ADVERTISEMENT

ಮಡಿಕೇರಿ: ಈ ಬಾರಿ ವಿಶೇಷ ಸೆಲ್ಫಿ ಸ್ಪರ್ಧೆ

ಮಡಿಕೇರಿ ನಗರ ದಸರಾ ಅಲಂಕಾರ ಸಮಿತಿ ವತಿಯಿಂದ ಆಯೋಜನೆ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2025, 5:17 IST
Last Updated 21 ಸೆಪ್ಟೆಂಬರ್ 2025, 5:17 IST
   

ಮಡಿಕೇರಿ: ಮಡಿಕೇರಿ ದಸರಾ ಸಮಿತಿ ಹಾಗೂ ಮಡಿಕೇರಿ ನಗರ ದಸರಾ ಅಲಂಕಾರ ಸಮಿತಿ ವತಿಯಿಂದ ರಂಗೋಲಿ ಸ್ಪರ್ಧೆ, ವಾಹನಗಳ ಅಲಂಕಾರ, ದೇವಾಲಯ ಮತ್ತು ಅಂಗಡಿ ಮಳಿಗೆಗಳ ಅಲಂಕಾರ ಸ್ಪರ್ಧೆ, ಸೆಲ್ಫೀ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ.

ಸೆ. 22ರಂದು ಸಂಜೆ 6 ಗಂಟೆಯಿಂದ ಕರಗ ಪ್ರದಕ್ಷಿಣೆಯ ರಸ್ತೆಗಳಲ್ಲಿ ಬನ್ನಿಮಂಟಪದಿಂದ ಶ್ರೀ ಪೇಟೆ ರಾಮಮಂದಿರದವರೆಗೆ ಮನೆಗಳ ಎದುರು ಚುಕ್ಕಿ ರಂಗೋಲಿ, ಎಳೆ ರಂಗೋಲಿ, ಬಣ್ಣದ ರಂಗೋಲಿ ಮತ್ತು ಹೂವಿನ ರಂಗೋಲಿ ಸ್ಪರ್ಧೆ ಏರ್ಪಡಿಸಲಾಗಿದೆ. ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನ ನೀಡಲಾಗುತ್ತದೆ ಎಂದು ಅಲಂಕಾರ ಸಮಿತಿ ಅಧ್ಯಕ್ಷ ಎಂ.ಎ ಮುನೀರ್ ಮಾಚರ್ ಇಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಅ. 1ರ ಆಯುಧ ಪೂಜೆಯಂದು ವಾಹನಗಳಿಗೆ ಅಲಂಕಾರ ಸ್ಪರ್ಧೆ ಏರ್ಪಡಿಸಲಾಗಿದೆ. ಸೈಕಲ್, ಬೈಕ್, ಆಟೊ, ಟೆಂಪೊ, ಜೀಪು, ಕಾರು, ಲಾರಿ, ಜೆಸಿಬಿ, ಬಸ್, ಟ್ರಾಕ್ಟರ್‌ಗಳಿಗೆ ಅಲಂಕಾರ ಮಾಡಿ ಸಂಜೆ 7 ಗಂಟೆಗೆ ಗಾಂಧಿ ಮೈದಾನಕ್ಕೆ ತರಬೇಕು ಎಂದು ಹೇಳಿದರು.

