ADVERTISEMENT

ಅಧಿಕಾರಿ ನಿರ್ಲಕ್ಷ್ಯದಿಂದ ಅನ್ನಕ್ಕಾಗಿ ಗಿರಿಜನರ ಪರದಾಟ: ಗ್ರಾಮಸಭೆಯಲ್ಲಿ ಆರೋಪ‍

ದೊಡ್ಡಮಳ್ತೆ ಗ್ರಾಮಸಭೆಯಲ್ಲಿ ಹಲವು ಸಮಸ್ಯೆಗಳ ರಿಂಗಣ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2023, 11:23 IST
Last Updated 16 ಫೆಬ್ರುವರಿ 2023, 11:23 IST
ಸೋಮವಾರಪೇಟೆ ತಾಲ್ಲೂಕಿನ ದೊಡ್ಡಮಳ್ತೆ ಗ್ರಾಮ ಪಂಚಾಯಿತಿಯಲ್ಲಿ ನಡೆದ ಗ್ರಾಮಸಭೆಯಲ್ಲಿ ಅಧ್ಯಕ್ಷರಾದ ಬಿಂದು ಗ್ರಾಮಸ್ಥರ ಸಮಸ್ಯೆಗಳಿಗೆ ಉತ್ತರ ನೀಡಿದರು. ನೋಡೆಲ್ ಅಧಿಕಾರಿ ಸ್ವಾಮಿ, ರಶಿದಾ, ರುದ್ರಪ್ಪ, ಸ್ವಾಮಿ, ಗೋಪಾಲಕೃಷ್ಣ, ಪ್ರಮೀಳಾ, ಶಂಕರ್ ಇದ್ದರು.
ಸೋಮವಾರಪೇಟೆ ತಾಲ್ಲೂಕಿನ ದೊಡ್ಡಮಳ್ತೆ ಗ್ರಾಮ ಪಂಚಾಯಿತಿಯಲ್ಲಿ ನಡೆದ ಗ್ರಾಮಸಭೆಯಲ್ಲಿ ಅಧ್ಯಕ್ಷರಾದ ಬಿಂದು ಗ್ರಾಮಸ್ಥರ ಸಮಸ್ಯೆಗಳಿಗೆ ಉತ್ತರ ನೀಡಿದರು. ನೋಡೆಲ್ ಅಧಿಕಾರಿ ಸ್ವಾಮಿ, ರಶಿದಾ, ರುದ್ರಪ್ಪ, ಸ್ವಾಮಿ, ಗೋಪಾಲಕೃಷ್ಣ, ಪ್ರಮೀಳಾ, ಶಂಕರ್ ಇದ್ದರು.   

ಸೋಮವಾರಪೇಟೆ: ಸಮೀಪದ ದೊಡ್ಡಮಳ್ತೆ ಗ್ರಾಮ ಪಂಚಾಯಿತಿಯಲ್ಲಿ ಮಂಗಳವಾರ ನಡೆದ ಗ್ರಾಮಸಭೆಯಲ್ಲಿ ಹಲವು ಸಮಸ್ಯೆಗಳು ರಿಂಗಣಿಸಿದವು.

ಸಮಾಜ ಕಲ್ಯಾಣ ಇಲಾಖೆ, ಕಂದಾಯ ಇಲಾಖೆ ಮತ್ತು ಗ್ರಾಮ ಪಂಚಾಯಿತಿ ಜಂಟಿಯಾಗಿ ಹಾಡಿಯಲ್ಲಿ ವಾಸ್ತವ್ಯ ಹೂಡಿ, ಗಿರಿಜನರಿಗೆ ಎಲ್ಲಾ ದಾಖಲಾತಿಯನ್ನು ಮಾಡಿಕೊಡಬೇಕು. ತಪ್ಪಿದಲ್ಲಿ ಇವರಿಗೆ ಸರ್ಕಾರಿ ಸೌಲಭ್ಯಗಳು ದೊರೆಯುವುದಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಗಿರಿಜನರು ಅನ್ನಕ್ಕಾಗಿ ಪರದಾಡುವಂತಾಗಿದೆ ಎಂದು ಸದಸ್ಯರಾದ ಗೋಪಾಲಕೃಷ್ಣ, ಶಂಕರ, ಗ್ರಾಮಸ್ಥರಾದ ಎಸ್.ಎಂ.ಕೃಷ್ಣ, ಯೋಗೇಶ್ ದೂರಿದರು.

