ADVERTISEMENT

ಮಡಿಕೇರಿ | ಆಜಾದ್‌ ನಗರದ ಮಹಿಳೆ ಕೋವಿಡ್‌ನಿಂದ ಸಾವು

​ಪ್ರಜಾವಾಣಿ ವಾರ್ತೆ
Published 30 ಜುಲೈ 2020, 12:58 IST
Last Updated 30 ಜುಲೈ 2020, 12:58 IST
   

ಮಡಿಕೇರಿ: ಜಿಲ್ಲೆಯಲ್ಲಿ ಕೋವಿಡ್‌ನಿಂದ ಮತ್ತೊಂದು ಸಾವು ಸಂಭವಿಸಿದ್ದು ಸಾವಿನ ಸಂಖ್ಯೆ 8ಕ್ಕೇರಿದೆ. ಮಡಿಕೇರಿಯ ಆಜಾದ್ ನಗರದ ನಿವಾಸಿ, 54 ವರ್ಷದ ಮಹಿಳೆ ಮೃತಪಟ್ಟವರು.

ಕಳೆದ ಮೂರು ದಿನಗಳಿಂದ ಜ್ವರವಿದ್ದು ನಗರದ ಖಾಸಗಿ ಕ್ಲಿನಿಕ್‌ನಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದರು. ಬುಧವಾರ ರಾತ್ರಿ ಉಸಿರಾಟದ ಸಮಸ್ಯೆ ತೀವ್ರವಾಗಿ ಕಾಣಿಸಿಕೊಂಡ ಕಾರಣಕ್ಕೆ ಮಡಿಕೇರಿ ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದರು. ತಕ್ಷಣ ಚಿಕಿತ್ಸೆ ನೀಡಿದರೂ ಸ್ಪಂದಿಸದೆ ಬುಧವಾರ ರಾತ್ರಿಯೇ ಸಾವನ್ನಪ್ಪಿದ್ದಾರೆ ಎಂದು ಜಿಲ್ಲಾಧಿಕಾರಿ ಅನೀಸ್‌ ಕಣ್ಮಣಿ ಜಾಯ್‌ ಮಾಹಿತಿ ನೀಡಿದ್ದಾರೆ.

ಮಹಿಳೆಯ ಗಂಟಲು ದ್ರವದ ಮಾದರಿಯನ್ನು ‘ಆಂಟಿಜೆನ್ ಕಿಟ್’ ಮೂಲಕ ಪರೀಕ್ಷಿಸಲಾಗಿತ್ತು. ಅವರಿಗೆ ಕೋವಿಡ್ ಸೋಂಕು ತಗುಲಿರುವುದು ದೃಢಪಟ್ಟಿತ್ತು.

ADVERTISEMENT

ಜಿಲ್ಲೆಯಲ್ಲಿ ಸಂಭವಿಸಿದ 8 ಮೃತ ಪ್ರಕರಣಗಳ ಪೈಕಿ 2 ಪ್ರಕರಣಗಳು ಕೋವಿಡ್ ಆಸ್ಪತ್ರೆಯ ಚಿಕಿತ್ಸಾ ನಿರ್ಧಾರ ಪ್ರದೇಶಕ್ಕೆ ಬಂದ ಒಂದರಿಂದ ಎರಡು ಗಂಟೆ ಅವಧಿಯಲ್ಲಿ ಸಂಭವಿಸಿದೆ. 1 ಪ್ರಕರಣವು ಕೋವಿಡ್ ಆಸ್ಪತ್ರೆಗೆ ಬರುವ ಮಾರ್ಗ ಮಧ್ಯೆಯೇ ಮೃತಪಟ್ಟ ಪ್ರಕರಣವಾಗಿದೆ. ಮೃತಪಟ್ಟ ಎಲ್ಲಾ ಪ್ರಕರಣಗಳಲ್ಲೂ ಉಸಿರಾಟದ ತೊಂದರೆಯಿದ್ದು, ಕೋವಿಡ್ ಆಸ್ಪತ್ರೆಗೆ ತಡವಾಗಿ ಬಂದ ಪ್ರಕರಣಗಳಾಗಿವೆ. ಉಸಿರಾಟದ ಸಮಸ್ಯೆ ಇರುವವರು ತಕ್ಷಣವೇ ಕೋವಿಡ್ ಆಸ್ಪತ್ರೆಗೆ ಬಂದು ದಾಖಲಾಗಬೇಕು ಎಂದು ಜಿಲ್ಲಾಧಿಕಾರಿ ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.