ADVERTISEMENT

ಮಡಿಕೇರಿ: 30 ದಿನಗಳಲ್ಲಿ 104 ಮೊಬೈಲ್‌ ಫೋನ್‌ಗಳ ಪತ್ತೆ

ವಾರಸುದಾರರ ಕೈಸೇರಿದ ಜಂಗಮವಾಣಿ; ಭಾವುಕ ಕ್ಷಣಗಳಿಗೆ ಸಾಕ್ಷಿಯಾದ ಎಸ್.ಪಿ ಕಚೇರಿ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2026, 6:25 IST
Last Updated 11 ಫೆಬ್ರುವರಿ 2026, 6:25 IST
ಪತ್ತೆಯಾದ ಮೊಬೈಲ್‌ಗಳೊಂದಿಗೆ ಕಾರ್ಯಾಚರಣೆ ನಡೆಸಿದ ಪೊಲೀಸ್ ತಂಡ
ಪತ್ತೆಯಾದ ಮೊಬೈಲ್‌ಗಳೊಂದಿಗೆ ಕಾರ್ಯಾಚರಣೆ ನಡೆಸಿದ ಪೊಲೀಸ್ ತಂಡ   

ಮಡಿಕೇರಿ: ಇಲ್ಲಿನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಮಂಗಳವಾರ ನಡೆದ ಕಳೆದುಕೊಂಡಿದ್ದ ಮೊಬೈಲ್‌ ಫೋನ್‌ಗಳನ್ನು ಅವುಗಳ ವಾರಸುದಾರರಿಗೆ ಒಪ್ಪಿಸುವ ಕಾರ್ಯಕ್ರಮ ಹಲವು ಭಾವುಕ ಕ್ಷಣಗಳಿಗೆ ಸಾಕ್ಷಿಯಾಯಿತು.

ಕೆಲ ವರ್ಷಗಳ ಬಳಿಕ ಕೈ ಸೇರಿದ ಮೊಬೈಲ್ ಫೋನ್‌ ಕಂಡು ಕೆಲವರು ಪುಳಕಿತಗೊಂಡರು. ಮತ್ತೆ ಕೆಲವರು ‘ಇದು ನನ್ನ ಅಪ್ಪ ಕೊಡಿಸಿದ ಮೊಬೈಲ್‌ಫೋನ್‌’ ಎಂದು, ಮತ್ತೆ ಕೆಲವರು ‘ಇದು ಕಷ್ಟಪಟ್ಟು ದುಡಿದು ಕೂಡಿಟ್ಟ ಹಣದಲ್ಲಿ ತೆಗೆದುಕೊಂಡಿದ್ದ ಮೊಬೈಲ್’ ಎಂದು ಭಾವುಕರಾದರು. ಮತ್ತೆ ಕೆಲವರು ‘ನನ್ನ ಅಪ್ಪನ ಜೊತೆಗಿದ್ದ ಅಪರೂಪದ ಚಿತ್ರಗಳು ಮೊಬೈಲ್‌ನಲ್ಲಿತ್ತು. ಅದು ಈಗ ಸಿಗಬಹುದೇ’ ಎಂಬ ನಿರೀಕ್ಷೆಯಲ್ಲಿ ಮೊಬೈಲ್‌ ಫೋನ್‌ಅನ್ನು ಪಡೆದುಕೊಂಡರು.

‘ಕಳೆದು ಹೋಗಿರುವ ಮೊಬೈಲ್ ಫೋನ್‌ ಮತ್ತೆಂದೂ ಸಿಗುವುದೇ ಇಲ್ಲ’ ಎಂದುಕೊಂಡ ಒಟ್ಟು 104 ಮಂದಿ ಅಲ್ಲಿದ್ದರು. ಎಲ್ಲರಿಗೂ ಸರತಿಯ ಪ್ರಕಾರ ಟೋಕನ್ ಸಂಖ್ಯೆ ಕೂಗುತ್ತಾ ಅವರವರ ಮೊಬೈಲ್‌ಗಳನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಎನ್.ಬಿಂದುಮಣಿ ಹಸ್ತಾಂತರಿಸಿದರು. ಕೆಲವರು ‘ಕೈಸೇರುವುದೇ ಇಲ್ಲ ಎಂದುಕೊಂಡಿದ್ದೆ ದುಬಾರಿ ಬೆಲೆಯ ಫೋನ್‌ ಅನ್ನು ಹುಡುಕಿಕೊಟ್ಟಿದ್ದೀರಿ’ ಎಂದು ಕೈಮುಗಿದರು.

