ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಈಚೆಗೆ ಜೇನ್ನೊಣಗಳ ದಾಳಿಗೆ ಸಿಲುಕಿ ವಿರಾಜಪೇಟೆ ತಾಲ್ಲೂಕಿನ ಕಡಂಗ ಅರಪಟ್ಟು ಸಮೀಪದ ಪೊದ್ದುಮಾಣಿ ಎಂಬಲ್ಲಿ ಕಾರ್ಮಿಕರೊಬ್ಬರು ಮೃತಪಟ್ಟಿದ್ದರು. ಈಚೆಗೆ ವಿರಾಜಪೇಟೆ ಸಮೀಪದ ಅಮ್ಮತ್ತಿ ಒಂಟಿಯಂಗಡಿಯ ಬೈರಂಬಾಡದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ಮೇಲೆ ಜೇನ್ನೊಣಗಳು ಎರಗಿ ಗಾಯಗೊಳಿಸಿದ್ದವು. ಸುಮಾರು 19 ವಿದ್ಯಾರ್ಥಿಗಳು ಹಾಗೂ ಇಬ್ಬರು ಶಿಕ್ಷಕರು ಗಾಯಗೊಂಡಿದ್ದರು. ಪಾಲಿಬೆಟ್ಟದ ಶಾಲೆಯ 1 ಮತ್ತು 2ನೇ ತರಗತಿಗಳ ವಿದ್ಯಾರ್ಥಿಗಳಿಗೂ ಜೇನ್ನೊಣಗಳು ಚುಚ್ಚಿದ್ದವು.
ಸಾಮಾನ್ಯವಾಗಿ ಬೇಸಿಗೆಯ ಬಿಸಿಲನ್ನು ತಾಳಲಾರದೇ ಜೇನ್ನೊಣಗಳು ಗೂಡಿನಿಂದ ಹೊರಬಂದು ಗಾಯಗೊಳಿಸುತ್ತವೆ ಎಂಬ ನಂಬಿಕೆ ಸಾರ್ವಜನಿಕರಲ್ಲಿದೆ. ಆದರೆ, ಬೇಸಿಗೆಯ ಬಿಸಿಲಿಗೆ ಜೇನ್ನೊಣಗಳು ದಾಳಿ ನಡೆಸುತ್ತವೆ ಎಂಬುದರ ಬಗ್ಗೆ ಯಾವುದೇ ವೈಜ್ಞಾನಿಕ ಸಾಕ್ಷ್ಯಾಧಾರಗಳಿಲ್ಲ ಎಂದು ಕೀಟವಿಜ್ಞಾನಿಗಳು ಹೇಳುತ್ತಾರೆ.
ಆದರೆ, ಬೇಸಿಗೆಯಲ್ಲೇ ಜೇನಿನ ಹೊಸ ಹೊಸ ಕುಟುಂಬಗಳು ಸೃಷ್ಟಿಯಾಗುತ್ತವೆ. ಅದಕ್ಕಾಗಿ ಅವು ಹಾರಾಡುತ್ತವೆ. ಇದಕ್ಕೂ ಮಿಗಿಲಾದ ವಿಚಾರ ಎಂದರೆ, ಬೇಸಿಗೆಯಲ್ಲಿ ಆಹಾರ ಸಂಗ್ರಹಿಸುವ ‘ವಯಸ್ಸಾದ ಕೆಲಸಗಾರ’ ಜೇನು ಹುಳಗಳು ಬಿಸಿಲಿರುವುದರಿಂದ ಆಹಾರ ಸಂಗ್ರಹಿಸಲು ಹೋಗದೇ ಗೂಡಲ್ಲೇ ಇರುತ್ತವೆ. ಇಂತಹ ಹುಳಗಳಿಗೆ ಸ್ವಲ್ಪ ತೊಂದರೆಯಾದರೂ ಸಿಟ್ಟಿಗೇಳುತ್ತವೆ. ಹಾಗಾಗಿ, ಇವು ದಾಳಿ ನಡೆಸಲು ತೊಡಗುತ್ತವೆ ಎಂದು ಪೊನ್ನಂಪೇಟೆಯ ಅರಣ್ಯ ಮಹಾವಿದ್ಯಾಲಯದ ಅರಣ್ಯಜೀವ ಶಾಸ್ತ್ರ ಮತ್ತು ವೃಕ್ಷಾಭಿವೃದ್ಧಿ ವಿಭಾಗದ ಮುಖ್ಯಸ್ಥ ಹಾಗೂ ಕೀಟಶಾಸ್ತ್ರದ ಪ್ರಾಧ್ಯಾಪಕ ಡಾ.ಆರ್.ಎನ್.ಕೆಂಚಾರೆಡ್ಡಿ ಹೇಳುತ್ತಾರೆ.
