ADVERTISEMENT

ಗೋಣಿಕೊಪ್ಪಲು | ಗಾಂಧಿ ಹಾದಿಯಲ್ಲೆ ಪ್ರತಿಭಟನೆ; ಪೊನ್ನಣ್ಣ ಘೋಷಣೆ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2026, 3:04 IST
Last Updated 6 ಫೆಬ್ರುವರಿ 2026, 3:04 IST
ಮನರೇಗಾ ಕಾಯ್ದೆ ಬದಲಾವಣೆ ವಿರೋಧಿಸಿ ಕಾಂಗ್ರೆಸ್ ಕಾರ್ಯಕರ್ತರು ಗುರುವಾರ ಗೋಣಿಕೊಪ್ಪಲಿನಲ್ಲಿ ಬೃಹತ್ ಮೆರವಣಿಗೆ ನಡೆಸಿದರು
ಮನರೇಗಾ ಕಾಯ್ದೆ ಬದಲಾವಣೆ ವಿರೋಧಿಸಿ ಕಾಂಗ್ರೆಸ್ ಕಾರ್ಯಕರ್ತರು ಗುರುವಾರ ಗೋಣಿಕೊಪ್ಪಲಿನಲ್ಲಿ ಬೃಹತ್ ಮೆರವಣಿಗೆ ನಡೆಸಿದರು   

ಗೋಣಿಕೊಪ್ಪಲು: ಕೇಂದ್ರ ಸರ್ಕಾರ ಮನರೇಗಾ ಕಾಯ್ದೆ ಬದಲಾಯಿಸಿ ‘ಬಿಜಿ ಬಿ ರಾಮ್ ಜಿ’ ಕಾಯ್ದೆ ಜಾರಿಗೆ ತಂದಿರುವುದನ್ನು ವಿರೋಧಿಸಿ ಗುರುವಾರ ಗೋಣಿಕೊಪ್ಪಲು ಹಾಗೂ ಪೊನ್ನಂಪೇಟೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಇಲ್ಲಿನ ಉಮಾಮಹೇಶ್ವರಿ ದೇವಸ್ಥಾನದಿಂದ ಆರಂಭಗೊಂಡ ಪ್ರತಿಭಟನಾ ಮೆರವಣಿಯಲ್ಲಿ ಕಾಂಗ್ರೆಸ್ ಪಕ್ಷದ ಧ್ವಜ ಹಿಡಿದ ಸಾವಿರಾರು ಕಾರ್ಯಕರ್ತರು ಪಾಲ್ಗೊಂಡು ಪೊನ್ನಂಪೇಟೆವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಕಾರ್ಯಕರ್ತರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಮೊಳಗಿಸಿ ಆಕ್ರೋಶ ವ್ಯಕ್ತಪಡಿಸಿದರು. ಮುಖ್ಯಮಂತ್ರಿಯ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ, ವಿಧಾನ ಪರಿಷತ್ ಮಾಜಿ ಸದಸ್ಯೆ ವೀಣಾ ಅಚ್ಚಯ್ಯ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಹಮದ್ ಗಪೂರ್, ಮುಖಂಡರಾದ ಕೆ.ಪಿ.ಚಂದ್ರಕಲಾ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಧರ್ಮಜ ಉತ್ತಪ್ಪ ಪಾಲ್ಗೊಂಡಿದ್ದರು.

ADVERTISEMENT

ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಶಾಸಕ ಎ.ಎಸ್.ಪೊನ್ನಣ್ಣ, ‘ಗಾಂಧಿ ಮಾರ್ಗದಲ್ಲೇ ಕೇಂದ್ರ ಸರ್ಕಾರದ ವಿರುದ್ಧ ಹೋರಾಟ ಮುಂದುವರಿಸಲಾಗುವುದು. ಮತ್ತೆ ಮನರೇಗಾ ಕಾಯ್ದೆ ಜಾರಿಯಾಗುವವರೆಗೂ ಹೋರಾಟ ನಿಲ್ಲುವುದಿಲ್ಲ’ ಎಂದರು.

ಮಹಮದ್ ಗಪೂರ್ ಮಾತನಾಡಿ, ಮಹಾತ್ಮ ಗಾಂಧಿಯವರ ಹೆಸರನ್ನೇ ಚರಿತ್ರೆಯಿಂದ ತೆಗೆದುಹಾಕುವ ಮುನ್ನಾರ ನಡೆದಿದೆ ಎಂದು ಆರೋಪಿಸಿದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಲಕ್ಷ್ಮಣ ಮಾತನಾಡಿ, ‘ಗಾಂಧೀಜಿಯವರ ಹೆಸರಿಗೆ ಮಸಿ ಬಳಿಯುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡುತ್ತಾ ಬಂದಿದೆ. ಇದೀಗ ಮನರೇಗಾ ಯೋಜನೆಯ ಹೆಸರನ್ನು ಬದಲಾಯಿಸುವುದರ ಜೊತೆಗೆ ಆ ಯೋಜನೆಯ ಮಹತ್ವವನ್ನೇ ಹಾಳುಗೆಡುವಿದೆ’ ಎಂದು ಹೇಳಿದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಧರ್ಮಜ ಉತ್ತಪ್ಪ ಮಾತನಾಡಿ, ಕೇಂದ್ರ ಸರ್ಕಾರದ ಈ ಯೋಜನೆಯ ವಿರುದ್ಧ ಮುಂದಿನ ದಿನಗಳಲ್ಲಿ ಹೋಬಳಿ ಮಟ್ಟದಲ್ಲಿ ಪಕ್ಷದ ವತಿಯಿಂದ ತೀವ್ರ ಹೋರಾಟ ನಡೆಸಲಾಗುವುದು’ ಎಂದು ಹೇಳಿದರು.