ADVERTISEMENT

‘ಆ್ಯಪಲ್‌’ನಂತಹ ದುಬಾರಿ ಬೆಲೆಯ ಮೊಬೈಲ್‌ ಫೋನ್‌ಗಳು ಸಹ ಅಲ್ಲಿದ್ದವು. ಮಾತ್ರವಲ್ಲ, ವಿವಿಧ ಕಂಪನಿಗಳ ಹೆಚ್ಚಿನ ಬೆಲೆಯ ಮೊಬೈಲ್‌ ಫೋನ್‌ಗಳೂ ಕಳೆದುಕೊಂಡವರ ಕೈ ಸೇರಿದವು. ಮೊಬೈಲ್ ಫೋನ್‌ ಪಡೆದು ಕಾಫಿ ಸೇವಿಸಿ, ಪೊಲೀಸರಿಗೆ ಥ್ಯಾಂಕ್ಸ್ ಹೇಳಿದ ಅಷ್ಟೂ ಮಂದಿ ಮನೆಯತ್ತ ಹೆಜ್ಜೆ ಹಾಕಿದರು.

ಈ ಮೊಬೈಲ್‌ಗಳನ್ನು ಕೆಲವರು ನಿರ್ಲಕ್ಷ್ಯದಿಂದ ಎಲ್ಲಿಯೋ ಮರೆತು ಹೋಗಿದ್ದರು. ತೆಗೆದುಕೊಂಡವರು ಅಗ್ಗದ ಬೆಲೆಗೆ ಮೊಬೈಲ್‌ ಫೋನ್‌ ಅಂಗಡಿಗಳಿಗೆ ಮಾರಾಟ ಮಾಡಿದ್ದರು. ಮತ್ತೊಂದಿಷ್ಟು ಫೋನ್‌ಗಳನ್ನು ಕಳ್ಳರು ಕಿತ್ತುಕೊಂಡು ಹೋಗಿದ್ದರು. ಅವುಗಳನ್ನು ಅವರು ಸಹ ಕಡಿಮೆ ಬೆಲೆಗೆ ಮೊಬೈಲ್ ಅಂಗಡಿಗಳಿಗೆ ಮಾರಾಟ ಮಾಡಿದ್ದರು. ಸಾಮಾನ್ಯ ಜನರು ಕಡಿಮೆ ಅಗ್ಗದ ಬೆಲೆಗೆ ದುಬಾರಿ ಬೆಲೆಯ ಮೊಬೈಲ್ ಸಿಗುತ್ತದೆ ಎಂಬ ಕಾರಣಕ್ಕೆ ಇಂತಹ ಮೊಬೈಲ್ ಫೋನ್‌ ಖರೀದಿಸಿ ಬಳಕೆ ಮಾಡುತ್ತಿದ್ದರು.

