ಮಡಿಕೇರಿ: ಪ್ರತಿ ವರ್ಷವೂ ಮಡಿಕೇರಿ ದಸರಾ ಉತ್ಸವದ ಬಹುಪಾಲು ಹಣ ವೇದಿಕೆ ಮತ್ತು ಅಲಂಕಾರಕ್ಕೆ ವ್ಯಯವಾಗುತ್ತಿದೆ. ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಅತ್ಯಂತ ಕಡಿಮೆ ಹಣ ನಿಗದಿಯಾಗುತ್ತಿದೆ. ಈ ವರ್ಷವೂ ಈ ವಿಷಯದಲ್ಲಿ ಯಾವುದೇ ಸುಧಾರಣೆ ಕಾಣದೇ ಹಾಗೆಯೇ ಮುಂದುವರಿಯುತ್ತಿದೆ.
ಪ್ರತಿ ವರ್ಷವೂ ಗಾಂಧಿ ಮೈದಾನದಲ್ಲಿ ಲಕ್ಷಾಂತರ ಹಣ ವ್ಯಯಿಸಿ ಬೃಹತ್ ವೇದಿಕೆ ನಿರ್ಮಿಸಲಾಗುತ್ತದೆ. ಕಣ್ಣು ಕುಕ್ಕುವಂತಹ ಅಲಂಕಾರ ಮಾಡಲಾಗುತ್ತದೆ. ಇಂತಹ ವೈಭವೋಪೇತ ವೇದಿಕೆ ಹಾಗೂ ಜಗಮಗಿಸುವ ಬೆಳಕಿನ ಮಧ್ಯೆ ತಮ್ಮ ಪ್ರತಿಭೆ ಪ‍್ರದರ್ಶಿಸುವ ಕಲಾವಿದರಿಗೆ ಅತ್ಯಲ್ಪ ಸಂಭಾವನೆ ನೀಡಲಾಗುತ್ತಿದೆ. ಹೀಗಾಗಿ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲೂ ಹೊಸತನ ಸಾಧ್ಯವಾಗುತ್ತಿಲ್ಲ.
ಈ ವರ್ಷ ಮಡಿಕೇರಿ ದಸರೆಗೆ ಕೊಟ್ಟಿರುವುದು ₹ 1.5 ಕೋಟಿ. ಅದರಲ್ಲಿ ₹ 58 ಲಕ್ಷ ವೇದಿಕೆ ಮತ್ತು ಅಲಂಕಾರಕ್ಕೆ ಖರ್ಚಾಗುತ್ತಿದೆ. ಮಂಟಪಗಳಿಗೆ ₹ 50 ಲಕ್ಷ ವ್ಯಯಿಸಲಾಗುತ್ತಿದೆ. ಆದರೆ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಕೇವಲ ₹ 12 ಲಕ್ಷ ಮಾತ್ರವೇ ನೀಡಲಾಗುತ್ತಿದೆ. ಕಳೆದ ವರ್ಷವೂ ಸಾಂಸ್ಕೃತಿಕ ಸಮಿತಿಗೆಂದು ₹ 12 ಲಕ್ಷವನ್ನೇ ನಿಗದಿ ಮಾಡಲಾಗಿತ್ತು. ಅದರಲ್ಲಿ ಊಟ ಮತ್ತಿತ್ತರ ಖರ್ಚು, ವೆಚ್ಚಗಳೂ ಸೇರಿದ್ದವು.
ವೇದಿಕೆ ನಿರ್ಮಾಣಕ್ಕೆಂದೇ ಹೆಚ್ಚಿನ ಹಣ ವ್ಯಯವಾಗುತ್ತಿರುವುದನ್ನು ಗಮನಿಸಿದ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ನಗರಸಭೆಯ ಆಡಳಿತಾಧಿಕಾರಿಯಾಗಿದ್ದಾಗ ಗಾಂಧಿ ಮೈದಾನದಲ್ಲಿ ಶಾಶ್ವತವಾದ ವೇದಿಕೆ ನಿರ್ಮಿಸುವ ಯೋಜನೆ ರೂಪಿಸಿದ್ದರು. ಈ ದಸರೆ ವೇಳೆಗೆ ಅದು ಸಿದ್ಧವಾಗಬೇಕೇಂದು ಲೋಕೋಪಯೋಗಿ ಇಲಾಖೆ ವತಿಯಿಂದ ಕಾಮಗಾರಿ ನಡೆಸಲೂ ನಿರ್ಧರಿಸಲಾಗಿತ್ತು. ಕೌನ್ಸಿಲ್ ಸಭೆಯೂ ಇದಕ್ಕೆ ಸರ್ವಾನುಮತದ ಒಪ್ಪಿಗೆ ನೀಡಿತ್ತು. ಆದರೆ, ಆ ಯೋಜನೆಯೂ ಇದ್ದಲ್ಲೆ ಇದ್ದು, ಕಾರ್ಯರೂಪಕ್ಕೆ ಬಂದಿಲ್ಲ.
ಇಲ್ಲಿ ಶಿಥಿಲವಾಸ್ಥೆಗೆ ಸರಿದಿರುವ ಕಾವೇರಿ ಕಲಾಕ್ಷೇತ್ರವನ್ನು ಪುನರ್ ನಿರ್ಮಾಣ ಮಾಡುವ ಕುರಿತು ಬಹಳ ವರ್ಷಗಳಿಂದ ಚರ್ಚೆಯಾಗುತ್ತಿದೆ. ಆದರೆ, ಅದಿನ್ನೂ ಕಾರ್ಯರೂಪಕ್ಕೆ ಬಂದಿಲ್ಲ. ಒಂದು ವೇಳೆ ಇಲ್ಲಿ ಸುಸಜ್ಜಿತವಾದ ಕಟ್ಟಡ ನಿರ್ಮಾಣವಾದರೆ ದಸರೆ ಸಾಂಸ್ಕೃತಿಕ ಕಾರ್ಯಕ್ರಮಗಳಿಗೂ ಇದನ್ನೇ ಬಳಕೆ ಮಾಡಿಕೊಳ್ಳಬಹುದಾಗಿದೆ.