‘ಗಿರಿಜನರ ಹೆಸರಿನಲ್ಲಿ ಅಧಿಕಾರಿಗಳು ಲಕ್ಷದಷ್ಟು ಸಂಬಳ ಪಡೆಯುತ್ತಿದ್ದರೂ, ಇವರ ಅಭಿವೃದ್ಧಿಗೆ ಕೆಲಸ ಮಾಡುತ್ತಿಲ್ಲ. ಪೂರಕ ದಾಖಲಾತಿ ನೆಪ ಹೇಳಿ ಗಿರಿಜನರ ಅರ್ಜಿಯನ್ನು ತಿರಸ್ಕಾರ ಮಾಡುತ್ತಿದ್ದಾರೆ. ಇಲ್ಲಿನವರಿಗೆ ಆಧಾರ್ ಕಾರ್ಡ್, ಚುನಾವಣಾ ಗುರುತಿನ ಚೀಟಿ, ಪಡಿತರ ಚೀಟಿ ಸೇರಿದಂತೆ ಯಾವುದೇ ಪೂರಕ ದಾಖಲೆಗಳಿಲ್ಲ. ಇದರಿಂದ ಅರಣ್ಯ ಹಕ್ಕುಪತ್ರ ಹೇಗೆ ಪಡೆಯಲು ಸಾಧ್ಯ’ ಎಂದು ವಾರ್ಡ್ ಸದಸ್ಯ ಅನುಕುಮಾರ್ ಸಮಾಜಕಲ್ಯಾಣ ಇಲಾಖೆಯ ಅಧಿಕಾರಿಯನ್ನು ಪ್ರಶ್ನಿಸಿದರು.

ADVERTISEMENT

ಸಮಾಜ ಕಲ್ಯಾಣ ಇಲಾಖೆ, ಕಂದಾಯ ಇಲಾಖೆ ಮತ್ತು ಗ್ರಾಮ ಪಂಚಾಯಿತಿ ವತಿಯಿಂದ ಹಾಡಿಗಳಿಗೆ ಹೋಗಿ ಪರಿಶೀಲಿಸಲು ಸಭೆ ತೀರ್ಮಾನಿಸಿತು.

ದೊಡ್ಡಮಳ್ತೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಿರ್ಮಾಣವಾದ ಶೌಚಾಲಯ ಕಾಮಗಾರಿ ಕಳಪೆಯಾಗಿದೆ ಎಂದು ಎಸ್‌ಡಿಎಂಸಿ ಅಧ್ಯಕ್ಷ ಸತೀಶ್ ದೂರಿದರೆ, ಜಲಜೀವನ್ ಮಿಷನ್ ಯೋಜನೆಯ ಕುಡಿಯುವ ನೀರಿನ ಕಾಮಗಾರಿ ಸಂಪೂರ್ಣ ಕಳಪೆಯಾಗಿದೆ ಎಂದು ಸದಸ್ಯ ಗೋಪಾಲಕೃಷ್ಣ ಆರೋಪಿಸಿದರು.

ಕಂದಾಯ ಇಲಾಖೆಯ ಅಧಿಕಾರಿ ಗಳು ಫೋನ್ ತೆಗೆದುಕೊಳ್ಳುವುದಿಲ್ಲ ಎಂದು ಸದಸ್ಯ ಗೋಪಾಲ್ ಕೃಷ್ಣ ಆರೋಪಿಸಿ, ದೊಡ್ಡಮಳ್ತೆ ಗ್ರಾಮ ಪಂಚಾಯಿತಿಯನ್ನು ಶನಿವಾರಸಂತೆ ಯಿಂದ ಸೋಮವಾರಪೇಟೆ ಕಸಬಾ ಹೋಬಳಿಗೆ ಸೇರಿಸಲು ನಿರ್ಣಯ ಕೈಗೊಳ್ಳುವಂತೆ ಒತ್ತಾಯಿಸಿದರು.

ಶನಿವಾರ ಸಂತೆ ದಿನ ನಾಡ ಕಚೇರಿ ಯಲ್ಲಿ ಎಲ್ಲಾ ಅಧಿಕಾರಿಗಳು ಸಿಗುವಂತೆ ವ್ಯವಸ್ಥೆ ಮಾಡಬೇಕೆಂದು ಗ್ರಾಮಸ್ಥ ಎಸ್.ಎಂ.ಕೃಷ್ಣ ಒತ್ತಾಯಿಸಿದರು.

ಕೆರೆ ಒತ್ತುವರಿ ತೆರವಿಗೆ ಸದಸ್ಯರಾದ ಗೋಪಾಲಕೃಷ್ಣ, ಪ್ರಮೀಳಾ ಒತ್ತಾಯಿಸಿದರೆ. ಅಕ್ರಮ ಮದ್ಯ ಮಾರಾಟ ಕುರಿತು ನಾಗಮಣಿ ಅಸಮಾಧಾನ ವ್ಯಕ್ತಪಡಿಸಿದರು.

ಅಧ್ಯಕ್ಷೆ ಕೆ.ಎಂ.ಬಿಂದು ಅಧ್ಯಕ್ಷತೆಯಲ್ಲಿ ವಹಿಸಿದ್ದರು. ಉಪಾಧ್ಯಕ್ಷರಾದ ರಶಿದಾ, ಸದಸ್ಯರಾದ ರುದ್ರಪ್ಪ, ವೀಣಾ, ಭಾಗ್ಯ, ಪಿಡಿಒ ಹರೀಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.