ADVERTISEMENT

ಸೋಮವಾರಪೇಟೆ: ತಾಲ್ಲೂಕಿನ ಹಲೆವೆಡೆ ಮಹಾಶಿವರಾತ್ರಿ ಆಚರಣೆ, ಪೂರ್ಣಕುಂಭ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2026, 4:20 IST
Last Updated 16 ಫೆಬ್ರುವರಿ 2026, 4:20 IST
ಸೋಮವಾರಪೇಟೆ ಸಮೀಪದ ಸಿದ್ಧಲಿಂಗಪುರದ ಅರಿಶಿನಕುಪ್ಪೆಯಲ್ಲಿ ಮಂಜುನಾಥಸ್ವಾಮಿ ಕ್ಷೇತ್ರದಲ್ಲಿ ನಡೆದ ಮಹಾಶಿವರಾತ್ರಿ ಉತ್ಸವದಲ್ಲಿ ಮಹಿಳೆಯರು ಪೂರ್ಣಕುಂಭ ಮೆರವಣಿಗೆ ನಡೆಸಿದರು
ಸೋಮವಾರಪೇಟೆ ಸಮೀಪದ ಸಿದ್ಧಲಿಂಗಪುರದ ಅರಿಶಿನಕುಪ್ಪೆಯಲ್ಲಿ ಮಂಜುನಾಥಸ್ವಾಮಿ ಕ್ಷೇತ್ರದಲ್ಲಿ ನಡೆದ ಮಹಾಶಿವರಾತ್ರಿ ಉತ್ಸವದಲ್ಲಿ ಮಹಿಳೆಯರು ಪೂರ್ಣಕುಂಭ ಮೆರವಣಿಗೆ ನಡೆಸಿದರು   

ಸೋಮವಾರಪೇಟೆ: ತಾಲ್ಲೂಕಿನ ಹಲೆವೆಡೆ ಭಾನುವಾರ ಶಿವನ ದೇವಾಲಯಗಳಲ್ಲಿ ಶ್ರದ್ಧಾಭಕ್ತಿಯಿಂದ ಮಹಾಶಿವರಾತ್ರಿ ಹಬ್ಬ ಆಚರಿಸಲಾಯಿತು.

ಸಮೀಪದ ಸಿದ್ಧಲಿಂಗಪುರದ ಅರಿಶಿನಕುಪ್ಪೆಯಲ್ಲಿ ಮಂಜುನಾಥಸ್ವಾಮಿ ಕ್ಷೇತ್ರದಲ್ಲಿ ಬೆಳಿಗ್ಗೆ 5 ಗಂಟೆಯಿಂದ ಕ್ಷೇತ್ರದ ಗುರುಗಳಾದ ರಾಜೇಶ್ ನಾಥ್ ಗುರೂಜಿ ಮಾರ್ಗದರ್ಶನದಲ್ಲಿ ಪ್ರಧಾನ ಅರ್ಚಕರಾದ ಜಗದೀಶ್ ಉಡುಪರ ಪೌರೋಹಿತ್ಯದಲ್ಲಿ ಗಣಪತಿ ಹೋಮದೊಂದಿಗೆ ಶಿವರಾತ್ರಿ ಉತ್ಸವಕ್ಕೆ ಚಾಲನೆ ನೀಡಲಾಯಿತು.

ಸಂಜೆ ಶ್ರೀಮಂಜುನಾಥಸ್ವಾಮಿಗೆ ಹಾಲಿನ ಅಭಿಷೇಕದೊಂದಿಗೆ ಪ್ರಥಮಯಾಮದ ಪೂಜೆ ನಡೆಯಿತು. ಪ್ರತಿ ಮೂರು ಗಂಟೆಗೆ ಅಭಿಷೇಕಾದಿಗಳು ನಡೆಯಿತು. 1108 ಎಳನೀರು ಅಭಿಷೇಕ, ಕಬ್ಬಿನ ಹಾಲಿನ ಅಭಿಷೇಕ, ಕಲಶಾಭಿಷೇಕ, ಪಂಚಾಮೃತ ಅಭಿಷೇಕ, ಜೇನುತುಪ್ಪದ ಅಭಿಷೇಕ, ಜಲಾಭಿಷೇಕಗಳು ನಡೆದವು. ಏಕದಶಾವರ ರುದ್ರಾಭಿಷೇಕ ಮತ್ತು ರುದ್ರಾಭಿಷೇಕ ಮಾಡಲಾಯಿತು.

ADVERTISEMENT

ರಾತ್ರಿ ಕುಶಾಲನಗರದ ಮಧುಸೂದನ್ ಮತ್ತು ತಂಡದವರಿಂದ ಭಜನಾ ಕಾರ್ಯಕ್ರಮ ನಡೆಯಿತು. ಶನಿವಾರಸಂತೆಯ ಪ್ರದೀಪ್ ದೇವಾಲಯಕ್ಕೆ ಎರಡು ಗೋವುಗಳನ್ನು ದಾನವಾಗಿ ನೀಡಿದರು.

ದೇವಾಲಯ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ನಾಪಂಡ ಮುತ್ತಪ್ಪ, ಗೌರವ ಅಧ್ಯಕ್ಷ ನಾಪಂಡ ಮುದ್ದಪ್ಪ, ಕಾರ್ಯದರ್ಶಿ ಪ್ರಕಾಶ್ ರಮೇಶ್, ನವಚಂಡಿಕಾ ಸಮಿತಿ ಅಧ್ಯಕ್ಷ ಹೊಸೊಕ್ಲು ಸತೀಶ್, ಕಾರ್ಯದರ್ಶಿ ಹರೀಶ್ ಇದ್ದರು.

