವಾಚಿಸಿದರು. ಭಾಷೆ ಅರ್ಥವಾಗದಿದ್ದರೂ ಅದರ ಭಾವ ಹೃದಯ ತಲುಪುವಲ್ಲಿ ಯಶಸ್ವಿಯಾಯಿತು. 

ADVERTISEMENT

ಹೆಣ್ಣಿನ ಬದುಕಿನ ಬವಣೆ ಕುರಿತೇ ಸಾಕಷ್ಟು ಮಂದಿ ಕವನ ವಾಚಿಸಿದರು. ಅದರಲ್ಲೂ ಅಲ್ಲಾರಂಡ ವಿಠಲ ನಂಜಪ್ಪ ಅವರು ವಾಚಿಸಿದ ‘ಉಳುವ ಭೂಮಿಯಲಿ ಬೀಳುವ ಗೆರೆ ಅವಳು’ ಕವನ ಗಮನ ಸೆಳೆಯಿತು. ‘ಅವಳಿಲ್ಲೇ ಇದ್ದಾಳೆ ಅಲ್ಲಿ, ಇಲ್ಲಿ ನಮ್ಮ ನಡುವಿನಲ್ಲೇ ಎನ್ನುತ್ತಲೇ ಕವನ ‘ಕೊಟ್ಟು ಬಿಡಿ ಪ್ರೀತಿಯನ್ನು ಹುಡುಕುವ ಮುನ್ನ ಕಳಚಿಬಿಡಿ ಕಣ್ಣಪೊರೆಯನ್ನು’ ಎನ್ನುತ್ತ ಧುತ್ತನೇ ಕೊನೆಯಾಗಿ, ಅನೇಕ ವಿಚಾರಗಳು ಮನಸ್ಸಿನಲ್ಲಿ ಹೊಳೆಯುವಂತೆ ಮಾಡುತ್ತದೆ.

ಸುಳ್ಯದ ಡಾ.ಅನುರಾಧಾ ಕುರುಂಜಿ ಅವರು ವಾಚಿಸಿದ ‘ನೆರಳು’ ಕವನ ‘ಯಾರಿವನು ಬೆಂಬಿಡದ ಭೂತ’ ಎನ್ನುತ್ತಲೇ ಆರಂಭವಾಗಿ ಕೊನೆಯವರೆಗೂ ಕುತೂಹಲ ಉಳಿಸಿಕೊಂಡಿತು. ಬಿ.ಜಿ.ಅನಂತಶಯನ ಅವರ ‘ಮಾಸ್ಟರ್ಸ್ ಗಿಫ್ಟ್’ ಇಂಗ್ಲಿಷ್ ಕವನವೂ ಹೃದ್ಯವಾಗಿತ್ತು.

5ನೇ ತರಗತಿ ವಿದ್ಯಾರ್ಥಿನಿ ತಿಷ್ಯಾ ಪೊನ್ನೇಟಿ ವಾಚಿಸಿದ ‘ಮಳೆ ರಜೆ’ ಕವನದಲ್ಲಿನ ‘ಎಷ್ಟು ಒಳ್ಳೆಯವ್ರು ಗೊತ್ತಾ ನಮ್ ಡಿಸಿ ಅಂಕಲ್...? ಮಳೆ ಬಂದ್ರೆ ಸಾಕು ರಜೆ ಕೊಡ್ತಾರೆ’ ಸಾಲುಗಳು ಈ ವರ್ಷ ಮಕ್ಕಳಿಗೆ ಸಿಕ್ಕ ಸುದೀರ್ಘ ಮಳೆ ರಜೆಯನ್ನು ಧ್ವನಿಸಿತು, ಮಾತ್ರವಲ್ಲ ಜಿಲ್ಲಾಧಿಕಾರಿ ಅವರ ಕಾಳಜಿಯನ್ನು ವ್ಯಕ್ತಪಡಿಸುವಲ್ಲಿ ಸಫಲವಾಯಿತು.

