ADVERTISEMENT

ಕೊಡಗಿನಲ್ಲಿ ಮೋಡ ಬಿತ್ತನೆಗೆ ತೀವ್ರ ವಿರೋಧ

​ಪ್ರಜಾವಾಣಿ ವಾರ್ತೆ
Published 18 ಮೇ 2019, 12:40 IST
Last Updated 18 ಮೇ 2019, 12:40 IST
   

ಮಡಿಕೇರಿ: ಕೊಡಗೂ ಸೇರಿದಂತೆ ರಾಜ್ಯದ ಮಲೆನಾಡು ಜಿಲ್ಲೆಗಳಲ್ಲಿ ಮೋಡ ಬಿತ್ತನೆ ಮಾಡಬಾರದು ಎಂದು ಅಖಿಲ ಕೊಡವ ಸಮಾಜವು ಒತ್ತಾಯಿಸಿದೆ.

ಈ ಸಂಬಂಧಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ, ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ. ಮಹೇಶ್‌ ಅವರಿಗೆ ಕೊಡವ ಸಮಾಜದ ಅಧ್ಯಕ್ಷ ಮಾತಂಡ ಮೊಣ್ಣಪ್ಪ ಅವರು ಪತ್ರ ಬರೆದಿದ್ದು, ಜಿಲ್ಲೆಯಲ್ಲಿ ಮೋಡ ಬಿತ್ತನೆಗೆ ವಿರೋಧ ವ್ಯಕ್ತಪಡಿಸಿದ್ದಾರೆ.

ಕಳೆದ ವರ್ಷ ಸಂಭವಿಸಿದ್ದ ಪ್ರಾಕೃತಿಕ ವಿಕೋಪದಿಂದ ಕೊಡಗು ಜಿಲ್ಲೆಯು ಸಂಕಷ್ಟದಲ್ಲಿದೆ. ಇನ್ನೂ ಚೇತರಿಸಿಕೊಂಡಿಲ್ಲ. ಮೋಡ ಬಿತ್ತನೆಯಾದರೆ ಮತ್ತೊಮ್ಮೆ ದುರಂತ ಸಂಭವಿಸಲಿದೆ. ಗಾಯದ ಮೇಲೆ ಬರೆ ಎಳೆದಂತೆ ಆಗಲಿದೆ ಎಂದು ಪತ್ರದಲ್ಲಿ ನೋವು ತೋಡಿಕೊಂಡಿದ್ದಾರೆ.

ADVERTISEMENT

ಮಲೆನಾಡು ಭಾಗದಲ್ಲಿ ಮುಂಗಾರು ಮಳೆ ಜೂನ್‌ನಲ್ಲಿ ನಿಧಾನವಾಗಿ ಆರಂಭವಾಗಿ ಜುಲೈ–ಆಗಸ್ಟ್‌ನಲ್ಲಿ ಜೋರಾಗಿ ಸುರಿಯಲಿದೆ. ಇದು ಪ್ರಕೃತಿಯ ನಿಯಮ. ಪ್ರಕೃತಿಗೆ ವಿರುದ್ಧವಾಗಿ ಮಾನವ ನಿರ್ಮಿತ ಮೋಡ ಬಿತ್ತನೆ ಮಾಡಿದರೆ ವ್ಯತಿರಿಕ್ತ ಪರಿಣಾಮವಾಗಿ ಮತ್ತೆ ವಿಕೋಪ ಸಂಭವಿಸುವ ಸಾಧ್ಯತೆಗಳಿವೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ವಿಕೋಪದಿಂದ ರೈತರು, ವರ್ತಕರು, ಉದ್ಯಮಿಗಳು, ಕಾರ್ಮಿಕರು ಸೇರಿದಂತೆ ಜೀವ ಸಂಕುಲವೂ ಅಸ್ತಿತ್ವ ಕಳೆದುಕೊಳ್ಳುವ ಅಪಾಯವಿದೆ. ಮಲೆನಾಡು ಹೊರತುಪಡಿಸಿ ಬರಪೀಡಿತ ಪ್ರದೇಶಗಳಲ್ಲಿ ಮೋಡ ಬಿತ್ತನೆಗೆ ನಮ್ಮ ಯಾವುದೇ ವಿರೋಧವಿಲ್ಲ ಎಂದು ಹೇಳಿದ್ದಾರೆ.

ವಿರೋಧವನ್ನೂ ಲೆಕ್ಕಿಸದೇ ಮೋಡ ಬಿತ್ತನೆ ಮಾಡಿದರೆ ಪ್ರತಿಭಟನೆ ನಡೆಸುತ್ತೇವೆ ಎಂದೂ ಮಾತಂಡ ಮೊಣ್ಣಪ್ಪ ಪ್ರಕಟಣೆಯಲ್ಲಿ ಎಚ್ಚರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.