ಮಡಿಕೇರಿ: ‘ಶಕ್ತಿ’ ಯೋಜನೆಯಿಂದ ಈಗಾಗಲೇ ನಷ್ಟದಲ್ಲಿರುವ ಖಾಸಗಿ ಬಸ್ ಮಾಲೀಕರಿಗೆ ಕೆಎಸ್‌ಆರ್‌ಟಿಸಿ ಅವರು ಕೋರಿರುವಂತೆ 64 ಮಾರ್ಗಗಳನ್ನು ಮಂಜೂರು ಮಾಡಿದಲ್ಲಿ ಸಂಪೂರ್ಣ ನಷ್ಟವಾಗುವುದು ಮಾತ್ರವಲ್ಲ ಜಿಲ್ಲೆಯಲ್ಲಿ ಅನಾರೋಗ್ಯಕರ ಪೈಪೋಟಿ ಏರ್ಪಡಲಿದೆ ಎಂದು ಖಾಸಗಿ ಬಸ್ ಮಾಲೀಕರು ಒಕ್ಕೊರಲಿನಿಂದ ತಮ್ಮ ಅಳಲು ತೋಡಿಕೊಂಡರು.
ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರ ನೇತೃತ್ವದಲ್ಲಿ ನಡೆದ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆಯಲ್ಲಿ ಹಲವು ಖಾಸಗಿ ಬಸ್ ಮಾಲೀಕರು ತಮ್ಮ ಕಷ್ಟಗಳನ್ನು ಎಳೆ ಎಳೆಯಾಗಿ ಬಿಡಿಸಿಟ್ಟರು.
ಖಾಸಗಿ ಬಸ್ ಮಾಲೀಕ ಪುಟ್ಟಸ್ವಾಮಿ ಮಾತನಾಡಿ, ‘‘ಶಕ್ತಿ’ ಯೋಜನೆಯಿಂದಾಗಿ ಖಾಸಗಿ ಬಸ್ ಮಾಲೀಕರಿಗೆ ತುಂಬಾ ತೊಂದರೆಯಾಗಿದ್ದು, ತೆರಿಗೆ ಪಾವತಿಸಲು ಸಹ ಕಷ್ಟವಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು. ಜೊತೆಗೆ, ಜಿಲ್ಲೆಯಲ್ಲಿ ಸರ್ಕಾರಿ ಹಾಗೂ ಖಾಸಗಿ ಬಸ್‌ಗಳು ಎಲ್ಲೆಲ್ಲಿ ಸಂಚಾರ ಮಾಡುತ್ತಿದೆ ಎಂಬ ಬಗ್ಗೆ ನಿಖರ ಮಾಹಿತಿ ಒದಗಿಸಬೇಕು ಎಂದು ಕೋರಿದರು.
ಖಾಸಗಿ ಬಸ್ ಮಾಲೀಕರ ಸಂಘದ ಅಧ್ಯಕ್ಷ ರಮೇಶ್ ಜೋಯಪ್ಪ ಮಾತನಾಡಿ, ‘ಖಾಸಗಿ ಹಾಗೂ ಸರ್ಕಾರಿ ಬಸ್‌ಗಳ ಸಂಚಾರ ಸಾರ್ವಜನಿಕರ ಬೇಡಿಕೆ ಮತ್ತಿತರ ಸಂಬಂಧ ಸರ್ವೆ ವರದಿ ಒದಗಿಸಬೇಕು’ ಎಂದು ಸಭೆಯಲ್ಲಿ ಮನವಿ ಮಾಡಿದರು.
ಸರ್ಕಾರಿ ಮತ್ತು ಖಾಸಗಿ ಬಸ್‌ಗಳ ಸಂಚಾರ ನಡುವಿನ ಸಮಯ ಪಾಲನೆ ಅತಿಮುಖ್ಯ. ಜೊತೆಗೆ, ಆರೋಗ್ಯಕರ ಪೈಪೋಟಿ ಇರಬೇಕು, ಆದರೆ ಈ ಕೆಲಸ ಆಗುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.
ಮಡಿಕೇರಿ ಕೆಎಸ್‌ಆರ್‌ಟಿಸಿ ಘಟಕ ವ್ಯವಸ್ಥಾಪಕರು ಸಭೆಯಲ್ಲಿ ಮಾತನಾಡಿ, ‘ಕುಶಾಲನಗರದಲ್ಲಿ ಹೊಸದಾಗಿ ಡಿಪೊ ಆರಂಭ ಆಗುವುದರಿಂದ ಶೀಘ್ರವಾಗಿ ರಹದಾರಿ ಮಂಜೂರು ಮಾಡಿದಲ್ಲಿ ಸೇವೆ ಪ್ರಾರಂಭಿಸಿ, ಸಾರ್ವಜನಿಕರಿಗೆ ಸೇವೆ ನೀಡಲಾಗುವುದು’ ಎಂದು ಹೇಳಿದರು.