ಈಚೆಗಷ್ಟೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಜಿಲ್ಲೆಗೆ ಬಂದ ಆರ್.ಎನ್.ಬಿಂದುಮಣಿ ಹಾಗೂ ಸೈಬರ್‌, ಆರ್ಥಿಕ ಅಪರಾಧಗಳು ಮತ್ತು ಮಾದಕ ವಸ್ತುಗಳ ಠಾಣೆ (ಸಿಇಎನ್)ಯ ಡಿವೈಎಸ್‌ಪಿಯಾಗಿ ಬಂದ ಲಕ್ಷ್ಮೀಕಾಂತ ತಳವಾರ್ ಅವರು ಕಳೆದ 5 ವರ್ಷಗಳಿಂದ ದಾಖಲಾಗಿದ್ದ ಮೊಬೈಲ್ ಕಳೆದು ಹೋದ ಪ್ರಕರಣಗಳನ್ನು ಪರಿಶೀಲಿಸಿ, ಈ ಮೊಬೈಲ್‌ಗಳನ್ನೆಲ್ಲ ತಂತ್ರಜ್ಞಾನದ ನೆರವು ಪಡೆದು ಪತ್ತೆ ಹಚ್ಚುವ ಕಾರ್ಯ ಆರಂಭಿಸಿದರು. ಕಳೆದ ಒಂದು ತಿಂಗಳಿನ ಕಾರ್ಯಾಚರಣೆ ಇದೀಗ ಫಲ ನೀಡಿದೆ. ಇನ್ನಷ್ಟು ಮೊಬೈಲ್‌ಗಳನ್ನು ಪತ್ತೆ ಹಚ್ಚುವ ಕಾರ್ಯದಲ್ಲಿ ಪೊಲೀಸರು ತೊಡಗಿದ್ದಾರೆ. ಜೊತೆಗೆ, ಕಳವು ಆರೋಪಿಗಳಿಗಾಗಿಯೂ ಶೋಧ ಕಾರ್ಯ ನಡೆಸುತ್ತಿದ್ದಾರೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಎನ್.ಬಿಂದುಮಣಿ ಅವರು ಮಂಗಳವಾರ ಕಳೆದುಕೊಂಡಿದ್ದವರಿಗೆ ಮೊಬೈಲ್‌ ಅನ್ನು ಹಸ್ತಾಂತರ ಮಾಡಿದರು
ನನ್ನ ಮೊಬೈಲ್‌ನಲ್ಲಿ ನನ್ನ ಅಪ್ಪನೊಂದಿಗಿನ ಫೋಟೊಗಳಿದ್ದವು. ಮೊಬೈಲ್‌ ಅನ್ನು ಪಾರ್ಟ್‌ಟೈಂ ಕೆಲಸ ಮಾಡಿ ಖರೀದಿಸಿದ್ದೆ. ಇಂತಹ ಮೊಬೈಲ್‌ ಸಿಕ್ಕಿರುವುದು ಅತೀವ ಖುಷಿ ತರಿಸಿದೆ.
– ಸಾದಿಕಾ ಬಾನು, ಮೊಬೈಲ್ ಫೋನ್‌ ಕಳೆದುಕೊಂಡವರು
ದೂರು ಕೊಡಿ 2023ರಲ್ಲಿ ಮೊಬೈಲ್ ಕಳೆದುಕೊಂಡಿದ್ದೆ. ಮೊಬೈಲ್ ಕಳೆದುಕೊಂಡವರು ತಕ್ಷಣ ದೂರು ನೀಡಿದರೆ ಒಂದಲ್ಲ ಒಂದು ದಿನ ಮೊಬೈಲ್ ಅನ್ನು ಹುಡುಕಿ ಕೊಡುತ್ತಾರೆ ಎಂಬ ವಿಶ್ವಾಸ ಮೂಡಿದೆ
– ನಾಗರಾಜ್, ಮೊಬೈಲ್‌ ಫೋನ್‌ ಕಳೆದುಕೊಂಡವರು

₹ 11 ಲಕ್ಷ ಮೌಲ್ಯದ ಒಟ್ಟು 104 ಫೋನ್‌

ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಎನ್.ಬಿಂದುಮಣಿ ಮಾತನಾಡಿ ‘ಕಳೆದ  30 ದಿನಗಳಲ್ಲಿ ₹ 11 ಲಕ್ಷ ಮೌಲ್ಯದ ಒಟ್ಟು 104 ಮೊಬೈಲ್‌ಗಳನ್ನು ಸೈಬರ್‌ ಆರ್ಥಿಕ ಅಪರಾಧಗಳು ಮತ್ತು ಮಾದಕ ವಸ್ತುಗಳ ಠಾಣೆ (ಸಿಇಎನ್)ಯ ಸಿಬ್ಬಂದಿ ಇತರೆ ಠಾಣೆಯ ಸಿಬ್ಬಂದಿಯ ಸಹಭಾಗಿತ್ವದಲ್ಲಿ ಯಶಸ್ವಿಯಾಗಿ ಪತ್ತೆ ಹಚ್ಚಿದ್ದಾರೆ. 2021–22ರಿಂದ ಹಿಡಿದು ತೀರಾ ಇತ್ತೀಚಿನ ದಿನಗಳಲ್ಲಿ ಕಳೆದುಕೊಂಡಿರುವ ಮೊಬೈಲ್‌ಗಳು ಇದರಲ್ಲಿ ಸೇರಿವೆ.

