ADVERTISEMENT

ಮಹಾವೀರ ಜಯಂತಿ | ಯಾರಿಗೂ ನೋವು ಕೊಡಬೇಡಿ: ವಿನಾಯಕ ನರ್ವಾಡೆ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2025, 6:25 IST
Last Updated 11 ಏಪ್ರಿಲ್ 2025, 6:25 IST
ಮಡಿಕೇರಿಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಭಗವಾನ್ ಮಹಾವೀರ ಅವರ ಭಾವಚಿತ್ರಕ್ಕೆ ಉಪ ವಿಭಾಗಾಧಿಕಾರಿ ವಿನಾಯಕ ನರ್ವಾಡೆ ಪುಷ್ಪನಮನ ಸಲ್ಲಿಸಿದರು
ಮಡಿಕೇರಿಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಭಗವಾನ್ ಮಹಾವೀರ ಅವರ ಭಾವಚಿತ್ರಕ್ಕೆ ಉಪ ವಿಭಾಗಾಧಿಕಾರಿ ವಿನಾಯಕ ನರ್ವಾಡೆ ಪುಷ್ಪನಮನ ಸಲ್ಲಿಸಿದರು   

ಮಡಿಕೇರಿ: ‘ಅಹಿಂಸೆಯೇ ಪರಮ ಧರ್ಮ ಎಂಬುದು ಭಗವಾನ್ ಮಹಾವೀರರ ಸಂದೇಶ. ಪ್ರತಿಯೊಂದು ಜೀವಿಯೂ ಸಂತೋಷವಾಗಿರಲು ಬಯಸುತ್ತದೆ. ಯಾವುದೇ ಜೀವಿಯು ನೋವನ್ನು ಬಯಸುವುದಿಲ್ಲ. ಯಾವ ಜೀವಿಗೂ ನೋವು ಕೊಡಬಾರದು ಎಂಬುದು ಅವರ ಪ್ರತಿಪಾದನೆಯಾಗಿದೆ’ ಎಂದು ಉಪ ವಿಭಾಗಾಧಿಕಾರಿ ವಿನಾಯಕ ನರ್ವಾಡೆ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಗರದ ಗಾಂಧಿ ಭವನದಲ್ಲಿ ಗುರುವಾರ ನಡೆದ ಭಗವಾನ್ ಮಹಾವೀರರ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ಸಮಾಜದಲ್ಲಿ ಎಲ್ಲರೂ ಬದುಕಬೇಕು, ಹಾಗೆಯೇ ಇತರರನ್ನೂ ಬದುಕಲು ಬಿಡಬೇಕು ಎಂಬುದು ಅವರ ಸಂದೇಶವಾಗಿದೆ. ಅದನ್ನು ಎಲ್ಲರೂ ಪಾಲಿಸಬೇಕು’ ಎಂದರು.

ADVERTISEMENT

ಭಗವಾನ್ ಮಹಾವೀರರು ಅಹಿಂಸಾ ಧರ್ಮದ ಪ್ರವರ್ತಕರಾಗಿದ್ದು, ಸನ್ಮತಿ, ವರ್ಧಮಾನ ಹಾಗೂ ವೀರ ಹೆಸರುಗಳಿಂದ ಮಹಾವೀರರನ್ನು ಕರೆಯುತ್ತಾರೆ ಎಂದು ತಿಳಿಸಿದರು.

ಭಗವಾನ್ ಮಹಾವೀರರು ಸತ್ಯ, ಅಹಿಂಸೆ, ಅಪರಿಗ್ರಹ, ಅಸ್ತೇಯ‌ ಮತ್ತು ಬ್ರಹ್ಮಚರ್ಯ ಈ ಪಂಚ ವ್ರತಗಳ ಅನುಷ್ಠಾನದ ಅಡಿಪಾಯ ಹಾಕಿದರು ಎಂದು ಅವರು ವಿವರಿಸಿದರು.

ಶರಣ ಸಾಹಿತ್ಯ ಪರಿಷತ್ತಿನ ಕೊಡಗು ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಸ್.ಮೂರ್ತಿ ಮಾತನಾಡಿ, ‘ಉಸಿರಾಡುವಾಗ ಕಣ್ಣಿಗೆ ಕಾಣದ ಸೂಕ್ಷ್ಮಾಣು ಜೀವಿಗಳು ನಶಿಸಬಾರದು ಎಂದು ಬಾಯಿಗೆ ಬಟ್ಟೆ ಕಟ್ಟಿ ಉಸಿರಾಡಿದರು. ಸಂಪತ್ತಿನ ಕ್ರೋಢೀಕರಣ ವಿರೋಧಿಸಿದ ಜೈನ ಧರ್ಮೀಯರು, ಸತ್ಯಶೀಲವಾದ ಜೀವನಕ್ಕೆ ಆದ್ಯತೆ ಕೊಟ್ಟರು’ ಎಂದು ಹೇಳಿದರು.

ನಿವೃತ್ತ ಶಿಕ್ಷಕ ಬಿ.ಸಿ.ಶಂಕರಯ್ಯ ಮಾತನಾಡಿ, ‘ಮನುಷ್ಯರ ಜೀವನ ಉತ್ತಮವಾಗಲು ರತ್ನತ್ರಯಗಳಾದ ಸಮ್ಯಕ್ ದರ್ಶನ, ಸಮ್ಯಕ್ ಜ್ಞಾನ ಮತ್ತು ಸಮ್ಯಕ್ ಚಾರಿತ್ರ್ಯಗಳನ್ನು ಪಾಲಿಸಬೇಕು ಎಂದಿದ್ದರು’ ಎಂದು ತಿಳಿಸಿದರು.

ಮದೆ ಮಹೇಶ್ವರ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಸಿದ್ದರಾಜು ಬೆಳ್ಳಯ್ಯ ಮಾತನಾಡಿ, ‘ಭಗವಾನ್ ಮಹಾವೀರರು ಮನುಷ್ಯನ ಸರಿಯಾದ ನಡವಳಿಕೆಗೆ ಹೆಚ್ಚು ಒತ್ತು ನೀಡಿದ್ದರು’ ಎಂದು ನುಡಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ, ಮಣಜೂರು ಮಂಜುನಾಥ್, ಮುಖಂಡ ಎಚ್.ಎಲ್. ದಿವಾಕರ ಭಾಗವಹಿಸಿದ್ದರು.

ಸೂಕ್ಷ್ಮಜೀವಿಗಳೂ ಉಳಿಯಬೇಕು ಎಂಬುದು ಮಹಾವೀರರ ಆಶಯ ಎಲ್ಲರನ್ನೂ ಬದುಕಲು ಬಿಡಿ ಎಂಬುದು ಅವರ ತತ್ವ ಮಹಾವೀರರ ತತ್ವ, ಆದರ್ಶ ಪಾಲಿಸಲು ಸಲಹೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.