ಗೋಣಿಕೊಪ್ಪಲಿನಿಂದ ಪೊನ್ನಂಪೇಟೆವರೆಗೆ 5 ಕಿ.ಮೀ ದೂರ ನಡೆದ ಮೆರವಣಿಗೆಯ ಸಂದರ್ಭದಲ್ಲಿ ಪೊನ್ನಂಪೇಟೆ ಮುಖ್ಯರಸ್ತೆಯಲ್ಲಿರುವ ಮಹಾತ್ಮ ಗಾಂಧೀಜಿಯವರ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು.

ಕಾಂಗ್ರೆಸ್ ಪಕ್ಷದ ಮುಖಂಡರಾದ ತೆನ್ನಿರ ಮೈನಾ, ಮೀದಿರಿರ ನವೀನ್, ರಂಜಿ ಪೂಣಚ್ಚ, ನವೀನ್, ಜಮ್ಮಡ ಸೋಮಣ್ಣ, ರಕ್ಷಿತ್, ಸೂರಜ್ ಹೊಸೂರು, ಹನೀಫ್, ಅಬ್ದುಲ್ ರಹೀಮ್, ಪುಷ್ಪಲತಾ ಭಾಗವಹಿಸಿದ್ದರು.

5 ಕಿ.ಮೀ ದೂರ ನಡೆದ ಮೆರವಣಿಗೆ ಸಾವಿರಾರು ಕಾರ್ಯಕರ್ತರು ಭಾಗಿ

ಟೀಕೆ ಆರೋಗ್ಯಕರವಾಗಿರಬೇಕೇ ವಿನಹಾ ವೈಯಕ್ತಿಕವಾಗಿರಬಾರದು’

ಪ್ರಜಾಪ್ರಭುತ್ವದಲ್ಲಿ ವಿರೋಧ ಪಕ್ಷಗಳಿರಬೇಕು. ಬಿಜೆಪಿಯೂ ಇರಬೇಕು ಜೆಡಿಎಸ್‌ ಸಹ ಇರಬೇಕು. ಆದರೆ ಟೀಕೆಗಳು ಆರೋಗ್ಯಕರವಾಗಿರಬೇಕೇ ವಿನಹಾ ವೈಯಕ್ತಿಕವಾಗಿರಬಾರದು ಎಂದು ಶಾಸಕ ಎ.ಎಸ್.ಪೊನ್ನಣ್ಣ ಹೇಳಿದರು. ‘ನನ್ನನ್ನು ವೈಯಕ್ತಿಕವಾಗಿ ಗುರಿಯಾಗಿಸಿಕೊಂಡು ತೇಜೋವಧೆ ಮಾಡಲಾಗಿದೆ. ಪೊನ್ನಣ್ಣ ಅವರಿಂದ ಮೋಸ ಎಂದು ಕಾಲ್ಪನಿಕ ವ್ಯಕ್ತಿಗಳಿಂದ ಟೀಕೆ ಮಾಡಿಸುತ್ತಿದ್ದಾರೆ. ಇಂದು ನನ್ನ ಸ್ವಂತ ಶಕ್ತಿಯಿಂದ ಸಾವಿರಾರು ಮಂದಿಯ ಸೇವೆ ಮಾಡುತ್ತಿದ್ದೇನೆ. ಇದನ್ನು ಮಾನವೀಯತೆ ಇಲ್ಲದವರಿಗೆ ಗುರುತಿಸಲು ಸಾಧ್ಯವಿಲ್ಲ’ ಎಂದರು. ‘ಜಮ್ಮಾಬಾಣೆ ಸಮಸ್ಯೆ ನಿವಾರಣೆಗೆ ನಾನು ಪ್ರಾಮಾಣಿಕ ಪ್ರಯತ್ನ  ಮಾಡಿರುವೆ. ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕರೇ ಶ್ಲಾಘಿಸಿದರು. ಆದರೆ ಇದನ್ನು ಜಿಲ್ಲಾ ಬಿಜೆಪಿ ನಾಯಕರಿಗೆ ಜೀರ್ಣಿಸಿಕೊಳ್ಳಲಾಗದೇ ವೃಥ ಟೀಕಿಸುತ್ತಿದ್ದಾರೆ. ಈ ಕುರಿತು ಯಾವುದೇ ಬಹಿರಂಗ ಚರ್ಚೆಗೆ ಸಿದ್ಧ ನೀವು ಕರೆಯುವ ಜಾಗಕ್ಕೆ ಬರಲು ಸಿದ್ಧ’ ಎಂದು ಸವಾಲೆಸೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.