ADVERTISEMENT

ಮಡಿಕೇರಿ | ಲಾಠಿ ಹಿಡಿದರು, ಕಲಾವಿದರಾದರು: ದಸರೆ ಯಶಸ್ಸಿಗೆ ದುಡಿದ ಪೊಲೀಸರು

ಕೆ.ಎಸ್.ಗಿರೀಶ್
ಜೆ.ಸೋಮಣ್ಣ
Published 13 ಅಕ್ಟೋಬರ್ 2025, 3:08 IST
Last Updated 13 ಅಕ್ಟೋಬರ್ 2025, 3:08 IST
ಗೋಣಿಕೊಪ್ಪಲು ದಸರಾ ಉತ್ಸದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನೀಡಿದ ಪೊಲೀಸರು.
ಗೋಣಿಕೊಪ್ಪಲು ದಸರಾ ಉತ್ಸದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನೀಡಿದ ಪೊಲೀಸರು.   

ಮಡಿಕೇರಿ: ಮಡಿಕೇರಿ ಮತ್ತು ಗೋಣಿಕೊಪ್ಪಲು ದಸರೆಯ ಯಶಸ್ಸಿನ ಹಿಂದೆ ಪೊಲೀಸರ ಶ್ರಮ ಅಗಾಧವಾಗಿತ್ತು. ನವರಾತ್ರಿಯಲ್ಲಿ ಮಾತ್ರವಲ್ಲ, ಗೌರಿ ಗಣೇಶ ಹಬ್ಬದಿಂದ ಹಿಡಿದು ದಸರೆ ಮುಗಿಯುವವರೆಗೂ ರಜೆ ಇಲ್ಲದೇ ಪೊಲೀಸರು ಕಾರ್ಯನಿರ್ವಹಿಸಿದ್ದಾರೆ. ಅದರಲ್ಲೂ ವಿಶೇಷವಾಗಿ, ನವರಾತ್ರಿಯ ವೇಳೆ ಬೆಳಿಗ್ಗೆ 9ಕ್ಕೆ ಕರ್ತವ್ಯಕ್ಕೆ ಹಾಜರಾದರೆ ಮನೆಗೆ ವಾಪಸ್‌ ತೆರಳುತ್ತಿದ್ದುದ್ದೇ ರಾತ್ರಿ 1 ಗಂಟೆಯ ನಂತರ. ಇಷ್ಟು ಶ್ರಮ ಹಾಕಿದ್ದರಿಂದ ದಸರೆ ಯಶಸ್ವಿಯಾಯಿತು.

ಇದರೊಂದಿಗೆ ಈ ಬಾರಿ ಸುಮಾರು 70ರಿಂದ 80 ಪೊಲೀಸರು ಮಡಿಕೇರಿ ಮತ್ತು ಗೋಣಿಕೊಪ್ಪಲು ದಸರೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡುವ ಮೂಲಕ ಸಾಂಸ್ಕೃತಿಕ ಕಾರ್ಯಕ್ರಮಗಳ ದಿಬ್ಬಣದಲ್ಲೂ ಭಾಗಿಯಾಗುವ ಮೂಲಕ ಗಮನ ಸೆಳೆದರು.

ಕೇವಲ ಕಾನೂನು ಮತ್ತು ಸುವ್ಯವಸ್ಥೆ ಪಾಲನೆಯಷ್ಟೇ ಪೊಲೀಸರ ಕರ್ತವ್ಯವಾಗಿರಲಿಲ್ಲ. ಅದರೊಂದಿಗೆ ಇಕ್ಕಟ್ಟಾದ ರಸ್ತೆಗಳಲ್ಲಿ ವಾಹನ ನಿಲುಗಡೆ, ಸುಗಮ ಸಂಚಾರ, ಕಾರ್ಯಕ್ರಮ ಸುಲಲಿತವಾಗಿ ನಡೆಯುವಂತೆ ನೋಡಿಕೊಳ್ಳುವುದು, ರಜೆ ಇರುವುದರಿಂದ ನಗರಕ್ಕೆ ಬಂದ ಸಾವಿರಾರು ಪ್ರವಾಸಿಗರಿಗೂ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುವುದು ಇಂತಹ ಜವಾಬ್ದಾರಿಗಳೂ ಅವರದ್ದೇ ಆಗಿತ್ತು. ಇವುಗಳನ್ನೆಲ್ಲ ಯಶಸ್ವಿಯಾಗಿ ನಿಭಾಯಿಸಿದ ಹೆಗ್ಗಳಿಕೆ ಪೊಲೀಸರದ್ದಾಗಿದೆ.

