ADVERTISEMENT

ಆರ್ಥಿಕವಾಗಿ ಲಾಭದಾಯಕ ಕೋಳಿ ಸಾಕಾಣಿಕೆ

ಸಿ.ಎಸ್.ಸುರೇಶ್
Published 3 ಜನವರಿ 2019, 19:31 IST
Last Updated 3 ಜನವರಿ 2019, 19:31 IST
ನಾಪೋಕ್ಲು ಸಮೀಪದ ಕಡಂಗ ಗ್ರಾಮದಲ್ಲಿ ಮಹಿಳೆ ರೆಹನಾ ಕೋಳಿ ಸಾಕಾಣಿಕೆಯಲ್ಲಿ ತೊಡಗಿರುವುದು.
ನಾಪೋಕ್ಲು ಸಮೀಪದ ಕಡಂಗ ಗ್ರಾಮದಲ್ಲಿ ಮಹಿಳೆ ರೆಹನಾ ಕೋಳಿ ಸಾಕಾಣಿಕೆಯಲ್ಲಿ ತೊಡಗಿರುವುದು.   

ನಾಪೋಕ್ಲು: ಕೊಡಗು ಜಿಲ್ಲೆಯಲ್ಲಿ ಕೋಳಿ ಸಾಕಾಣಿಕೆ ಜನಪ್ರಿಯವಾಗಿದ್ದ ಕಾಲವೊಂದಿತ್ತು. ಗ್ರಾಮೀಣ ಪ್ರದೇಶದ ಹೆಚ್ಚಿನ ಮಂದಿ ಕೋಳಿ ಸಾಕಾಣಿಕೆಯಲ್ಲಿ ತೊಡಗಿಸಿಕೊಂಡಿದ್ದರು. ಆಧುನಿಕತೆಯತ್ತ ವಾಲುತ್ತಿದ್ದಂತೆ ಕೃಷಿ, ಹೈನುಗಾರಿಕೆ, ಪ್ರಾಣಿ ಸಾಕಾಣಿಕೆಯಿಂದ ದೂರ ಉಳಿದ ಮಂದಿ ಕೋಳಿ ಸಾಕಾಣಿಕೆಯಿಂದಲೂ ದೂರವೇ ಉಳಿದರು. ಅಪರೂಪಕ್ಕೆ ಕೆಲವರು ಕೋಳಿ ಸಾಕಾಣಿಕೆಯಂತಹ ಉಪ ಕಸುಬಿನಲ್ಲಿ ತೊಡಗಿಸಿಕೊಂಡು ಆರ್ಥಿಕವಾಗಿ ಲಾಭ ಕಂಡುಕೊಂಡಿದ್ದಾರೆ.

ಸಮೀಪದ ಕಡಂಗ ಗ್ರಾಮದ ಮಹಿಳೆ ರೆಹನಾ ತಮ್ಮ ವೃತ್ತಿಯ ಜೊತೆಗೆ ಕೋಳಿ ಸಾಕಾಣಿಕೆಯಂತಹ ಉಪ ಕಸುಬಿನಲ್ಲಿ ತೊಡಗಿಸಿಕೊಂಡು ಯಶಸ್ಸು ಸಾಧಿಸಿದ್ದಾರೆ.

ಆರ್ಥಿಕವಾಗಿ ಲಾಭ ಗಳಿಸುತ್ತಿದ್ದಾರೆ. ಅತ್ತಹಳ್ಳಿಯೂ ಅಲ್ಲದ ಇತ್ತ ಪಟ್ಟಣವೂ ಅಲ್ಲದ ಊರಿನಲ್ಲಿ ಸ್ವಂತ ಮನೆಯೊಂದನ್ನು ನಿರ್ಮಿಸಿಕೊಂಡು ಇರುವ ಸ್ಥಳದಲ್ಲಿ ಕೋಳಿ ಸಾಕಾಣಿಕೆಯಲ್ಲಿ ತೊಡಗಿಸಿಕೊಂಡಿರುವ ರೆಹನಾ ಅವರ ಕುಟುಂಬ ಗೆಲುವಿನ ನಗು ಬೀರಿದೆ.