ಇದೇ ವೇಳೆ ಹಲವು ಖಾಸಗಿ ಬಸ್‌ಗಳ ಮಾಲೀಕರು ‘ಕೊಡಗು ಜಿಲ್ಲೆಯಲ್ಲಿ 151 ಖಾಸಗಿ ಬಸ್ ಸಂಚಾರ ಇದ್ದಾಗಿಯೂ ಪುನಃ ಕೆಎಸ್‌ಆರ್‌ಟಿಸಿ ಅವರು ಕೋರಿರುವ 64 ಮಾರ್ಗಗಳನ್ನು ಮಂಜೂರು ಮಾಡಿದಲ್ಲಿ ಸಂಪೂರ್ಣ ನಷ್ಟವಾಗುವುದರೊಂದಿಗೆ ಅನಾರೋಗ್ಯಕರ ಪೈಪೋಟಿ ಏರ್ಪಡಲಿದೆ’ ಎಂದು ಅಭಿಪ್ರಾಯಪಟ್ಟರು.
ಈ ಎಲ್ಲಾ ವಿವರಗಳನ್ನು ಪರಿಶೀಲಿಸಿದ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಸರ್ಕಾರವು ನೀಡಿರುವ ಆದೇಶಗಳು, ನ್ಯಾಯಾಲಯದ ಆದೇಶಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು. ಈಗಾಗಲೇ ಸಾರಿಗೆ ಇಲಾಖೆ ವತಿಯಿಂದ ನೀಡಲಾದ ವರದಿ ಪರಿಶೀಲಿಸಲಾಗಿದೆ ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಪ್ರಾದೇಶಿಕ ಸಾರಿಗೆ ಅಧಿಕಾರಿಗಳಾದ ವಿ.ನಾಗರಾಜಾಚಾರ್, ಕೆಎಸ್‌ಆರ್‌ಟಿಸಿ ಘಟಕ ವ್ಯವಸ್ಥಾಪಕರಾದ ಮೆಹಬೂಬ್ ಆಲಿ, ಜನಾರ್ಧನ ಪ್ರಭು, ವಕೀಲರಾದ ನಾಗೇಶ್ ಸಾರಿಗೆ ಇಲಾಖೆಯ ಡಿ.ಕೆ.ರೀಟಾ ಭಾಗವಹಿಸಿದ್ದರು.
ಡಿಸಿ ನೇತೃತ್ವದಲ್ಲಿ ನಡೆದ ಪ್ರಾದೇಶಿಕ ಸಾರಿಗೆ ಪ್ರಾಧಿಕಾರ ಸಭೆ ‘ಶಕ್ತಿ’ ಯೋಜನೆಯಿಂದ ಅಪಾರ ನಷ್ಟ ಎಂದ ಮಾಲೀಕರು
ಎಲ್ಲರ ಹಿತಾಸಕ್ತಿ ಕಾಪಾಡುವೆ: ಡಿಸಿ ಭರವಸೆ
ಸಭೆಯಲ್ಲಿ ಎಲ್ಲರ ಅಹವಾಲು ಆಲಿಸಿ ಮಾತನಾಡಿದ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ‘ಕೊಡಗು ಜಿಲ್ಲೆಯಲ್ಲಿ ಬಸ್ ಸಂಚಾರಕ್ಕೆ ಸಂಬಂಧಿಸಿದಂತೆ ಎಲ್ಲರ ಹಿತಾಸಕ್ತಿ ಕಾಪಾಡುವುದು ಸಾರಿಗೆ ಪ್ರಾಧಿಕಾರದ ಉದ್ದೇಶವಾಗಿದೆ’ ಎಂದು ತಿಳಿಸಿದರು. ಸಾರ್ವಜನಿಕರ ಬೇಡಿಕೆಗೆ ತಕ್ಕಂತೆ ಬಸ್ ಸೇವೆ ಒದಗಿಸಲು ಎಲ್ಲರೂ ಮುಂದಾಗಿದ್ದಾರೆ. ಆ ನಿಟ್ಟಿನಲ್ಲಿ ಯಾರಿಗೂ ತೊಂದರೆ ಆಗದಂತೆ ಗಮನ ಹರಿಸಲಾಗುವುದು ಎಂದು ಅವರು ಭರವಸೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.