ರಿಹಾನ ಎಂಬ ತೃತೀಯ ಲಿಂಗಿ ಸಹ ಕವನ ವಾಚಿಸಿ ಗಮನ ಸೆಳೆದರು.

ಇದೇ ವೇಳೆ ಆಯ್ಕೆಯಾದ ಎಲ್ಲ ಕವನಗಳುಳ್ಳ ‘ಕಾವ್ಯ ಕಲರವ’, ಡಿ.ಎಚ್.ಪುಷ್ಪ ಅವರ ‘ಸಂವೇದನೆ' ಕವನ ಸಂಕಲನ ಹಾಗೂ ಕೆ.ಶೋಭಾ ರಕ್ಷಿತ್ ಅವರ ‘ಮನ ಸೆಳೆದ ಹಿಮಗಿರಿ' ಪ್ರವಾಸ ಕಥನವು ಲೋಕಾರ್ಪಣೆಗೊಂಡವು.

ಆದರೆ, ಮೈದಾನ ‘ವಿಐಪಿ’ ಆಸನಗಳು ಬಿಟ್ಟರೆ ಮಿಕ್ಕೆಲ್ಲ ಕುರ್ಚಿಗಳು ಖಾಲಿ ಇದ್ದವು.

ಕವಿಗೋಷ್ಠಿಯನ್ನು ರಾಜ್ಯ ಒಕ್ಕಗಲಿಗರ ಸಂಘದ ನಿರ್ದೇಶಕ ಹರಪಳ್ಳಿ ರವೀಂದ್ರ ಉದ್ಘಾಟಿಸಿದರು. ಕೆ.ಜಿ.ಎಫ್., ಸಲಾರ್ ಚಲನಚಿತ್ರ ಖ್ಯಾತಿಯ ಸಾಹಿತಿ ಕಿನ್ನಾಳ ರಾಜ್, ಸಾಹಿತಿ ಕ್ಯಾಪ್ಟನ್ ಬಿದ್ದಂಡ ನಾಣಯ್ಯ, ನಾಪೋಕ್ಲು ಬಿಲ್ಲವ ಸಮಾಜದ ಅಧ್ಯಕ್ಷ ಬಿ.ಎಂ.ಪ್ರತೀಪ್, ದಸರಾ ಬಹುಭಾಷಾ ಕವಿಗೋಷ್ಠಿ ಸಮಿತಿಯ ಅಧ್ಯಕ್ಷ ಉಜ್ವಲ್ ರಂಜಿತ್, ಪ್ರಧಾನ ಕಾರ್ಯದರ್ಶಿ ರಂಜಿತ್ ಕವಲಪಾರ, ಸಹ ಕಾರ್ಯದರ್ಶಿ ಪ್ರಸಾದ್ ಸಂಪಿಗೆಕಟ್ಟೆ, ಗೌರವಾಧ್ಯಕ್ಷ ಕುಡೆಕಲ್ ಸಂತೋಷ್, ಸದಸ್ಯರಾದ ಎಸ್.ಜಿ.ಉಮೇಶ್, ಎಂ.ಯು.ಹನೀಫ್, ಪಿ.ವಿ.ಪ್ರಭಾಕರ್, ಎಂ.ಎಸ್.ನಾಸಿರ್, ಎಂ.ಪಿ.ಅನುಷಾ, ಎಚ್.ಎನ್.ಲಕ್ಷ್ಮೀಶ್, ಸಯ್ಯದ್ ಇರ್ಫಾನ್, ಚೋಕಿರ ಅನಿತಾ ದೇವಯ್ಯ, ಅಂಜಲಿ ಅಶೋಕ್, ಶ್ರೀ ರಕ್ಷಾ, ದಸರಾ ಸಮಿತಿ ಸದಸ್ಯರಾದ ವಿಜಯ್ ಹಾನಗಲ್, ಓಂಶ್ರೀ ದಯಾನಂದ ಕೂಡಕಂಡಿ, ಪಿ.ಎಂ.ರವಿ, ಅಂಕಿತಾ ಕಡ್ಲೇರ, ಮೌಲ್ಯ ಬಜೆಕೋಡಿ ಭಾಗವಹಿಸಿದ್ದರು.

