ADVERTISEMENT

ಶನಿವಾರಸಂತೆ: ನಳನಳಿಸುತ್ತಿದೆ ನಂದಿಪುರ ಕೆರೆ

ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್.ಭೋಸರಾಜು ಅವರಿಂದ ಲೋಕಾರ್ಪಣೆ ಇಂದು

​ಪ್ರಜಾವಾಣಿ ವಾರ್ತೆ
Published 26 ಜನವರಿ 2025, 5:48 IST
Last Updated 26 ಜನವರಿ 2025, 5:48 IST
ಕೊಡ್ಲಿಪೇಟೆಯ ನಂದಿಪುರ ಕೆರೆಯು ಈಗ ನಳನಳಿಸುತ್ತಿರುವುದು
ಕೊಡ್ಲಿಪೇಟೆಯ ನಂದಿಪುರ ಕೆರೆಯು ಈಗ ನಳನಳಿಸುತ್ತಿರುವುದು   

ಶನಿವಾರಸಂತೆ: ಕೊಡಗಿನ ಗಡಿ ಭಾಗವಾದ ಕೊಡ್ಲಿಪೇಟೆ ಗ್ರಾಮದ ನಂದಿಪುರ ಕೆರೆ ಈಗ ನಳನಳಿಸುತ್ತಿದೆ. ಶುಭ್ರವಾದ ನೀರು, ಸ್ವಚ್ಛವಾದ ಪರಿಸರ, ಮಕ್ಕಳ ಉದ್ಯಾನ... ಹೀಗೆ ಹಲವು ಸವಲತ್ತುಗಳೊಂದಿಗೆ ಈ ಕೆರೆ ಇದೀಗ ಈ ಭಾಗದ ಆಕರ್ಷಣೆಯ ಕೇಂದ್ರ ಬಿಂದು ಎನಿಸಿದೆ.

ಕೊಡ್ಲಿಪೇಟೆಯ ಮುಖ್ಯರಸ್ತೆಯ ಸಮೀಪವೇ ಹಾಸನ ಜಿಲ್ಲೆಯ ಯಸಳೂರು ಮಾರ್ಗಕ್ಕೆ ತಾಕಿಕೊಂಡಿರುವ ಈ ಕೆರೆ ಕೊಡಗಿನ ಗಡಿ ಭಾಗದಲ್ಲೊಂದು ಪ್ರವಾಸಿತಾಣ ಎನಿಸುವಂತಿದೆ.

ಸುಮಾರು 4.5 ಎಕರೆ ವಿಸ್ತೀರ್ಣದಲ್ಲಿ ಮೈಚಾಚಿರುವ ಈ ಕೆರೆ ಮತ್ತು ಕೆರೆ ಅಂಗಳವನ್ನು ಅಭಿವೃದ್ಧಿಗಾಗಿ ಸಣ್ಣ ನೀರಾವರಿ ಇಲಾಖೆಯು ₹ 3.90 ಕೋಟಿಯನ್ನು ವಿನಿಯೋಗಿಸಿದೆ.

ADVERTISEMENT

ಕೊಡಗು ಜಿಲ್ಲೆಯಲ್ಲಿ ಇಲಾಖೆಯು ಕೆರೆಗಳ ಸೌಂದರ್ಯಕರಣ ಮಾಡಿದ ಏಕೈಕ ಕೆರೆ ಇದಾಗಿದೆ. ಬೇರೆ ಬೇರೆ ಕೆರೆಗಳನ್ನು ಅಭಿವೃದ್ಧಿಪಡಿಸಿದ್ದರೂ ಈ ಪರಿಯ ಸೌಂದರ್ಯ ವರ್ಧನೆಯ ಭಾಗ್ಯ ಸಿಕ್ಕಿರುವುದು ಕೇವಲ ನಂದಿಪುರ ಕೆರೆಗೆ ಮಾತ್ರ.

ಕಳೆದೊಂದು ವರ್ಷದಲ್ಲಿ ಆರಂಭವಾದ ಕೆರೆಯ ಸೌಂದರ್ಯೀಕರಣ ಕಾಮಗಾರಿ ಪೂರ್ಣಗೊಂಡಿದೆ. ಶುಭ್ರವಾದ ನೀರಿನ ಸುತ್ತ ಸುಸಜ್ಜಿತವಾದ ನಡಿಗೆ ಪಥ ವಾಯುವಿಹಾರಿಗಳಿಗೆ ಖುಷಿ ತರಿಸುವಂತಿದೆ. ಇಲ್ಲಿ ಇಂತಹದ್ದೊಂದು ನಡಿಗೆಯ ಪಥ ವಾಯುವಿಹಾರಿಗಳಿಗೆ ಇರಲಿಲ್ಲ. ಇದಕ್ಕೆ ಇಂಟರ್‌ಲಾಕ್‌ ಕೂಡ ಅಳವಡಿಸಲಾಗಿದ್ದು, ವಾಯುವಿಹಾರಿಗಳನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿದೆ.

