
ಗೋಣಿಕೊಪ್ಪಲು: ಪೊನ್ನಂಪೇಟೆ ತಾಲ್ಲೂಕಿನ ತಾಳೇರಿ ಮೂಂದ್ ನಾಡ್ ಕೋಲ್ ಮಂದ್‌ನಲ್ಲಿ ಗುರುವಾರ ನಡೆದ ಮೂಂದ್ ನಾಡ್ ಮಂದ್ ನಮ್ಮೆ ಸಾಂಸ್ಕೃತಿಕ ವೈಭವ ಮೆರೆಯಿತು.
ಪೌರಾಣಿಕ ಹಿನ್ನೆಲೆಯು ತಾವಳಗೇರಿ ಮಹಾದೇವರ ಕುದುರೆ ಹಾಗೂ ಟಿ.ಶೆಟ್ಟಿಗೇರಿಯ ಕೊರಕೊಟ್ ಅಯ್ಯಪ್ಪ ದೇವರ ಕುದುರೆ ಮಂದ್ ಪ್ರವೇಶಿಸಿ ಪೆರುಮಾಳ್ ಪಟ್ಟಿಯಲ್ಲಿ ಪೆರುಮಾಳಚ್ಚನ ಆಶೀರ್ವಾದ ಪಡೆಯುವುದರೊಂದಿಗೆ ಮಂದ್ ನಮ್ಮೆ ಆರಂಭಗೊಂಡಿತು.
ತಾಳೇರಿ ನಾಡಿನ ಕೊಡವ ಯುವಕರ ಪುತ್ತರಿ ಕೋಲಾಟ್ ನೆರೆದಿದ್ದ ಪ್ರೇಕ್ಷಕರಿಗೆ ಮುದ ನೀಡಿತು. ರೂಟ್ಸ್ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳ ಬೊಳಕಾಟ್, ಉಮ್ಮತ್ತಾಟ್, ಪುತ್ತರಿ ಕೋಲಾಟ್, ಪರೆಯಕಳಿ, ತಾವಳಗೇರಿ ಮೂಂದ್ ನಾಡ್ ಕೊಡವ ಸಮಾಜ ಪೊಮ್ಮಕ್ಕಡ ಕೂಟದ ಕಲಾವಿದರ ಕೊಡವ ನೃತ್ಯ, ಮಚ್ಚಮಾಡ ಕವಿತ ಸತೀಶ್ ಅವರ ತಕ್ಕಾರತಾಟ್, ಕೊಡವ ಪಾಟ್, ಪುತ್ತರಿ ಆಟ್, ಅಜ್ಜಮಾಡ ಶ್ರತಿಕ, ಪೆಮ್ಮಂಡ ದೀಪ್ತಿ, ಮಾಣೀರ ರಿಯಾ ಪೊನ್ನಮ್ಮ, ಕೋಟ್ರಮಡ ಆಕೃತಿ ಪೊನ್ನಕ್ಕ, ಆಲೆಮಾಡ ಧೃತಿ ದೇಚಮ್ಮ, ಮಾಯಣಮಡ ಇಶಿತ ಬೋಜಮ್ಮ, ಕಾಳಿಮಾಡ ಲಾಸ್ಯ ಚೋಂದಮ್ಮ ಅವರು ನಡೆಸಿಕೊಟ್ಟ ಕೊಡವ ನೃತ್ಯಗಳ ಪ್ರದರ್ಶನ ಮನ ಸೂರೆಗೊಂಡಿತು.
ಕೊನೆಯಲ್ಲಿ ನಾಡಿನವರೆಲ್ಲ ಸಾಮೂಹಿಕವಾಗಿ ಪರೆಯಕಳಿ ಕೋಲ್ ಹೊಡೆದು ಕುದುರೆ ಕಟ್ಟುವುದರೊಂದಿಗೆ ಮಂದ್ ನಮ್ಮೆ ಸಮಾಪ್ತಿಯಾಯಿತು. ತಾಳೇರಿ ಮೂಂದ್ ನಾಡ್ ಕೋಲ್ ಮಂದ್ ಸಮಿತಿಯ ಪರವಾಗಿ ಮುಖ್ಯ ಅತಿಥಿ ಕೊಡಗು ಜಿಲ್ಲಾ ರೈತ ಸಂಘದ ಅಧ್ಯಕ್ಷ ಕಾಡ್ಯಮಡ ಮನು ಸೋಮಯ್ಯ ಅವರನ್ನು ಸನ್ಮಾನಿಸಲಾಯಿತು.
