ADVERTISEMENT

ಮರಗೋಡು | ಡಾಂಬರು ಕಂಡು 15 ವರ್ಷ: ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಿಲ್ಲ

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2025, 6:58 IST
Last Updated 27 ಡಿಸೆಂಬರ್ 2025, 6:58 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಮಡಿಕೇರಿ: ರಸ್ತೆಯನ್ನು ದುರಸ್ತಿಪಡಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಒತ್ತಾಯಿಸಿ ತಾಲ್ಲೂಕಿನ ಮರಗೋಡು ಗ್ರಾಮಸ್ಥರು ಹಾಗೂ ಮರಗೋಡು ಆಟೊ ಚಾಲಕರು ಮತ್ತು ಮಾಲೀಕರ ಸಂಘದ ಕಾರ್ಯಕರ್ತರು ಶುಕ್ರವಾರ ಮರಗೋಡು ಗ್ರಾಮದಲ್ಲಿ ಪ್ರತಿಭಟನೆ ನಡೆಸಿದರು.

ಗ್ರಾಮದ ವರ್ತಕರು ತಮ್ಮ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಪ್ರತಿಭಟನೆಯಲ್ಲಿ ಭಾಗಿಯಾದರು. ಮುಖ್ಯರಸ್ತೆ ಸೇರಿದಂತೆ ಹಲವೆಡೆ ಸಂಚಾರ ವ್ಯತ್ಯಯವಾಯಿತು. ಸರ್ಕಾರದ ವಿರುದ್ಧ ಕಾರ್ಯಕರ್ತರು ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ಮರಗೋಡು–ಹುಲಿತಾಳ–ಮಡಿಕೇರಿ ರಸ್ತೆ ಸಂಚಾರ ತಡೆದ ಅವರು ‘ನಮಗೆ ಉತ್ತಮ ರಸ್ತೆ ಬೇಕು’ ಎಂದು ಆಗ್ರಹಿಸಿದರು. ಘೋಷಣೆಗಳನ್ನು ಮೊಳಗಿಸಿದರು.

ಮರಗೋಡು ಸಂ‍ಪರ್ಕಿಸುವ ಬಹುತೇಕ ಎಲ್ಲ ರಸ್ತೆಗಳೂ ಗುಂಡಿ ಬಿದ್ದಿವೆ. ಡಾಂಬರು ಕಂಡು ದಶಕಗಳೇ ಕಳೆದಿವೆ. ಮಳೆ ನಿಂತು ಹಲವು ಕಾಲವೇ ಆಗಿದೆ. ಹಾಗಿದ್ದರೂ, ರಸ್ತೆ ದುರಸ್ಥಿ ಕಾರ್ಯ ನಡೆದಿಲ್ಲ ಎಂದು ಅವರು ಕಿಡಿಕಾರಿದರು.

ರಸ್ತೆ ಹಾಳಾಗಿರುವುದರಿಂದ ವಾಹನಗಳ ನಿರ್ವಹಣಾ ವೆಚ್ಚ ದಿನೇ ದಿನೇ ಹೆಚ್ಚಾಗುತ್ತಿದೆ. ಈಗ ಪಡೆಯುತ್ತಿರುವ ಬಾಡಿಗೆಯಿಂದ ಈ ನಿರ್ವಹಣಾ ಶುಲ್ಕ ಭರಿಸಲು ಸಾಧ್ಯವಾಗುತ್ತಿಲ್ಲ. ಹಾಗಾಗೀ, ಕೂಡಲೇ ಸಂ‍ಪೂರ್ಣ ರಸ್ತೆ ದುರಸ್ಥಿಪಡಿಸಬೇಕು ಎಂದು ಅವರು ಒತ್ತಾಯಿಸಿದರು.

‘ಯಾವುದೇ ಕಾರಣಕ್ಕೂ ನಮಗೆ ‍ಗುಂಡಿ ಮುಚ್ಚುವುದು ಬೇಡ. ಸಂಪೂರ್ಣ ಹೊಸ ರಸ್ತೆಯೇ ಬೇಕು’ ಎಂದು ಮನವಿ ಮಾಡಿದರು.

ಸ್ಥಳಕ್ಕೆ ಬಂದ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳನ್ನು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡರು.

ಸಂಘದ ಅಧ್ಯಕ್ಷ ನಂದಕುಮಾರ್ ಮಾತನಾಡಿ, ‘ರಸ್ತೆ ತೀರಾ ಹದಗೆಟ್ಟಿರುವುದರಿಂದ ಆಂಬುಲೆನ್ಸ್ ಬರಲು ಸಾಧ್ಯವಾಗುತ್ತಿಲ್ಲ. ಭೂಮಿಪೂಜೆ ಮಾತ್ರವೇ ಆಗಿದೆ. ಕಾಮಗಾರಿ ಮಾತ್ರ ಶುರುವಾಗಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮುಖಂಡ ಇಟ್ಟಣಿಕೆ ನವನೀತ್ ಮಾತನಾಡಿ, ‘ನಿತ್ಯ ಸಾವಿರಕ್ಕೂ ಅಧಿಕ ವಾಹನಗಳು ಈ ರಸ್ತೆಯಲ್ಲಿ ಸಂಚರಿಸುತ್ತಿವೆ. ಆದರೂ ರಸ್ತೆಯ ಅಭಿವೃದ್ಧಿ ಕಡೆಗೆ ಯಾರೊಬ್ಬರೂ ಗಮನ ಹರಿಸಿಲ್ಲ’ ಎಂದು ಬೇಸರ ವ್ಯಕ್ತಪ‍ಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.