ADVERTISEMENT

ಮಡಿಕೇರಿ|ನಿಯಂತ್ರಣಕ್ಕೆ ಬಾರದ ಕಾಡಾನೆ ಉಪಟಳ; ಆನೆ ದಾಳಿಗೆ 2 ತಿಂಗಳಿನಲ್ಲಿ 3 ಸಾವು

ಕೆ.ಎಸ್.ಗಿರೀಶ್
Published 2 ಮಾರ್ಚ್ 2026, 4:52 IST
Last Updated 2 ಮಾರ್ಚ್ 2026, 4:52 IST
ಕಾಡಾನೆ ದಾಳಿಯನ್ನು ನಿಯಂತ್ರಿಸಬೇಕು ಎಂದು ಆಗ್ರಹಿಸಿದ ಬೆಟ್ಟತ್ತೂರು, ಮದೆನಾಡು ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ಜನರು ಮದೆ ಗ್ರಾಮದಲ್ಲಿ ಭಾನುವಾರ ಪ್ರತಿಭಟನೆ ನಡೆಸಿದರು
ಕಾಡಾನೆ ದಾಳಿಯನ್ನು ನಿಯಂತ್ರಿಸಬೇಕು ಎಂದು ಆಗ್ರಹಿಸಿದ ಬೆಟ್ಟತ್ತೂರು, ಮದೆನಾಡು ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ಜನರು ಮದೆ ಗ್ರಾಮದಲ್ಲಿ ಭಾನುವಾರ ಪ್ರತಿಭಟನೆ ನಡೆಸಿದರು   

ಮಡಿಕೇರಿ: ತಾಲ್ಲೂಕಿನ ಬೆಟ್ಟತ್ತೂರು ಗ್ರಾಮದಲ್ಲಿ ಪಿಯು ವಿದ್ಯಾರ್ಥಿನಿ ಪೂಜ್ಯಾ (17) ಕಾಡಾನೆ ದಾಳಿಗೆ ಸಿಲುಕಿ ಮೃತಪಟ್ಟಿದ್ದಾರೆ. ಈ ಮೂಲಕ ವರ್ಷದ ಮೊದಲ 2 ತಿಂಗಳಿನಲ್ಲಿ ಕಾಡಾನೆಗೆ ದಾಳಿಯಿಂದ ಮೃತಪಟ್ಟವರ ಸಂಖ್ಯೆ 3ಕ್ಕೆ ಏರಿದೆ. ಅನೇಕ ಮಂದಿ ಗಾಯಗೊಂಡಿದ್ದಾರೆ, ಹತ್ತಾರು ಎಕರೆ ಫಸಲು ನಾಶವಾಗಿದೆ.

ಜನವರಿ 1ರಂದು ಶನಿವಾರಸಂತೆ ಸಮೀಪದ ಗಣಗೂರು ಗ್ರಾಮ ಪಂಚಾಯಿತಿಯ ಸಂಗಯ್ಯನಪುರದಲ್ಲಿ ಕಾಡಾನೆ ದಾಳಿಗೆ ಸಿಲುಕಿ  ಪೊನ್ನಪ್ಪ (61) ಎಂಬುವವರು ಮೃತಪಟ್ಟಿದ್ದರು. ನಂತರ, ಜ. 29ರಂದು ವಿರಾಜಪೇಟೆ ತಾಲ್ಲೂಕಿನ ಸಿದ್ಧಾಪುರದ ಕಾಫಿ ತೋಟದ ಕಾವಲುಗಾರ ಅಬ್ದುಲ್ ಲತೀಫ್‌(72) ಎಂಬುವವರು ಮೃತಪಟ್ಟಿದ್ದರು. ಇದಾದ ನಂತರ 3ನೇ ಸಾವು ಸಂಭವಿಸಿದ್ದು, ಜಿಲ್ಲೆಯ ಕಾಡಂಚಿನ ಗ್ರಾಮಗಳಲ್ಲಿ ಆತಂಕ ಮಡುಗಟ್ಟಿದೆ.