ಬಹುಭಾಷಾ ಕವಿಗೋಷ್ಠಿಯಲ್ಲಿ ‘ವಿಐಪಿ’ ಆಸನಗಳಷ್ಟೇ ಭರ್ತಿಯಾಗಿದ್ದವು

ಬರೆಯುವ ಮುನ್ನ ಓದಿರಿ ಕವಿಗಳೇ ಸ್ವವಿಮರ್ಶಕರಾಗಬೇಕು. ಬರೆಯುವ ಮುನ್ನ ಸಾಕಷ್ಟು ಓದಬೇಕು. ಓದಿ ಓದಿ ಕವಿತೆಗಳು ಗಟ್ಟಿಗೊಳ್ಳಲಿ. ಓದಿ ಹೊಸದರತ್ತ ಹೊರಳಿಕೊಳ್ಳಬೇಕ. ಹೊಸ ಹೊಸ ಪ್ರಯೋಗಗಳನ್ನು ಮಾಡಬೇಕು.

-ಸುನೀತಾ ಲೋಕೇಶ್ ಬಹುಭಾಷಾ ಕವಿಗೋಷ್ಠಿಯ ಅಧ್ಯಕ್ಷೆ.

ಲೇಖನಿಯೇ ಮುಖ್ಯ ಕವಿಗಳ ಬದುಕಿನ ಅವಿಭಾಜ್ಯ ಅಂಗ ಲೇಖನಿಯೇ ಆಗಿದೆ. ಅತ್ಯಂತ ಪ್ರಭಾವಶಾಲಿಯಾದ ಲೇಖನಿಯ ಮೂಲಕ ನಮ್ಮೆಲ್ಲರ ಕನಸುಗಳನ್ನು ಅವರು ಅಕ್ಷರ ರೂಪದಲ್ಲಿ ಸಾಕಾರಗೊಳಿಸುವಂತಾಗಬೇಕು

-ಕಿನ್ನಾಳ ರಾಜ್ ಚಲನಚಿತ್ರ ಸಾಹಿತಿ.

ಮೊಬೈಲ್ ಟಿವಿ ನೋಡುವಾಗ ಸ್ವಂತ ಯೋಚನೆ ಬರುವುದಿಲ್ಲ. ಅದರಿಂದ ದೂರ ಇರಿ. ಬರೆಯುವುದನ್ನು  ಬಿಡದಿರಿ. ಬರೆಯುವ ಮಕ್ಕಳಿಗೆ ಪ್ರೋತ್ಸಾಹ ಕೊಡಬೇಕು

-ಬಿ.ಆರ್.ಜೋಯಪ್ಪ ಸಾಹಿತಿ.

ಬದಲಾವಣೆಗಳಿಗೆ ಪ್ರೇರಕ ಶಕ್ತಿ ಸಾಹಿತ್ಯ ಅತ್ಯಂತ ಪ್ರಭಾವಶಾಲಿಯಾದ ಸಾಹಿತ್ಯ ಕ್ಷೇತ್ರ ಸಾಮಾಜಿಕ ಬದಲಾವಣೆಗಳಿಗೂ ಪ್ರೇರಕ ಶಕ್ತಿಯಾಗಿದೆ. ತಮ್ಮ ಆಂತರ್ಯದ ಭಾವನೆಗಳಿಗೆ ಅಕ್ಷರಗಳ ರೂಪ ನೀಡುವ ಕವಿಗಳು ಸಾಹಿತ್ಯ ಕ್ಷೇತ್ರವನ್ನು ಶ್ರೀಮಂತಗೊಳಿಸುತ್ತಿದ್ದಾರೆ

-ಹರಪಳ್ಳಿ ರವೀಂದ್ರ ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.