ಅವುಗಳನ್ನೆಲ್ಲ ವಾರಸುದಾರರಿಗೆ ವಾಪಸ್ ನೀಡಲಾಗುತ್ತಿದೆ’ ಎಂದು ತಿಳಿಸಿದರು. ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದ ಸಿಬ್ಬಂದಿಗೆ ಅಭಿನಂದನೆ ಸಲ್ಲಿಸಿದರು.  ಎಲ್ಲೆಲ್ಲಿ ಕಾರ್ಯಾಚರಣೆ? ಈ 104 ಮೊಬೈಲ್‌ಗಳನ್ನು ಪೊಲೀಸರು ಕರ್ನಾಟಕದ ಕೊಡಗು ಹಾಸನ ಬಾಗಲಕೋಟೆ ಜಿಲ್ಲೆಗಳು ಹಾಗೂ ತಮಿಳುನಾಡಿನಿಂದ 3 ಕೇರಳದಿಂದ 2 ಮೊಬೈಲ್‌ಗಳನ್ನು ವಶಕ್ಕೆ ಪಡೆದಿದ್ದಾರೆ. ಈ ಮೊಬೈಲ್‌ಗಳನ್ನು ಜನರು ಕಡಿಮೆ ಬೆಲೆಗೆ ಸಿಗುತ್ತದೆ ಎಂಬ ಆಸೆಯಿಂದ ಖರೀದಿಸಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಮೊಬೈಲ್ ಪತ್ತೆಗೆ ‘ಸಿಇಐಆರ್‌’ ನೆರವು

‘ಸಿಇಐಆರ್’ (ಸೆಂಟ್ರಲ್ ಎಕ್ಯೂಪ್‌ಮೆಂಟ್ ಐಡೆಂಟಿಟಿ ರಿಜಿಸ್ಟರ್–ಕೇಂದ್ರ ಸಲಕರಣೆ ಗುರುತಿನ ನೋಂದಣಿ) ಎಂಬ ವೆಬ್‌ತಾಣ ಕಳೆದುಹೋಗಿರುವ ಮೊಬೈಲ್ ಪತ್ತೆಗೆ ದಾರಿದೀಪದಂತಿದೆ. ಯಾರಾದಾರೂ ಮೊಬೈಲ್ ಕಳೆದುಕೊಂಡಿದ್ದರೆ ಸಮೀಪದ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಬೇಕು ಎಂದೇನಿಲ್ಲ. ಈ ವೆಟ್‌ಸೈಟ್‌ನಲ್ಲಿ ಮೊಬೈಲ್‌ನ ವಿವರಗಳನ್ನು ಹಾಕಿ ದೂರು ದಾಖಲಿಸಿದರೆ ಸಾಕು. ಪೊಲೀಸರು ಈ ಮೊಬೈಲ್‌ಗಳನ್ನು ಪತ್ತೆ ಹಚ್ಚುತ್ತಾರೆ.

ಬಿಲ್‌ ಮತ್ತು ಬಾಕ್ಸ್ ಇಲ್ಲದೇ ಮೊಬೈಲ್ ಖರೀದಿ ಬೇಡ

ಯಾವುದೇ ಮೊಬೈಲ್‌ ಅನ್ನು ಯಾವುದೇ ಅಂಗಡಿಯಿಂದಲಾದರೂ ಸರಿ ಬಿಲ್‌ ಮತ್ತು ಮೊಬೈಲ್‌ನ ಬಾಕ್ಸ್‌ ಇಲ್ಲದೇ ಖರೀದಿಸಲೇ ಬಾರದು ಎಂದು ಪೊಲೀಸರು ಹೇಳುತ್ತಾರೆ. ತೀರಾ ಕಡಿಮೆ ಬೆಲೆಗೆ ಮಾರಾಟ ಮಾಡುವ ಮೊಬೈಲ್ ಅನ್ನೂ ಸರಿಯಾಗಿ ಪರಿಶೀಲಿಸದೇ ಖರೀದಿಸಲೇ ಬಾರದು. ಕಳವಾದ ಅಥವಾ ಕಳೆದುಕೊಂಡಿರುವ ಮೊಬೈಲ್‌ಗಳನ್ನು ಖರೀದಿಸಿ ಬಳಸಿದರೆ ಅದನ್ನು ತಂತ್ರಜ್ಞಾನದ ನೆರವಿನಿಂದ ಪತ್ತೆ ಹಚ್ಚಲಾಗುವುದು. ಹಾಗಾಗಿ ಮೊಬೈಲ್ ಖರೀದಿಸುವಾಗ ಎಚ್ಚರ ಅಗತ್ಯ ಎಂದು ಅವರು ಸಲಹೆ ನೀಡುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.