ADVERTISEMENT

ನಿರಂತರವಾಗಿ ರಜೆ ಇಲ್ಲದೇ ಮಾಡಿದ ಕರ್ತವ್ಯ, ಮಹಿಳೆಯರಿಗೆ, ಹಿರಿಯ ನಾಗರಿಕರಿಗೆ ಯಾವುದೇ ತೊಂದರೆಯಾಗದ ವಾತಾವರಣ ಕಲ್ಪಿಸಿದ್ದನ್ನು ಬಹುತೇಕ ಎಲ್ಲರೂ ಶ್ಲಾಘಿಸುತ್ತಾರೆ.

ವಾಹನ ನಿಲುಗಡೆ ಕುರಿತು ‘ಕ್ಯೂಆರ್‌’ ಕೋಡ್ ಹಾಕಿ ಸಾಕಷ್ಟು ಮುಂಚಿತವಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುವುದು, ಡಿಜಿಟಲ್ ಪರದೆಯ ಅಳವಡಿಕೆ, ಸಹಾಯವಾಣಿಯಲ್ಲಿ ಧ್ವನಿವರ್ಧಕದ ಮೂಲಕ ಸಾರ್ವಜನಿಕರಿಗೆ ಸೂಚನೆಗಳನ್ನು ನೀಡುವ ಮೂಲಕ ಕಾಲ್ತುಳಿತದಂತಹ ಪ್ರಸಂಗಗಳನ್ನು ತಡೆದದ್ದು ಮೊದಲಾದ ಹಲವು ಹೊಸ ಬಗೆಯ ಕಾರ್ಯಚಟುವಟಿಕೆಗಳ ಮೂಲಕ ಈ ಬಾರಿ ಪೊಲೀಸರು ಗಮನ ಸೆಳೆದರು.

ಮಡಿಕೇರಿಯಲ್ಲಿ ವಿಜಯದಶಮಿಯಂದು ಒಂದೂವರೆ ಸಾವಿರಕ್ಕೂ ಅಧಿಕ ಪೊಲೀಸರು, ನಿತ್ಯ 70ರಿಂದ 80 ಮಂದಿ ಪೊಲೀಸರು ಕಾರ್ಯನಿರ್ವಹಿಸಿದರು. ಇವುಗಳಲ್ಲಿ ಮಡಿಕೇರಿ ನಗರ ಮತ್ತು ಸಂಚಾರ ಠಾಣೆಯ ಎಲ್ಲ ಸಿಬ್ಬಂದಿ ಇದ್ದರು.  ದೊಡ್ಡ ದೊಡ್ಡ ಕಾರ್ಯಕ್ರಮಗಳಲ್ಲಿ ಉಪವಿಭಾಗಮಟ್ಟದ ಸಿಬ್ಬಂದಿಯೂ ಕಾರ್ಯನಿರ್ವಹಿಸಿದ್ದರು.

ಇಷ್ಟೆಲ್ಲದರ ನಡುವೆ ಕೊನೆಯ ದಿನ ಬಹುಮಾನ ವಿತರಣೆ ವೇಳೆ ಕೆಲವೊಂದು ಗೊಂದಲಗಳು ಉಂಟಾಗಿ ಡಿವೈಎಸ್‌ಪಿ ಸೂರಜ್ ಮತ್ತು ಹೆಡ್‌ಕಾನ್‌ಸ್ಟೆಬಲ್‌ ಒಬ್ಬರು ಆಸ್ಪತ್ರೆ ಸೇರುವಂತಾಯಿತು. ಇದು ಪ್ರಸಕ್ತ ಸಾಲಿನ ದಸರೆಯಲ್ಲಿ ಕಪ್ಪುಚುಕ್ಕೆಯಂತೆ ಕಂಡು ಬಂದರೂ ಪೊಲೀಸರ ಶ್ರಮವನ್ನು ನಿರಾಕರಿಸುವಂತಿಲ್ಲ.

