ADVERTISEMENT

ಮಹಾಶಿವರಾತ್ರಿ: ಸೋಮೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2026, 4:19 IST
Last Updated 16 ಫೆಬ್ರುವರಿ 2026, 4:19 IST
ಕುಶಾಲನಗರ ಸೋಮೇಶ್ವರ ದೇವಾಲಯಕ್ಕೆ ಮಹಾಶಿವರಾತ್ರಿ ಅಂಗವಾಗಿ ಭಕ್ತರು ಸರದಿ ಸಾಲಿನಲ್ಲಿ ಸೋಮೇಶ್ವರ ದೇವರ ದರ್ಶನ ಪಡೆದರು
ಕುಶಾಲನಗರ ಸೋಮೇಶ್ವರ ದೇವಾಲಯಕ್ಕೆ ಮಹಾಶಿವರಾತ್ರಿ ಅಂಗವಾಗಿ ಭಕ್ತರು ಸರದಿ ಸಾಲಿನಲ್ಲಿ ಸೋಮೇಶ್ವರ ದೇವರ ದರ್ಶನ ಪಡೆದರು   

ಕುಶಾಲನಗರ: ಪಟ್ಟಣದಲ್ಲಿ ಮಹಾಶಿವರಾತ್ರಿ ಹಬ್ಬವನ್ನು ಶ್ರದ್ಧಾಭಕ್ತಿಯಿಂದ ಭಾನುವಾರ ಆಚರಿಸಲಾಯಿತು. ಜನರು ಬೆಳಿಗ್ಗೆಯಿಂದ ತಮ್ಮ ಮನೆಯಂಗಳಗಳ ಸಿಂಗರಿಸಿ ಹಬ್ಬಕ್ಕಾಗಿ ಸಿದ್ಧಗೊಳಿಸಿದ್ದ ದೃಶ್ಯ ಎಲ್ಲೆಡೆ ಕಂಡುಬಂತು.

ಇಲ್ಲಿನ ಸೋಮೇಶ್ವರ ದೇವಾಲಯದಲ್ಲಿ ಪೂಜಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ದೇವರಿಗೆ ಅಭಿಷೇಕ, ಹೋಮ ಸೇರಿದಂತೆ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಯಿತು. ಭಕ್ತರು ದೇವರಿಗೆ ಪೂಜೆ ಸಲ್ಲಿಸಿ ಪ್ರಸಾದ ಸ್ವೀಕರಿಸಿದರು‌.

ಶಿರಂಗಾಲದ ಕಾವೇರಿ ನದಿ ದಂಡೆ ಮೇಲಿರುವ ಉಮಾಮಹೇಶ್ವರ ದೇವಸ್ಥಾನ, ಸಿದ್ದಲಿಂಗಪುರ ಬಳಿಯ ಅರಿಸಿನಗುಪ್ಪೆ ಮಂಜುನಾಥೇಶ್ವರ ದೇವಸ್ಥಾನ, ಹೆಬ್ಬಾಲೆಯ ಕಾಳಿಕಾಂಬೆ ದೇವಾಲಯ ಹಾಗೂ ಕಣಿವೆಯ ರಾಮಲಿಂಗೇಶ್ವರ ಹಾಗೂ ನಂಜರಾಯಪಟ್ಟಣದ‌ ನಂಜುಂಡೇಶ್ವರ ದೇವಾಲಯದಲ್ಲೂ ವಿಶೇಷ ಪೂಜೆ ನಡೆಯಿತು.

ADVERTISEMENT

ಹುದುಗೂರು ವಿಶೇಷ ಪೂಜೆ: ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಹುದುಗೂರಿನಲ್ಲಿರುವ ಉಮಾಮಹೇಶ್ವರ ಕ್ಷೇತ್ರದ ಅವರಣದಲ್ಲಿ ಮಹಾ ಶಿವರಾತ್ರಿಯ ಪೂಜಾ ಕಾರ್ಯಕ್ರಮವು ಶ್ರದ್ಧಾಭಕ್ತಿಯಿಂದ ನಡೆಯಿತು.

ದೇವಾಲಯದ ಅವರಣದಲ್ಲಿ ಮಹಾಗಣಪತಿ ಹೋಮ, ಮಹಾ ಮೃತ್ಯುಂಜಯ ಹೋಮ, ರುದ್ರಹೋಮ, ರುದ್ರಾಭಿಷೇಕ ಸೇರಿದಂತೆ ವಿವಿಧ ಪೂಜಾ ಕಾರ್ಯಕ್ರಮಗಳ ನಡೆದವು.

ಸಂಜೆ 5 ಗಂಟೆಗೆ ಉಮಾಮಹೇಶ್ವರ ‍ಸ್ವಾಮಿಯ ವಿಗ್ರಹವನ್ನು ಅಲಂಕೃತ ಭವ್ಯ ಮಂಟಪದಲ್ಲಿ ಕುಳ್ಳಿರಿಸಿ, ಪ್ರದಕ್ಷಿಣೆ ಮಾಡಿದ ಬಳಿಕ ಸ್ವಸ್ಥಾನಕ್ಕೆ ತರಲಾಯಿತು.

