ADVERTISEMENT

ಮತ್ತೆ ಆನೆ‌–ಮಾನವ ಸಂಘರ್ಷ ಆರಂಭ; ಕಾಡಾನೆ ಹಾವಳಿಗೆ ಕೃಷಿಕರು ತತ್ತರ

ಕಾಫಿ– ಬಾಳೆ ಫಸಲು ನಷ್ಟ

ಅದಿತ್ಯ ಕೆ.ಎ.
Published 12 ಆಗಸ್ಟ್ 2019, 8:33 IST
Last Updated 12 ಆಗಸ್ಟ್ 2019, 8:33 IST
ವಾಲ್ನೂರು– ತ್ಯಾಗತ್ತೂರು ಗ್ರಾಮದ ಅಂಚಿನಲ್ಲಿ ಕಾಣಿಸಿಕೊಂಡಿದ್ದ ಕಾಡಾನೆ ಹಿಂಡು
ವಾಲ್ನೂರು– ತ್ಯಾಗತ್ತೂರು ಗ್ರಾಮದ ಅಂಚಿನಲ್ಲಿ ಕಾಣಿಸಿಕೊಂಡಿದ್ದ ಕಾಡಾನೆ ಹಿಂಡು   

ಮಡಿಕೇರಿ: ಕೊಡಗಿನಲ್ಲಿ ಮತ್ತೆ ಕಾಡಾನೆ ಹಾವಳಿ ತೀವ್ರವಾಗಿದೆ. ಆನೆಗಳು ನಾಡಿಗೆ ಲಗ್ಗೆಯಿಡುತ್ತಿರುವ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿವೆ. ಇದು ಕೃಷಿಕರಿಗೆ ತಲೆನೋವಾಗಿ ಪರಿಣಮಿಸಿದ್ದು ವರ್ಷವಿಡೀ ಬೆಳೆದ ಬೆಳೆಯನ್ನೇ ಉಳಿಸಿಕೊಳ್ಳಲು ರೈತರು ಹರಸಾಹಸ ಪಡುತ್ತಿದ್ದಾರೆ. ಮಾನವ ಪ್ರಾಣಕ್ಕೂ ಆನೆಗಳು ಕಂಟಕವಾಗುತ್ತಿವೆ.

ಕಳೆದ ವರ್ಷ ಪ್ರಾಕೃತಿಕ ವಿಕೋಪದ ಬಳಿಕ ಕಾಡಾನೆ ಹಾವಳಿ ಸ್ವಲ್ಪಮಟ್ಟಿಗೆ ತಗ್ಗಿತ್ತು. ಇದರಿಂದ ರೈತರು ಹಾಗೂ ಸಾರ್ವಜನಿಕರು ನಿಟ್ಟುಸಿರು ಬಿಟ್ಟಿದ್ದರು. ಈಗ ಮತ್ತೆ ಆನೆ–ಮಾನವ ಸಂಘರ್ಷ ಮಿತಿಮೀರಿದೆ. ಅನೆ ಸಂತತಿ ಹೆಚ್ಚಾಗಿದೆಯೇ ಎಂಬ ಸಂದೇಹ ಜಿಲ್ಲೆಯ ಜನರನ್ನು ಕಾಡಲು ಆರಂಭಿಸಿದೆ.

ಕೊಡಗಿನಲ್ಲಿ ಬೇಸಿಗೆ ಮಳೆಬಿದ್ದರೂ ಅರಣ್ಯ ಪ್ರದೇಶದಲ್ಲಿರುವ ಕೆರೆ, ಬಾವಿ, ತೋಡುಗಳಲ್ಲಿ ನಿರೀಕ್ಷಿತ ಪ್ರಮಾಣದ ನೀರು ಸಂಗ್ರಹವಾಗಿಲ್ಲ. ಆನೆಗಳಿಗೆ ಅಗತ್ಯವಿದ್ದ ಆಹಾರವೂ ಅರಣ್ಯದಲ್ಲಿ ಲಭಿಸುತ್ತಿಲ್ಲ. ಇದರಿಂದ ಕಾಡಾನೆಗಳು ನಾಡಿನತ್ತ ವಲಸೆ ಬರುತ್ತಿರುವ ಪ್ರಕರಣಗಳೂ ಹೆಚ್ಚಾಗುತ್ತಿವೆ. ಜಿಲ್ಲೆಯ ಮೂರು ತಾಲ್ಲೂಕುಗಳಾದ ಸೋಮವಾಪರಪೇಟೆ, ಮಡಿಕೇರಿ ಹಾಗೂ ವಿರಾಜಪೇಟೆ ವ್ಯಾಪ್ತಿಯ ಬಹುತೇಕ ಗ್ರಾಮಗಳು ಆನೆ ಹಾವಳಿಯಿಂದ ತತ್ತರಿಸಿವೆ.