ಗೋಣಿಕೊಪ್ಪಲಿನಲ್ಲಿ ನಿತ್ಯವೂ ದುಡಿದ ಪೊಲೀಸರು

ಇಲ್ಲಿನ ದಸರಾ ಜನೋತ್ಸವ ಯಾವುದೇ ಗಲಭೆ ಗಲಾಟೆಗಳಿಗೆ ಆಸ್ಪದ ನೀಡದೆ ಶಾಂತಿಯುವತವಾಗಿ ನಡೆದದ್ದು ಸಾರ್ವಜನಿಕರ ಪ್ರಸಂಶೆಗೆ ಪಾತ್ರವಾಯಿತು. ಈ ಯಶಸ್ವಿನ ಹಿಂದೆ ನಿರಂತರವಾಗಿ ದುಡಿದ ಪೊಲೀಸರ ಶ್ರಮವೂ ಇತ್ತು. 11 ದಿನಗಳ ಕಾಲ ನಡೆದ ದಸರಾ ಸಾಂಸ್ಕೃತಿಕ ಕಾರ್ಯಕ್ರಮದ ಮೈದಾನದಲ್ಲಿ ಮಧ್ಯರಾತ್ರಿ 1 ಗಂಟೆವರೆಗೂ ಪೊಲೀಸ್ ಬಂದೋಬಸ್ತ್ ಇರುತ್ತಿತ್ತು. ಪ್ರತಿ ದಿನ ಮಹಿಳಾ ಪೊಲೀಸ್ ಸಿಬ್ಬಂದಿಗಳನ್ನು ಒಳಗೊಂಡಂತೆ 10 ಜನ ಪೊಲೀಸರು ಕರ್ತವ್ಯ ನಿರ್ವಹಿಸುತ್ತಿದ್ದರು. ದಸರಾ ಮೈದಾನದಿಂದ ಸಭಿಕರನ್ನು ಮನೆಗೆ ಕಳುಹಿಸಿದ ಬಳಿಕ ಅಲ್ಲಿಂದ ತೆರಳುತ್ತಿದ್ದರು. ಇದರಿಂದ ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶವಾಗಲಿಲ್ಲ. ಪಟ್ಟಣದ ಬಸ್ ನಿಲ್ದಾಣದಲ್ಲಿಯೂ ಕೂಡ ಸಿಸಿಟಿವಿ ಕ್ಯಾಮೆರಾ ಅಳವಡಿಸಿ ಹದ್ದಿನ ಕಣ್ಣಿಟ್ಟು ಕಾನೂನು ಸುವ್ಯವಸ್ಥೆಯನ್ನು ಕಾಪಾಡಿದರು. ದಸರಾ ಕಾರ್ಯಕ್ರಮ ನೋಡಲು ಪಟ್ಟಣಕ್ಕೆ ಬಂದ ವಾಹನಗಳು ಮತ್ತೆ ಜನತೆಗೆ ಯಾವುದೇ ತೊಂದರೆಯಾಗದಂತೆ ಸಂಚಾರ ವ್ಯವಸ್ಥೆ ನಿಯಂತ್ರಿಸಿದರು. ನೂತನ ಬಸ್ ನಿಲ್ದಾಣದ ಕಾಮಗಾರಿ ನಡೆಯುತ್ತಿರುವುದರಿಂದ ಇಕ್ಕಟ್ಟಾದ ಬಸ್ ನಿಲ್ದಾಣದಲ್ಲಿ ವಾಹನ ನಿಲುಗಡೆ ಮತ್ತು ಸಂಚಾರಕ್ಕೆ ಯಾವುದೇ ಅಡಚಣೆಯಾಗದಂತೆ ನೋಡಿಕೊಂಡರು. ದಸರಾ ಉತ್ಸವದ ಅಂತಿಮ ದಿನವಾದ ವಿಜಯದಶಮಿಯಂದು ಗೋಣಿಕೊಪ್ಪಲು ಪಟ್ಟಣಕ್ಕೆ ರಾತ್ರಿ ವೇಳೆ 20 ಸಾವಿರಕ್ಕೂ ಅಧಿಕ ಜನರು ಆಗಮಿಸಿದ್ದರು. ದಶಮಂಟಪ ಶೋಭಾಯಾತ್ರೆ ವೀಕ್ಷಿಸಲು ಬಂದ ಜನರು ಇಡೀ ರಾತ್ರಿ ದಶಮಂಟಪಗಳ ವಾದ್ಯದ ಶಬ್ಧಕ್ಕೆ ಕುಣಿದು ಕುಪ್ಪಳಿಸಿದರು. ಇಲ್ಲಿಯೂ ಕೂಡ ಯಾವುದೇ ಗಲಭೆಗಳು ನಡೆಯದಿದ್ದುದು ಸಮಾಧಾನಕರ ಸಂಗತಿ. ಪಟ್ಟಣದ ತುಂಬ ಇಡೀ ರಾತ್ರಿ ಪೊಲೀಸ್ ಕಾವಲು ಇದ್ದುದರಿಂದ ಶಾಂತಿ ಸುವ್ಯವಸ್ಥೆಗೆ ಯಾವುದೇ ಭಂಗ ಬರಲಿಲ್ಲ.ಪೊಲೀಸರಿಂದ ಸಾಂಸ್ಕೃತಿಕ ಕಾರ್ಯಕ್ರಮ ಇಷ್ಟೆಲ್ಲ ಕೆಲಸ ಕಾರ್ಯಗಳ ಒತ್ತಡದ ನಡುವೆಯೂ ಜಿಲ್ಲೆಯ ಪೊಲೀಸರು ಇಲ್ಲಿನ ದಸರಾ ಉತ್ಸವದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಎರಡುವರೆ ಗಂಟೆಗಳ ಕಾಲ ಹಾಡು ನೃತ್ಯ ನಾಟಕ ಹಾಸ್ಯ ಮೊದಲಾದವುಗಳ ಮೂಲಕ ತಾವೂ ಸಂತಸ ಪಟ್ಟು ಸಭಿಕರನ್ನೂ ರಂಜಿಸಿದರು. ಈ ಮೂಲಕ ದಸರಾ ಉತ್ಸವಕ್ಕೆ ಕಳೆ ತುಂಬಿದರು.