ಬೆಟ್ಟತ್ತೂರು ಗ್ರಾಮದಲ್ಲಿ ಕಳೆದ 5 ವರ್ಷದ ಹಿಂದೆ ಕಾಡಾನೆಗಳ ಸುಳಿವೆ ಇದ್ದಿರಲಿಲ್ಲ. ಇತ್ತೀಚಿನ ವರ್ಷಗಳಲ್ಲಿ ಇವುಗಳ ಹಾವಳಿ ಮಿತಿ ಮೀರಿದೆ ಎಂದು ಸ್ಥಳೀಯರು ಹೇಳುತ್ತಾರೆ.

ADVERTISEMENT

ಕೇವಲ 15 ದಿನಗಳಿಗೂ ಮುಂಚೆ ಸಮೀಪದ ಮದೆನಾಡು ಗ್ರಾಮದಲ್ಲಿ ವ್ಯಕ್ತಿಯಬ್ಬರ ಮೇಲೆ ಕಾಡಾನೆ ದಾಳಿ ನಡೆದಿದ್ದು, ಅವರು ಗಾಯಗೊಂಡಿದ್ದರು. ಇದಾದ ನಂತರ ಇದೀಗ ಈ ವ್ಯಾಪ್ತಿಯಲ್ಲಿ ವಿದ್ಯಾರ್ಥಿನಿಯೊಬ್ಬರು ಮೃತಪಟ್ಟಿದ್ದಾರೆ. ಇದು ಗ್ರಾಮಸ್ಥರು ಆತಂಕಕ್ಕೆ ಕಾರಣವಾಗಿದೆ.

ಮೂರು ವರ್ಷದ ಹಿಂದೆ ಇದೇ ವ್ಯಾಪ್ತಿಯಲ್ಲಿ ಕಾಡಾನೆ ದಾಳಿಗೆ ಸಿಲುಕಿ ಒಬ್ಬರು ಮೃತಪಟ್ಟಿದ್ದರು. 15 ದಿನಗಳಿಗೂ ಮುಂಚೆ ವ್ಯಕ್ತಿಯೊಬ್ಬರ ಮೇಲೆ ದಾಳಿ ನಡೆದಿದೆ. ಅರಣ್ಯ ಇಲಾಖೆಯವರು ಪಟಾಕಿ ಹೊಡೆಯುವುದು ಬಿಟ್ಟರೆ ಬೇರೆನು ಮಾಡುವುದಿಲ್ಲ ಎಂದು ಸ್ಥಳೀಯರೊಬ್ಬರು ತಿಳಿಸಿದರು.

ಈಗ ಮದೆನಾಡು–ಬೆಟ್ಟತ್ತೂರು–ಚೇರಂಬಾಣೆ ರಸ್ತೆ ಅಪಾಯಕಾರಿ ರಸ್ತೆಯಾಗಿ ಪರಿಣಮಿಸಿದೆ. ಕಾಡಾನೆಗಳು ಯಾವ ದಿಕ್ಕಿನಿಂದ ಬರುತ್ತವೆ ಎಂಬುದನ್ನು ಹೇಳಲಾಗದ ಸ್ಥಿತಿ ನಿರ್ಮಾಣವಾಗಿದೆ.

ಮದೆನಾಡು ಬೆಟ್ಟತ್ತೂರು ಭಾಗದಲ್ಲಿ ಕಾಡಾನೆ ಹಾವಳಿಯನ್ನು ನಿಯಂತ್ರಿಸಲು ಶಾಶ್ವತವಾದ ಕ್ರಮಗಳನ್ನು ಅತಿ ಶೀಘ್ರ ಕೈಗೊಳ್ಳಬೇಕು ಪಟ್ಟಡ
ಶಿವಕುಮಾರ್ ಗ್ರಾಮಸ್ಥರು
ಕಾಡಾನೆ ದಾಳಿಗೆ ಶಾಶ್ವತ ಪರಿಹಾರ ಬೇಕು. ಒಂಟಿ ಆನೆಯನ್ನು 10 ದಿನಗಳ ಒಳಗಾಗಿ ಸೆರೆ ಹಿಡಿಯಬೇಕು
ಧನಂಜಯ ಅಗೋಳಿಕಜೆ ಸ್ಥಳೀಯ ಮುಖಂಡ