ADVERTISEMENT

ಅ.2ರ ವಿಜಯದಶಮಿಯಂದು ಸಂಜೆ 7 ಗಂಟೆಯಿಂದ ಅಂಗಡಿ, ದೇವಾಲಯಗಳ ಅಲಂಕಾರ ಸ್ಪರ್ಧೆ ನಡೆಯಲಿದೆ. ಅಂಗಡಿ ಮಳಿಗೆಗಳ ವಿಭಾಗದಲ್ಲಿ ಬೃಹತ್ ಕಟ್ಟಡಗಳು, ಸರ್ಕಾರಿ, ಸಹಕಾರಿ ಕಟ್ಟಡಗಳು, ಅಲಂಕಾರ ಮಳಿಗೆಗಳು, ಸೆಲೂನ್, ಎಲೆಕ್ಟ್ರಾನಿಕ್ ಮಳಿಗೆ, ಪೊಲೀಸ್ ಠಾಣೆ, ಬ್ಯಾಂಕುಗಳು, ಬೇಕರಿ, ಹೊಟೇಲ್, ಕ್ಯಾಂಟೀನ್‌ಗಳು, ಸ್ಟುಡಿಯೋ, ವರ್ಕ್ ಶಾಪ್, ಬೀಡಾ ಸ್ಟಾಲ್‌ಗಳು, ಔಷಧಿ ಅಂಗಡಿಗಳು, ಬಟ್ಟೆ ಅಂಗಡಿ, ಲಾಡ್ಜ್‌, ಪಾನಿಪೂರಿ ಅಂಗಡಿ, ಹೋಂಸ್ಟೇಗಳಿಗೆ ಅಲಂಕಾರ ಸ್ಪರ್ಧೆ ನಡೆಯಲಿದೆ. ಮಡಿಕೇರಿಯ ಎಲ್ಲಾ ದೇವಾಲಯಗಳ ಅಲಂಕಾರಕ್ಕೆ ಬಹುಮಾನ ನೀಡಲಾಗುತ್ತದೆ ಎಂದರು.

ಸಮಿತಿಯ ಗೌರವ ಸಲಹೆಗಾರ ಪಿ.ಜೆ.ಮಂಜುನಾಥ್ ಮಾತನಾಡಿ, ಸೆ.22ರಂದು ಕರಗೋತ್ಸವ ಆರಂಭಗೊಳ್ಳುವ ಸಂಜೆ ಮನೆ ಮತ್ತು ಅಂಗಡಿಗಳನ್ನು ಹಣತೆ, ಕಾಲುದೀಪ, ತೂಗುದೀಪಗಳಿಂದ ಅಲಂಕಾರ ಸ್ಪರ್ಧೆ ಇರಲಿದೆ. ವಿಜೇತರಿಗೆ ವಿಶೇಷ ಬಹುಮಾನವನ್ನು ನೀಡಲಾಗುತ್ತದೆ ಎಂದು ಹೇಳಿದರು.

ಈ ಬಾರಿ ವಿಶೇಷ ಆಕರ್ಷಣೆಯಾಗಿ ‘ಸೆಲ್ಫಿ ಸ್ಪರ್ಧೆ’ಯನ್ನು ಆಯೋಜಿಸಲಾಗಿದೆ. ಆಸಕ್ತರು ಸಾಂಪ್ರದಾಯಿಕ ಉಡುಪಿನಲ್ಲಿ ಕುಟುಂಬದ ಸದಸ್ಯರ ಸಹಿತ ಸೆಲ್ಫಿ ತೆಗೆಯಬೇಕು. ವಿಜೇತ ಕುಟುಂಬಕ್ಕೆ ಆಕರ್ಷಕ ಬಹುಮಾನವನ್ನು ನೀಡಲಾಗುತ್ತದೆ. ಸೆಲ್ಫಿ ಸ್ಪರ್ಧೆಗಾಗಿ ಎವಿ ಶಾಲೆಯ ಮುಂಭಾಗ, ಮಹದೇವಪೇಟೆಯ ಅರವಿಂದ್ ಜ್ಯುವೆಲ್ಲರಿ ಮತ್ತು ಸ್ಕೈಗೋಲ್ಡ್ ಎದುರು ಸೆಲ್ಫಿ ತೆಗೆಯಬೇಕು ಎಂದು ತಿಳಿಸಿದರು.

ಸಮಿತಿಯ ಪ್ರಧಾನ ಕಾರ್ಯದರ್ಶಿ ಕೋಚನ ಚೇತನ್, ಖಜಾಂಚಿ ರಫೀಕ್, ಸಂಘಟನಾ ಕಾರ್ಯದರ್ಶಿ ಹರ್ಷಿತ್ ಕುಮಾರ್, ಸಂಚಾಲಕ ಖಲೀಲ್ ಬಾಷ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.