ಅರ್ಚಕರುಗಳಾದ ಹರಿಭಟ್, ವಾದಿರಾಜ್ ಭಟ್, ರಮೇಶ್ ಭಟ್, ವೆಂಕಟೇಶ್ ಹೊಳ್ಳ, ಸೋಮನಾಥ ಹೊಳ್ಳ, ಜಯರಾಮ ಹೊಳ್ಳ, ಬಜೆಗುಂಡಿ ಮಣಿ ಪೂಜಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು.

ಇಂದಿನ ಕಾರ್ಯಕ್ರಮ: 16ರಂದು ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ದೇವಾಲಯದಲ್ಲಿ ಬೆಳಿಗ್ಗೆ ರುದ್ರಹೋಮ, 9.30ಕ್ಕೆ ಕಲಶಾಭಿಷೇಕ ನಂತರ 10 ಗಂಟೆಗೆ ಕ್ಷೇತ್ರದ ಪ್ರಧಾನಗುರುಗಳಾದ ಶ್ರೀರಾಜೇಶ್ ನಾಥ್ ಜೀ ಅವರ ನೇತೃತ್ವದಲ್ಲಿ ಭಕ್ತಾದಿಗಳಿಗೆ ತೀರ್ಥಸ್ನಾನ ನಡೆಯಲಿದೆ.

ನಂತರ ಮಂಜುನಾಥಸ್ವಾಮಿ ಮತ್ತು ಪರಿವಾರ ದೇವರುಗಳಿಗೆ ಮಹಾ ನೈವೇದ್ಯ ಮತ್ತು ಮಹಾಪೂಜೆಯ ನಂತರ ಭಕ್ತಾದಿಗಳಿಗೆ ಅನ್ನಪ್ರಸಾದ ವಿತರಿಸಲಾಗುವುದು.

ಮಹಾಲಿಂಗೇಶ್ವರ ದೇವಾಲಯ: ಮಸಗೋಡಿನ ಮಹಾಲಿಂಗೇಶ್ವರ ದೇವಾಲಯದಲ್ಲಿ ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ಭಾನುವಾರ ದೇವಾಲಯದಲ್ಲಿ ಸಂಜೆ ಪೂಜಾ ಕಾರ್ಯಕ್ರಮಗಳು ಪ್ರಾರಂಭಗೊಂಡವು. ದೇವರಿಗೆ ರುದ್ರಾಭಿಷೇಕ ಮತ್ತು ಪ್ರಸಾದ ವಿನಿಯೋಗ ನಡೆಯಿತು.

16ರಂದು ಬೆಳಿಗ್ಗೆ 6 ಗಂಟೆಯಿಂದ ಗಂಗಾಪೂಜೆ, ಬಸವಣ್ಣನ ಅಡ್ಡೆ, ವೀರಗಾಸೆ ಮೆರವಣಿಗೆ ನಡೆಸಲಾಗುವುದು. ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಲಿದೆ ಎಂದು ದೇವಾಲಯ ಸಮತಿ ಅಧ್ಯಕ್ಷ ಬಂಗೀರ ಮನೆ ಸತೀಶ್ ತಿಳಿಸಿದರು.

ಸೋಮೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ

ಪಟ್ಟಣದ ಸೋಮೇಶ್ವರ ದೇವಾಲಯದಲ್ಲಿ ಹಬ್ಬದ ಪ್ರಯುಕ್ತ ಭಾನುವಾರ ಬೆಳಿಗ್ಗೆ 7-15ರಿಂದ ಏಕವಾರು ರುದ್ರಾಭಿಷೇಕ ಕಳಶ ಪೂರಕ ಏಕಾದಶವಾರ ರುದ್ರ ಪಾರಾಯಣ ಮಹಾಮಂಗಳಾರತಿ ಮತ್ತು ಪ್ರಸಾದ ವಿನಿಯೋಗ ನಡೆಯಿತು. ಸಂಜೆ 6ಕ್ಕೆ ಗಣಪತಿ ಸೋಮೇಶ್ವರ ಹಾಗೂ ಪಾರ್ವತಿ ಸನ್ನಿಧಿಯಲ್ಲಿ ರಂಗಪೂಜೆ ನಡೆಯಿತು. ನಂತರ್ಕ ರುದ್ರಾಕ್ಷೇಶ್ವರ ಸನ್ನಿಧಿಯಲ್ಲಿ ಬೆಂಗಳೂರಿನ ರಾಮಕೃಷ್ಣ ಆಶ್ರಮದ ಚೇತನ್ ಮತ್ತು ತಂಡದವರಿಂದ ಭಜನೆ ಹಾಗೂ ಸಂಗೀತ ಕಾರ್ಯಕ್ರಮ ನಂತರ ದೇವಿಬಳಗ ಮತ್ತು ಮಾತಾ ಬಳಗದಿಂದ ಭಜನಾ ಕಾರ್ಯಕ್ರಮ ನಡೆಸಲಾಯಿತು. 16ರಂದು ಬೆಳಿಗ್ಗೆ 7.30ರಿಂದ ರುದ್ರಹೋಮ ಸಂಕಲ್ಪ ಕಳಶಾರಾಧನೆ ರುದ್ರಹೋಮ ಹಾಗೂ 12ಕ್ಕೆ ಪೂರ್ಣಾಹುತಿ ಮಹಾಮಂಗಳಾರತಿ ಮತ್ತು ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಲಿದೆ ಎಂದು ದೇವಾಲಯ ಸಮಿತಿ ಅಧ್ಯಕ್ಷ ನಂದಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.