ADVERTISEMENT

ಕುಶಾಲನಗರ: ದುಬಾರೆ ಹಾಡಿಯಲ್ಲಿ ಸಮಸ್ಯೆ ಆಲಿಕೆ

ಸಮಸ್ಯೆ ಹೇಳಿಕೊಂಡ ಹಾಡಿ ಜನರು, ಪರಿಹಾರದ ಭರವಸೆ ನೀಡಿದ ಅಧಿಕಾರಿಗಳು

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2026, 4:23 IST
Last Updated 18 ಫೆಬ್ರುವರಿ 2026, 4:23 IST
ದುಬಾರೆ ಹಾಡಿಯಲ್ಲಿ ಜೋಪಡಿಯಲ್ಲಿ ಬುಡಕಟ್ಟು ಸಮುದಾಯದವರು ಬದುಕು ಸಾಗಿಸುತ್ತಿರುವುದು ಮಂಗಳವಾರ ಕಂಡು ಬಂತು  :ಪ್ರಜಾವಾಣಿ ಚಿತ್ರ/ರಂಗಸ್ವಾಮಿ
ದುಬಾರೆ ಹಾಡಿಯಲ್ಲಿ ಜೋಪಡಿಯಲ್ಲಿ ಬುಡಕಟ್ಟು ಸಮುದಾಯದವರು ಬದುಕು ಸಾಗಿಸುತ್ತಿರುವುದು ಮಂಗಳವಾರ ಕಂಡು ಬಂತು  :ಪ್ರಜಾವಾಣಿ ಚಿತ್ರ/ರಂಗಸ್ವಾಮಿ   

ಮಡಿಕೇರಿ: ಕುಶಾಲನಗರದ ದುಬಾರೆ ಹಾಡಿ ಜನರ ಸಮಸ್ಯೆಗಳಿಗೆ ಅಧಿಕಾರಿಗಳು ಪರಿಹಾರದ ಭರವಸೆ ನೀಡಿದರು.

ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಕೊಡಗು ಪ್ರೆಸ್‌ಕ್ಲಬ್ ಹಾಗೂ ಕುಶಾಲನಗರ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದಿಂದ ದುಬಾರೆ ಹಾಡಿಯಲ್ಲಿ ಮಂಗಳವಾರ ನಡೆದ ‘ಪತ್ರಕರ್ತರ ನಡೆ ಹಾಡಿ ಕಡೆ’ ಕಾರ್ಯಕ್ರಮದಲ್ಲಿ ಈ ದೃಶ್ಯ ಕಂಡು ಬಂತು.

ಅಂಗನವಾಡಿಗೆ ಶಿಕ್ಷಕರು ಸರಿಯಾಗಿ ಬರುತ್ತಿಲ್ಲ ಎಂಬ ಸಮಸ್ಯೆಗೆ ಸ್ಪಂದಿಸಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಪ್ರಸನ್ನ ಕುಮಾರ್, ‘ಕೂಡಲೇ ಪಕ್ಷದ ಅಂಗನವಾಡಿಯಿಂದ ಶಿಕ್ಷಕರನ್ನು ನಿಯೋಜಿಸಲಾಗುವುದು. ಹಾಡಿಯಲ್ಲೇ ಇರುವ ಅರ್ಹರನ್ನು ಶಿಕ್ಷಕರನ್ನಾಗಿ ನೇಮಕಾತಿ ಮಾಡಿಕೊಳ್ಳಲು ಪ್ರಯತ್ನ ನಡೆಸಲಾಗುವುದು’ ಎಂದು ಭರವಸೆ ನೀಡಿದರು.

ADVERTISEMENT

ಸ್ಥಳೀಯ ನಿವಾಸಿ ನಾಗು ಮಾತನಾಡಿ, ‘ಇಲ್ಲಿನ ನಿವಾಸಿಗಳಿಗೆ ಪಡಿತರ ಚೀಟಿ ಸೇರಿದಂತೆ ಅಗತ್ಯ ದಾಖಲೆಗಳಿಲ್ಲ. ನದಿಗೆ ಅಡ್ಡಲಾಗಿ ತೂಗು ಸೇತುವೆ ನಿರ್ಮಾಣವಾಗಬೇಕು’ ಎಂದು ಒತ್ತಾಯಿಸಿದರು.

ಕಿರಿಯ ಪ್ರಾಥಮಿಕ ಶಾಲೆ ಶಿಕ್ಷಕಿ ಎಲಿಜಬೇತ್ ಮಾತನಾಡಿ, ‘ಕಾಡು ದನಗಳು ಶಾಲಾ ಆವರಣಕ್ಕೆ ಬರುತ್ತಿವೆ’ ಎಂದು ಹೇಳಿದರು.

ಹಾಡಿಯಲ್ಲಿರುವ ಬಹುತೇಕ ಮನೆಗಳು ದುಸ್ಥಿತಿಯಲ್ಲಿವೆ. ಹಾಡಿಯಲ್ಲಿ ನ್ಯಾಯಬೆಲೆ ಅಂಗಡಿ ತೆರೆಯಬೇಕು. ರಸ್ತೆ ಸರಿಯಾಗಬೇಕು ಎಂದು ಕೆಲವರು ಒತ್ತಾಯಿಸಿದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಚಂದ್ರು ಮಾತನಾಡಿ, ‘ಯೋಗ್ಯ ಮನೆ ಇಲ್ಲ, ಯಾವುದೇ ಸೌಲಭ್ಯ ದೊರೆಯುತ್ತಿಲ್ಲ. ಎಲ್ಲರಿಗೂ ಮೂಲಸೌಕರ್ಯ ಸಿಗಬೇಕು. ಹಾಡಿಗೆ ಕಾಂಕ್ರಿಟ್ ರಸ್ತೆ ನಿರ್ಮಾಣ ಮಾಡಬೇಕು. ಇಲ್ಲಿಯೇ ಗ್ರಾಮ ಸಭೆ ನಡೆಸಬೇಕು’ ಎಂದು ಆಗ್ರಹಿಸಿದರು.