ನಿರಂತರವಾಗಿ 30 ಗಂಟೆಗಳ ಕೆಲಸ ದಸರೆಯ ಕೊನೆ ಕೊನೆಯ ದಿನಗಳಲ್ಲಿ ಹಿರಿಯ ಅಧಿಕಾರಿಗಳೂ ಸೇರಿದಂತೆ ಬಹಳಷ್ಟು ಪೊಲೀಸರು ನಿರಂತರವಾಗಿ 30 ಗಂಟೆಗಳ ಕಾಲ ದಸರೆಗಾಗಿ ಕಾರ್ಯನಿರ್ವಹಿಸಿದ್ದೇವೆ. ಕೊನೆಯ ಕ್ಷಣದಲ್ಲಿ ಇಬ್ಬರು ಪೊಲೀಸರು ಆಸ್ಪತ್ರೆ ಸೇರುವಂತಾಯಿತು. ಆದರೆ ಮಹಿಳೆಯರೂ ಸೇರಿದಂತೆ ಎಲ್ಲ ಸಾರ್ವಜನಿಕರೂ  ಸುರಕ್ಷಿತವಾಗಿ ದಸರೆಯಲ್ಲಿ ಭಾಗಿಯಾಗಿದ್ದಾರೆ. ಈ ಬಾರಿ ಪೊಲೀಸರು ಸಹ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಿದ್ದು ವಿಶೇಷ.
ಕೆ.ರಾಮರಾಜನ್ ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ.
‘ಡಿಜೆ ಬೇಡಿಕೆ ಬಿಟ್ಟರೆ ಉಳಿದಂತೆ ಶಾಂತಿಯುತವಾಗಿ ಜರುಗಿತು’ ದಶಮಂಟಪ ಶೋಭಾಯಾತ್ರೆಯಂದು ಕೆಲವು ಯುವಕರು ಡಿಜೆ ಬೇಕು ಎಂದು ಹಠ ಹಿಡಿದು ಕುಳಿತಿದ್ದರಿಂದ ಮೆರವಣಿಗೆ ಸಾಗುವುದು ಒಂದು ಗಂಟೆ ತಡವಾಯಿತು. ಉಳಿದಂತೆ ಎಲ್ಲ ಮಂಟಪಗಳ ಅಧ್ಯಕ್ಷರು ವಾದ್ಯ ಬಳಸಿ ಉತ್ತಮ ಸಹಕಾರ ನೀಡಿದರು. ಹೀಗಾಗಿ ಎಲ್ಲವೂ ಶಾಂತಿಯುತವಾಗಿ ನಡೆಯಿತು.
ಪ್ರದೀಪ್ ಕುಮಾರ್ ಸಬ್ ಇನ್‌ಸ್ಪೆಕ್ಟರ್ ಗೋಣಿಕೊಪ್ಪಲು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.