ಪೂಜಾ ಕಾರ್ಯದಲ್ಲಿ ಸುತ್ತಮುತ್ತಲಿನ ಗ್ರಾಮಸ್ಥರು, ಭಕ್ತಾದಿಗಳು ಭಾಗವಹಿಸಿದ್ದರು. ದೇವಾಲಯ ಸಮಿತಿಯ ಅಧ್ಯಕ್ಷ ಟಿ.ಎಂ.ಚಾಮಿ, ಉಪಾಧ್ಯಕ್ಷ ಎನ್‌.ಎಸ್.ಮುತ್ತಪ್ಪ‌, ಕಾರ್ಯದರ್ಶಿ ಬಿ.ಎಲ್ ಸುರೇಶ್ ಇದ್ದರು.

ಕುಶಾಲನಗರ ಸಮೀಪದ ಕೂಡ್ಲೂರು ಮಲ್ಲಿಕಾರ್ಜುನ ಸ್ವಾಮಿಗೆ ವಿವಿಧ ಪುಷ್ಪಗಳಿಂದ ವಿಶೇಷ ಅಲಂಕಾರ ಮಾಡಲಾಗಿತ್ತು

ದೇವಾಲಯ ಸಿಂಗಾರ, ಪುಷ್ಪಾಲಂಕಾರ

ಕೊಡ್ಲಿಪೇಟೆ ಬಳಿಯ ಕ್ಯಾತೆಯಲ್ಲಿರುವ ಪ್ರಸಿದ್ದ ಮಲ್ಲಿಕಾರ್ಜುನ ಸ್ವಾಮಿ ದೇವಾಲಯದಲ್ಲಿ ಮಹಾಶಿವರಾತ್ರಿ ಹಬ್ಬದ ಅಂಗವಾಗಿ ವಿಶೇಷ ಪೂಜೆ ಸಲ್ಲಿಸಲಾಯಿತು. ಹಬ್ಬದ ಅಂಗವಾಗಿ ದೇವಾಲಯವನ್ನು ವಿವಿಧ ಪುಷ್ಪ ಹಾಗೂ ಬಣ್ಣ ಬಣ ಬಣ್ಣದ ವಿದ್ಯುತ್ ದೀಪಗಳಿಂದ‌ ಅಲಂಕರಿಸಲಾಗಿತ್ತು. ಮಲ್ಲಿಕಾರ್ಜುನ ಸ್ವಾಮಿ ವಿಗ್ರಹವನ್ನು ವಿವಿಧ ಪುಷ್ಪಗಳಿಂದ ಶೃಂಗಾರಿಸಲಾಗಿತ್ತು. ನೆರೆದಿದ್ದ ಭಕ್ತರಿಗೆ ದೇವಾಲಯ ಸಮಿತಿಯಿಂದ ಅನ್ನಸಂತರ್ಪಣೆ ನೆರವೇರಿಸಿದರು. ಕೂಡ್ಲೂರು: ಗ್ರಾಮದ ಕಾವೇರಿ ನದಿ ದಂಡೆಯಲ್ಲಿ ಪೂರ್ವಾಭಿಮುಖವಾಗಿ ಇರುವ (ಹೊಳೆ ಮಲ್ಲಪ್ಪ) ಮಲ್ಲಿಕಾರ್ಜುನ ಸ್ವಾಮಿ ದೇವಾಲಯದಲ್ಲಿ ಶಿವರಾತ್ರಿ ಅಂಗವಾಗಿ ವಿಶೇಷ ಪೂಜಾ ಕಾರ್ಯಕ್ರಮಗಳು ಜರುಗಿದವು. ಭಾನುವಾರ ಬೆಳಿಗ್ಗೆಯಿಂದ ದೇವಾಲಯದಲ್ಲಿ ಅಭಿಷೇಕ ಅರ್ಚನೆ ಪೂಜಾದಿಗಳು ನಡೆಯಿತು. ಮಧ್ಯಾಹ್ನ ಮಹಾಮಂಗಳಾರತಿ ಬಳಿಕ ಭಕ್ತಾದಿಗಳಿಗೆ ಪ್ರಸಾದ ಹಾಗೂ ಅನ್ನಸಂತರ್ಪಣೆ ನೆರವೇರಿತು. ಅರ್ಚಕ ಯೋಗೇಶ್ ಪೂಜಾ ವಿಧಿ ನಡೆಸಿದರು. ದೇವಾಲಯ ಸಮಿತಿ ಅಧ್ಯಕ್ಷ ಗೋವಿಂದಪ್ಪ ಕಾರ್ಯದರ್ಶಿ ಕೆ.ಎನ್.ಪವನ್ ಕುಮಾರ್ ಈರಪ್ಪ ರಾಜಾಚಾರಿ ಕೃಷ್ಣ ರಾಜು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.