ADVERTISEMENT

ದೇವೇಗೌಡರಿಂದ ಬ್ಲ್ಯಾಕ್‌ಮೇಲ್‌ ತಂತ್ರ: ರಂಜನ್‌

ಮಾಜಿ ಪ್ರಧಾನಿ ಮಾತಿನಲ್ಲಿ ತೂಕ ಇರಲಿ: ಬೋಪಯ್ಯ

​ಪ್ರಜಾವಾಣಿ ವಾರ್ತೆ
Published 21 ಜೂನ್ 2019, 14:01 IST
Last Updated 21 ಜೂನ್ 2019, 14:01 IST
ಅಪ್ಪಚ್ಚು ರಂಜನ್
ಅಪ್ಪಚ್ಚು ರಂಜನ್   

ಮಡಿಕೇರಿ: ‘ಜೆಡಿಎಸ್‌ ವರಿಷ್ಠ, ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಅವರು ಬ್ಲ್ಯಾಕ್‌ಮೇಲ್‌ ತಂತ್ರ ಅನುಸರಿಸುತ್ತಿದ್ದಾರೆ’ ಎಂದು ಮಡಿಕೇರಿ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್‌ ಇಲ್ಲಿ ಶುಕ್ರವಾರ ಆರೋಪಿಸಿದರು.

‘ದೇವೇಗೌಡರ ಮಧ್ಯಂತರ ಚುನಾವಣೆ’ ಹೇಳಿಕೆಗೆ ನಗರದಲ್ಲಿ ಶುಕ್ರವಾರ ಪ್ರತಿಕ್ರಿಯಿಸಿದ ಅವರು, ‘ಕಾಂಗ್ರೆಸ್‌ಗೆ ಬ್ಲ್ಯಾಕ್‌ಮೇಲ್ ಮಾಡಿ ಸೀಟ್‌ನಲ್ಲಿ ಗಟ್ಟಿಯಾಗಿ ಕೂರುವ ತಂತ್ರದ ಭಾಗ ಇದು. ದೇವೇಗೌಡರಿಗೆ ಎಲ್ಲ ರೀತಿಯ ತಂತ್ರಗಾರಿಕೆಯೂ ಗೊತ್ತು. ಅದಕ್ಕೇ ಚುನಾವಣೆಗೆ ಹೋಗ್ತೀವಿ ಎಂದು ಬ್ಲ್ಯಾಕ್‌ಮೇಲ್ ಮಾಡಲಾಗುತ್ತಿದೆ’ ಎಂದು ಹೇಳಿದರು.

‘ಇವರಿಗೆ ಸರ್ಕಾರ ನಡೆಸಲಿಕ್ಕೆ ಆಗಿದ್ದರೆ ರಾಜೀನಾಮೆ ಕೊಟ್ಟು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೊರಬರಲಿ. ನಮಗೆ ಸರ್ಕಾರ ನಡೆಸಲು ಗೊತ್ತು. ಇನ್ನು ಐದು ವರ್ಷ ಚುನಾವಣೆಗೆ ಹೋಗಬಾರದು. ಚುನಾವಣೆ ನಡೆದರೆ ಜನರಿಗೇ ಹೊರೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ADVERTISEMENT

ಬಿಜೆಪಿಗೆ 150 ಸೀಟು: ಇದೇ ವಿಚಾರವಾಗಿ ವಿರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ.ಬೋಪಯ್ಯ ಪ್ರತಿಕ್ರಿಯಿಸಿ, ‘ಲೋಕಸಭೆ ಚುನಾವಣೆಯ ಸೋಲಿನಿಂದ ಕಂಗೆಟ್ಟಿರುವ ದೇವೇಗೌಡ ಅವರು ಏನೇನೋ ಮಾತನಾಡುತ್ತಿದ್ದಾರೆ’ ಎಂದು ತಿರುಗೇಟು ನೀಡಿದರು.

‘ದೇವೇಗೌಡರೇನು ಚುನಾವಣೆ ಆಯೋಗದ ಆಯುಕ್ತರೇ? ಮಾಜಿ ಪ್ರಧಾನಿಗಳ ಮಾತಿನಲ್ಲಿ ಗಾಂಭೀರ್ಯತೆ ಹಾಗೂ ತೂಕ ಇರಬೇಕು. ಈಗ ಚುನಾವಣೆ ನಡೆದರೂ ಬಿಜೆಪಿ 150ಕ್ಕೂ ಹೆಚ್ಚು ಸ್ಥಾನ ಗೆಲ್ಲಲಿದೆ. ಅದು ಗೊತ್ತಿದ್ದರೂ ಸುಮ್ಮನೇ ಬೆದರಿಕೆಯ ತಂತ್ರ ಅನುಸರಿಸುತ್ತಿದ್ದಾರೆ’ ಎಂದು ಟಾಂಗ್‌ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.