ADVERTISEMENT

ಸೋಮವಾರಪೇಟೆ ತಾಲ್ಲೂಕಿನ ಯಡವನಾಡು ಗ್ರಾಮದಲ್ಲಿ ಆನೆ ಹಾವಳಿ ಮಿತಿಮೀರಿದೆ. ಕಂದಕ ನಿರ್ಮಾಣ, ಸೋಲಾರ್‌ ಬೇಲಿ ಅಳವಡಿಕೆ ಉಪಾಯಗಳು ಈ ಹಾವಳಿ ತಡೆಯಲು ಸಾಧ್ಯವಾಗಿಲ್ಲ. ‘ಶಾಶ್ವತ ಪರಿಹಾರ ಕ್ರಮ ರೂಪಿಸಿ’ ಎಂದು ಗ್ರಾಮಸ್ಥರು ಬೇಡಿಕೆಯಿಟ್ಟಿದ್ದರೂ ಅರಣ್ಯ ಇಲಾಖೆ ಮಾತ್ರ ನಿರ್ಲಕ್ಷ್ಯ ವಹಿಸುತ್ತಿದೆ ಎಂಬ ಆರೋಪಗಳು ಕೇಳಿಬಂದಿದೆ.

ಕಾಫಿ, ಬಾಳೆ ಬೆಳೆಯು ಆನೆ ಹಾವಳಿಗೆ ನಾಶವಾಗುತ್ತಿವೆ ಎಂದು ಗ್ರಾಮಸ್ಥರು ನೋವು ತೋಡಿಕೊಳ್ಳುತ್ತಿದ್ದಾರೆ. ಸಮಸ್ಯೆಗೆ ಮುಕ್ತಿ ನೀಡದಿದ್ದರೆ ಸತ್ಯಾಗ್ರಹ ನಡೆಸುವ ನಿರ್ಧಾರಕ್ಕೆ ಹಲವು ಗ್ರಾಮಸ್ಥರು ಬಂದಿದ್ದಾರೆ. ಯಡವನಾಡು ಮಾತ್ರವಲ್ಲ; ಮಾದಾಪುರ, ಸೂರ್ಲಬ್ಬಿ, ಚಟ್ಟಳ್ಳಿ, ಕೊಡಗರಳ್ಳಿ, ಶಾಂತಳ್ಳಿ, ಶನಿವಾರಸಂತೆ ಸುತ್ತಮತ್ತ ಆನೆ ಹಾವಳಿ ಈಗ ಹೆಚ್ಚಾಗಿದೆ.

ದಕ್ಷಿಣ ಕೊಡಗಿನಲ್ಲಿ ಹೆಚ್ಚು!: ಹೆಚ್ಚಾಗಿ ಕಾಫಿ ತೋಟವನ್ನೇ ಒಳಗೊಂಡಿರುವ ದಕ್ಷಿಣ ಕೊಡಗಿನಲ್ಲಿ ಕಾಡಾನೆ ಹಾವಳಿ ವಿಪರೀತ. ಇದರಿಂದ ರೈತರು ಹೈರಾಣಾಗಿದ್ದಾರೆ. ಕಾನೂರು, ಪೊನ್ನಂಪೇಟೆ, ಕುಮಟೂರು, ಬೀರುಗ, ಕಾಕೂರು ಕಾಫಿ ತೋಟದಲ್ಲಿ ಆನೆಗಳು ಬಿಡಾರ ಹೂಡಿವೆ. ನಾಗರಹೊಳೆ ಅಭಯಾರಣ್ಯವು ಸಮೀಪದಲ್ಲೇ ಇರುವ ಕಾರಣಕ್ಕೆ ಆನೆ ಕಾಟ ತೀವ್ರವಾಗಿದೆ. ಸಣ್ಣಪುಟ್ಟ ರೈತರು ಕೃಷಿಯನ್ನೇ ಕೈಬಿಡುತ್ತೇವೆ ಎನ್ನುವಷ್ಟರ ಮಟ್ಟಿಗೆ ಸಮಸ್ಯೆಗೆ ತುತ್ತಾಗಿದ್ದಾರೆ. ಕಳೆದ ಒಂದುವಾರದಿಂದ ಈ ಭಾಗದಲ್ಲಿ ‘ಕ್ಷಿಪ್ರ ಕಾರ್ಯ ಪಡೆ’ಯ (ಆರ್‌ಆರ್‌ಟಿ) ಕಾರ್ಯಾಚರಣೆ ನಡೆಸುತ್ತಿದ್ದರೂ ಆನೆಗಳನ್ನು ಅರಣ್ಯ ಪ್ರದೇಶಕ್ಕೆ ಅಟ್ಟಲು ಸಾಧ್ಯವಾಗಿಲ್ಲ.