ಪ್ರತಿಭಾನ್ವಿತ ಬಾಲಕಿ

ಕಾಡಾನೆ ದಾಳಿಗೆ ಸಿಲುಕಿ ಮೃತಪಟ್ಟ ಬಾಲಕಿ ಪೂಜ್ಯ ಪ್ರತಿಭಾನ್ವಿತ ವಿದ್ಯಾರ್ಥಿನಿಯಾಗಿದ್ದರು. ಎಸ್‌ಎಸ್‌ಎಲ್‌ಸಿಯಲ್ಲಿ ಶೇ 92ರಷ್ಟು ಅಂಕ ಗಳಿಸಿದ್ದರು. ಮಡಿಕೇರಿಯ ಸಂತ ಮೈಕಲರ ಕಾಲೇಜಿಲ್ಲಿ ಪಿಸಿಎಂಬಿ ವಿಭಾಗದಲ್ಲಿ ಪ್ರಥಮ ಪಿಯು ಕಲಿಯುತ್ತಿದ್ದರು. ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಉಪ‍ನ್ಯಾಸಕಿ ವಿಲ್ಮಾ ‘ವಿದ್ಯಾರ್ಥಿನಿ ಅತ್ಯಂತ ಪ್ರತಿಭಾನ್ವಿತಳಾಗಿದ್ದಳು. ತುಂಬಾ ಬುದ್ಧಿವಂತೆ’ ಎಂದು ಹೇಳಿದರು. ಕಾಲೇಜಿನ ಪ್ರಾಂಶುಪಾಲರಾದ ಪಂಕಜಾ ಪ್ರತಿಕ್ರಿಯಿಸಿ ‘ವಿದ್ಯಾರ್ಥಿನಿಯ ಸಾವು ನಿಜಕ್ಕೂ ಬೇಸರ ತಂದಿದೆ’ ಎಂದು ತಿಳಿಸಿದರು. ಅತ್ತ ಗ್ರಾಮಸ್ಥರು ಪ್ರತಿಭಾನ್ವಿತ ವಿದ್ಯಾರ್ಥಿನಿಯಾಗಿರುವ ಪೂಜ್ಯ ಅವರ ಸಾವಿಗೆ ಕೇವಲ ಹಣ ಪರಿಹಾರ ಸಾಕಾಗದು. ಆಕೆಯ ಸೋದರನಿಗೆ ಸರ್ಕಾರಿ ಉದ್ಯೋಗ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ; 10 ದಿನ ಗಡುವು

