ಮಡಿಕೇರಿ: ಕೊಡಗು ಜಿಲ್ಲೆ ಮಾತ್ರವಲ್ಲ ರಾಜ್ಯದ ಐತಿಹಾಸಿಕ ಸ್ಮಾರಕಗಳಲ್ಲಿ ಸೋಮವಾರಪಪೇಟೆ ತಾಲ್ಲೂಕಿನ ಶನಿವಾರಸಂತೆ ಸಮೀಪದ ಮುಳ್ಳೂರಿನ ಬಸದಿಗಳೂ ಸೇರಿವೆ.
ಒಂದು ಕಾಲದಲ್ಲಿ ನಾಡಿನ ಪ್ರಮುಖ ಜೈನ ಕೇಂದ್ರವಾಗಿತ್ತು ಎಂಬುದಕ್ಕೆ ಈ ಊರಿನಲ್ಲಿ ಇಂದಿಗೂ ಇರುವ ತ್ರಿವಳಿ ಜೈನ ಬಸದಿ ಸಾಕ್ಷಿಯಾಗಿದೆ. ಇದು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಸಂರಕ್ಷಿತ ಸ್ಮಾರಕಗಳಾಗಿವೆ.
ಈ ಕುರಿತು ಸದ್ಯ ಬೆಂಗಳೂರಿನ ಮಿಥಿಕ್ ಸೊಸೈಟಿಯಲ್ಲಿ ಹಿರಿಯ ಸಂಶೋಧನಾಧಿಕಾರಿಯಾಗಿರುವ ಡಾ.ಪಿ.ಜಯಸಿಂಹ ಅವರು ಸಾಕಷ್ಟು ಸಂಶೋಧನೆ ನಡೆಸಿದ್ದಾರೆ.
ಮುಳ್ಳೂರಿನಲ್ಲಿ ಪಾರ್ಶ್ವನಾಥ, ಶಾಂತಿನಾಥ ಹಾಗೂ ಚಂದ್ರನಾಥ ತೀರ್ಥಂಕರರ 3 ಬಸದಿಗಳಿವೆ. ಗ್ರಾಮದಲ್ಲಿ 16ಕ್ಕೂ ಹೆಚ್ಚಿನ ಶಾಸನಗಳು ಸಿಕ್ಕಿದ್ದು, ಅವುಗಳೆಲ್ಲವೂ ಎಪಿಗ್ರಾಫಿಯ ಕರ್ನಾಟಕದ ಪರಿಷ್ಕೃತ ಆವೃತ್ತಿಯಲ್ಲಿ ದಾಖಲಾಗಿವೆ. ಕೊಂಗಾಳ್ವರು ಹಾಗೂ ವಿಜಯನಗರದ ಅರಸರ ಕಾಲದ ಶಾಸನಗಳು ಇವಾಗಿದ್ದು, ಕೊಂಗಾಳ್ವರ ರಾಣಿ ಪೋಚಬ್ಬೆ ಸೇರಿದಂತೆ ಅನೇಕ ಜೈನಮುನಿಗಳ ಹೆಸರುಗಳು ಇಲ್ಲಿ ಉಕ್ತವಾಗಿವೆ.
ಕೊಂಗಾಳ್ವ ರಾಜಮನೆತನದ ಸಾಮಂತ ಮೊದಲನೇ ರಾಜಾಧಿರಾಜ, 2ನೇ ರಾಜಾಧಿರಾಜ, ರಾಣಿ ಪೋಚಿಯಬ್ಬೆ, ಪುಷ್ಪಸೇನಸಿದ್ದಾಂತದೇವರ ಶಿಷ್ಯ ಗುಣಸೇನಪಂಡಿತದೇವರ ಹೆಜ್ಜೆ ಗುರುತುಗಳು ಇಲ್ಲಿವೆ. ಅದರಲ್ಲೂ ಗುಣಸೇನಪಂಡಿತದೇವ ಅವರು 1064ರ ವೇಳೆ ಇದೇ ಗ್ರಾಮದಲ್ಲಿ ತಮ್ಮ ಅಂತಿಮ ದಿನಗಳನ್ನು ಕಳೆದರು ಎಂಬುದನ್ನು ಪಿ.ಜಯಸಿಂಹ ಅವರು ತಮ್ಮ ಸಂಶೋಧನೆಯಲ್ಲಿ ದಾಖಲಿಸಿದ್ದಾರೆ.
ಧ್ಯಾನಾಸಕ್ತನಾಗಿ ಕುಳಿತಿರುವ ಪಾರ್ಶ್ವನಾಥ, ಶಾಂತಿನಾಥ ಸೇರಿದಂತೆ ಇನ್ನಿತರ ತೀರ್ಥಂಕರರ ಮೂರ್ತಿಗಳು ಶಾಂತಿ, ಸಮಾಧಾನ, ಅಹಿಂಸೆಯ ಪ್ರತೀಕವಾಗಿ ಇಲ್ಲಿ ಕಂಗೊಳಿಸುತ್ತಿವೆ.