ಬಳಿಕ ಮಾತನಾಡಿದ ಕಾಡ್ಯಮಾಡ ಮನು ಸೋಮಯ್ಯ ಕೊಡವ ಜನಾಂಗದಿಂದ ಇಲ್ಲಿನ ಭೂಮಿ ಕೈಬಿಟ್ಟು ಹೋದರೆ ನಮ್ಮ ಸಂಸ್ಕೃತಿ ನಾಶವಾಗುತ್ತದೆ. ಇದರಿಂದ ಜನಾಂಗಕ್ಕೂ ಕುತ್ತು ಬರಲಿದೆ. ಕೊಡವರು ತಮ್ಮ ಮಣ್ಣನ್ನು ಪರಬಾರೆ ಮಾಡದೆ ತಮ್ಮಲ್ಲೇ ಉಳಿಸಿಕೊಂಡು ಕೊಡವ ಸಂಸ್ಕೃತಿ ಹಾಗೂ ಜನಾಂಗವನ್ನು ಉಳಿಸಬೇಕೆಂದು ಕರೆ ನೀಡಿದರು.
ತಾಳೇರಿ ಮೂಂದ್ ನಾಡ್‌ನ ನಾಡ್ ತಕ್ಕರಾದ ಕೈಬಿಲೀರ ಹರೀಶ್ ಅಪ್ಪಯ್ಯ ಮಾತನಾಡಿ, ತಾಳೇರಿ ಕೋಲ್ ಮಂದ್ ಹಾಗೂ ಪೆರುಮಾಳ್ ಪಟ್ಟಿಯ ಪೌರಾಣಿಕ ಹಿನ್ನೆಲೆಯನ್ನು ತಿಳಿಸುವುದರ ಮೂಲಕ ಒಂಬತ್ತು ವರ್ಷಗಳಿಂದ ಕೊಡವ ಜನಾಂಗದ ಶ್ರೇಯಸ್ಸಿಗಾಗಿ ಹಾಗೂ ಕೊಡವಾಮೆಯ ಉಳಿಕೆಗಾಗಿ ಶ್ರಮಿಸುತ್ತಿರುವವರನ್ನು ಸನ್ಮಾನಿಸಿ ಗೌರವಿಸುವುದು ಒಳ್ಳೆಯ ಸಂಪ್ರದಾಯ ಎಂದು ತಿಳಿಸಿದರು.
ಮೂಂದ್ ನಾಡ್ ಗ್ರಾಮಗಳ ನಡುವೆ ನಡೆದ ಹಗ್ಗ ಜಗ್ಗಾಟ ಸ್ಪರ್ಧೆಯ ಪುರುಷರ ವಿಭಾಗದಲ್ಲಿ ನೆಮ್ಮಲೆ ಗ್ರಾಮ ತಂಡ ಪ್ರಥಮ, ತಾವಳಗೇರಿ ತಂಡ ದ್ವಿತೀಯ, ಟಿ.ಶೆಟ್ಟಿಗೇರಿ ತಂಡ ತೃತೀಯ ಸ್ಥಾನ ಪಡೆಯಿತು. ಮಹಿಳೆಯರ ವಿಭಾಗದಲ್ಲಿ ವಗರೆ ತಂಡ ಪ್ರಥಮ, ನೆಮ್ಮಲೆ ತಂಡ ದ್ವಿತೀಯ, ಟಿ.ಶೆಟ್ಟಿಗೇರಿ ತಂಡ ತೃತೀಯ ಹಾಗೂ ತಾವಳಗೇರಿ ತಂಡ ನಾಲ್ಕನೆ ಸ್ಥಾನ ಪಡೆಯಿತು.
ಕೋಟ್ರಮಡ ಶೀತಲ್ ಮಾದಪ್ಪ ಹಾಗೂ ಆಲೆಮಾಡ ಪ್ರೇಮ ತಿಮ್ಮಯ್ಯ,ಮಂದ್ ಸಮಿತಿಯ ಕಾರ್ಯದರ್ಶಿ ಕೋಟ್ರಮಾಡ ಸುಮಂತ್ ಮಾದಪ, ಟಿ.ಶೆಟ್ಟಿಗೇರಿ ಕೊಡವ ಸಮಾಜದ ಸಾಂಸ್ಕೃತಿಕ ಸಂಚಾಲಕ ಚೆಟ್ಟಂಗಡ ರವಿ ಸುಬ್ಬಯ, ತಾಳೇರಿ ಮೂಂದ್ ನಾಡ್ ಕೋಲ್ ಮಂದ್ ಸಮಿತಿ ಅಧ್ಯಕ್ಷ ಕೈಬಿಲೀರ ಸುರೇಶ್ ರೈತ ಸಂಘದ ಜಿಲ್ಲಾ ಸಂಚಾಲಕ ಪುಚ್ಚಿಮಡ ಸುಭಾಶ್, ಶ್ರೀಮಂಗಲ ಹೋಬಳಿ ಅಧ್ಯಕ್ಷ ಚೆಟ್ಟಂಗಡ ಕಾರ್ಯಪ್ಪ, ಮುಖಂಡರಾದ, ಚೆಟ್ಟಂಗಡ ಹ್ಯಾರಿ ನಾಣಯ್ಯ ಮೊದಲಾದವರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.