ಕಾಡಾನೆ ದಾಳಿ ನಡೆಸಿ ವಿದ್ಯಾರ್ಥಿನಿ ಮೃತಪಟ್ಟ ವಿಷಯ ಭಾನುವಾರ ತಿಳಿಯುತ್ತಿದ್ದಂತೆ ಕೋಪಗೊಂಡ ಗ್ರಾಮಸ್ಥರು ಮದೆನಾಡು ಗ್ರಾಮದಲ್ಲಿ ಮಂಗಳೂರು– ಮಡಿಕೇರಿ ರಸ್ತೆ ತಡೆದು ಪ್ರತಿಭಟನೆ ನಡೆಸಿದರು. ಸರ್ಕಾರು ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದರು. ಕಾಡಾನೆ ಸೆರೆಗೆ 10 ದಿನಗಳ ಗಡುವು ನೀಡಿದರು. ಈ ವೇಳೆ ಪ್ರತಿಕ್ರಿಯಿಸಿದ ಗ್ರಾಮಸ್ಥರೊಬ್ಬರು ‘5 ವರ್ಷದ ಹಿಂದೆ ಕಾಡಾನೆಗಳ ಹಾವಳಿ ಇರಲೇ ಇಲ್ಲ. 5 ವರ್ಷದ ನಂತರ ಹೆಚ್ಚಾಯಿತು. ಬಾಳೆಗಾಗಿ ಆನೆಗಳು ಬರುತ್ತದೆ ಎಂದು ರೈತರು ಸ್ವತಃ ತಮ್ಮ ತೋಟಗಳಲ್ಲಿದ್ದ ಬಾಳೆಯನ್ನೇ ನಾಶ ಮಾಡಿದರು. ಈಗ ಒಂದು ತೋಟದಲ್ಲಿಯೂ ಬಾಳೆ ಇಲ್ಲ. ದಿನೇ ದಿನೇ ಕಾಡಾನೆಗಳ ಹಾವಳಿ ಹೆಚ್ಚುತ್ತಲೇ ಇದೆ’ ಎಂದು ಕಿಡಿಕಾರಿದರು. ಕೇವಲ ಪಟಾಕಿ ಹೊಡೆದರೆ ಪ್ರಯೋಜನವಿಲ್ಲ. ರೈಲ್ವೆ ಬ್ಯಾರಿಕೇಡ್‌ ಅಳವಡಿಕೆಯಂತಹ ಕ್ರಮಗಳನ್ನು ಕೈಗೊಳ್ಳಬೇಕು. ಎಲ್ಲದ್ದಕ್ಕೂ ಮುಂಚಿತವಾಗಿ ದಾಳಿ ನಡೆಸುತ್ತಿರುವ ಒಂಟಿ ಆನೆಯನ್ನು ಸೆರೆ ಹಿಡಿಯಲೇ ಬೇಕು ಎಂದು ಒತ್ತಾಯಿಸಿದರು. 10 ದಿನಗಳಲ್ಲಿ ಕಾಡಾನೆ ಸೆರೆ ಹಿಡಿಯದೇ ಇನ್ನಷ್ಟು ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಅರಣ್ಯ ಅಧಿಕಾರಿಗಳು ತರಾತುರಿಯಲ್ಲಿ ಸಹಿ ಇಲ್ಲದ ಚೆಕ್ ನೀಡಿದ್ದಾರೆ ಎಂದು ಆರೋಪಿಸಿದ ಅವರು ಇದೆಲ್ಲವೂ ಬೇಜಾವಾಬ್ದಾರಿ ಅಲ್ಲವೇ ಎಂದೂ ಪ್ರಶ್ನಿಸಿದರು. ಸ್ಥಳಕ್ಕೆ ಸಿಸಿಎಫ್ ಸೋನಲ್ ವೃಷ್ಣಿ ಬಂದು ಅಹವಾಲು ಆಲಿಸಿ ತ್ವರಿತ ಕ್ರಮದ ಭರವಸೆ ನೀಡಿದರು.

ಕಾಡಾನೆ ಗುರುತಿಸುವ ಕಾರ್ಯ ಆರಂಭ

ಈಗ ದಾಳಿ ನಡೆಸುತ್ತಿರುವ ಒಂಟಿ ಆನೆಯನ್ನು ಗುರುತಿಸುವ ಕಾರ್ಯದಲ್ಲಿ ಅರಣ್ಯ ಇಲಾಖೆ ತೊಡಗಿದೆ. ಕಾಡು ಕೇವಲ ಕೆಲವೇ ಮೀಟರ್‌ಗಳಷ್ಟು ದೂರದಲ್ಲಿರುವುದರಿಂದ ಕಾಡಾನೆ ದಾಳಿ ನಡೆಸಿದ ತಕ್ಷಣವೇ ಕಾಡೊಳಗೆ ಸೇರಿ ಬಿಡುತ್ತದೆ. ಇದು ಗುರುತಿಸಲು ಹಾಗೂ ಸೆರೆ ಹಿಡಿಯಲು ತೊಡಕಾಗಿ ಪರಿಣಮಿಸಿದೆ. ಆದರೂ ಡ್ರೋನ್‌ ಕ್ಯಾಮೆರಾ ಬಳಸಿ ಆನೆಯನ್ನು ಗುರುತಿಸಲು ನಿರ್ಧರಿಸಲಾಗಿದೆ ಎಂದು ಅರಣ್ಯ ಇಲಾಖೆಯ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.