‘ಕುಟ್ಟ, ಶ್ರೀಮಂಗಲ, ಕಾಯಿಮನೆ, ಕೆ. ಬಾಡಗ, ನಾಲ್ಕೇರಿ, ಕುರ್ಚಿ, ನೆಮ್ಮಲೆ, ಮಂಚಳ್ಳಿ ಭಾಗದಲ್ಲಿ ಆನೆಗಳು ಠಿಕಾಣಿ ಹೂಡಿವೆ. ಲಕ್ಷಾಂತರ ರೂಪಾಯಿ ನಷ್ಟವಾಗುತ್ತಿದೆ. ಆನೆ ದಾಳಿಯಿಂದ ಮನುಷ್ಯರು ಸತ್ತ ಮೇಲೆ ಅರಣ್ಯಾಧಿಕಾರಿಗಳು ಓಡಿ ಬರುತ್ತಾರೆ. ವನ್ಯಜೀವಿ ದಾಳಿಯಿಂದ ರೈತರು ಸತ್ತರೆ ದೆಹಲಿ ಸರ್ಕಾರ ₹ 1 ಕೋಟಿ ಪರಿಹಾರ ನೀಡಿರುವ ಉದಾಹರಣೆಯಿದೆ. ಜತೆಗೆ, ಆ ಕುಟುಂಬದ ಸದಸ್ಯರೊಬ್ಬರಿಗೆ ಸರ್ಕಾರಿ ಉದ್ಯೋಗವನ್ನೂ ಕಲ್ಪಿಸಿದೆ. ಆದರೆ, ಕರ್ನಾಟಕ ರಾಜ್ಯದಲ್ಲಿ ಈ ನಿರ್ಲಕ್ಷ್ಯ ತೋರಿಸಲಾಗುತ್ತಿದೆ’ ಎಂದು ರೈತ ಸಂಘದ ಜಿಲ್ಲಾ ಅಧ್ಯಕ್ಷ ಚಿಮ್ಮಗಡ ಗಣೇಶ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಪುಂಡಾನೆ ಹಾಗೂ ತೋಟಕ್ಕೆ ಲಗ್ಗೆಯಿಡುವ ಆನೆಗಳನ್ನು ಗುರುತಿಸಿ ಅವುಗಳನ್ನು ಸೆರೆ ಹಿಡಿದು ಬೇರೆ ಜಿಲ್ಲೆಗೆ ರವಾನಿಸಬೇಕು. ರೈತರು ಜಿಲ್ಲೆಯಲ್ಲಿ ಬದುಕುವುದೇ ಕಷ್ಟವಾಗಿದೆ. ಕ್ರಮ ಕೈಗೊಳ್ಳದಿದ್ದರೆ ಪ್ರತಿಭಟನೆ ನಡೆಸುತ್ತೇವೆ’ ಎಂದೂ ಅವರು ಎಚ್ಚರಿಕೆ ನೀಡಿದ್ದಾರೆ.

ಸೋಲಾರ್‌ ಬೇಲಿಗೂ ಕ್ಯಾರೆ ಎನ್ನುತ್ತಿಲ್ಲ!: ಆನೆ ದಾಳಿ ತಡೆಗೆ ಅರಣ್ಯ ಇಲಾಖೆ ಸೋಲಾರ್‌ ಬೇಲಿ ನಿರ್ಮಿಸಿದೆ. ಆದರೆ, ಅದಕ್ಕೆ ಆನೆಗಳು ಕ್ಯಾರೆ ಎನ್ನುತ್ತಿಲ್ಲ. ಅವುಗಳನ್ನೇ ಮೆಟ್ಟಿ ಕಾಫಿ ತೋಟಕ್ಕೆ ಲಗ್ಗೆಯಿಟ್ಟು ಕಾಫಿ ಫಸಲು ನಾಶ ಪಡಿಸುತ್ತಿವೆ. ಆನೆಗಳು ಬರೀ ಕಾಫಿ ಫಸಲು ನಾಶ ಪಡಿಸುತ್ತಿಲ್ಲ. ಅಲ್ಲೇ ಠಿಕಾಣಿ ಹೂಡಿ ತೋಟದ ಆನೆಗಳಾಗಿ ಬದಲಾಗಿವೆ. ಸಿದ್ದಾಪುರ ವ್ಯಾಪ್ತಿಯಲ್ಲಿ ‘ಹ್ಯಾಂಗಿಂಗ್‌ ಸೋಲಾರ್‌ ಬೇಲಿ’ ನಿರ್ಮಿಸಲಾಗಿದೆ. ಅದು ಸ್ವಲ್ಪಮಟ್ಟಿಗೆ ಪರಿಹಾರ ಕಲ್ಪಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.