ರಾಜ್ಯ ಪಶ್ಚಿಮಘಟ್ಟ ಕಾರ್ಯಪಡೆ ಮಾಜಿ ಅಧ್ಯಕ್ಷ ಶಾಂತೆಯಂಡ ರವಿಕುಶಾಲಪ್ಪ ಮಾತನಾಡಿ, ‘ಆದಿವಾಸಿಗಳಿಗೆ ಸರ್ಕಾರದಿಂದ ಸಿಗಬೇಕಾದ ಎಲ್ಲಾ ಸವಲತ್ತುಗಳು ಸಕಾಲದಲ್ಲಿ ದೊರೆಯಬೇಕು. ಅಧಿಕಾರಿಗಳು ನಿರ್ಲಕ್ಷ್ಯ ವಹಿಸಬಾರದು’ ಎಂದು ಹೇಳಿದರು.

ಸಮಗ್ರ ಗಿರಿಜನ ಅಭಿವೃದ್ಧಿ ಯೋಜನಾ ಸಮನ್ವಯಾಧಿಕಾರಿ ಎಸ್.ಹೊನ್ನೇಗೌಡ ಮಾತನಾಡಿ, ‘ಹಾಡಿಗೆ ಕುಡಿಯುವ ನೀರು, ವಿದ್ಯುತ್ ಸಂಪರ್ಕ ಒದಗಿಸಲಾಗಿದೆ. ರಸ್ತೆ ನಿರ್ಮಾಣಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. 42 ಕುಟುಂಬಗಳಿಗೆ ಹಕ್ಕುಪತ್ರ ನೀಡಲಾಗಿದೆ. ನಂಜರಾಯಪಟ್ಟಣದಲ್ಲಿ ವಸತಿ ಶಾಲೆ ವ್ಯವಸ್ಥೆ ಕಲ್ಪಿಸಿದ್ದೇವೆ. ಮನೆ ನಿರ್ಮಾಣಕ್ಕೆ ₹4.50 ಲಕ್ಷ ಹಣ ನೀಡಲು ಸ್ಥಳೀಯ ಪಂಚಾಯಿತಿಯಲ್ಲಿ ಅವಕಾಶವಿದ್ದು, ಆನ್‌ಲೈನ್‌ನಲ್ಲಿ ದಾಖಲಾತಿ ಅಪ್‌ಲೋಡ್ ಮಾಡಿ ಯೋಜನೆಯ ಲಾಭ ಪಡೆದುಕೊಳ್ಳಬಹುದು. ತೂಗು ಸೇತುವೆ ನಿರ್ಮಾಣಕ್ಕೂ ಪ್ರಸ್ತಾವನೆ ಇದೆ. ಆದ್ಯತೆ ಮೇರೆಗೆ ಎಲ್ಲಾ ರೀತಿಯ ಸೌಲಭ್ಯಗಳನ್ನು ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತಿದೆ’ ಎಂದರು.

ಸೆಸ್ಕ್ ಅಧಿಕಾರಿ ಸತೀಶ್ ಮಾತನಾಡಿ, ‘ಈಗಾಗಲೇ ಎಲ್ಲಾ ಮನೆಗಳಿಗೆ ವಿದ್ಯುತ್ ಸಂಪರ್ಕ ಒದಗಿಸಲಾಗಿದೆ. 6-7 ಮನೆಯವರು ಅಗತ್ಯ ದಾಖಲಾತಿ ನೀಡಿಲ್ಲದ ಕಾರಣದಿಂದ ಆರ್‌ಆರ್ ನಂಬರ್ ನೀಡಿಲ್ಲ. ದಾಖಲಾತಿ ನೀಡಿದ ತಕ್ಷಣ ಸಂಪರ್ಕ ನೀಡಲಾಗುವುದು’ ಎಂದು ಹೇಳಿದರು.

ಈ ವೇಳೆ ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಾಚರಣಿಯಂಡ ಅನು ಕಾರ್ಯಪ್ಪ, ಪ್ರಧಾನ ಕಾರ್ಯದರ್ಶಿ ಎಚ್.ಜೆ.ರಾಕೇಶ್, ಖಜಾಂಚಿ ಸುನಿಲ್ ಪೊನ್ನೇಟಿ, ಕೊಡಗು ಪ್ರೆಸ್ ಕ್ಲಬ್ ಅಧ್ಯಕ್ಷ ಬೊಳ್ಳಜಿರ ಅಯ್ಯಪ್ಪ, ಕುಶಾಲನಗರ ತಾಲ್ಲೂಕು ಸಂಘದ ಅಧ್ಯಕ್ಷ ಎಂ.ಎನ್.ಚಂದ್ರಮೋಹನ್ ಭಾಗವಹಿಸಿದ್ದರು.

ದುಬಾರೆ ಹಾಡಿಯಲ್ಲಿರುವ ಅಂಗನವಾಡಿ ಕೇಂದ್ರ
ದುಬಾರೆ ಹಾಡಿ ಜನರ ಸಮಸ್ಯೆಗಳನ್ನು ಸಮಗ್ರ ಗಿರಿಜನ ಅಭಿವೃದ್ಧಿ ಯೋಜನಾ ಸಮನ್ವಯಾಧಿಕಾರಿ ಎಸ್.ಹೊನ್ನೇಗೌಡ ಮಂಗಳವಾರ ಆಲಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.