ಯಾವ ಕಾರಣಕ್ಕಾದರೂ ಸರಿ ತೊಂದರೆಯಾದಾಗ, ಬೇಸಿಗೆಯಲ್ಲಿ ಜೇನ್ನೊಣಗಳು ಕೋಪೊದ್ರಿಕ್ತಗೊಂಡು ದಾಳಿ ನಡೆಸುವ ಸಾಧ್ಯತೆ ಅಧಿಕ ಇದೆ ಎಂಬುದನ್ನು ಇತ್ತೀಚಿನ ಘಟನೆಗಳು ಸಾಬೀತುಪಡಿಸುತ್ತವೆ. ತೋಟದಲ್ಲಿ ಕಾರ್ಮಿಕರೊಬ್ಬರು ಮೃತಪಟ್ಟರೆ, ಶಾಲಾ ಮಕ್ಕಳು ಗಾಯಗೊಂಡಿದ್ದಾರೆ. ಇಂತಹ ಘಟನೆಗಳು ನಡೆಯದಂತೆ ಮಾಡಲು ಇರುವ ಏಕೈಕ ದಾರಿ ಎಂದರೆ ಮುಂಜಾಗ್ರತೆ.
ಮುಖ್ಯವಾಗಿ, ತೋಟಗಳಲ್ಲಿ ಕೆಲಸ ಮಾಡುವವರು ಯಾವಾಗಲೂ ದಪ್ಪವಾದ ಶಾಲು ಇಲ್ಲವೇ ಕಂಬಳಿಯನ್ನು ತಮ್ಮ ಜೊತೆ ಇಟ್ಟುಕೊಂಡಿರುವುದು ಒಳಿತು. ತೋಟದಲ್ಲಿ ಯಾವುದೇ ಸಂದರ್ಭದಲ್ಲಿ ಜೇನ್ನೊಣಗಳು ದಾಳಿ ಮಾಡಿದರೂ ಕಂಬಳಿಯಿಂದ ರಕ್ಷಿಸಿಕೊಳ್ಳಬಹುದು.
ಕಾಡಂಚಿನ ಶಾಲೆಗಳಲ್ಲಿ ಹಾಗೂ ಜೇನು ದಾಳಿ ಸಾಂಭವ್ಯ ಪ್ರದೇಶದ ಶಾಲೆಗಳಲ್ಲಿ, ಮನೆಗಳಲ್ಲಿ ತಕ್ಷಣಕ್ಕೆ ಬೆಂಕಿ ಹಾಕುವ ಅಥವಾ ಹೊಗೆ ಹಾಕುವ ಪರಿಕರಗಳನ್ನು ಸನ್ನದ್ಧ ಸ್ಥಿತಿಯಲ್ಲಿರಿಸಿಕೊಂಡಿರುವುದು ಒಳ್ಳೆಯದು. ಎಲ್ಲಿಂದಲಾದರೂ ಜೇನ್ನೊಣಗಳು ದಾಳಿ ಇಟ್ಟರೆ ಕೂಡಲೇ ಬೆಂಕಿ ಹಾಕಿ ಹೊಗೆ ಹಾಕಿದರೆ ಸಾಂಭವ್ಯ ದಾಳಿಯಿಂದ ಪಾರಾಗಬಹುದು ಎಂದು ತಜ್ಞರು ಸಲಹೆ ನೀಡುತ್ತಾರೆ.