ADVERTISEMENT

ಕಡಂಗ ಗ್ರಾಮದ ವಿಎಸ್ಎಸ್ಎನ್‌ನಲ್ಲಿ ಸಹಾಯಕರಾಗಿ ಕಾರ್ಯ ನಿರ್ವಹಿಸುತ್ತಿರುವ ರೆಹನಾ, ತಮ್ಮ ದೈನಂದಿನ ವೃತ್ತಿಯ ಜೊತೆಗೆ ಕೋಳಿ ಸಾಕಾಣಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ಮನೆಯ ಸುತ್ತ ಇರುವ ಅಲ್ಪಜಾಗದಲ್ಲಿ ವಿವಿಧ ತಳಿಗಳ ಕೋಳಿಗಳನ್ನು ಸಾಕುತ್ತಿದ್ದಾರೆ. ಗ್ರಾಮೀಣ ಪ್ರದೇಶ ಮಾತ್ರವಲ್ಲ, ಸುತ್ತಮುತ್ತಲ ಪಟ್ಟಣಗಳಿಂದಲೂ ಜನರು ಬಂದು ಕೋಳಿ ಖರೀದಿಸುತ್ತಾರೆ.

ವಿಶೇಷವಾಗಿ ನಾಟಿ ತಳಿಯ ಕೋಳಿಗಳಿಗೆ ಬೇಡಿಕೆ ಇದ್ದು ತಿಂಗಳಿಗೆ 100-150 ಕೋಳಿ ಮಾರಾಟ ಮಾಡುತ್ತಿದ್ದಾರೆ. ಮೊಟ್ಟೆಗಳಿಗೂ ಕೂಡ ಬೇಡಿಕೆಯಿದೆ. ಮೊಟ್ಟೆ ಮಾರಾಟದಿಂದ ಹಾಗೂ ಕೋಳಿ ಮಾರಾಟದಿಂದ ತಿಂಗಳಿಗೆ ಆರು ಸಾವಿರಕ್ಕೂ ಅಧಿಕ ಹಣ ಗಳಿಸುತ್ತಿದ್ದಾರೆ.

ಸ್ಥಳೀಯರಿಂದಲೇ ಪ್ರತಿದಿನಕ್ಕೆ 30 ಮೊಟ್ಟೆ ಬೇಡಿಕೆಯಿದೆ. ನಾಟಿ ತಳಿಯಿಂದ ಲಭಿಸುವ ಮೊಟ್ಟೆ ಬೇಡಿಕೆಯನ್ನು ಪೂರೈಸಲು ಸಾಧ್ಯವಿಲ್ಲ. ಕೇರಳದಿಂದ ಬಿ.ವಿ. 380 ತಳಿಯ ಕೋಳಿಗಳನ್ನು ತರಿಸಿದ್ದೇವೆ. ಇದು 18 ತಿಂಗಳು ಮೊಟ್ಟೆ ಇಡುತ್ತದೆ. ಒಂದು ಪೆಟ್ಟಿಗೆಯಲ್ಲಿ 48 ಕೋಳಿಗಳನ್ನು ಸಾಕುತ್ತಿದ್ದು ಪ್ರತಿದಿನ 48 ಮೊಟ್ಟೆಗಳು ಲಭಿಸುತ್ತಿದೆ ಎನ್ನುತ್ತಾರೆ ರೆಹನಾ.

ಕೋಳಿ ಸಾಕಾಣಿಕೆಗಾಗಿ ಹುಲ್ಲು, ಸೊಪ್ಪು, ತರಕಾರಿಗಳನ್ನು ಹೇರಳವಾಗಿ ಬಳಸುತ್ತಾರೆ. ಇದರಿಂದ ಫೀಡ್ ಕೊಂಡುಕೊಳ್ಳುವ ಪ್ರಮಾಣ ಕಡಿಮೆಯಾಗಿದೆ.

ಮನೆಯಲ್ಲಿ ತಾಯಿ ನೆಬಿಸಾಳೊಂದಿಗೆ ಉಪ ವೃತ್ತಿಗಳನ್ನು ರೆಹನಾ ನಿರ್ವಹಿಸುತ್ತಿದ್ದಾರೆ. ಮನೆ ಯಜಮಾನರ ಪ್ರೋತ್ಸಾಹವೂ ಇದೆ. ಕೆಲಸಕ್ಕೆ ವಾರಕ್ಕೆ ಒಂದು ದಿನ ಭಾನುವಾರದಂದು ಕಾರ್ಮಿಕರ ಅವಲಂಬನೆ ಬಿಟ್ಟರೆ ಉಳಿದೆಲ್ಲಾ ದಿನಗಳಲ್ಲಿ ರೆಹನಾ ಕುಟುಂಬ ಪೂರ್ಣ ಪ್ರಮಾಣದಲ್ಲಿ ಉಪಯುಕ್ತ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದೆ.ಸಂಪರ್ಕಕ್ಕೆ ರೆಹನಾ ಮೊಬೈಲ್: 98804 55793.

380 ತಳಿಯ ಕೋಳಿಗಳನ್ನು ಸಾಕುತ್ತಿರುವುದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.