ADVERTISEMENT

ಕೊಡಗು ಜಿಲ್ಲೆಯಲ್ಲೆಡೆ ಶಿವನಾಮ ಸ್ಮರಣೆ: ದೇವಾಲಯಗಳಲ್ಲಿ ವಿಶೇಷ ಪೂಜೆ

ವಿಶೇಷ ಪೂಜಾವಿಧಿಗಳು, ಜಾಗರಣೆ, ಭಜನೆ, ಭಕ್ತರಿಂದ ತುಂಬಿ ಹೋದ ಶಿವ ದೇಗುಲಗಳು

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2026, 4:12 IST
Last Updated 16 ಫೆಬ್ರುವರಿ 2026, 4:12 IST
<div class="paragraphs"><p>ಮಡಿಕೇರಿಯ ಐತಿಹಾಸಿಕ ಓಂಕಾರೇಶ್ವರ ದೇಗುಲಕ್ಕೆ ಮಹಾಶಿವರಾತ್ರಿ ಪ್ರಯುಕ್ತ ಭಕ್ತರು ಸರತಿ ಸಾಲಿನಲ್ಲಿ ನಿಂತು ದರ್ಶನ ಪಡೆದರು</p></div>

ಮಡಿಕೇರಿಯ ಐತಿಹಾಸಿಕ ಓಂಕಾರೇಶ್ವರ ದೇಗುಲಕ್ಕೆ ಮಹಾಶಿವರಾತ್ರಿ ಪ್ರಯುಕ್ತ ಭಕ್ತರು ಸರತಿ ಸಾಲಿನಲ್ಲಿ ನಿಂತು ದರ್ಶನ ಪಡೆದರು

   

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಭಾನುವಾರ ಶ್ರದ್ಧಾಭಕ್ತಿಯಿಂದ ಶಿವರಾತ್ರಿ ಹಬ್ಬವನ್ನು ಭಕ್ತರು ಆಚರಿಸಿದರು.

ಬೆಳಿಗ್ಗೆಯಿಂದಲೇ ಮನೆಗಳ ಮುಂದೆ ರಂಗೋಲಿ ಹಾಕಿ, ಮಜ್ಜನ ಮುಗಿಸಿ, ದೇಗುಲಗಳಿಗೆ ಭೇಟಿ ನೀಡಿದರು. ಬಹುತೇಕ ಎಲ್ಲ ಶೈವಾಲಯಗಳು ದಿನವಿಡೀ ತೆರೆದಿದ್ದವು.

ADVERTISEMENT

ಇಲ್ಲಿನ ಮಹಾದೇವಪೇಟೆಯ ಬಸವೇಶ್ವರ ದೇಗುಲ, ಚೌಡೇಶ್ವರಿ ದೇಗುಲ, ಕನ್ನಿಕಾಪರಮೇಶ್ವರಿ ದೇಗುಲಗಳು ವಿಶೇಷವಾಗಿ ತಳಿರು ತೋರಣಗಳಿಂದ ಸಿಂಗಾರಗೊಂಡಿದ್ದವು. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡಿ ಪೂಜೆ ಸಲ್ಲಿಸಿದರು.

ಐತಿಹಾಸಿಕ ಓಂಕಾರೇಶ್ವರ ದೇಗುಲವೂ ವಿಶೇಷ ಬಗೆಯಲ್ಲಿ ಸಿಂಗಾರಗೊಂಡಿತ್ತು. ಸರತಿ ಸಾಲಿನಲ್ಲಿ ನಿಂತ ಭಕ್ತರು ದೇವರಿಗೆ ಪೂಜೆ ಸಲ್ಲಿಸಿದರು.

ಮಡಿಕೇರಿಯ ದಾಸವಾಳ ರಸ್ತೆಯಲ್ಲಿರುವ ಶ್ರೀ ವೀರಭದ್ರ ಮುನೇಶ್ವರ ದೇವಾಲಯದಲ್ಲಿ ವಾರ್ಷಿಕೋತ್ಸವ ಹಾಗೂ ಮಹಾಶಿವರಾತ್ರಿಯ ಬೆಳಿಗ್ಗೆ 7 ಗಂಟೆಗೆ ಮಹಾಗಣಪತಿ ಹೋಮದಿಂದ ಧಾರ್ಮಿಕ ಕೈಂಕರ್ಯಗಳು ಆರಂಭವಾದವು.