ಈಡೇರದ ಜಿಲ್ಲಾಧಿಕಾರಿ ಕನಸು
ಈ ಬಾರಿ ಮಡಿಕೇರಿ ದಸರೆಯ ಸಾಂಸ್ಕೃತಿಕ ಕಾರ್ಯಕ್ರಮಗಳಿಗಾಗಿ ಪ್ರತ್ಯೇಕ ಶಾಶ್ವತ ವೇದಿಕೆ ನಿರ್ಮಿಸಬೇಕೆನ್ನುವ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರ ಕನಸು ಇನ್ನೂ ಈಡೇರಿಲ್ಲ. ಅವರು ನಗರಸಭೆಯ ಆಡಳಿತಾಧಿಕಾರಿಯಾಗಿದ್ದ ವೇಳೆ ₹ 2.10 ಕೋಟಿ ವೆಚ್ಚದ ಶಾಶ್ವತ ವೇದಿಕೆ ನಿರ್ಮಿಸುವ ಪ್ರಸ್ತಾವ ಮಂಡಿಸಿ ಕೌನ್ಸಿಲ್ ಸಭೆಯ ಒಪ್ಪಿಗೆಯನ್ನೂ ಪಡೆದಿದ್ದರು. ಈ ವರ್ಷವೇ ನಿರ್ಮಾಣವಾಗಬೇಕೆನ್ನುವ ದೃಷ್ಟಿಯಿಂದ ಲೋಕೋಪಯೋಗಿ ಇಲಾಖೆಗೆ ಕಾಮಗಾರಿ ವಹಿಸಲು ನಿರ್ಧರಿಸಿದ್ದರು. ಆದರೆ ನಂತರ ನಗರಸಭೆಗೆ ಅಧ್ಯಕ್ಷರ ಆಯ್ಕೆಯಾಗಿ ಹೊಸದೊಂದು ಆಡಳಿತ ಮಂಡಳಿ ಅಸ್ತಿತ್ವಕ್ಕೆ ಬಂದಿತು. ಇವರ ಯೋಜನೆ ಕಡೆಗೆ ಯಾರೊಬ್ಬರೂ ಗಮನ ಹರಿಸಲಿಲ್ಲ. ಈ ಕುರಿತು ‘ಪ್ರಜಾವಾಣಿ’ ನಗರಸಭೆ ಪೌರಾಯುಕ್ತ ರಮೇಶ್ ಅವರನ್ನು ಸಂಪರ್ಕಿಸಿದಾಗ ಅವರು ‘₹ 2.10 ಕೋಟಿ ವೆಚ್ಚದ ಕಾಮಗಾರಿಗೆ ವಿಸ್ತೃತ ಯೋಜನಾ ವರದಿ ಸೇರಿದಂತೆ ಎಲ್ಲ ಪೂರ್ವಸಿದ್ಧತೆಗಳೂ ನಡೆದಿದ್ದವು. ಆದರೆ ಲೋಕೋಪಯೋಗಿ ಇಲಾಖೆಯವರು ₹ 2.50 ಲಕ್ಷವಾಗುತ್ತದೆ ಎಂದರು. ಇನ್ನುಳಿದ ₹ 40 ಲಕ್ಷಕ್ಕಾಗಿ ಕೌನ್ಸಿಲ್ ಸಭೆಯ ಅನುಮತಿ ಪಡೆಯಬೇಕಿದೆ’ ಎಂದು ಹೇಳಿದರು
ಇನ್ನೂ ನಿರ್ಮಾಣವಾಗದ ಕಾವೇರಿ ಕಲಾಕ್ಷೇತ್ರ
ಮಡಿಕೇರಿಯ ಹೃದಯ ಭಾಗದಲ್ಲಿರುವ ಕಾವೇರಿ ಕಲಾಕ್ಷೇತ್ರ ಶಿಥಿಲಾವಸ್ಥೆ ತಲುಪಿದ್ದು ಅದನ್ನು ಮರು ನಿರ್ಮಾಣ ಮಾಡಬೇಕು ಎನ್ನುವ ಯೋಜನೆ ಇನ್ನೂ ಸಾಕಾರಗೊಂಡಿಲ್ಲ. ಮತ್ತದೇ ಹಳೆಯ ಕಟ್ಟಡಕ್ಕೆ ದೀಪಾಲಂಕಾರ ಮಾಡುವ ಪರಿಪಾಠ ಮುಂದುವರಿದಿದೆ. ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ನಗರಸಭೆಯ ಪೌರಾಯುಕ್ತ ರಮೇಶ್ ‘ಕಾವೇರಿ ಕಲಾಕ್ಷೇತ್ರ ನಿರ್ಮಾಣಕ್ಕಾಗಿ ₹ 9.50 ಕೋಟಿ ವೆಚ್ಚದ ಟೆಂಡರ್ ಆಗಿದೆ. ಮಳೆ ನಿಂತ ಕೂಡಲೇ ಕಾಮಗಾರಿ ಆರಂಭವಾಗಲಿದೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.