ADVERTISEMENT

ಕಾಡಾನೆಗಳ ಹಾವಳಿ: ಕಾಫಿ, ಬಾಳೆ ಹಾನಿ

​ಪ್ರಜಾವಾಣಿ ವಾರ್ತೆ
Published 4 ಜೂನ್ 2021, 2:26 IST
Last Updated 4 ಜೂನ್ 2021, 2:26 IST
ಸೋಮವಾರಪೇಟೆ ತಾಲ್ಲೂಕಿನ ಕೂತಿ ಗ್ರಾಮದಲ್ಲಿ ಕಾಡಾನೆಗಳ ಹಾವಳಿಯಿಂದ ಬಾಳೆ ಫಸಲು ಹಾನಿಯಾಗಿರುವುದು
ಸೋಮವಾರಪೇಟೆ ತಾಲ್ಲೂಕಿನ ಕೂತಿ ಗ್ರಾಮದಲ್ಲಿ ಕಾಡಾನೆಗಳ ಹಾವಳಿಯಿಂದ ಬಾಳೆ ಫಸಲು ಹಾನಿಯಾಗಿರುವುದು   

ಸೋಮವಾರಪೇಟೆ: ತಾಲ್ಲೂಕಿನ ಕೂತಿ ಗ್ರಾಮದಲ್ಲಿ ಮಿತಿ ಮೀರಿದ ಕಾಡಾನೆಗಳ ಹಾವಳಿಯಿಂದ ಕೃಷಿಕರು ಕಂಗಾಲಾಗಿದ್ದು, ಕೂಡಲೇ ಅರಣ್ಯ ಇಲಾಖೆಯವರು ಕಾಡಾನೆಗಳನ್ನು ಕಾಡಿಗಟ್ಟುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಕಳೆದ ಕೆಲವು ದಿನಗಳಿಂದ ಗ್ರಾಮದಲ್ಲೇ ಬೀಡುಬಿಟ್ಟಿರುವ 4 ರಿಂದ 5 ಕಾಡಾನೆಗಳ ಹಿಂಡು ಕಾಫಿ, ಬಾಳೆ ತೋಟಗಳಿಗೆ ನುಗ್ಗಿ ಫಸಲನ್ನು ತಿಂದು ನಾಶಪಡಿಸುತ್ತಿವೆ. ಗ್ರಾಮದ ಕೆ.ಡಿ. ಗಿರೀಶ್ ಅವರ 50ಕ್ಕೂ ಹೆಚ್ಚು ಕಾಫಿ ಗಿಡಗಳನ್ನು ಹಾಗೂ ಫಸಲು ಬಿಟ್ಟಿದ್ದ ಬಾಳೆಗಿಡಗಳನ್ನು ನಾಶಪಡಿಸಿವೆ.

ಇದಿಷ್ಟೇ ಅಲ್ಲದೆ ಅಕ್ಕಪಕ್ಕದ ಗ್ರಾಮಸ್ಥರ ತೋಟಗಳಿಗೂ ದಾಳಿ ಇಡುತ್ತಿರುವ ಕಾಡಾನೆಗಳು, ಕಾಫಿ ಗಿಡಗಳೊಂದಿಗೆ ರಾಸಾಯನಿಕ ಗೊಬ್ಬರ ತುಂಬಿದ ಚೀಲಗಳನ್ನು ಹಾಳುಮಾಡಿವೆ.

ADVERTISEMENT

ಕಾಡಾನೆಗಳು ಕೂತಿ, ನಗರಳ್ಳಿ ಭಾಗದಲ್ಲಿ ಸಂಚರಿಸುತ್ತಿದ್ದು, ಜನರು ಹಗಲಿನ ವೇಳೆಯಲ್ಲಿಯೇ ಸಂಚರಿಸಲು ಭಯಪಡುವಂತಾಗಿದೆ. ಅಲ್ಲದೆ, ಕಾಫಿ ತೋಟದಲ್ಲಿ ಕೆಲಸ ನಿರ್ವಹಿಸಲು ಕಾರ್ಮಿಕರು ಹಿಂದೇಟು ಹಾಕುತ್ತಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಸುತ್ತಮುತ್ತಲ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.