ಸದ್ಯ, ಕೊಡಗಿನಲ್ಲಿ ಹೆಜ್ಜೇನು, ಮೂಳಿ ಜೇನು, ತುಡುವೆ ಜೇನು, ಕೋಲು ಜೇನುಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ಆದರೆ, ಇತ್ತೀಚಿನ ದಿನಗಳಲ್ಲಿ ಜೇನುಗೂಡುಗಳ ಸಂಖ್ಯೆ ಇಳಿಕೆಯಾಗುತ್ತಿದೆ.
ಇದಕ್ಕೆ ಅತಿಯಾಗಿ ಬಳಕೆ ಮಾಡುವ ರಾಸಾಯನಿಕಗಳು ಬಹು ಮುಖ್ಯವಾದ ಕಾರಣವಾಗಿವೆ. ರಾಸಾಯನಿಕ ಗೊಬ್ಬರಗಳನ್ನು, ಕೀಟನಾಶಕಗಳನ್ನು ಸಿಂಪಡಿಸುವ ವೇಳೆ ಹೊರಹೊಮ್ಮುವ ಅತಿಯಾದ ವಾಸನೆಯಿಂದ ಅವು ವಾಸ ಮಾಡುವುದು ಕಷ್ಟಸಾಧ್ಯವಾಗುತ್ತದೆ.
Highlights - ಸುಮ್ಮನೇ ಜೇನು ಹುಳಗಳು ಚುಚ್ಚುವುದಿಲ್ಲ ಜೇನು ಹುಳಗಳ ತಂಟೆಗೆ ಹೋಗದಿರುವುದೇ ಉತ್ತಮ ಜೇನಿನೊಂದಿಗೆ ಬೇಕಿದೆ ಮನುಷ್ಯರ ಸಹಬಾಳ್ವೆ
Quote - ಜೇನು ಹುಳುಗಳು ಸುಮ್ಮನೇ ಸಿಟ್ಟಿಗೇಳುವುದಿಲ್ಲ ಕಾರಣವಿಲ್ಲದೇ ದಾಳಿ ಮಾಡುವುದಿಲ್ಲ. ತೊಂದರೆಯಾದಾಗ ಮಾತ್ರ ದಾಳಿ ಮಾಡುವ ಸಾಧ್ಯತೆ ಇರುತ್ತದೆ ಡಾ. ಆರ್.ಎನ್.ಕೆಂಚಾರೆಡ್ಡಿ ಕೀಟಶಾಸ್ತ್ರ ಪ್ರಾಧ್ಯಾಪಕ
Cut-off box - ಇದು ಜೇನು ಹುಳಗಳಿಗೆ ಸುಗ್ಗಿಯ ಕಾಲ! ಬೇಸಿಗೆ ಸಾಮಾನ್ಯವಾಗಿ ಜೇನು ಹುಳಗಳಿಗೆ ಸುಗ್ಗಿಯ ಕಾಲ ಎಂದು ಪೊನ್ನಂಪೇಟೆಯ ಅರಣ್ಯ ಮಹಾವಿದ್ಯಾಲಯದ ಅರಣ್ಯಜೀವ ಶಾಸ್ತ್ರ ವೃಕ್ಷಾಭಿವೃದ್ಧಿ ವಿಭಾಗದ ಮುಖ್ಯಸ್ಥ ಹಾಗೂ ಕೀಟಶಾಸ್ತ್ರದ ಪ್ರಾಧ್ಯಾಪಕ ಡಾ.ಆರ್.ಎನ್.