
ಕೊಡಗು ಜಿಲ್ಲೆಯ ನೂತನ ಎಸ್‌ಪಿ ಆರ್.ಎನ್.ಬಿಂದುಮಣಿ ಅವರು ಸೋಮವಾರ ಜನಸಂಪರ್ಕ ಸಭೆಯಲ್ಲಿ ಮಾತನಾಡಿದರು
ಮಡಿಕೇರಿ: ಕೊಡಗು ಜಿಲ್ಲೆಯ ನೂತನ ಪೊಲೀಸ್ ವರಿಷ್ಠಾಧಿಕಾರಿ ಆರ್.ಎನ್.ಬಿಂದುಮಣಿ ಅವರನ್ನು ಜಿಲ್ಲೆಯ ಹಳೆಯ ಸಮಸ್ಯೆಗಳೇ ಸ್ವಾಗತಿಸಿದವು.
ಇಲ್ಲಿನ ಮೈತ್ರಿ ಸಭಾಂಗಣದಲ್ಲಿ ಸೋಮವಾರ ನಡೆದ ಜನಸಂಪರ್ಕ ಸಭೆಯಲ್ಲಿ ಭಾಗವಹಿಸಿದ್ದ ಸಾರ್ವಜನಿಕರು ಬಗೆಹರಿಯದೇ ಉಳಿದ ಹಳೆಯ ಸಮಸ್ಯೆಗಳನ್ನು ಮತ್ತೆ ಪ್ರಸ್ತಾಪಿಸಿದರು. ಎಲ್ಲವನ್ನೂ ತದೇಕಚಿತ್ತದಿಂದ ಆಲಿಸಿದ ಎಸ್‌ಪಿ ಈಡೇರಿಸುವ ಭರವಸೆ ನೀಡಿದರು.
ಪ್ರತಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ನಡೆಸುವ ಜನಸಂಪರ್ಕ ಸಭೆಯಲ್ಲಿ ಪ್ರಸ್ತಾಪವಾಗುವ ಸಮಸ್ಯೆಗಳೇ ಈ ಬಾರಿಯೂ ಪ್ರಸ್ತಾಪವಾದವು. ಮುಖ್ಯವಾಗಿ, ಜಿಲ್ಲೆಯ ವಿವಿಧೆಡೆ ಕಾಡುತ್ತಿರುವ ಸಂಚಾರ ದಟ್ಟಣೆ, ವಾಹನ ನಿಲುಗಡೆ, ಅಸ್ಸಾಂ ಕಾರ್ಮಿಕರ ಹಾವಳಿ, ಹೆಚ್ಚುತ್ತಿರುವ ಗೋಮಾಂಸ ಮಾರಾಟ, ರಾತ್ರಿ ಗಸ್ತಿನ ಕೊರತೆ, ಮಾದಕ ವಸ್ತುಗಳ ಹಾವಳಿ ಹೀಗೆ ನಾನಾ ಸಮಸ್ಯೆಗಳು ಪ್ರತಿಧ್ವನಿಸಿದವು.
ಸೈಬರ್ ಠಾಣೆಯಲ್ಲಿ ಪ್ರಕರಣಗಳು ಬೇಗ ವಿಲೇವಾರಿಯಾಗುವುದಿಲ್ಲ, ತುರ್ತು ಸಹಾಯವಾಣಿಗಳಿಗೆ ಸಂಪರ್ಕ ಸಿಕ್ಕುವುದಿಲ್ಲ ಎಂಬಂತಹ ಸಮಸ್ಯೆಗಳನ್ನೂ ಸಾರ್ವಜನಿಕರು ಪ್ರಸ್ತಾಪಿಸಿ ಗಮನ ಸೆಳೆದರು.
ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ಆರ್.ಭರತ್ ಅವರು ಜನರಲ್ ತಿಮ್ಮಯ್ಯ ವೃತ್ತದಲ್ಲಿ ಪ್ರತಿಭಟನೆ ಅವಕಾಶ ನೀಡದಿರುವ ಪೊಲೀಸರ ಕ್ರಮವನ್ನು ಪ್ರಶ್ನಿಸಿದರು. ಇದು ಸಂವಿಧಾನ ನೀಡಿರುವ ಹಕ್ಕನ್ನು ಕಿತ್ತುಕೊಳ್ಳುವ ಕ್ರಿಯೆ ಎಂದು ಕಿಡಿಕಾರಿದರು.
ಕುಡಿಯರ ಮುತ್ತಪ್ಪ ಅವರು ‘ಸಂತೆಯ ದಿನ ಮಾನವ ಸರಪಳಿ ರಚಿಸುವುದಕ್ಕೆ ಅವಕಾಶ ಮಾಡಿಕೊಡಬಾರದು’ ಎಂದು ಮನವಿ ಮಾಡಿದರು.
ಕೂರ್ಗ್ ಹೋಟೆಲ್, ರೆಸಾರ್ಟ್ ಅಸೋಸಿಯೇಷನ್ ಅಧ್ಯಕ್ಷ ಕುಂಡ್ಯೋಳಂಡ ದಿನೇಶ್ ಕಾರ್ಯಪ‍್ಪ ಅವರು ವಾಹನ ನಿಲುಗಡೆ ಸಮಸ್ಯೆ, ಮಾದಕವಸ್ತು ಸೇವನೆಯಂತಹ ಸಮಸ್ಯೆಗಳನ್ನು ಪ್ರಸ್ತಾಪಿಸಿದರು.
ಹೋಂಸ್ಟೇ ಅಸೋಸಿಯೇಷನ್ ಅಧ್ಯಕ್ಷೆ ಮೋಂತಿ ಗಣೇಶ್ ಅವರು ಆನ್‌ಲೈನ್ ವಂಚನೆ, ಡಿಜಿಟಲ್ ಆರೆಸ್ಟ್‌ನಂತಹ ವಿಚಾರಗಳನ್ನು ಪ್ರಸ್ತಾಪಿಸಿದರು.
ಆಟೊ ಚಾಲಕರ ಸಂಘದ ಮೇದಪ್ಪ ಅವರು, ‘ಅಕ್ರಮ ಚಟುವಟಿಕೆಗಳ ಕುರಿತು ಠಾಣೆಗೆ ಮಾಹಿತಿ ನೀಡಿ, ವಾಪಸ್ ಬರುವಷ್ಟರಲ್ಲಿ ಆರೋಪಿಗಳಿಗೆ ಅದರ ಮಾಹಿತಿ ಸಿಕ್ಕಿರುತ್ತದೆ’ ಎಂದರು.
ಅಂಗಡಿಗಳಲ್ಲಿ ಸಿಗರೇಟ್ ಸೇರಿದಂತೆ ತಂಬಾಕು ಉತ್ಪನ್ನಗಳನ್ನು ಚಿಕ್ಕಮಕ್ಕಳಿಗೆ ಮಾರಾಟ ಮಾಡಲಾಗುತ್ತಿದೆ. ಎಲ್ಲ ಅಂಗಡಿಗೆ ಸಿಸಿಟಿವಿ ಅಳವಡಿಸುವುದನ್ನು ಕಡ್ಡಾಯಗೊಳಿಸಿ, ಪಾಲಿಬೆಟ್ಟದಲ್ಲಿ ರಾತ್ರಿ ಗಸ್ತು ಹೆಚ್ಚಿಸಿ, ಗೋಣಿಕೊಪ್ಪಲುವಿನಲ್ಲಿ ಸಂಚಾರ ದಟ್ಟಣೆ ನಿವಾರಿಸಿ, ಗೋಮಾಂಸ ಮಾರಾಟಕ್ಕೆ ಕಡಿವಾಣ ಹಾಕಿರಿ, ಕೇರಳದಿಂದ ಅತಿ ವೇಗದಲ್ಲಿ ಬರುವ ವಾಹನಗಳ ವೇಗಕ್ಕೆ ಅಂಕುಶ ಹಾಕಿ, ಖಾಲಿ ಜಾಗದಲ್ಲಿ ಆಟೊದಲ್ಲಿ ಮದ್ಯಸೇವನೆ ಮಾಡುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಿ ಹೀಗೆ ಹಲವು ಮಂದಿ ವಿಧವಿಧವಾದ ಸಮಸ್ಯೆಗಳನ್ನು ಹೇಳಿಕೊಂಡು, ಪರಿಹಾರಕ್ಕೆ ಮನವಿ ಮಾಡಿದರು.
