
ನಾಪೋಕ್ಲು: ಜಿಲ್ಲೆಯ ವಿವಿಧೆಡೆ ಭಾನುವಾರ ಹನಿ ಮಳೆಯಾಗಿದ್ದರೆ ಶನಿವಾರಸಂತೆ ಹೋಬಳಿ ವ್ಯಾಪ್ತಿಯಲ್ಲಿ ದಿನವಿಡೀ ತುಂತುರು ಮಳೆ ಸುರಿಯಿತು.
ಸುರಿದ ತುಂತುರು ಮಳೆ ಕಾಫಿ ಬೆಳೆಗಾರರಿಗೆ ಆತಂಕ ತರಿಸಿದೆ. ಜಿಲ್ಲೆಯಲ್ಲಿ ಕಾಫಿ ಕೊಯ್ಲು ಬಿರುಸಿನಿಂದ ಸಾಗುತ್ತಿರುವ ಈ ದಿನಗಳಲ್ಲಿ ಮೋಡ ಕವಿದ ವಾತಾವರಣ ಹಾಗೂ ಹನಿ ಮಳೆ ಸಹಜವಾಗಿಯೇ ಆತಂಕ ತಂದೊಡ್ಡಿದೆ.
ಭತ್ತದ ಬೆಳೆ ಕೊಯ್ಲು ಪೂರ್ಣಗೊಳ್ಳುವ ಹಂತದಲ್ಲಿದೆ. ಕಾಫಿ ಕೊಯ್ಲು ಇದೀಗ ಭರದಿಂದ ಸಾಗುತ್ತಿದೆ. ಕೊಯ್ಲು ಮಾಡಿದ ಕಾಫಿಯನ್ನು ಕಣದಲ್ಲಿ ಹರವಿ ಒಣಗಿಸಲಾಗುತ್ತಿದೆ. ಮೋಡ ಕವಿದ ವಾತಾವರಣದಿಂದ ಕಾಫಿ ಒಣಗಿಸಲು ತೊಡಕಾಗಿದೆ ಎಂದು ಬೆಳಗಾರರು ಸಮಸ್ಯೆ ತೋಡಿಕೊಂಡರು.
ಭಾನುವಾರ ದಿಢೀರ್ ಅಲ್ಲಲಿ ಹನಿ ಮಳೆಯಾಗಿದೆ. ನಾಪೋಕ್ಲು ವ್ಯಾಪ್ತಿಯಲ್ಲಿ ದಿನವಿಡೀ ಮೋಡ ಕವಿದ ವಾತಾವರಣವಿತ್ತು. ಸಮೀಪದ ಗ್ರಾಮಗಳಲ್ಲಿ ಅಲ್ಲಲ್ಲಿ ಹನಿ ಮಳೆಯಾಯಿತು. ದಿನವಿಡೀ ಮೋಡ ಕವಿದ ವಾತಾವರಣದಿಂದಾಗಿ ಕಾಫಿ ಒಣಗಿಸಲು ಸಮಸ್ಯೆಯಾಗಿದೆ. ಈಗ ಮಳೆಯಾದಲ್ಲಿ ಕೊಯ್ದು ಮಾಡಿದ ಕಾಫಿಗೂ ಹಾನಿಯಾಗುವುದಲ್ಲದೇ ಮುಂದಿನ ವರ್ಷದ ಫಸಲಿಗೂ ಧಕ್ಕೆ ಆಗಲಿದೆ. ಸಾಮಾನ್ಯವಾಗಿ ಫೆಬ್ರವರಿ ಕೊನೆಯ ವಾರದಲ್ಲಿ ಅಥವಾ ಮಾರ್ಚ್ ಮೊದಲ ವಾರದಲ್ಲಿ ಮಳೆಯಾದಲ್ಲಿ ಬೆಳೆಗಾರರಿಗೆ ಅನುಕೂಲ ಎಂದು ರೈತರು ಅಭಿಪ್ರಾಯಪಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.