ಕಳೆಗುಂದಿದ್ದ ಈ ಕೆರೆ ಈಗ ಇಲಾಖೆಯ ಪರಿಶ್ರಮದಿಂದ ಜಿಲ್ಲೆಯ ‘ಎ’ ಶ್ರೇಣಿ ಎಂಬ ಶ್ರೇಯಕ್ಕೆ ಪಾತ್ರವಾಗಿದೆ.

ಕೆರೆಯ ಸುತ್ತ ತಡೆಗೋಡೆ, ಸಾರ್ವಜನಿಕರಿಗೆ ವಾಯುವಿಹಾರ, ವಿಶ್ರಾಂತಿ ಧಾಮ, ಮಕ್ಕಳ ಉದ್ಯಾನ, ಬಣ್ಣ ಬಣ್ಣದ ವಿದ್ಯುತ್ ದೀಪಗಳ ಕೆರೆಯ ಅಂಗವನ್ನು ಮತ್ತಷ್ಟು ಹೆಚ್ಚಿಸಿವೆ.

ಈ ಕುರಿತು ‘ಪ್ರಜಾವಾಣಿ’ ಸಣ್ಣ ನೀರಾವರಿ ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಕುಮಾರಸ್ವಾಮಿ ಅವರನ್ನು ಸಂಪರ್ಕಿಸಿದಾಗ ಅವರು, ‘ಸಾರ್ವಜನಿಕರಿಗೆ ಉಚಿತ ಪ್ರವೇಶ ಇದೆ. ಒಂದು ವರ್ಷಗಳ ಕಾಲ ಇಲಾಖೆಯೇ ಇದರ ನಿರ್ವಹಣೆ ಮಾಡಲಿದೆ’ ಎಂದರು.

ನಂದಿಪುರ ಕೆರೆಯಲ್ಲಿ ಹಲವು ಬಗೆಯ ಸೌಲಭ್ಯಗಳಿವೆ. ಈ ಭಾಗದ ಜನರು ಇದನ್ನು ಉತ್ತಮ ರೀತಿಯಲ್ಲಿ ಬಳಕೆ ಮಾಡಿಕೊಳ್ಳಬಹುದು
-ಕುಮಾರಸ್ವಾಮಿ ಸಣ್ಣ ನೀರಾವರಿ ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್
ನಮ್ಮ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ನಂದಿಪುರ ಕೆರೆಯನ್ನು ಅಭಿವೃದ್ಧಿಪಡಿಸಿರುವುದು ಸಂತೋಷ ತಂದಿದೆ. ಇದನ್ನು ಉತ್ತಮವಾಗಿ ಉಳಿಸಿಕೊಳ್ಳುವ ಜವಾಬ್ದಾರಿ ಕೊಡ್ಲಿಪೇಟೆ ಜನರ ಕೈಯಲ್ಲಿದೆ.
- ಅಪ್ಸರ್ ಬೇಗಂ ಕೊಡ್ಲಿಪೇಟೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ
ಕೆರೆ ಅಭಿವೃದ್ಧಿಯಾಗಿರುವುದು ಕೊಡ್ಲಿಪೇಟೆ ಪಂಚಾಯಿತಿಗೆ ಮೆರುಗು ತಂದಿದೆ. ಸಾರ್ವಜನಿಕರು ದಣಿವಾರಿಸಿಕೊಳ್ಳಲು ವಾಯುವಿಹಾರ ಮಾಡಲು ಸಹಕಾರಿಯಾಗಿದೆ
- ಹರೀಶ್‌ ಕೊಡ್ಲಿಪೇಟೆ ಗ್ರಾಮ ಪಂಚಾಯಿತಿ ಅಭಿವದ್ಧಿ ಅಧಿಕಾರಿ
ಕೊಡ್ಲಿಪೇಟೆಯ ನಂದಿಪುರ ಕೆರೆಯಲ್ಲಿ ಸುಸಜ್ಜಿತವಾದ ನಡಿಗೆ ಪಥ (ವಾಕಿಂಗ್ ಪಾತ್) ನಿರ್ಮಿಸಲಾಗಿದೆ
ಕೊಡ್ಲಿಪೇಟೆಯ ನಂದಿಪುರ ಕೆರೆಯಲ್ಲಿ ಹಸಿರು ಹುಲ್ಲು ಹಾಸು ನಿರ್ಮಿಸಿರುವುದು
ತುಂಬಿ ತುಳುಕುತ್ತಿದೆ ಕೊಡ್ಲಿಪೇಟೆಯ ನಂದಿಪುರ ಕೆರೆ
ಚಿಣ್ಣರನ್ನು ಸೆಳೆಯುತ್ತಿವೆ ಮಕ್ಕಳ ಆಟಿಕೆಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.