ADVERTISEMENT

ಕುಶಾಲನಗರ: ಕೆಸರುಗದ್ದೆಯಲ್ಲಿ ಮಿಂದೆದ್ದ‌ ಮಕ್ಕಳು

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2025, 4:14 IST
Last Updated 18 ಆಗಸ್ಟ್ 2025, 4:14 IST
ಗ್ರಾಮೀಣ ಕೆಸರುಗದ್ದೆ ಕ್ರೀಡಾಕೂಟ ಗಮನ ಸೆಳೆಯಿತು.
ಗ್ರಾಮೀಣ ಕೆಸರುಗದ್ದೆ ಕ್ರೀಡಾಕೂಟ ಗಮನ ಸೆಳೆಯಿತು.   

ಕುಶಾಲನಗರ: ಇಲ್ಲಿಗೆ ಸಮೀಪದ ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲೆಯಲ್ಲಿ 79ನೇ ಸ್ವಾತಂತ್ರ್ಯೋತ್ಸವ ಅಂಗವಾಗಿ ಕಾವೇರಿ ನದಿದಂಡೆಯ ಮೇಲಿನ ಹಸಿರು ಪರಿಸರದ ಮಧ್ಯೆ ಗ್ರಾಮದ ಪ್ರಗತಿಪರ ಕೃಷಿಕರಾದ ಕೆ.ಎಸ್.ರಾಜಾಚಾರಿ ಅವರ ಗದ್ದೆಯಲ್ಲಿ ಶನಿವಾರ ಶಾಲಾ ಮಕ್ಕಳಿಗೆ ಏರ್ಪಡಿಸಿದ್ದ ಗ್ರಾಮೀಣ ಕೆಸರುಗದ್ದೆ ಕ್ರೀಡಾಕೂಟ ಗಮನ ಸೆಳೆಯಿತು.

ಮಳೆಯ ಸಿಂಚನದೊಂದಿಗೆ‌‌ ಆಗಾಗ್ಗೆ ಬಿಸಿಲಿನ ವಾತಾವರಣದಲ್ಲಿ ವಿದ್ಯಾರ್ಥಿಗಳು ಗದ್ದೆಯ ಕೆಸರಿನಲ್ಲಿ ಮಿಂದು ಎದ್ದು ಕೆಸರು ಮಣ್ಣಿನ ಸ್ಪರ್ಶ ಅನುಭವ ಪಡೆದರು.

ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನ ಜಿಲ್ಲಾ ಪ್ರಧಾನ ಆಯುಕ್ತ ಕೆ.ಟಿ.ಬೇಬಿಮ್ಯಾಥ್ಯೂ, ‘ವಿದ್ಯಾರ್ಥಿಗಳಲ್ಲಿ ಕೃಷಿ ಚಟುವಟಿಕೆಗಳು, ರೈತರ ಕೃಷಿ ಬದುಕು, ದೇಶದ ಕೃಷಿ ಜೀವನ ಬಗ್ಗೆ ಅರ್ಥ ಮಾಡಿಕೊಳ್ಳುವ ದಿಸೆಯಲ್ಲಿ ಏರ್ಪಡಿಸಿರುವ ಇಂತಹ ಕ್ರೀಡೆಗಳು ವಿದ್ಯಾರ್ಥಿಗಳಿಗೆ ಕೃಷಿ ಪರಿಚಯ ಮಾಡಿಕೊಡಲು ಸಹಕಾರಿಯಾಗಿವೆ’ ಎಂದರು.

ADVERTISEMENT

ಶಾಲೆಯ ಮುಖ್ಯ ಶಿಕ್ಷಕ ಟಿ.ಜಿ.ಪ್ರೇಮಕುಮಾರ್ ಮಾತನಾಡಿ, ‘ರೈತ ದೇಶದ ಬೆನ್ನೆಲಬು. ರೈತರ ಜೀವನಕ್ರಮ, ರೈತರು ಕೃಷಿ ಕಾರ್ಯದಲ್ಲಿ ಎದುರಿಸುವ ಕಷ್ಟ-ಕಾರ್ಪಣ್ಯಗಳು, ರೈತರ ಕೃಷಿ ಪದ್ಧತಿ ಬಗ್ಗೆ ವಿದ್ಯಾರ್ಥಿಗಳು ಪ್ರಾಯೋಗಿಕವಾಗಿ ಸ್ವತಃ ಅನುಭವ ಪಡೆಯಲು ಇಂತಹ ಕ್ರೀಡೆಗಳು ಸಹಕಾರಿಯಾಗಿವೆ. ಮಕ್ಕಳಿಗೆ ಕೃಷಿ ಪಾಠದ ಮಹತ್ವ ತಿಳಿಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು.

ಸ್ಕೌಟ್ಸ್ ಮತ್ತು ಗೈಡ್ಸ್‌ನ ಕುಶಾಲನಗರ ಸ್ಣಳೀಯ ಸಂಸ್ಥೆಯ ಅಧ್ಯಕ್ಷ ಡಾ.ಪ್ರವೀಣ್ ದೇವರಗುಂಡ ಸೋಮಪ್ಪ ಮಾತನಾಡಿ, ‘ಕೆಸರುಗದ್ದೆ ಕ್ರೀಡೆಯಲ್ಲಿ ಮಕ್ಕಳು ಸಂತಸ, ಸಂಭ್ರಮ‌ ಮತ್ತು ಖುಷಿಯಿಂದ ಪಾಲ್ಗೊಂಡಿರುವುದು ಸಂತಸ ತಂದಿದೆ’ ಎಂದರು.

ಈ ವೇಳೆ ಲಯನ್ಸ್ ‌ಕ್ಲಬ್‌ನ‌ ಉಪಾಧ್ಯಕ್ಷ ಕೆ.ಎನ್.ಪವನ್ ಕುಮಾರ್, ಪ್ರಗತಿಪರ ಕೃಷಿಕ ಕೆ.ಎಸ್.ರಾಜಾಚಾರಿ, ಕೂಡಿಗೆ ಡಯಟ್ ಸಂಸ್ಥೆಯ ಉಪನ್ಯಾಸಕಿ ಎಂ.ಲತಾ, ಕೂಡಿಗೆ ಸರ್ಕಾರಿ ಪಿಯು ಕಾಲೇಜಿನ ಪ್ರಾಂಶುಪಾಲ ಎಚ್.ಜೆ. ನಾಗರಾಜ್ ‌ಹಂಡ್ರಂಗಿ, ಜಿಲ್ಲಾ ಪ್ರೌಢಶಾಲಾ ಸಹ ಶಿಕ್ಷಕರ ‌ಸಂಘದ ಮಾಜಿ ಅಧ್ಯಕ್ಷ ಸಿ.ಟಿ. ಸೋಮಶೇಖರ್, ಲಯನ್ಸ್ ಕ್ಲಬ್ ನ ಅಧ್ಯಕ್ಷ ಎನ್.ಟಿ.ನಾರಾಯಣ್, ಪ್ರಗತಿಪರ ಕೃಷಿಕ ಕೆ.ಎಸ್.ರಾಜಾಚಾರಿ, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ನಿರ್ದೇಶಕ ಎಂ.ಎನ್.ಕಾಳಪ್ಪ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.