ಇಂತಹದ್ದೊಂದು ಬಲು ಮಹತ್ವದ ಐತಿಹಾಸಿಕ ಪರಂಪರೆಯೇ ಇರುವ ಮುಳ್ಳೂರಿನ ಜೈನ ಬಸದಿಗಳು ಪ್ರವಾಸಿಗರಿಗೆ ಇನ್ನೂ ಅಷ್ಟು ಪರಿಚಿತವಾಗಿಲ್ಲ. ಈ ಬಸದಿಗಳ ಮಹತ್ವದ ಕುರಿತು ರಾಜ್ಯ ಮಾತ್ರವಲ್ಲ ಉತ್ತರ ಭಾರತದಲ್ಲೂ ಸಾಕಷ್ಟು ಪ್ರಚಾರ ನಡೆಯಬೇಕಿದೆ. ಆಗ ಇಂತಹದ್ದೊಂದು ಪುರಾತನ ಸ್ಮಾರಕದ ವೀಕ್ಷಣೆಗೆ ಇತಿಹಾಸದ ಮೇಲೆ ಆಸಕ್ತಿ ಹೊಂದಿರುವವರು ಬಾರದೇ ಇರರು. ಇಂತಹ ಕಾರ್ಯವನ್ನು ಜಿಲ್ಲೆಯ ಪ್ರವಾಸೋದ್ಯಮ ಇಲಾಖೆ ಮಾಡಬೇಕಿದೆ.
ಕೇವಲ ಮುಳ್ಳೂರು ಮಾತ್ರವಲ್ಲ ಕೊಡಗಿನಲ್ಲಿರುವ ಎಲ್ಲ ಐತಿಹಾಸಿಕ ಸ್ಮಾರಕಗಳನ್ನು ಉಳಿಸಿಕೊಳ್ಳಬೇಕು. ಮುಳ್ಳೂರು ತುಂಬಾ ಪ್ರಮುಖವಾದ ಜೈನ ಕೇಂದ್ರವಾಗಿತ್ತು.–ಪಿ.ಜಯಸಿಂಹ ಬೆಂಗಳೂರಿನ ಮಿಥಿಕ್ ಸೊಸೈಟಿಯ ಹಿರಿಯ ಸಂಶೋಧಾನಾಧಿಕಾರಿ.
ತ್ರಿವಳಿ ಜಿನಮಂದಿರದಲ್ಲಿ ಇಂದು ವಾರ್ಷಿಕ ಪೂಜಾ ಮಹೋತ್ಸವ
ಶನಿವಾರಸಂತೆ: ಇಲ್ಲಿಗೆ ಸಮೀಪದ ನಿಡ್ತ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಮುಳ್ಳೂರಿನ ತ್ರಿವಳಿ ಜಿನಮಂದಿರದ ವಾರ್ಷಿಕ ಪೂಜಾ ಮಹೋತ್ಸವವು ಮಾರ್ಚ್ 23 ರಂದು ನಡೆಯುತ್ತದೆ.
ಈ ಮೂರೂ ಬಸದಿಗಳಲ್ಲಿ ಮಹಾಭಿಷೇಕದೊಂದಿಗೆ ಪೂಜಾ ಕಾರ್ಯಗಳು ನೆರವೇರಲಿದ್ದು ಶ್ರೀ ಕ್ಷೇತ್ರ ಕನಕಗಿರಿ ದಿಗಂಬರ ಜೈನ ಮಠದ ಸ್ವಸ್ತಿಶ್ರೀ ಭುವನಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿ ಶ್ರೀಕ್ಷೇತ್ರ ಆರತಿಪುರ ದಿಗಂಬರ ಜೈನ ಮಠದ ಸಿದ್ದಾಂತಕೀರ್ತಿ ಭಟ್ಟಾರಕ ಭಟ್ಟಾಚಾರ್ಯವರ್ಯ ಸ್ವಾಮೀಜಿ ಮತ್ತು ಶ್ರೀಕ್ಷೇತ್ರ ಶ್ರವಣಬೆಳಗೂಳದ ದಿಗಂಬರ ಜೈನ ಮಠದ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ ಸಾನಿಧ್ಯ ವಹಿಸಲಿದ್ದಾರೆ.
ಬೆಳಿಗ್ಗೆ 10 ಗಂಟೆಗೆ ಧಾರ್ಮಿಕ ಹಾಗೂ ಸ್ವಾಮೀಜಿಗಳಿಗೆ ಫಲಪುಷ್ಪ ಸಮರ್ಪಣೆ ನಂತರ ಸ್ವಾಮೀಜಿಗಳಿಂದ ಆಶೀರ್ವಚನ ನಡೆಯುತ್ತದೆ. ಬೆಳಿಗ್ಗೆ 11.30ಕ್ಕೆ ತ್ರಿವಳಿ ಜಿನಮಂದಿರದಲ್ಲಿ ಭಗವಂತರಿಗೆ ಪಂಚಾಮೃತಾಭಿಷೇಕ ಮತ್ತು ಶಾಂತಿಧಾರ ಅಷ್ಟವಿಧಾರ್ಚನೆ ಮತ್ತು ಮಹಾಮಂಗಳಾರತಿ ಕಾರ್ಯವು ನಡೆಯಲಿದೆ ಎಂದು ಮುಳ್ಳೂರು ಜಿನಮಂದಿರ ಸೇವಾ ಸಮಿತಿಯ ಡಾ.ಅಶ್ವಿನಿ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.