ADVERTISEMENT

ಮಡಿಕೇರಿ: ಬೆಟ್ಟದ ಮೇಲೊಂದು ‘ಕಸದ ಬೆಟ್ಟ’ ಸೃಷ್ಟಿ!

ಅವೈಜ್ಞಾನಿಕ ಕಸ ವಿಲೇವಾರಿ, ಜಲಮೂಲಕ್ಕೂ ಧಕ್ಕೆ, ಸ್ಥಳಾಂತರವಾಗದ ಘಟಕ

ಅದಿತ್ಯ ಕೆ.ಎ.
Published 26 ಫೆಬ್ರುವರಿ 2021, 19:30 IST
Last Updated 26 ಫೆಬ್ರುವರಿ 2021, 19:30 IST
ಮಡಿಕೇರಿಯ ಸ್ಟೋನ್‌ ಹಿಲ್‌ನಲ್ಲಿ ಬಿದ್ದಿರುವ ಕಸದ ರಾಶಿ
ಮಡಿಕೇರಿಯ ಸ್ಟೋನ್‌ ಹಿಲ್‌ನಲ್ಲಿ ಬಿದ್ದಿರುವ ಕಸದ ರಾಶಿ   

ಮಡಿಕೇರಿ: ಪ್ರಕೃತಿಯ ಮಡಿಲು ಕೊಡಗು; ಇಂಥ ಸುಂದರ ತಾಣದಲ್ಲೂ ಸಾಕಷ್ಟು ಸಮಸ್ಯೆಗಳು ಜನರನ್ನು ಹೈರಾಣಾಗಿಸಿವೆ. ನಗರ, ಪಟ್ಟಣ, ಹೋಬಳಿ ಹಾಗೂ ಗ್ರಾಮಗಳಲ್ಲಿ ತ್ಯಾಜ್ಯ ವಿಲೇವಾರಿಯದ್ದೇ ದೊಡ್ಡ ಸಮಸ್ಯೆ.

ಅದರಲ್ಲೂ ‘ಮಂಜಿನ ನಗರಿ’, ‘ಪ್ರವಾಸಿಗರ ಸ್ವರ್ಗ’ವೆಂದು ಕರೆಸಿಕೊಳ್ಳುವ ಮಡಿಕೇರಿಯಲ್ಲಿ ತ್ಯಾಜ್ಯ ವಿಲೇವಾರಿ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ನಗರದಲ್ಲಿ ಪ್ರತಿನಿತ್ಯ ಸಂಗ್ರಹವಾದ ಕಸವನ್ನು ಅದೆಷ್ಟೋ ವರ್ಷಗಳಿಂದ ಸ್ಟೋನ್‌ ಹಿಲ್‌ ಎಂಬ ಗುಡ್ಡದ ಮೇಲೆ ಸುರಿಯಲಾಗುತ್ತಿದ್ದು, ಅಲ್ಲಿ ಮತ್ತೊಂದು ಗುಡ್ಡವೇ ನಿರ್ಮಾಣವಾಗಿದೆ. ಕಸ ಸಂಗ್ರಹ ಘಟಕವನ್ನು ಬೇರೆಡೆಗೆ ಸ್ಥಳಾಂತರಿಸುವ ಪ್ರಕ್ರಿಯೆ ವಿಳಂಬವಾಗುತ್ತಲೇ ಇದೆ!

ಅವೈಜ್ಞಾನಿಕ ಕಸ ವಿಲೇವಾರಿಯು, ನಗರದ ಕೆಲವು ಬಡಾವಣೆಗಳಿಗೂ ಶಾಪವಾಗಿ ಪರಿಣಮಿಸಿದೆ. ತ್ಯಾಜ್ಯ ವಿಲೇವಾರಿ ಪ್ರಕರಣವು, ಹೈಕೋರ್ಟ್‌ ಮೆಟ್ಟಿಲೇರಿದ್ದರೂ ನಗರಾಡಳಿತ ಮಾತ್ರ ಸಮಸ್ಯೆಗೆ ಪರಿಹಾರ ಹುಡುಕುತ್ತಿಲ್ಲ. ‘ಜಾಗ ಹುಡುಕಿದ್ದೇವೆ’ ಎಂದು ಸಬೂಬು ಹೇಳುತ್ತಲೇ ನಗರ ಆಡಳಿತ ಕಾಲ ಕಳೆಯುತ್ತಿದ್ದು ಸಾರ್ವಜನಿಕರು ಮಾತ್ರ ತೊಂದರೆಗೆ ಸಿಲುಕುವುದು ತಪ್ಪಿಲ್ಲ.

ADVERTISEMENT

ಅದರಲ್ಲೂ ಪ್ರವಾಸೋದ್ಯಮವು ಚೇತಕರಿಕೆ ಕಂಡ ಮೇಲೆ ಹೋಂಸ್ಟೇ, ರೆಸಾರ್ಟ್‌ಗಳ ಸಂಖ್ಯೆ ಹೆಚ್ಚಾಗಿವೆ. ಪ್ರತಿನಿತ್ಯ ಸಂಗ್ರಹವಾಗುವ ತ್ಯಾಜ್ಯದ ಪ್ರಮಾಣ ಏರಿಕೆಯಾಗಿದೆ. ಆದರೆ, ವಿಲೇವಾರಿ ಸಮಪರ್ಕವಾಗಿ ನಡೆಯುತ್ತಿಲ್ಲ.