ಉಳಿದಂತೆ, ಅನೇಕ ಮಂದಿ ವಿವಿಧ ಸಮಸ್ಯೆಗಳನ್ನು ಪ್ರಸ್ತಾಪಿಸಿದರೂ ಧ್ವನಿವರ್ಧಕದ ಸಮಸ್ಯೆಯಿಂದ ಕೇಳದಂತಾಯಿತು.
ಹೆಚ್ಚಿನ ಸಂಖ್ಯೆಯಲ್ಲಿ ಸಭೆಗೆ ಬಂದಿದ್ದ ಸಾರ್ವಜನಿಕರು
ಹಲವು ಸಮಸ್ಯೆಗಳನ್ನು ಪ್ರಸ್ತಾಪಿಸಿದ ಜನರು
ಬಗೆಹರಿಯದೇ ಉಳಿದ ಹಲವು ಸಮಸ್ಯೆಗಳು
ಗೋಮಾಂಸ ಮಾರಾಟ ಮಾಡುವ ಅಸ್ಸಾಂ ಕಾರ್ಮಿಕರು ಜಿಲ್ಲೆಯ ಸೌಹಾರ್ದಯುತ ಬದುಕಿಗೆ ಬೆದರಿಕೆ ಎನಿಸಿದ್ದಾರೆ. ರಾತ್ರಿ ಗಸ್ತು ಕಡಿಮೆಯಾಗಿದೆ. ಸೈಬರ್ ಠಾಣಾ ಸಿಬ್ಬಂದಿಗೆ ತರಬೇತಿ ನೀಡಿ.ಜಿ.ಚಿದ್ವಿಲಾಸ್,ಕೂರ್ಗ್ ಹೋಟೆಲ್ ರೆಸಾರ್ಟ್ ಅಸೋಸಿಯೇಷನ್‌ನ ಗೌರವ ಸಲಹೆಗಾರ
ಹೊರರಾಜ್ಯದ ಕಾರ್ಮಿಕರ ವೇಷದಲ್ಲಿ ಅಕ್ರಮ ಬಾಂಗ್ಲಾ ವಲಸಿಗರು ಇರುವ ಅನುಮಾನ ಇದೆ. ಎಲ್ಲ ತೋಟಗಳ ಮಾಲೀಕರು ತಮ್ಮಲ್ಲಿರುವ ಹೊರರಾಜ್ಯದ ಕಾರ್ಮಿಕರ ಮಾಹಿತಿಯನ್ನು ಠಾಣೆಗೆ ಕೊಡುವುದನ್ನು ಕಡ್ಡಾಯ ಮಾಡಿರವಿ ಕಾಳಪ್ಪ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ
ಎಸ್‌ಪಿ ಹೇಳಿದ್ದೇನು?