ಕೆಂಚಾರೆಡ್ಡಿ ಹೇಳುತ್ತಾರೆ. ಬೇಸಿಗೆಯಲ್ಲಿ ಎಲ್ಲೆಂದರಲ್ಲಿ ಕಾಡು ಹೂಗಳು ಹೆಚ್ಚಾಗಿ ಅರಳಿರುತ್ತವೆ. ಕಾಫಿ ಹೂ ಸಹ ಇದೇ ಸಮಯದಲ್ಲಿ ಅರಳುತ್ತದೆ. ಕೆಲವೊಂದು ಪ್ರಭೇದದ ಮರಗಳ ತುಂಬೆಲ್ಲ ಹೂಗಳೇ ಅರಳಿರುತ್ತವೆ. ಇದರಿಂದ ಹೆಚ್ಚು ಮಕರಂದ ಹುಳಗಳಿಗೆ ಸಿಗುತ್ತದೆ. ಹಾಗಾಗಿ ಬೇಸಿಗೆ ಜೇನು ಹುಳಗಳ ಪಾಲಿಗೆ ಸುಗ್ಗಿಯ ಕಾಲ. ಜೇನುಗೂಡಿನಲ್ಲಿರುವ ರಾಣಿ ಜೇನು ಸಾಮಾನ್ಯವಾಗಿ 3ರಿಂದ 5 ವರ್ಷಗಳ ಕಾಲ ‘ಕೆಲಸಗಾರ ಜೇನು ಹುಳ’ಗಳು 2ರಿಂದ 6 ತಿಂಗಳ ಕಾಲ ಹಾಗೂ ಗಂಡು ನೊಣಗಳು 40ರಿಂದ 45 ದಿನಗಳ ಬದುಕುತ್ತವೆ ಎಂದು ಅವರು ವಿವರಿಸುತ್ತಾರೆ.
Cut-off box - ಜೇನು ಹುಳಗಳನ್ನು ಕೊಲ್ಲದೇ ಸ್ಥಳಾಂತರಿಸಿ ಒಂದು ವೇಳೆ ಶಾಲೆಗಳ ಬಳಿ ಜನನಿಬಿಡ ಪ್ರದೇಶಗಳಲ್ಲಿ ಜೇನುಗೂಡುಗಳಿದ್ದರೆ ಅವುಗಳಿಗೆ ಕೀಟನಾಶಕಗಳನ್ನು ಸಿಂಪಡಿಸಿ ಕೊಲ್ಲಬಾರದು. ಇತ್ತೀಚಿನ ದಿನಗಳಲ್ಲಿ ಕಡಿಮೆಯಾಗುತ್ತಿರುವ ಜೀವವೈವಿಧ್ಯತೆ ಇದರಿಂದ ಮತ್ತಷ್ಟು ಕಡಿಮೆಯಾಗಲಿದೆ. ಹಾಗೂ ಬೆಳೆಗಳ ಇಳುವರಿಯೂ ಕಡಿಮೆಯಾಗುತ್ತದೆ. ಹಾಗಾಗಿ ಜನರು ಜೇನಿನೊಂದಿಗೆ ಸಹಬಾಳ್ವೆ ಮಾಡಲೇಬೇಕಿದೆ. ಹಾಗೆಂದು ಶಾಲಾ ಮಕ್ಕಳಿರುವ ಕಡೆ ವಯಸ್ಸಾದವರು ಓಡಾಡುವ ಕಡೆ ಆಸ್ಪತ್ರೆ ಸೇರಿದಂತೆ ಇತರೆ ಸೂಕ್ಷ್ಮ ಸ್ಥಳಗಳಲ್ಲಿ ಜೇನುಗೂಡುಗಳಿದ್ದರೆ ಮುಂಜಾಗ್ರತಾ ಕ್ರಮವಾಗಿ ಅವುಗಳನ್ನು ಜೀವಂತವಾಗಿಯೇ ಬೇರೆಡೆಗೆ ಸ್ಥಳಾಂತರಿಸಬೇಕಿದೆ. ಈ ರೀತಿ ಮಾಡುವುದರಿಂದ ಜೇನುಹುಳಗಳ ಸಾಮೂಹಿಕ ಹನನವನ್ನು ತಪ್ಪಿಸಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.