ಸ್ಟೋನ್‌ ಹಿಲ್‌ನಲ್ಲಿ ನಗರಸಭೆ ಸಂಗ್ರಹಿಸಿದ ರಾಶಿ ರಾಶಿ ಕಸ ನಗರದ ನಾಲ್ಕು ಬಡಾವಣೆಗಳ ನಿವಾಸಿಗಳಿಗೆ ರೋಗದ ಭೀತಿಗೂ ಕಾರಣವಾಗಿದೆ. ನಗರದ 23 ವಾರ್ಡ್‌ಗಳಿಂದ ಕಸವನ್ನು ಸಂಗ್ರಹಿಸಿ ತಂದು ಸ್ಟೋನ್‌ ಹಿಲ್‌ ಬಳಿಯ ಬೆಟ್ಟವೊಂದರ ಮೇಲೆ ಸುರಿಯಲಾಗುತ್ತಿದೆ. ವಿಲೇವಾರಿ ಘಟಕದಲ್ಲಿ ಸಂಗ್ರಹಿಸಿದ ಕಸವು ದಿನದಿಂದ ದಿನಕ್ಕೆ ಬೆಳೆಯುತ್ತಿದ್ದು, ಕಸದ ತುಂಬಿ ಸೊಳ್ಳೆ- ನೊಣಗಳ ಹಾವಳಿಯಿಂದ ಸಾಂಕ್ರಾಮಿಕ ರೋಗದ ಆತಂಕವಿದೆ. ಬೆಟ್ಟದ ತುಂಬೆಲ್ಲ ಕಸ ಹರಡುತ್ತಿರುವುದರಿಂದ ಸುಬ್ರಹ್ಮಣ್ಯ ನಗರ, ರೈಫಲ್ ರೇಂಜ್‌, ವಿದ್ಯಾನಗರ, ಮುಳಿಯ ಬಡಾವಣೆಯ ನಿವಾಸಿಗಳು ನಿತ್ಯವೂ ಸಮಸ್ಯೆಯ ಸಂಕೋಲೆಯಲ್ಲಿ ಸಿಲುಕಿದ್ದಾರೆ. ಅದರಲ್ಲೂ ಒಂದು ವೇಳೆ ಮಳೆಗಾಲದಲ್ಲಿ ಕಸದ ಸಮಸ್ಯೆಯಿಂದ ಬೆಟ್ಟವೇನಾದರೂ ಕುಸಿದರೆ, ಸುಬ್ರಹ್ಮಣ್ಯ ನಗರಕ್ಕೆ ಆಪತ್ತು ಎದುರಾಗಲಿದೆ. ಇದು ಈ ಬಡಾವಣೆ ನಿವಾಸಿಗಳ ಅಳಲಿಗೆ ಕಾರಣವಾಗಿದೆ.

ಕೊಳಚೆ ನೀರು ಆವರಿಸಿಕೊಂಡು ಕೆಟ್ಟ ವಾಸನೆ ಬರುತ್ತಿದೆ. ಜತೆಗೆ ಬೆಟ್ಟದ ಒಂದು ಭಾಗ 2018ರಲ್ಲಿ ಸುರಿದ ಮಳೆಯಿಂದ ಕುಸಿದಿತ್ತು ಎಂದು ಹೇಳುತ್ತಾರೆ ನಿವಾಸಿಗಳು.

ಗೊಬ್ಬರ ತಯಾರಿಕೆಯೂ ವಿಫಲ: ನಗರಸಭೆ ಈ ಹಿಂದೆ ನಗರದಲ್ಲೆಡೆ ಸಂಗ್ರಹಿಸುವ ತ್ಯಾಜ್ಯವನ್ನು ವೈಜ್ಞಾನಿಕ ರೀತಿಯಲ್ಲಿ ನಿರ್ವಹಿಸುವ ಗುರಿಯನ್ನು ಹೊಂದಿತ್ತು. ಈ ಸಂಬಂಧ ಸ್ಟೋನ್‌ ಹಿಲ್‌ ಬಳಿ 6 ಎಕರೆ ಜಾಗ ಕೂಡ ಗುರುತಿಸಿತ್ತು. ಇನ್ನು ತ್ಯಾಜ್ಯಗಳನ್ನು ಗೊಬ್ಬರವಾಗಿ ಪರಿವರ್ತಿಸುವ ಯೋಜನೆಯನ್ನು ತಯಾರಿಸಿತ್ತು. ಅದಕ್ಕೆ ಬೇಕಾದ ಕಸ ವಿಂಗಡನೆ ಯಂತ್ರಗಳನ್ನು ಕೂಡ 5 ವರ್ಷಗಳ ಹಿಂದೆ ಅಳವಡಿಸಲಾಗಿತ್ತು. ಆದರೆ, ಕೆಲವು ವರ್ಷಗಳ ಹಿಂದೆಯೇ ಯಂತ್ರ ಕೆಟ್ಟು ನಿಂತಿದ್ದು, ಇದರ ನಿರ್ವಹಣೆಯತ್ತ ನಗರಸಭೆ ಮುಂದಾಗಲಿಲ್ಲ.