ನಂತರ,ವೀರಭದ್ರ ದೇವರ ಉತ್ಸವ ಮೂರ್ತಿಯ ನಗರ ಪ್ರದಕ್ಷಿಣೆಯ ಶೋಭಾಯಾತ್ರೆ ನಡೆಯಿತು. ಡೊಳ್ಳುಕುಣಿತ, ಭಜನೆ ತಂಡಗಳೊಂದಿಗೆ ಮೆರವಣಿಗೆಯು ದೇವಾಲಯದಿಂದ ಹೊರಟು ದಾಸವಾಳ ರಸ್ತೆಗಾಗಿ ಗಣಪತಿ ಬೀದಿಯಿಂದ ಬನ್ನಿಮಂಟಪದಲ್ಲಿ ಪೂಜೆ ಸಲ್ಲಿಸಿ ನಂತರ ಮಹಾದೇವಪೇಟೆಗಾಗಿ ಚೌಕಿ ವೃತ್ತದಿಂದ ಹಳೆ ಬಸ್ ನಿಲ್ದಾಣಕ್ಕಾಗಿ ಜೂನಿಯರ್ ಕಾಲೇಜು ರಸ್ತೆಗಾಗಿ ಪುನಃ ದೇವಾಲಯಕ್ಕೆ ತಲುಪಿತು.

ಮಧ್ಯಾಹ್ನ ಮತ್ತು ರಾತ್ರಿ ಹಲವು ದೇಗುಲಗಳಲ್ಲಿ ಅನ್ನಸಂತರ್ಪಣೆ ನಡೆಯಿತು. ಸಂಜೆ ಮಹಾಮೃತ್ಯುಂಜಯ ಹೋಮ ಹಾಗೂ ಸಾಂಸ್ಕೃತಿ ಕಾರ್ಯಕ್ರಮಗಳು ನೆರವೇರಿದವು.

52 ಅಡಿಯ ಶಿವ ವಿಗ್ರಹ ದರ್ಶನ ಪಡೆದ ಗೃಹಸಚಿವ

ಕರ್ಣಂಗೇರಿಯ ರಾಜರಾಜೇಶ್ವರಿ ದೇವಾಲಯಕ್ಕೆ ಭೇಟಿ ನೀಡಿದ ಗೃಹಖಾತೆ ಸಚಿವ ಡಾ.ಜಿ.ಪರಮೇಶ್ವರ್ ವಿಶೇಷ ಪೂಜೆ ಸಲ್ಲಿಸಿದರು. ಮಾತ್ರವಲ್ಲ, 52 ಅಡಿಯ ಬೃಹತ್ ಶಿವ ವಿಗ್ರಹದ ದರ್ಶನ ಪಡೆದರು. ಈ ವೇಳೆ ಅವರು ದೇಗುಲದ ಶಕ್ತಿ ಕುರಿತು ಮಾತನಾಡಿದರು.

ಇದಕ್ಕೂ ಮುನ್ನ ದೇಗುಲದಲ್ಲಿನ ಕಾಶಿಲಿಂಗಕ್ಕೆ ಕ್ಷೀರಾಭಿಷೇಷಕ, ಪಂಚಾಮೃತ ಅಭಿಷೇಕಗಳು ನಡೆದವು. ಭಕ್ತರಿಗೆ ಪಂಚಲಿಂಗಕ್ಕೆ ಪವಿತ್ರ ಗಂಗಾಜಲ ಅಭಿಷೇಕ ಮತ್ತು ಶಿವನ ಮೂರ್ತಿಗೆ ಪುಷ್ಪಾರ್ಚನೆ ಮಾಡಲು ಅವಕಾಶ ಕಲ್ಪಿಸಲಾಗಿತ್ತು. ಬೆಳಿಗ್ಗೆ ದೇವಾಲಯದ ಮುಖ್ಯ ದ್ವಾರದಿಂದ ದೇವಾಲಯದವರೆಗೆ ಸ್ತಬ್ಧಚಿತ್ರ, ಪೂರ್ಣ ಕುಂಭ ಕಳಸ, ಚಂಡೆವಾದ್ಯ, ವೀರಗಾಸೆ, ಡೊಳ್ಳು ಕುಣಿತದೊಂದಿಗೆ ಭಕ್ತಾದಿಗಳ ಮೆರವಣಿಗೆ ನಡೆಯಿತು. ರಾತ್ರಿ ದೀಪೋತ್ಸವ ವೈಭವದಿಂದ ನಡೆಯಿತು.