ಯಾವುದೇ ಸಮಸ್ಯೆ ಇದ್ದರೂ 112ಗೆ ಕರೆ ಮಾಡಿ 10 ನಿಮಿಷದಲ್ಲಿ ಸ್ಪಂದನೆ ಸಿಗುತ್ತದೆ
ಮಕ್ಕಳ ಮೇಲಿನ ದೌರ್ಜನ್ಯ ಕುರಿತು 1098 ಕರೆ ಮಾಡಿ ಮಾಹಿತಿ ನೀಡಿ
ಕೌಟುಂಬಿಕ ದೌರ್ಜನ್ಯಕ್ಕೆ, ಇನ್ನಿತರ ತೊಂದರೆಗೆ ಒಳಗಾದ ಮಹಿಳೆಯರು 181ಗೆ ಕರೆ ಮಾಡಿ
ಸೈಬರ್ ಅಪರಾಧಗಳಿಗೆ ಸಂಬಂಧಿಸಿದಂತೆ 1930ಕ್ಕೆ ಕರೆ ಮಾಡಿ
ನಿವೃತ್ತರಾದವರೇ ಡಿಜಿಟಲ್ ಆರೆಸ್ಟ್‌ನ ಗುರಿ. ಹಾಗಾಗಿ ಎಲ್ಲರೂ ಜಾಗರೂಕವಾಗಿರಿ, ಡಿಜಿಟಲ್ ಆರೆಸ್ಟ್ ಎಂಬುದು ಇಲ್ಲವೇ ಇಲ್ಲ
ಹಣ ದ್ವಿಗುಣಗೊಳಿಸುವ ಅಥವಾ ಅತಿ ಹೆಚ್ಚು ಲಾಭ ಬರುವಂತೆ ಮಾಡುವ ಸ್ಕೀಂಗಳ ಕುರಿತು ಜೋಪಾನವಾಗಿರಿ, ಕಷ್ಟಪಟ್ಟು ದುಡಿದು ಸಂಗ್ರಹಿಸಿದ ಹಣ ಕಳೆದುಕೊಳ್ಳದಿರಿ
ಪಾದಚಾರಿಗಳು ರಸ್ತೆಯ ಮೇಲೆ ನಡೆಯದೇ ಪಾದಚಾರಿ ಮಾರ್ಗದಲ್ಲೆ ಹೆಜ್ಜೆ ಹಾಕಿರಿ. ಬೀದಿ ದೀಪಗಳ ಕೊರತೆ ಇರುವುದರಿಂದ ವಾಹನ ಬೆಳಕು ಬೀಳುವವರೆಗೂ ರಸ್ತೆಯಲ್ಲಿ ನಡೆದು ಹೋಗುತ್ತಿರುವವರು ಕಾಣುವುದಿಲ್ಲ.
ಮನೆ, ಕಚೇರಿ, ಅಂಗಡಿಗಳ ಬಳಿ ಸಿ.ಸಿ ಟಿವಿ ಕ್ಯಾಮೆರಾ ಅಳವಡಿಸಿ
ಮನೆಗೆ ಬೀಗ ಹಾಕಿ ಬೇರೆ ಜಿಲ್ಲೆಗೆ ಹೋದರೆ ಠಾಣೆಗೆ ಮಾಹಿತಿ ನೀಡಿ
ತಾವೇ ಸ್ವತಃ ಬರೆದುಕೊಂಡ ಎಸ್‌ಪಿ!
ನೂತನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಎನ್.ಬಿಂದುಮಣಿ ಅವರು ಜನಸಂಪರ್ಕ ಸಭೆಯಲ್ಲಿ ಕೇಳಿ ಬಂದ ಸಮಸ್ಯೆಗಳನ್ನೆಲ್ಲ ತಾವೇ ಸ್ವತಃ ಪುಸ್ತಕದಲ್ಲಿ ಬರೆದುಕೊಂಡರು.
ಪ್ರತಿ ಸಮಸ್ಯೆಯನ್ನೂ ಆಲಿಸಿದ ಅವರು, ಪುಸ್ತಕದಲ್ಲಿ ಬರೆದುಕೊಂಡು ಅವುಗಳನ್ನೆಲ್ಲ ಪರಿಹರಿಸುವ ಭರವಸೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.