ಈಗ ಆ ಕಸದ ಮೇಲೆಯೋ ರಾತ್ರೋರಾತ್ರಿ ತಂದು ಮಣ್ಣು ಸುರಿದು ಕಸವನ್ನು ಮುಚ್ಚಿ ಹಾಕಲಾಗಿದೆ. ಇನ್ನು ಸಂಸದರು, ಶಾಸಕರು ಪ್ರತಿ ಬಾರಿಯ ಸಭೆಯಲ್ಲೂ ಕಸದ ಸಮಸ್ಯೆ ಪರಿಹಾರಕ್ಕೆ ಸೂಚನೆ ನೀಡುತ್ತಾರೆ. ಮೈಸೂರು ಮಾದರಿಯಲ್ಲಿ ಕಸವನ್ನು ಬೇರ್ಪಡಿಸಿ, ಗೊಬ್ಬರ ತಯಾರಿಸೋಣ ಎಂಬ ಸಂಸದ ಪ್ರತಾಪ ಸಿಂಹ ಅವರ ಭರವಸೆಯು ಕಾರ್ಯಗತಕ್ಕೆ ಬರುತ್ತಿಲ್ಲ ಎಂಬ ನೋವು ಮಂಜಿನ ನಗರಿಯ ನಿವಾಸಿಗಳದ್ದು.

ನ್ಯಾಯಾಲಯದ ಮೆಟ್ಟಿಲೇರಿದ ಪ್ರಕರಣ:
‘2005ರಲ್ಲಿ ಸ್ಟೋನ್‌ ಹಿಲ್‌ನಲ್ಲಿ ನಗರಸಭೆಗೆ 6 ಎಕರೆ ಜಾಗ ಮಂಜೂರಾಗಿತ್ತು. ಅವರಿಗೆ ಮಂಜೂರಾದ ಜಾಗವನ್ನು ಬಿಟ್ಟು ಬೇರೆ ಸ್ಥಳದಲ್ಲಿ ಕಸ ತಂದು ಸುರಿಯಲಾಗುತ್ತಿದೆ. ಆರಂಭಿಕ ದಿನಗಳಲ್ಲಿ 1ರಿಂದ ಒಂದೂವರೆ ಟನ್‌ನಷ್ಟು ಮಾತ್ರ ಕಸ ಸಂಗ್ರಹಗೊಳ್ಳುತ್ತಿತ್ತು. ಈಗ ನಿತ್ಯ 30 ಟನ್‌ನಷ್ಟು ತ್ಯಾಜ್ಯ ಸಂಗ್ರಹಗೊಳ್ಳುತ್ತಿದೆ. ಚಿಕನ್‌ ತ್ಯಾಜ್ಯವನ್ನೂ ತಂದು ಹಾಕಲಾಗುತ್ತಿದೆ. ಇದರ ವಿರುದ್ಧ ಈಗ ನ್ಯಾಯಾಲಯದ ಮೆಟ್ಟಿಲೇರಲಾಗಿದೆ. ಎಸ್‌.ಆರ್‌.ವಿ.ಕೆ ಅಸೋಸಿಯೇಷನ್‌ ರಚನೆ ಮಾಡಲಾಗಿದೆ. ಅದರ ನೇತೃತ್ವದಲ್ಲಿ ಈಗ ಹೋರಾಟ ನಡೆಯುತ್ತಿದೆ. 10 ಎಕರೆ ಸರ್ಕಾರಿ ಜಾಗವನ್ನು ಹುಡುಕಿ ಕೊಡುವಂತೆ ಕೋರ್ಟ್‌ ಅಸೋಸಿಯೇಷನ್‌ಗೆ ಸೂಚನೆ ನೀಡಿತ್ತು. ಅದರಂತೆ ನಗರದಿಂದ ದೂರದಲ್ಲಿ 10 ಗುರುತಿಸಿ ಕೋರ್ಟ್‌ಗೂ ಮಾಹಿತಿ ನೀಡಿದ್ದೇವೆ. ಮಾಲಿನ್ಯ ನಿಯಂತ್ರಣ ಮಂಡಳಿಯಿಂದಲೂ ಒಪ್ಪಿಗೆ ಸಿಕ್ಕಿದೆ. ಜಿಲ್ಲಾಡಳಿತ ಜಾಗ ಮಂಜೂರು ಮಾಡಿದ್ದರೂ, ಘಟಕದ ಮಾತ್ರ ಸ್ಥಳಾಂತರಗೊಳ್ಳುತ್ತಿಲ್ಲ’ ಎಂದು ಅಸೋಸಿಯೇಷನ್‌ ಖಜಾಂಚಿ ಪ್ರಕಾಶ್‌ ಕಾವೇರಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.